ಮನೋರಂಜನೆ

ಹಳೆ ಪ್ರೇಮ, ಹೊಸ ಸಂಜನಾ

Pinterest LinkedIn Tumblr

crec09naidu

ಫಣಿ ರಾಮಚಂದ್ರ ಅವರ ಗರಡಿಯಲ್ಲಿ ಕಿರುತೆರೆ ನಟಿಯಾಗಿ ಪಳಗಿದ ಸಂಜನಾ ನಾಯ್ಡು ಹಿರಿತೆರೆಗೆ ಕಾಲಿಟ್ಟಿದ್ದಾರೆ. ಅವರ ಮೊದಲ ಚಿತ್ರದ ಹೆಸರು ‘ಪ್ರೇಮಾರ್ಪಣೆ’. ಹೀಗೆ ನಟಿಯಾಗಿ ಚಂದನವನಕ್ಕೆ ಕಾಲಿಡುವಲ್ಲಿ ತಮ್ಮನ್ನು ಸಾಕಷ್ಟು ತಿದ್ದಿ ಒಂದು ರೂಪು ನೀಡಿದ ಫಣಿ ರಾಮಚಂದ್ರ ಅವರು ನನ್ನ ನಟನೆಯ ಗುರು ಎಂದವರು ನೆನಪಿಸಿಕೊಳ್ಳುತ್ತಾರೆ.

ಬೆಂಗಳೂರಿನವರೇ ಆದ ಸಂಜನಾ ನಾಲ್ಕನೇ ತರಗತಿಯವರೆಗೂ ಹೈದರಾಬಾದ್‌ನಲ್ಲಿ ಹಾಸ್ಟೆಲ್‌ವೊಂದರಲ್ಲಿ ಇದ್ದು ಓದಿದವರು. ನಂತರ ಓದಿದ್ದು, ಆಡಿದ್ದು, ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ. ನಾನು ಬೆಂಗಳೂರು ಹುಡುಗಿಯೇ ಎನ್ನುತ್ತಾರೆ ಅವರು. ಓದಿದ್ದು ಫ್ಯಾಷನ್ ಡಿಸೈನಿಂಗ್. ಬದುಕು ರೂಪಿಸಿಕೊಳ್ಳಲು ಹೊರಟಿದ್ದು ಬಣ್ಣದ ಲೋಕದಲ್ಲಿ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಮರಳಿದ ಸಂಜನಾಗೆ ಧಾರಾವಾಹಿಗಳಲ್ಲಿ ಆಸಕ್ತಿ ಇರುವುದನ್ನು ಗುರುತಿಸಿದ ಫಣಿ ರಾಮಚಂದ್ರ ಅವರು ‘ಜಗಳಗಂಟಿಯರು’, ‘ಅದೃಷ್ಟ ಲಕ್ಷ್ಮಿಯರು’ ಧಾರಾವಾಹಿಗಳಲ್ಲಿ ಅವಕಾಶ ಕೊಟ್ಟಿದ್ದರು. ಅದರ ಹೊರತಾಗಿ ಸಂಜನಾ ವಿಶೇಷ ನಟನಾ ತರಬೇತಿ ಪಡೆದವರಲ್ಲ.

ಮುಂದೆ ‘ಮನೆಯೊಂದು ಮೂರು ಬಾಗಿಲು’, ‘ಎಸ್ಸೆಸ್ಸೆಲ್ಸಿ ನನ್ಮಕ್ಳು’ ಹೀಗೆ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡು, ಈಗ ‘ಪ್ರೇಮಾರ್ಪಣೆ’ ಮೂಲಕ ಬೆಳ್ಳಿತೆರೆಯಲ್ಲಿ ಭವಿಷ್ಯ ಅರಸಿದ್ದಾರೆ.  ಮಾಡೆಲಿಂಗ್ ಕ್ಷೇತ್ರದಲ್ಲೂ ಎರಡು ವರ್ಷ ಅಡ್ಡಾಡಿ ಬಂದಿದ್ದಾರವರು. ಕ್ಲಾಸಿಕಲ್, ವೆಸ್ಟರ್ನ್, ಹಿಪ್‌ಹಾಪ್ ನೃತ್ಯ ಪ್ರಕಾರಗಳನ್ನು ಅಭ್ಯಾಸ ಮಾಡಿದ್ದಾರೆ. ಬಾಲ್ಯದಲ್ಲಿ ವೇದಿಕೆ ಏರುವ ಉತ್ಸಾಹ ರೂಢಿಸಿಕೊಂಡ ಅವರು ಕ್ಯಾಮೆರಾ ಮುಂದೆ ಅಷ್ಟೇನು ಅಳುಕಿಲ್ಲದೆ ಅಭಿನಯಿಸಿದ್ದಾರಂತೆ.

‘ಪ್ರೇಮಾರ್ಪಣೆ’ ಹೊಸ್ತಿಲಲ್ಲಿ…
‘ನಿರ್ಮಾಪಕ ಕೃಷ್ಣಾ ರೆಡ್ಡಿ ಅವರು ಚಿತ್ರಕ್ಕಾಗಿ ಕಲಾವಿದರನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ನನ್ನನ್ನು ಭೇಟಿಯಾದರು. ಅವರು ‘ನಾಯಕಿಯಾಗು’ ಎಂದು ಒತ್ತಾಯಿಸಿದಾಗ ಒಲ್ಲೆ ಎನ್ನಲಾಗದೆ ಒಪ್ಪಿಕೊಂಡೆ’ ಎಂದು ತಮ್ಮ ಮೊದಲ ಚಿತ್ರದ ಕಥೆ ಹೇಳುತ್ತಾರೆ ಸಂಜನಾ. ಹಾಸ್ಯ, ನವಿರು ಪ್ರೇಮ, ಸೆಂಟಿಮೆಂಟ್ ಈ ಮೂರು ಅಂಶಗಳನ್ನು ಹದವಾದ ಬೆರೆಸಿದ ನಿರ್ದೇಶಕ ಸಂದೀಪ್‌ಸಾಗರ್ ಅವರ ಕಥೆ ಮೆಚ್ಚಿ ಸಂಜನಾ ಚಿತ್ರಕ್ಕೆ ಸಹಿ ಹಾಕಿದ್ದರಂತೆ.

ಕಿರುತೆರೆಯಲ್ಲಿ ನಟಿಸುತ್ತಿದ್ದಾಗಲೇ ಹಿರಿತೆರೆಯ ಕನಸು ಕಾಣುತ್ತಿದ್ದ ಅವರಲ್ಲಿ ‘ತಾನು ಯಾವಾಗ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವುದು’ ಎಂಬ ಕಾತರವಿತ್ತು. ಒಳ್ಳೆಯ ಕಥೆ, ತಂಡ ಹುಡುಕುವಲ್ಲಿ ಕೆಲಸಮಯ ಕಳೆದಿದ್ದಾರೆ. ‘ಪ್ರೇಮಾರ್ಪಣೆ’ಗೆ ಮೊದಲು ಕೆಲ ಸಿನಿಮಾ ಒಪ್ಪಿಕೊಂಡಿದ್ದರೂ ಕಾರಣಾಂತರಗಳಿಂದ ಅವು ನಿಂತುಹೋಗಿ ಕನಸು ಭಗ್ನವಾಗಿದೆಯಂತೆ. ಆದರೆ ಈ ಮಾಯಾಲೋಕದ ಹಂಬಲ ಅಷ್ಟು ಸುಲಭವಾಗಿ ಬಿಡುವುದಿಲ್ಲ ಎನ್ನುವ ಸಂಜನಾ, ‘ಎಷ್ಟು ಶ್ರಮ ಪಡ್ತೀವಿ ಎನ್ನುವುದು ನಮ್ಮ ಹಣೆಬರಹವನ್ನು ನಿರ್ಧರಿಸುತ್ತದೆ.

ಕಲೆಯ ಬಗ್ಗೆ ಒಂದು ಬಗೆಯ ಹುಚ್ಚು ಇದ್ದರೆ ಮಾತ್ರ ಅದನ್ನು ಒಲಿಸಿಕೊಳ್ಳಲು ಸಾಧ್ಯ. ತುಂಬಾ ಸುಲಭವಾಗಿ ಇಲ್ಲಿ ಬೆಳೆಯಲು ಸಾಧ್ಯವಿಲ್ಲ’ ಎಂಬುದು ಮೊದಲ ಚಿತ್ರದ ಮೂಲಕ ಅವರು ಕಂಡುಕೊಂಡ ಸತ್ಯ. ನಿರ್ದೇಶಕರು ಚಿತ್ರೀಕರಣ ತಡವಾಗುತ್ತದೆ ಎಂದಾಗ ಚಿತ್ರದಿಂದ ಹೊರಬರಲು ನಿರ್ಧರಿಸಿದ್ದ ಸಂಜನಾಗೆ, ಆದಷ್ಟು ಬೇಗ ಚಿತ್ರೀಕರಣ ಪ್ರಾರಂಭಿಸುವುದಾಗಿ ಹೇಳಿ ನಿರ್ಮಾಪಕರು ಮನವೊಲಿಸಿದ್ದರಂತೆ. ಇಲ್ಲದಿದ್ದರೆ ‘ಪ್ರೇಮಾರ್ಪಣೆ’ಯೂ ಸಂಜನಾರ ಮೊದಲ ಚಿತ್ರವಾಗಿರುತ್ತಿರಲಿಲ್ಲ. ಅದಕ್ಕಾಗಿ ಅವರು ನಿರ್ಮಾಪಕರಿಗೆ ಋಣಿ.

ಗ್ಲಾಮರ್‌ ಪ್ರಿಯೆ!
‘ಪ್ರೇಮಾರ್ಪಣೆ’ಯಲ್ಲಿ ಯುವಜನತೆಯನ್ನು ಪ್ರತಿನಿಧಿಸುವ ಕಾಲೇಜು ಹುಡುಗಿಯ ಪಾತ್ರ ಸಂಜನಾರದ್ದು. ಓದಲೆಂದು ಬೆಂಗಳೂರಿನಿಂದ ಮಂಗಳೂರಿಗೆ ಹೋಗಿ, ಅಲ್ಲಿನ ಬೆಳವಣಿಗೆಗಳಲ್ಲಿ ಅವರು ನಾಯಕನಿಗೆ ಪ್ರೇಮಾರ್ಪಣೆ ಮಾಡುತ್ತಾರಂತೆ. ಮೊದಲ ಚಿತ್ರದಲ್ಲಿ ತಕ್ಕ ಮಟ್ಟಿಗೆ ಗ್ಲಾಮರ್ ಆಗಿ ಕಾಣಿಸಿಕೊಂಡಿರುವ ಸಂಜನಾಗೆ, ಮುಂದೆಯೂ ಗ್ಲಾಮರ್ ಆಗಿ ಕಾಣಿಸಿಕೊಳ್ಳಲು ಯಾವ ಅಭ್ಯಂತರವೂ ಇಲ್ಲ.

‘ಒಳ್ಳೆಯ ಪಾತ್ರ ಮತ್ತು ಕಥೆಗೆ ಅವಶ್ಯವಿರುವ ಎಲ್ಲಾ ಗುಣಗಳನ್ನು ಕ್ಯಾಮೆರಾ ಎದುರು ವ್ಯಕ್ತಪಡಿಸಲು ಸಿದ್ಧ’ ಎನ್ನುತ್ತಾರೆ. ನಟ ಸುದೀಪ್ ಜತೆ ತೆರೆ ಹಂಚಿಕೊಳ್ಳುವುದು ಮತ್ತು ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಅವರ ಅಡಿಯಲ್ಲಿ ಕೆಲಸ ಮಾಡುವುದು ಸಂಜನಾರ ಪರಮ ಗುರಿ. ಈ ಮೂಲಕ ತಾನು ಕನ್ನಡಕ್ಕೆ ಮಾತ್ರ ಸೀಮಿತವಲ್ಲ ಎಂದು ಸೂಕ್ಷ್ಮವಾಗಿ ಹೇಳುತ್ತಾರೆ.

ಪಾತ್ರಗಳ ಆಯ್ಕೆ ವಿಚಾರಕ್ಕೆ ಬಂದರೆ, ‘ಜನ ಚಿತ್ರಮಂದಿರಕ್ಕೆ ಬರಲು ಎರಡು ಅಂಶಗಳು ಕಾರಣ. ಒಂದು ಕಥೆ, ಇನ್ನೊಂದು ನಟನಟಿಯರ ಜನಪ್ರಿಯತೆ. ನಾನಂತೂ ಸದ್ಯಕ್ಕೆ ಜನಪ್ರಿಯ ನಟಿ ಅಲ್ಲ. ಹಾಗಾಗಿ ಜನ ನನ್ನ ಚಿತ್ರಗಳಿಗೆ ಬರಬೇಕೆಂದರೆ ನಾನು ಒಳ್ಳೆಯ ಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕು’ ಎಂಬ ತಿಳಿವಳಿಕೆ ಅವರಿಗಿದೆ.

Write A Comment