ಮನೋರಂಜನೆ

ಮೂರನೆ ಟೆಸ್ಟ್‌: ಆಸ್ಟ್ರೇಲಿಯ ಮೇಲುಗೆ : ಭಾರತಕ್ಕೆ ಕಠಿಣ ಸವಾಲು ವಿಧಿಸಲು ಆಸೀಸ್ ಹೋರಾಟ; ಭಾರತದ ಬೌಲರ್‌ಗಳ ಪ್ರಹಾರ

Pinterest LinkedIn Tumblr

smith-rahane

ಮೆಲ್ಬೋರ್ನ್, ನ.29: ಇಲ್ಲಿ ನಡೆಯುತ್ತಿರುವ ಮೂರನೆ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡ ಪ್ರವಾಸಿ ಭಾರತ ವಿರುದ್ಧ ಸುಭದ್ರ ಸ್ಥಿತಿಯಲ್ಲಿದ್ದು, 326 ರನ್‌ಗಳ ಮುನ್ನಡೆ ಸಾಧಿಸಿದೆ.

ಸರಣಿ ಸೋಲು ತಪ್ಪಿಸಲು ಗೆಲ್ಲಲೇಬೇಕಾದ ಈ ಟೆಸ್ಟ್‌ನಲ್ಲಿ ಭಾರತ ಅಂತಿಮ ದಿನ ಆಸ್ಟ್ರೇಲಿಯವನ್ನು ಬೇಗನೆ ಆಲೌಟ್ ಮಾಡಿ, ಗೆಲುವಿಗೆ ಅಗತ್ಯದ ರನ್ ಸೇರಿಸಬೇಕಾಗಿದೆ.

ನಾಲ್ಕನೆ ದಿನದ ಆಟ ನಿಂತಾಗ ಆಸ್ಟ್ರೇಲಿಯದ ಎರಡನೆ ಇನಿಂಗ್ಸ್‌ನಲ್ಲಿ 75 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 261 ರನ್ ಗಳಿಸಿದ್ದು, ಶಾನ್ ಮಾರ್ಷ್ 62 ರನ್ ಮತ್ತು ರ್ಯಾನ್ ಹ್ಯಾರಿಸ್ 8 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಆಸ್ಟ್ರೇಲಿಯ ಈ ಪಂದ್ಯವನ್ನು ಡ್ರಾಗೊಳಿಸಲು ಹೋರಾಟ ನಡೆಸುತ್ತಿದೆ. ಪಂದ್ಯ ಡ್ರಾಗೊಂಡರೆ ಆಸ್ಟ್ರೇಲಿಯಕ್ಕೆ ಸರಣಿ ಗೆಲ್ಲಲು ಅನುಕೂಲವಾಗುತ್ತದೆ. ಈ ಕಾರಣದಿಂದಾಗಿ ಅದು ಅಂತಿಮ ದಿನ ಭಾರತಕ್ಕೆ ಕಠಿಣ ಸವಾಲು ವಿಧಿಸಲು ನೋಡುತ್ತಿದೆ.

ಟೆಸ್ಟ್‌ನ ನಾಲ್ಕನೆ ದಿನವಾಗಿರುವ ಸೋಮವಾರ ಭಾರತ ಮೊದಲ ಇನಿಂಗ್ಸ್‌ನಲ್ಲಿ 465 ರನ್‌ಗಳಿಗೆ ಆಲೌಟಾಯಿತು. ಮೂರನೆ ದಿನದ ಮೊತ್ತಕ್ಕೆ ಕೇವಲ 3 ರನ್ ಸೇರಿಸುವಷ್ಟರಲ್ಲಿ ಆಲೌಟಾಯಿತು. ವೇಗಿ ಮಿಚೆಲ್ ಜಾನ್ಸನ್ ಅವರು ಉಮೇಶ್ ಯಾದವ್(0) ಅವರನ್ನು ಬಂದ ದಾರಿಯಲ್ಲೇ ಹಿಂದಕ್ಕೆ ಕಳುಹಿಸಿದರು. ಮುಹಮ್ಮದ್ ಶಮಿ (12) ಜಾನ್ಸನ್ ಎಸೆತದಲ್ಲಿ ಸ್ಮಿತ್‌ಗೆ ಕ್ಯಾಚ್ ನೀಡುವುದರೊಂದಿಗೆ ಭಾರತದ ಮೊದಲ ಇನಿಂಗ್ಸ್ ಮುಕ್ತಾಯಗೊಂಡಿತು. ಶಮಿ ಸೋಮವಾರದ ಮೊತ್ತಕ್ಕೆ 3 ರನ್ ಸೇರಿಸಿದರು.

ಇಶಾಂತ್ ಶರ್ಮ 6 ಎಸೆತಗಳನ್ನು ಎದುರಿಸಿದರೂ, ಖಾತೆ ತೆರೆಯಲಿಲ್ಲ ಔಟಾಗದೆ ಉಳಿದರು. ಆಸ್ಟ್ರೇಲಿಯದ ಹ್ಯಾರಿಸ್ 70ಕ್ಕೆ 4, ಜಾನ್ಸನ್ 135ಕ್ಕೆ 3, ನಥನ್ ಲಿನ್ 108ಕ್ಕೆ 2 ಮತ್ತು ಶೇನ್ ವ್ಯಾಟ್ಸನ್ 65ಕ್ಕೆ 1 ವಿಕೆಟ್ ಹಂಚಿಕೊಂಡರು.
65 ರನ್‌ಗಳ ಮುನ್ನಡೆ: ಭಾರತಕ್ಕೆ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ ದಾಖಲಿಸಿದ್ದ 530 ರನ್‌ಗಳ ಮೊತ್ತವನ್ನು ಸರಿಗಟ್ಟಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 65 ರನ್‌ಗಳ ಮುನ್ನಡೆ ಪಡೆಯಿತು.

ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನ್ನು ಉತ್ತಮವಾಗಿ ಆರಂಭಿಸಿತ್ತು. ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ 42 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಲ್ಲಿ 40 ರನ್ ದಾಖಲಿಸಿ ಭಾರತದ ಬೌಲರ್‌ಗಳ ದಾಳಿಯನ್ನು ಪುಡಿಪುಡಿ ಮಾಡಿದರು. 14.2ನೆ ಓವರ್‌ನಲ್ಲಿ ಅಶ್ವಿನ್ ಅವರು ವಾರ್ನರ್‌ರನ್ನು ಎಲ್‌ಬಿಡಬ್ಲು ಬಲೆಗೆ ಕೆಡವಿದರು. ರೋಜರ್ಸ್‌ ಮತ್ತು ಶೇನ್ ವ್ಯಾಟ್ಸನ್ (17) ಬಳಿಕ ತಂಡದ ಮುನ್ನಡೆಯನ್ನು ಮುಂದುವರಿಸುವ ಯತ್ನ ನಡೆಸಿದರು.

ಭೋಜನ ವಿರಾಮದ ಹೊತ್ತಿಗೆ ಆಸ್ಟ್ರೇಲಿಯದ ಸ್ಕೋರ್ 22 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 90 ಆಗಿತ್ತು. ವ್ಯಾಟ್ಸನ್ 15 ಮತ್ತು ರೋಜರ್ಸ್‌ 33 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಬಳಿಕ ಮಳೆಯಿಂದಾಗಿ ಆಟ 85 ನಿಮಿಷ ತಡವಾಗಿ ಆರಂಭಗೊಂಡಿತು. ಶೇನ್ ವ್ಯಾಟ್ಸನ್ ತನ್ನ ಸ್ಕೋರ್‌ನ್ನು 17ಕ್ಕೆ ಏರಿಸಿ ನಿರ್ಗಮಿಸಿದರು. ನಾಯಕ ಸ್ಟೀವನ್ ಸ್ಮಿತ್ 47 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ನಿಂತಿದ್ದರೂ ಅವರಿಗೆ 14 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಉಮೇಶ್ ಯಾದವ್ ಅವರು ಸ್ಮಿತ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.

ಕ್ರಿಸ್ ರೋಜರ್ಸ್‌ 69 ರನ್ ಗಳಿಸಿ ಅಶ್ವಿನ್ ಎಸೆತದಲ್ಲಿ ಬೌಲ್ಡ್ ಅಗಿ ಪೆವಿಲಿಯನ್ ಸೇರಿದರು. ಚಹಾ ವಿರಾಮದ ವೇಳೆಗೆ ಆಸ್ಟ್ರೇಲಿಯದ ಸ್ಕೋರ್ 43 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 174ಕ್ಕೆ ತಲುಪಿತ್ತು. ಜೋ ಬರ್ನ್ಸ್ (9), ಬ್ರಾಡ್ ಹಡಿನ್(13) ಮತ್ತು ಜಾನ್ಸನ್(15) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದ ಭಾರತದ ಬೌಲರ್‌ಗಳು ಆಸ್ಟ್ರೇಲಿಯದ ರನ್ ಪ್ರವಾಹವನ್ನು ನಿಯಂತ್ರಿಸಿದರು. ಎಂಟನೆ ವಿಕೆಟ್‌ಗೆ 27 ರನ್‌ಗಳ ಜೊತೆಯಾಟ ನೀಡಿರುವ ಶಾನ್ ಮಾರ್ಷ್ ಮತ್ತು ಆರ್.ಹ್ಯಾರಿಸ್ ಹೋರಾಟವನ್ನು ಅಂತಿಮ ದಿನಕ್ಕೆ ಕಾಯ್ದಿರಿಸಿದ್ದಾರೆ. ಶಾನ್ ಮಾರ್ಷ್ 131 ಎಸೆತಗಳನ್ನು ಎದುರಿಸಿ 8 ಬೌಂಡರಿ ಮತ್ತು 1 ಸಿಕ್ಸರ್ ಇರುವ 62 ರನ್ ಗಳಿಸಿ ಆಸ್ಟ್ರೇಲಿಯ 326 ರನ್‌ಗಳ ಮುನ್ನಡೆ ಸಾಧಿಸಲು ನೆರವಾಗಿದ್ದಾರೆ.

ಭಾರತದ ಬೌಲರ್‌ಗಳ ಪೈಕಿ ಉಮೇಶ್ ಯಾದವ್ 2 ವಿಕೆಟ್ ಪಡೆದರೂ, ಅವರು 14 ಓವರ್‌ಗಳಲ್ಲಿ 73 ರನ್‌ಗಳನ್ನು ಬಿಟ್ಟುಕೊಟ್ಟರು. ಇಶಾಂತ್ ಶರ್ಮ (2-49), ಆರ್.ಅಶ್ವಿನ್(2-56) ಮತ್ತು ಮುಹಮ್ಮದ್ ಶಮಿ (1-75) ಬೌಲಿಂಗ್ ಚೆನ್ನಾಗಿತ್ತು.

ಆಸ್ಟ್ರೇಲಿಯ ತಂಡ ಅಂತಿಮ ದಿನ ದೊಡ್ಡ ಮೊತ್ತದ ಸವಾಲನ್ನು ಸೇರಿಸಿ ಭಾರತಕ್ಕೆ ಎರಡನೆ ಇನಿಂಗ್ಸ್ ಆರಂಭಿಸಲು ಅವಕಾಶ ನೀಡುವ ಸಾಧ್ಯತೆ ಇದೆ. ಮೊದಲ ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ ಸರಣಿಯನ್ನು ಸಮಬಲಗೊಳಿಸಲು ಮೂರನೆ ಟೆಸ್ಟ್ ಹಾಗೂ ನಾಲ್ಕನೆ ಟೆಸ್ಟ್‌ನಲ್ಲಿ ಜಯ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದೆ.

ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಂತಿಮ ದಿನ 300ಕ್ಕೆ ಅಧಿಕ ಮೊತ್ತದ ಸವಾಲನ್ನು ಬೆನ್ನಟ್ಟಿ ಟೆಸ್ಟ್ ನಲ್ಲಿ ಜಯ ಗಳಿಸುವುದು ಕಷ್ಟ. 85 ವರ್ಷಗಳ ಹಿಂದೆ ಅಂದರೆ 1929ರಲ್ಲಿ ಇಂಗ್ಲೆಂಡ್ ತಂಡ 332 ರನ್ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲುವು ದಾಖಲಿಸಿತ್ತು.

ಸ್ಕೋರ್ ಪಟ್ಟಿ
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 142.3 ಓವರ್‌ಗಳಲ್ಲಿ ಆಲೌಟ್ 530
ಭಾರತ ಮೊದಲ ಇನಿಂಗ್ಸ್ 128.5 ಓವರ್‌ಗಳಲ್ಲಿ ಆಲೌಟ್ 465
ಮುರಳಿ ವಿಜಯ್ ಸಿ ಮಾರ್ಷ್ ಬಿ ವ್ಯಾಟ್ಸನ್ 68, ಶಿಖರ್ ಧವನ್ ಸಿ ಸ್ಮಿತ್ ಬಿ ಹ್ಯಾರಿಸ್ 28, ಚೇತೇಶ್ವರ ಪೂಜಾರ ಸಿ ಹಡಿನ್ ಬಿ ಹ್ಯಾರಿಸ್ 25, ವಿರಾಟ್ ಕೊಹ್ಲಿ ಸಿ ಹಡಿನ್ ಬಿ ಜಾನ್ಸನ್ 169 , ಅಜಿಂಕ್ಯ ರಹಾನೆ ಎಲ್‌ಬಿಡಬ್ಲು ಬಿ ಲಿನ್ 147, ಕೆ.ಎಲ್.ರಾಹುಲ್ ಸಿ ಹೇಝ್ಲಿವುಡ್ ಬಿ ಲಿನ್ 3, ಎಂ.ಎಸ್.ಧೋನಿ ಸಿ ಹಡಿನ್ ಬಿ ಹ್ಯಾರಿಸ್ 11, ಆರ್.ಅಶ್ವಿನ್ ಸಿ ಆ್ಯಂಡ್ ಬಿ ಹ್ಯಾರಿಸ್ 0, ಮುಹಮ್ಮದ್ ಶಮಿ ಸಿ ಸ್ಮಿತ್ ಬಿ ಜಾನ್ಸನ್ 12, ಉಮೇಶ್ ಯಾದವ್ ಸಿ ಹಡಿನ್ ಬಿ ಜಾನ್ಸನ್ 0, ಇಶಾಂತ್ ಶರ್ಮ ಔಟಾಗದೆ 0, ಇತರೆ 2.
ವಿಕೆಟ್ ಪತನ: 1-55, 2-108, 3-147, 4-409, 5-415, 6-430, 7-434, 8-462, 9-462, 10-465.
ಬೌಲಿಂಗ್ ವಿವರ: ಜಾನ್ಸನ್ 30.5-6-135-3, ಹ್ಯಾರಿಸ್ 26-7-70-4, ಹೇಝ್ಲಾವುಡ್ 25-6-75-0, ಶೇನ್ ವ್ಯಾಟ್ಸನ್ 16-3-65-1, ನಥನ್ ಲಿನ್ 29-3-108-2, ಸ್ಮಿತ್ 2-0-11-0.
ಆಸ್ಟ್ರೇಲಿಯ ಎರಡನೆ ಇನಿಂಗ್ಸ್ 75 ಓವರ್‌ಗಳಲ್ಲಿ 7 ವಿಕೆಟ್‌ಗೆ 261
ವಾರ್ನರ್ ಎಲ್‌ಬಿಡಬ್ಲು ಬಿ ಅಶ್ವಿನ್ 40, ಕ್ರಿಸ್ ರೋಜರ್ಸ್‌ ಬಿ ಅಶ್ವಿನ್ 69, ಶೇನ್ ವ್ಯಾಟ್ಸನ್ ಸಿ ಧೋನಿ ಬಿ ಶರ್ಮ 17, ಸ್ಟೀವನ್ ಸ್ಮಿತ್ ಸಿ ರಹಾನೆ ಬಿ ಯಾದವ್ 14, ಶಾನ್ ಮಾರ್ಷ್ ಔಟಾಗದೆ 62, ಜೋ ಬರ್ನ್ಸ್ ಸಿ ಧೋನಿ ಬಿ ಶರ್ಮ 9, ಬ್ರಾಡ್ ಹಡಿನ್ ಸಿ ಧೋನಿ ಬಿ ಯಾದವ್ 13, ಜಾನ್ಸನ್ ಸಿ ರಹಾನೆ ಬಿ ಶಮಿ 15, ಹ್ಯಾರಿಸ್ ಔಟಾಗದೆ 8, ಇತರೆ 14.
ವಿಕೆಟ್ ಪತನ: 1-57, 2-98, 3-131, 4-164, 5-176, 6-202, 7-234.
ಬೌಲಿಂಗ್ ವಿವರ: ಉಮೇಶ್ ಯಾದವ್ 14-1-73-2, ಮುಹಮ್ಮದ್ ಶಮಿ 20-2-75-1, ಇಶಾಂತ್ ಶರ್ಮ 19-4-49-2, ಆರ್.ಅಶ್ವಿನ್ 22-2-56-2.

Write A Comment