ಮನೋರಂಜನೆ

‘ಅಚ್ಛೇ ದಿನ್’ ನಿರೀಕ್ಷೆಯಲ್ಲಿ ಪ್ರೇಮ್

Pinterest LinkedIn Tumblr

crec09PREM

ಕಳೆದ ವರ್ಷ ಬಿಡುಗಡೆಯಾದ ಸಿನಿಮಾ ಒಂದೇ ಒಂದು. ಆದರೂ ನಾನು ಇಡೀ ವರ್ಷ ಬಿಜಿಯಾಗಿದ್ದೆ. 2013ರಲ್ಲಿ ನಾನು ಪಟ್ಟ ಕಷ್ಟಕ್ಕೆ 2014ರಲ್ಲಿ ಒಳ್ಳೆಯ ಪ್ರತಿಫಲ ಸಿಕ್ಕಿದೆ. ಈ ವರ್ಷ ಇನ್ನಷ್ಟು ಅಚ್ಛೇ ದಿನ್ ಬರಲಿವೆ’ ಎಂಬ ಆಶಾವಾದದಲ್ಲಿ ಇದ್ದಾರೆ ಪ್ರೇಮ್.
ಹಿಂದಿನ ವರ್ಷವಿಡೀ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಅವರು ‘ಬಿಜಿ’ಯಾಗಿದ್ದುದೇ ಇದಕ್ಕೆ ಸಾಕ್ಷಿ.

ಈ ವರ್ಷ ಅವರ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾಗಲಿವೆ. ಅದೂ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ. ಪ್ರೇಮ್‌ ವೃತ್ತಿಜೀವನದಲ್ಲಿ ಸದಾ ಉಳಿಯುವಂಥ ವರ್ಷ– 2014. ಅವರು ಅಭಿನಯಿಸಿದ ಚಿತ್ರಗಳ ಗೆಲುವು, ಪ್ರೇಕ್ಷಕರ ಮನ್ನಣೆ, ಮಾಧ್ಯಮದ ಪ್ರಶಂಸೆ ಒಂದರ ಮೇಲೊಂದರಂತೆ ಅವರನ್ನು ಹುಡುಕಿಕೊಂಡು ಬಂದಿವೆ. ಫಿಲ್ಮ್‌ಫೇರ್‌ ಪ್ರಶಸ್ತಿ, ಸಂತೋಷಂ ಪ್ರಶಸ್ತಿ, ಚಿತ್ರಸಂತೆ ಪ್ರಶಸ್ತಿ… ಹೀಗೆ ಅವರ ಖುಷಿ ಹೆಚ್ಚಿಸಿದ ಗಳಿಗೆಗಳು ಹಲವು.

ಇದರ ಬೆನ್ನಲ್ಲೇ ಮತ್ತೊಂದಷ್ಟು ಸಿನಿಮಾಕ್ಕೆ ಅವಕಾಶಗಳು ಕೂಡ ಹುಡುಕಿಕೊಂಡು ಬಂದಿರುವುದು, ಪ್ರೇಮ್ ಖುಷಿ ಇಮ್ಮಡಿಗೊಳಿಸಿದೆ. ಈ ವರ್ಷ ಹೇಗಿರುವ ನಿರೀಕ್ಷೆಯಿದೆ ಎಂಬ ಪ್ರಶ್ನೆಗೆ, ‘ನಿನ್ನೆ ಚೆನ್ನಾಗಿ ಬದುಕಿದ್ದೇನೆ. ಇವತ್ತು ಚೆನ್ನಾಗಿದೆ. ನಾಳೆ ತುಂಬ ಚೆನ್ನಾಗಿ ಬದುಕುತ್ತೇನೆ. ಇದರ ಮೇಲೆ ಮತ್ತೇನೂ ವಿಶೇಷವಿಲ್ಲ’ ಎನ್ನುತ್ತಾರೆ ಪ್ರೇಮ್.

ಅಷ್ಟಕ್ಕೂ ವರ್ಷದಿಂದ ವರ್ಷಕ್ಕೆ ಏನಾದರೂ ಬದಲಾವಣೆ ಆಗಲೇಬೇಕು ಎಂಬ ನಂಬಿಕೆ ಅವರಿಗಿಲ್ಲ. ನಿರ್ದಿಷ್ಟವಾಗಿ ಬದಲಾವಣೆ ಆಗಲೇಬೇಕು ಎಂಬ ನಿಲುವು ಅವರದಲ್ಲ. ಒಳ್ಳೆಯದು ಬಂದರೆ ಖುಷಿಯಿಂದ ಸ್ವೀಕರಿಸುವುದಾಗಿಯೂ ಕೆಟ್ಟದ್ದು ಎದುರಾದರೆ ಧೈರ್ಯವಾಗಿ ಎದುರಿಸುವುದಾಗಿಯೂ ಹೇಳುತ್ತಾರೆ. ‘ನನ್ನ ಸ್ವಭಾವವೇ ಹಾಗೆ. ಎಲ್ಲವನ್ನೂ ಪಾಸಿಟಿವ್ ಆಗಿ ತೆಗೆದುಕೊಳ್ಳುವುದು. ಏನೇ ಬಂದರೂ ಅದನ್ನು ನನ್ನ ಒಳಿತಿಗೆ ಬಳಸಿಕೊಳ್ಳುವುದು’ ಎನ್ನುತ್ತಾರೆ.

ಈ ವರ್ಷದಲ್ಲಿ ಪ್ರೇಮ್ ಅವರ ಮೂರು ಚಿತ್ರಗಳು ಬಿಡುಗಡೆಯಾಗಲಿವೆ. ಈ ಮೂರೂ ಸಿನಿಮಾಗಳ ಚಿತ್ರೀಕರಣ ಬಹುತೇಕ ಮುಗಿದಿದ್ದು, ಹಾಡುಗಳಷ್ಟೇ ಬಾಕಿ ಉಳಿದಿವೆ. ಮುಂದಿನ ತಿಂಗಳು ‘ಮಳೆ’, ಅದರ ಬಳಿಕ ‘ಮಸ್ತ್ ಮೊಹಬ್ಬತ್’ ಹಾಗೂ ‘ದಳಪತಿ’ ತೆರೆ ಕಾಣಲಿವೆ. ಬಳಿಕ..? ‘ಅದು ಸಿಕ್ರೇಟ್’ ಎಂದು ನಗುತ್ತಾರೆ ಪ್ರೇಮ್! ಆದರೆ ಚಿಕ್ಕಪುಟ್ಟ ಸುಳಿವುಗಳನ್ನೂ ಕೊಡುತ್ತಾರೆ.

ಬರೀ ಲವರ್‌ ಬಾಯ್ ತರಹದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಪ್ರೇಮ್‌ಗೆ ಬೇಜಾರು ತಂದಿದೆ. ಅಂಥ ಛಾಯೆಯಿಂದ ಹೊರಬರುವ ಆಸೆ ಅವರದು. ಅದಕ್ಕಾಗಿ, ಪ್ರೀತಿ– ಪ್ರೇಮದ ಸುಮಾರು ಹದಿನೈದು ಚಿತ್ರಕಥೆಗಳನ್ನು ಕಳೆದ ವರ್ಷ ಪ್ರೇಮ್ ನಿರಾಕರಿಸಿದ್ದಾರೆ. ಈಗ ಬಿಡುಗಡೆ ಹಂತದಲ್ಲಿರುವ ಮೂರು ಚಿತ್ರಗಳಲ್ಲಿ ಕೂಡ ಅವರದು ಅದೇ ಬಗೆಯ ಪಾತ್ರ. ಈ ಸಿನಿಮಾಗಳ ಬಿಡುಗಡೆ ಬಳಿಕ, ಈವರೆಗೆ ಕಾಣಿಸಿಕೊಳ್ಳದಂಥ ಪಾತ್ರಕ್ಕೆ ‘ಓಕೆ’ ಅನ್ನಲಿದ್ದಾರಂತೆ.

ಅದಕ್ಕಾಗಿ ಕಾಲೇಜು ಹುಡುಗನ ಗೆಟಪ್‌ ಪಡೆದುಕೊಳ್ಳಲು ಯತ್ನ ನಡೆಸಿದ್ದಾರೆ. ‘ಹೊಸ ಸಿನಿಮಾವೊಂದನ್ನು ಆಯ್ಕೆ ಮಾಡಿಕೊಳ್ಳಲಿದ್ದೇನೆ. ಅದಕ್ಕಾಗಿ ನಾನು ಏಳು ಕಿಲೋ ತೂಕ ಇಳಿಸಿಕೊಳ್ಳಬೇಕಿದೆ. ಈಗಾಗಲೇ ನಾಲ್ಕು ಕಿಲೋ ಕಡಿಮೆ ಮಾಡಿಕೊಂಡಿದ್ದೇನೆ. ಇನ್ನೂ ಮೂರು ಕೆಜಿ ಕಡಿಮೆಯಾಗಬೇಕಿದೆ’ ಎಂಬ ಮಾಹಿತಿ ಕೊಡುತ್ತಾರೆ.

ಸಿನಿಮಾ ನಿರ್ಮಾಣದತ್ತಲೂ ಅವರ ಗುರಿ ಇದೆ. ಆದರೆ ಕಥೆ, ಚಿತ್ರತಂಡ ಅಂತಿಮಗೊಳಿಸಿಲ್ಲ. ಅದು ಸಂಪೂರ್ಣ ಹೊಸಬರ ಟೀಮ್. ಫೆಬ್ರುವರಿ ಕೊನೆಗೆ ಈ ಯೋಜನೆ ಆರಂಭವಾಗಲಿದೆಯಂತೆ. ಆದರೆ ಅದಂತೂ ಪ್ರೇಮ ಕಥೆ ಅಲ್ಲವೇ ಅಲ್ಲ. ತೀರಾ ಬೇರೆಯದೇ ಆದ ಕಥಾವಸ್ತುವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರಂತೆ.

Write A Comment