ಮನೋರಂಜನೆ

‘ಗಾಲಿ’ ಚಿತ್ರದ ಬಳಿಕ ರೈನ್‌ಕೋಟ್‌ನೊಳಗೆ ಬಿಸಿಬಿಸಿ ಮಾತು

Pinterest LinkedIn Tumblr

crec16coat1

ದ್ವಂದ್ವಾರ್ಥ ಸಂಭಾಷಣೆಗಳಿಂದ ತುಂಬಿದ್ದ ‘ಗಾಲಿ’ ಚಿತ್ರದ ಬಳಿಕ ಅಂಥದೇ ಇನ್ನೊಂದು ಸಿನಿಮಾಕ್ಕೆ ಮುಂದಾಗಿದ್ದಾರೆ ನಿರ್ದೇಶಕ ಲಕ್ಕಿ. ‘ರೈನ್‌ಕೋಟ್‌’ ಸಿನಿಮಾದ ಚಿತ್ರೀಕರಣ ಮುಗಿಸಿರುವ ಅವರು, ಅದನ್ನು ತೆರೆಕಾಣಿಸಲು ಸಿದ್ಧತೆ ನಡೆಸಿದ್ದಾರೆ. ಅದಕ್ಕೂ ಮುನ್ನ ಹಾಡುಗಳ ಸಿ.ಡಿ ಹಾಗೂ ಟ್ರೇಲರ್‌ ಬಿಡುಗಡೆ ಮಾಡುವ ಕಾರ್ಯಕ್ರಮಕ್ಕೆ ಪತ್ರಕರ್ತರನ್ನು ಆಹ್ವಾನಿಸಿದ್ದರು.

ಎರಡನೇ ಸಿನಿಮಾಕ್ಕೂ ದ್ವಂದ್ವಾರ್ಥದ ಸಂಭಾಷಣೆಯಿಂದಲೇ ನೆಲೆ ಕಂಡುಕೊಳ್ಳುವ ಪ್ರಯತ್ನ ಲಕ್ಕಿ ಅವರದು. ಇದಕ್ಕೆ ಕಾರಣ– ಮೊದಲ ಸಿನಿಮಾಕ್ಕೆ ಸಿಕ್ಕ ಪ್ರೋತ್ಸಾಹ ಎಂದು ಸಮರ್ಥಿಸಿಕೊಳ್ಳುತ್ತಾರೆ ಲಕ್ಕಿ. ‘ಗಾಲಿ ಚಿತ್ರದ ಟ್ರೇಲರ್ ಅನ್ನು ಯೂಟ್ಯೂಬಿನಲ್ಲಿ ಬಿಡುಗಡೆ ಮಾಡಿದಾಗ ಅದನ್ನು 20 ಲಕ್ಷ ಜನ ನೋಡಿದ್ದರು. ಈ ಪ್ರತಿಕ್ರಿಯೆಯಿಂದಾಗಿಯೇ ನನ್ನ ಎರಡನೇ ಚಿತ್ರದಲ್ಲಿ ಸ್ವಲ್ಪ ಹೆಚ್ಚಾಗಿ ಅಂತಹ ಸಂಭಾಷಣೆ ಬಳಸಿದ್ದೇನೆ’ ಎನ್ನುತ್ತಾರೆ.

ಇದೊಂದು ಪ್ರೀತಿಯ ಕಥೆ. ಮಳೆಯಿಂದಲೇ ಶುರುವಾಗಿ, ಮಳೆಯೊಂದಿಗೆ ಮುಗಿಯುವ ಪ್ರೇಮಕಥೆಯಲ್ಲಿ ‘ರೈನ್‌ಕೋಟ್‌’ಗೆ ಸಾಕಷ್ಟು ಆದ್ಯತೆ ಕೊಡಲಾಗಿದೆಯಂತೆ. ದ್ವಂದ್ವಾರ್ಥದ ಸಂಭಾಷಣೆಗಳು ಸಾಕಷ್ಟು ಇವೆಯೇ ಹೊರತೂ ಅಸಭ್ಯ ದೃಶ್ಯಗಳು ಮಾತ್ರ ಒಂದೂ ಇಲ್ಲ ಎಂದು ಲಕ್ಕಿ ಹೇಳಿದರು. 11 ನಿಮಿಷಗಳ ಟ್ರೇಲರ್‌ಗೆ ಸೆನ್ಸಾರ್‌ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ. ನಿರ್ಮಾಪಕ ಸೋಮಶೇಖರ್‌ಗೆ ಲಕ್ಕಿ ಮೇಲೆ ಭರವಸೆಯಿದೆ. ಅವರಿಗೆ ಸಂಭಾಷಣೆಯಾಗಲೀ ಕಥೆ ಬಗ್ಗೆಯಾಗಲೀ ಹೆಚ್ಚೇನೂ ತಿಳಿದಿಲ್ಲ. ಲಕ್ಕಿ ಅವರನ್ನೇ ನಂಬಿಕೊಂಡು 90 ಲಕ್ಷ ರೂಪಾಯಿ ಸುರಿದಿದ್ದಾಗಿ ಹೇಳಿದರು.

ಈ ಮೊದಲು ಒಂದು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ವಿಜಯ್‌ ಜೆಟ್ಟಿಗೆ ನಾಯಕನಾಗುವ ಆಸೆಯಿತ್ತು. ಆದರೆ ಅವರ ತೂಕ ನೂರ ಹತ್ತು ಕಿಲೋ ಇತ್ತು! ಅದನ್ನು ಇಳಿಸಿಕೊಂಡು ಬಂದರೆ ನಾಯಕನಾಗುವ ಭರವಸೆಯನ್ನು ಲಕ್ಕಿ ನೀಡಿದ್ದರು. ಅದರಂತೆ ಕಷ್ಟಪಟ್ಟು ಸಣ್ಣಗಾಗಿ ಬಂದಿರುವ ವಿಜಯ್‌ ಇದರಲ್ಲಿ ಹೀರೊ.

ವೈದ್ಯೆ ಪಾತ್ರದಲ್ಲಿ ಅಪೂರ್ವ ರೈ, ಆಧುನಿಕ ಹುಡುಗಿಯಾಗಿ ರಮ್ಯಾ ರಾಜ್‌ ಕಾಣಿಸಿಕೊಂಡಿದ್ದಾರೆ. ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಡ್ಯಾನಿಯಲ್‌, ಛಾಯಾಗ್ರಾಹಕ ಅವಿನಾಶ್ ಶೆಟ್ಟಿ ಮಾತನಾಡಿದರು. ರೂಪಾ ನಟರಾಜ್ ಟ್ರೇಲರ್‌ ಬಿಡುಗಡೆ ಮಾಡಿದರು. ಸೆನ್ಸಾರ್‌ ಮಂಡಳಿ ಅಧಿಕಾರಿ ನಾಗೇಂದ್ರ ಸ್ವಾಮಿ, ನಟ ರಕ್ಷಿತ್‌ ಶೆಟ್ಟಿ ಉಪಸ್ಥಿತರಿದ್ದರು.

Write A Comment