ಕರ್ನಾಟಕ

ಉನ್ನತಾಧಿ­ಕಾರಿಗಳ ಸಭೆ: ಸಾರ್ವಜನಿಕರ ರಕ್ಷಣೆಗೆ ಕಾಯ್ದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

siddu

ಬೆಂಗಳೂರು: ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಆಂಧ್ರ­ಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲಿಯೂ ಹೊಸ ಕಾಯ್ದೆ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಇಲ್ಲಿ ತಿಳಿಸಿದರು. ನಗರದ ಚರ್ಚ್‌ ಸ್ಟ್ರೀಟ್‌ನಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಕುರಿತಂತೆ ಗೃಹಕಚೇರಿ ‘ಕೃಷ್ಣಾ’­ದಲ್ಲಿ ಉನ್ನತಾಧಿ­ಕಾರಿಗಳ ಸಭೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಆಂಧ್ರಪ್ರದೇಶ ಸರ್ಕಾರ, 2013ರಲ್ಲಿ ಸಾರ್ವಜನಿಕ ಸುರಕ್ಷತಾ ಜಾರಿ ಕಾಯ್ದೆ ಅನುಷ್ಠಾನಕ್ಕೆ ತಂದಿದೆ. ಅದನ್ನು ನಮ್ಮ ರಾಜ್ಯದ ಪೊಲೀಸರು ಕೂಡ ಅಧ್ಯಯನ ಮಾಡಿ, ಕರಡು ಮಸೂದೆ ಸಿದ್ಧಪಡಿಸಿದ್ದು, ಮುಂದಿನ ಅಧಿವೇಶನದಲ್ಲಿ ಮಂಡಿಸ­ಲಾಗುವುದು’ ಎಂದು ಅವರು ಹೇಳಿದರು.

ಇದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಕಾರಣಕ್ಕೆ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆಯೂ ನಿಯಮಗಳನ್ನು ರೂಪಿಸಲು ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದರು. ಪ್ರತ್ಯೇಕ ಗುಪ್ತದಳ ವೃಂದ: ಗುಪ್ತಚರ ಚಟುವಟಿಕೆಗಳಲ್ಲಿ ವೃತ್ತಿಪರತೆ ತರಲು ಪ್ರತ್ಯೇಕವಾಗಿ ಗುಪ್ತದಳ ವೃಂದ (ಕೇಡರ್‌) ಸೃಷ್ಟಿ ಮಾಡಲಾಗುವುದು ಎಂದು ತಿಳಿಸಿದರು.

ಇನ್‌ಸ್ಪೆಕ್ಟರ್‌ ದರ್ಜೆವರೆಗಿನ ಎಲ್ಲ ಸಿಬ್ಬಂದಿಯನ್ನು ಗುಪ್ತದಳಕ್ಕೆ ನೇರ ನೇಮಕ ಮಾಡುವುದು. ಅವರು ನಿವೃತ್ತಿ­ಯಾ­ಗುವವರೆಗೂ ಅದೇ ಇಲಾಖೆಯಲ್ಲಿ ಇರಬೇಕಾಗುತ್ತದೆ. ಪ್ರಸ್ತುತ ಗುಪ್ತದಳಕ್ಕೆ ಪೊಲೀಸ್‌ ಇಲಾಖೆಯಿಂದ ನಿಯೋಜನೆ ಮಾಡುವ ವ್ಯವಸ್ಥೆ ಇದ್ದು, ಅದರಿಂದ ಗುಪ್ತ ಮಾಹಿತಿ ಸಂಗ್ರಹ ಕಷ್ಟ ಆಗಿದೆ. ಇದರಲ್ಲಿ ವೃತ್ತಿಪರತೆ ತರಲು ಪ್ರತ್ಯೇಕ ವೃಂದ ಸ್ಥಾಪಿಸಿ, ಅವರಿಗೆ ಉತ್ತಮ ರೀತಿಯ ತರಬೇತಿ ನೀಡಲಾ ಗುವುದು ಎಂದು ಅವರು ಹೇಳಿದರು.

ಸಾಫ್ಟ್‌ವೇರ್‌ ಎಂಜಿನಿಯರ್‌ ನೇಮಕ ಸೈಬರ್‌ ಅಪರಾಧ ಪ್ರಕರಣಗಳ ಪತ್ತೆ ಮತ್ತು ವಿಶ್ಲೇಷಣೆಗಾಗಿ ತಾಂತ್ರಿಕ ತಜ್ಞರ ಅಗತ್ಯ ಇದೆ. ಈ ಕಾರಣದಿಂದ ಮೊದಲ ಹಂತದಲ್ಲಿ 40 ಸಾಫ್ಟ್‌ವೇರ್‌ ಎಂಜಿನಿಯರ್‌ಗಳನ್ನು ನೇಮಕ ಮಾಡಲಾಗು ವುದು ಎಂದರು.

ನಗದು ಬಹುಮಾನ: ಬಾಂಬ್‌ ಸ್ಫೋಟ ಸೇರಿದಂತೆ ಇತರ ಅಪರಾಧ ಪ್ರಕರಣಗಳ ಪತ್ತೆಗೆ ಸುಳಿವು ನೀಡುವ ಸಾರ್ವಜನಿಕರಿಗೆ ನಗದು ಬಹುಮಾನ ನೀಡುವ ‘ಪ್ರತಿಫಲ ನೀತಿ’ ರೂಪಿಸಲಾಗುವುದು. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು. ಮಾಹಿತಿದಾರರಿಗೆ ₨ 1 ರಿಂದ 25 ಲಕ್ಷದವರೆಗೆ ನಗದು ಬಹುಮಾನ ನೀಡುವ ಬಗ್ಗೆ ಕರಡು ನೀತಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

‘ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ರಾಜ್ಯ ಸರ್ಕಾರ ಮೃದು ಧೋರಣೆ ಹೊಂದಿಲ್ಲ’ ಎಂದು ಸಿದ್ದರಾಮಯ್ಯ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಭಯೋತ್ಪಾದನೆ ಮಟ್ಟ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಗೃಹ ಸಚಿವ ಕೆ.ಜೆ.ಜಾರ್ಜ್‌, ಗೃಹ ಸಚಿವರ ಭದ್ರತಾ ಸಲಹೆಗಾರ ಕೆಂಪಯ್ಯ,  ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್‌.ಕೆ. ಪಟ್ಟನಾಯಕ್‌, ಡಿಜಿಪಿ ಲಾಲ್‌ ರೋಕುಮಾ ಪಚಾವೊ, ಬೆಂಗಳೂರು ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ಎಂ ಜಿ ರಸ್ತೆ ಸುತ್ತಮುತ್ತ ಮಾತ್ರ ಹೊಸವರ್ಷ ಸಂಭ್ರಮದ ಅವಧಿ ಕಡಿತ: ನಗರದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಮತ್ತು ಚರ್ಚ್‌ ಸ್ಟ್ರೀಟ್‌ನಲ್ಲಿ ಹೊಸ ವರ್ಷಾಚರಣೆಯ ಸಂಭ್ರಮದ ಅವಧಿಯನ್ನು ಒಂದು ಗಂಟೆ ಕಡಿತ ಮಾಡಲು ಅಧಿಕಾರಿಗಳಿಗೆ ಸೂಚಿ­ಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಹಿಂದೆಲ್ಲ ಜನವರಿ 1ರ ಬೆಳಗಿನ ಎರಡು ಗಂಟೆವರೆಗೂ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿತ್ತು. ಇದು ಹೆಚ್ಚಾಯಿತು ಎನ್ನುವ ಕಾರಣಕ್ಕೆ ಅದನ್ನು ಬೆಳಗಿನ 1 ಗಂಟೆಗೆ ಮಿತಿಗೊಳಿಸಲು  ಸೂಚಿಸಲಾಗಿದೆ. ಈ ಕುರಿತು ಅಧಿಕಾರಿಗಳು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಆದರೆ ಹೊಸ ವರ್ಷದ ಸಂಭ್ರಮಾಚರಣೆಗೆ ನಿಷೇಧ ಹೇರುವ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಿಧಾನಸೌಧಕ್ಕೆ ಹೆಚ್ಚಿನ ಭದ್ರತೆ
ಬಾಂಬ್ ಸ್ಫೋಟದ ಕಾರಣ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬೆಂಗಳೂರಿನ ವಿಧಾನಸೌಧ ಸುತ್ತಲಿನ ಐದು ಕಿ.ಮೀ ವ್ಯಾಪ್ತಿಯಲ್ಲಿ ಪೊಲೀಸ್‌ ಭದ್ರತೆ ಹೆಚ್ಚಿ­ಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.‌ ‘ಘಟನೆ ಸಂಬಂಧ ಕೇಂದ್ರ ಗೃಹ ಸಚಿವಾಲ­ಯದ ಜತೆ ನಿರಂತರ ಸಂಪರ್ಕದಲ್ಲಿ­ದ್ದೇವೆ. ಕೇಂದ್ರ ಗೃಹ ಸಚಿವರು ಕೂಡ ಮಾತನಾಡಿದ್ದು, ಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಪೊಲೀಸ್‌ ಗಸ್ತು ಬಿಗಿ ಮಾಡಲು ಎಲ್ಲ ಜಿಲ್ಲೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕಾಯ್ದೆಯಲ್ಲಿ ಏನಿರುತ್ತದೆ
ಸಾರ್ವಜನಿಕ ಸುರಕ್ಷತೆ ಕಾಯ್ದೆ ಜಾರಿಯಾದರೆ ನೂರು ಮತ್ತು ಅದಕ್ಕಿಂತ ಹೆಚ್ಚು ಜನ ಭೇಟಿ ನೀಡುವ ಎಲ್ಲ ಸಾರ್ವ­ಜನಿಕ ಸ್ಥಳಗಳು, ವಾಣಿಜ್ಯ ಸಂಕೀರ್ಣಗಳು, ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಒಳಗೆ ಮತ್ತು ಹೊರಗೆ ಕಡ್ಡಾ­ಯವಾಗಿ ಸಿ.ಸಿ. ಕ್ಯಾಮೆರಾ ಮತ್ತು ಸಿ.ಸಿ.ಟಿ.ವಿ ಅಳವ­ಡಿಸಬೇಕಾಗುತ್ತದೆ. ಇದರ ವೆಚ್ಚವನ್ನು ಆಯಾ ಸಂಸ್ಥೆಗಳೇ ಭರಿ­ಸಬೇಕಾಗು­ತ್ತದೆ. ಅವಘಡ­ಗಳು ಸಂಭವಿಸಿದರೆ ಮಾಹಿತಿಯನ್ನು ಪೊಲೀಸ­ರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.

Write A Comment