ಬೆಂಗಳೂರು: 55 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಎಲ್ಲ ಜನಪದ ಕಲಾವಿದರು ಇನ್ನು ಮುಂದೆ ಮಾಸಾಶನಕ್ಕೆ ಅರ್ಜಿ ಸಲ್ಲಿಸಲು ಅರ್ಹರು. ಇದುವರೆಗೆ 58 ವರ್ಷ ತುಂಬಿದ ಕಲಾವಿದರು ಮಾತ್ರ ಅರ್ಜಿ ಸಲ್ಲಿಸಬಹುದಿತ್ತು.
ಕರ್ನಾಟಕ ಜಾನಪದ ಅಕಾಡೆಮಿ ಸೋಮವಾರ ಹಮ್ಮಿಕೊಂಡಿದ್ದ 2012 ಮತ್ತು 2013ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಯೋಮಿತಿಯನ್ನು 55ಕ್ಕೆ ಇಳಿಸುವ ಘೋಷಣೆ ಮಾಡಿದರು.
ಸಾಧನೆ ಮಾಡಿದ 60 ಜನಪದ ಕಲಾವಿದರಿಗೆ 2012 ಮತ್ತು 2013ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಅವರು, ‘ಇದುವರೆಗೆ ಪ್ರತಿ ವರ್ಷ 400 ಜನರಿಗೆ ಮಾಸಾಶನ ನೀಡಲಾಗುತ್ತಿತ್ತು. ಈ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪ್ರೌಢಶಾಲೆಯಿಂದ ಪದವಿವರೆಗಿನ ಪಠ್ಯದಲ್ಲಿ ಜನಪದವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಸೇರ್ಪಡೆಗೊಳಿಸುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ ಎಂದು ಹೇಳಿದ ಅವರು ಈ ಬಗ್ಗೆ ಪರಿಶೀಲನೆ ನಡೆಸುವಂತೆ ಕನ್ನಡ ಸಂಸ್ಕೃತಿ ಸಚಿವೆ ಉಮಾಶ್ರೀ ಅವರಿಗೆ ಸೂಚಿಸಿದರು.
ಪ್ರತಿ ಜಿಲ್ಲೆಯಲ್ಲಿ ಐದು ಮಂದಿ ಜನಪದ ಕಲಾವಿದರನ್ನು ಗುರುತಿಸಿ, ಅವರ ಜೀವನ ಚರಿತ್ರೆ, ಸಾಧನೆಯನ್ನು ಆಡಿಯೊ–ವಿಡಿಯೊಗಳಲ್ಲಿ ದಾಖಲಿಸುವ ಕಾರ್ಯಕ್ಕೆ ಎಲ್ಲ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ವಸತಿ ರಹಿತರಿಗೆ ಮನೆ: ಗ್ರಾಮೀಣ ಭಾಗದಲ್ಲಿರುವ ವಸತಿ ರಹಿತ ಜನಪದ ಕಲಾವಿದರಿಗೆ ವಸತಿ ಸೌಕರ್ಯ ಕಲ್ಪಿಸಲು ಮುಖ್ಯಮಂತ್ರಿ ಅವರು ನೆರವಾಗಬೇಕು ಎಂದು ಉಮಾಶ್ರೀ ಅವರು ಮಾಡಿದ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ, ವಸತಿ ರಹಿತರಿಗೆ ಮನೆ ನೀಡುವ ಯೋಜನೆಯಲ್ಲಿ ಫಲಾನುಭವಿಗಳನ್ನು ಗುರುತಿಸುವಾಗ ಗ್ರಾಮ ಪಂಚಾಯಿತಿಗಳು ಜನಪದ ಕಲಾವಿದರನ್ನು ಪರಿಗಣಿಸಬೇಕು ಎಂದು ಸೂಚಿಸಿದರು.
ಆರೋಗ್ಯ ವಿಮೆ, ಅಕಾಲ ಮರಣಕ್ಕೆ ತುತ್ತಾದವರ ಕುಟುಂಬಕ್ಕೆ ಪರಿಹಾರ ನೀಡುವುದು ಸೇರಿದಂತೆ ಜನಪದ ಕಲಾವಿದರಿಗೆ ಅಗತ್ಯವಾದ ಎಲ್ಲ ನೆರವನ್ನು ಸರ್ಕಾರ ಮಾಡಲಿದೆ ಎಂದು ಅವರು ಹೇಳಿದರು.
ಮನವಿ: ಹಿಂದುಳಿದ ವರ್ಗಗಳ ಆಯೋಗ ಹಮ್ಮಿಕೊಂಡಿರುವ ಜಾತಿಗಣತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಜನಪದ ಕಲಾವಿದರು ಮಾಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಸಚಿವೆ ಉಮಾಶ್ರೀ ಮಾತನಾಡಿ, ಕಲಾವಿದರು ಮತ್ತು ಇಲಾಖೆ ನಡುವೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಮಾಸಾಶನ ನೇರವಾಗಿ ಕಲಾವಿದರಿಗೆ ಕೈಗೆ ತಲುಪಿಸುವ ಉದ್ದೇಶದಿಂದ ಅವರ ಬ್ಯಾಂಕ್ ಖಾತೆಗೆ ಹಣ ಹಾಕಲಾಗುತ್ತಿದೆ ಎಂದರು.
ಈ ಪ್ರಕ್ರಿಯೆಯಲ್ಲಿ ಕೆಲವರಿಗೆ ತೊಂದರೆಯಾಗಿರಬಹುದು. ಕೆಲವರಿಗೆ ಹಣ ಸಂದಾಯ ಆಗದೇ ಇರಬಹುದು. ಬಾಕಿ ಉಳಿದ ಮೊತ್ತ ಪಾವತಿಸಲು ಮೂರು ದಿನಗಳ ಹಿಂದೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಯಾರೂ ಆತಂಕ ಪಡಬೇಕಾಗಿಲ್ಲ ಎಂದರು.
ಪ್ರತಿ ಜಿಲ್ಲೆಯಲ್ಲಿ ಜಾನಪದ ಉತ್ಸವ: ಇದುವರೆಗೆ ರಾಜ್ಯಮಟ್ಟದಲ್ಲಿ ಮಾತ್ರ ಜಾನಪದ ಉತ್ಸವ ನಡೆಯುತ್ತಿತ್ತು. ಇಂತಹ ಉತ್ಸವ ಪ್ರತಿ ಜಿಲ್ಲೆಯಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ಪ್ರತಿ ಜಿಲ್ಲೆಗೆ ₨5 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು.
ಇಲಾಖೆಯಲ್ಲಿ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ ತರುವುದಕ್ಕಾಗಿ ಇ–ಆಡಳಿತ ಜಾರಿಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಸನ್ಮಾನ: ಪದ್ಯ ಮತ್ತು ಗದ್ಯ ಪ್ರಕಾರಗಳು, ವಿಚಾರ, ವಿಮರ್ಶೆ ಮತ್ತು ಸಂಕೀರ್ಣ ಪ್ರಕಾರಗಳಲ್ಲಿ ಪುಸ್ತಕ ಬರೆದ ಒಂಬತ್ತು ವಿದ್ವಾಂಸರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ತಜ್ಞ ಪ್ರಶಸ್ತಿ: ಡಾ. ಸೈಯದ್ ಝಮಿರುಲ್ಲಾ ಫರೀಫ್, ಡಾ. ಸುಶೀಲಾ ಹೊನ್ನೇಗೌಡ ಅವರಿಗೆ ಡಾ.ಜೀಶಂಪ ಪ್ರಶಸ್ತಿ ಮತ್ತು ದೇಶಾಂಶ ಹುಡಗಿ, ಡಾ. ಸಿದ್ದಣ್ಣ ಎಫ್.ಜಕಬಾಳ ಅವರಿಗೆ ಡಾ.ಬಿಎಸ್. ಗದ್ದಗಿಮಠ ಪ್ರಶಸ್ತಿಗಳನ್ನು ಸಿದ್ದರಾಮಯ್ಯ ಪ್ರದಾನ ಮಾಡಿದರು.