ಕರ್ನಾಟಕ

ನರಭಕ್ಷಕ ಹುಲಿ ದೇಹದಲ್ಲಿ ‘ಮೈಕ್ರೊ ಚಿಪ್‌’ ಪತ್ತೆ; ಚಿಕ್ಕಮಗಳೂ­ರಿನಿಂದ ತಂದು ಬಿಟ್ಟಿರುವ ಹುಲಿ ಎಂಬ ಖಾತ್ರಿ

Pinterest LinkedIn Tumblr

tiger

ಬೆಳಗಾವಿ:  ‘ಗುಂಡೇಟಿಗೆ ಬಲಿಯಾಗಿರುವ ಹುಲಿಯ ಮರಣೋತ್ತರ ಪರೀಕ್ಷೆ ನಡೆಸುವಾಗ ಅದರ ದೇಹ­ದೊಳಗೆ ‘ಮೈಕ್ರೊ ಚಿಪ್‌’ ಪತ್ತೆಯಾಗಿದೆ. ಕೊರಳಿ­ನಲ್ಲಿ ರೇಡಿಯೊ ಕಾಲರ್‌ ಸಹ ಸಿಕ್ಕಿದೆ. ಹೀಗಾಗಿ ಇದು ಚಿಕ್ಕಮಗಳೂ­ರಿನಿಂದ ತಂದು ಬಿಟ್ಟಿರುವ ಹುಲಿ ಎಂಬುದು ಖಾತ್ರಿಯಾಗಿದೆ’ ಎಂದು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಮೋಹನ­ರಾಜ್‌  ತಿಳಿಸಿದರು.

‘ಚಿಕ್ಕಮಗಳೂರಿನಲ್ಲಿ ಸಿಕ್ಕಿದ್ದ ಹುಲಿ ದೇಹ­ದೊಳಗೆ ‘ಮೈಕ್ರೊ ಚಿಪ್‌’ ಅಳವಡಿಸಲಾಗಿತ್ತು. ಈ ಚಿಪ್ಪಿನಲ್ಲಿ ಆ ಪ್ರಾಣಿಗೆ ಪ್ರತ್ಯೇಕ ಸಂಖ್ಯೆ ನೀಡಲಾಗಿತ್ತು. ಹಲವು ವರ್ಷಗಳ ಬಳಿಕ ಇದು ಮೃತಪಟ್ಟಿದ್ದರೂ ಚಿಪ್‌ ಸಹಾ­ಯದಿಂದ ಅದರ ಗುರುತು ನಿಖರವಾಗಿ ಪತ್ತೆ­ಯಾ­ಗುತ್ತಿತ್ತು. ಬನ್ನೇರು­ಘಟ್ಟದಲ್ಲಿ­ರುವ ಬಯೋ­ಲಾ­ಜಿ­ಕಲ್‌ ಪಾರ್ಕ್‌ಗೆ ಈ ಚಿಪ್‌ ಕಳುಹಿಸಿಸ­ಲಾಗುವುದು’ ಎಂದರು. ‘ಕಾರ್ಯಾಚರಣೆ ನಡೆಸುತ್ತಿದ್ದ ನಮ್ಮ ತಂಡದ ಸಿಬ್ಬಂದಿಯೇ ಗುಂಡು ಹಾರಿಸಿ ಅದನ್ನು ಕೊಂದಿದ್ದಾರೆ. ಕೀರ್ತಿಗಾಗಿ ತಾನೇ ಹುಲಿ ಕೊಂದಿದ್ದೇನೆ ಎಂದು ತಾನಾಜಿ ಪಾಟೀಲ ಹೇಳಿಕೊಳ್ಳು­ತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಭೀಮಗಢ ವನ್ಯಜೀವಿ ಧಾಮದ ಅರಣ್ಯ ಪ್ರದೇಶ­ಗಳಲ್ಲಿ ಇನ್ನೂ ಕೆಲ ದಿನ ನಮ್ಮ ಸಿಬ್ಬಂದಿ ಗಸ್ತು ತಿರುಗ­ಲಿದ್ದಾರೆ. ವಿಶೇಷ ಹುಲಿ ಸಂರಕ್ಷಣಾ ಪಡೆ (ಎಸ್‌ಟಿ­ಪಿಎಫ್‌), ನಕ್ಸಲ್‌ ನಿಗ್ರಹ ಪಡೆಯ ಸಿಬ್ಬಂದಿ, ಸೋಲಿ­ಗರನ್ನು ವಾಪಸ್‌ ಕಳುಹಿಸಿದ್ದೇವೆ’ ಎಂದು ಹೇಳಿದರು.

ಗುಂಡೇಟಿಗೆ ಬಲಿಯಾಗಿದ್ದ ಹುಲಿಯ ಅಂತ್ಯಕ್ರಿಯೆ
ಖಾನಾಪುರ : ತಾಲ್ಲೂಕಿನ ಕೊಂಗಳಾ ಅರಣ್ಯ ಪ್ರದೇಶ­ದಲ್ಲಿ ಭಾನುವಾರ ಸಂಜೆ ಗುಂಡೇಟಿಗೆ ಬಲಿಯಾಗಿದ್ದ ನರಭಕ್ಷಕ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ನಾಗರಗಾಳಿ ಅರಣ್ಯ ಪ್ರದೇಶದಲ್ಲಿ ಸೋಮವಾರ ಅಂತ್ಯಕ್ರಿಯೆ ನಡೆಸ­ಲಾಯಿತು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮದ ಪ್ರಕಾರ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಗುರುರಾಜ ಮನಗೂಳಿ ಮರಣೋತ್ತರ ಪರೀಕ್ಷೆ ನಡೆಸಿದರು.

ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ್‌ ಲೂಥ್ರಾ, ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಮೋಹನ­ರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ, ಖಾನಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ.ಎಂ ಪ್ರಶಾಂತ್‌ ಮೊದಲಾದವರು ಹಾಜರಿದ್ದರು.

ಯಾರ ಗುಂಡಿಗೆ ಬಲಿ?: ಕೊಂಗಳಾ ಅರಣ್ಯದಲ್ಲಿ ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಂದವರು ಯಾರು ಎಂಬ ಗೊಂದಲ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಹುಲಿ ಸಾವನ್ನಪ್ಪಿದ ವಿಷಯ ತಿಳಿದ ತಕ್ಷಣವೇ ಮಾಧ್ಯಮಕ್ಕೆ ಹೇಳಿಕೆ ನೀಡಿದ ಶಾಸಕ ಅರವಿಂದ ಪಾಟೀಲ, ‘ಖಾನಾಪುರ ತಾಲ್ಲೂಕಿನ ಅರಣ್ಯ­ಭಾಗ­ದಲ್ಲಿ ವಾಸಿಸುವ ವ್ಯಕ್ತಿಯ ಗುಂಡಿಗೆ ಬಲಿಯಾಗಿದೆ’ ಎಂದು ಘೋಷಿಸಿದ್ದರು. ತಾನು ಹುಲಿಯನ್ನು ಗುಂಡಿಕ್ಕಿ ಕೊಂದಿರುವುದಾಗಿ ತಾಲ್ಲೂಕಿನ ಕರಂಬಳ ಗ್ರಾಮದ ತಾನಾಜಿ ಪಾಟೀಲ ಸೋಮವಾರ ಹೇಳಿಕೊಂಡಿದ್ದಾರೆ. ಆದರೆ, ಇಲಾಖೆಯ ಸಿಬ್ಬಂದಿಯೇ ಅದನ್ನು ಕೊಂದಿದ್ದಾರೆ ಎಂದು ಅರಣ್ಯ ಇಲಾಖೆ ಹೇಳಿದೆ. ಹೀಗಾಗಿ ನಿಜವಾ­ಗಿಯೂ ಯಾರ ಗುಂಡಿಗೆ ಹುಲಿ ಬಲಿ­ಯಾಗಿದೆ ಎಂಬ ಗೊಂದಲ ಉಂಟಾಗಿದೆ.

ಹುಲಿಗೆ ಮೂರು ಗುಂಡೇಟು: ಹುಲಿಯ ಮೂಗು ಹಾಗೂ ಕಣ್ಣಿನ ಮಧ್ಯದಲ್ಲಿ ಮೂರು ಗುಂಡುಗಳು ತಗುಲಿ ನಂತರ ಶ್ವಾಸಕೋಶದ ತೊಂದರೆಯಿಂದ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಕಣ್ಣಿನ ಕೆಳಭಾಗಕ್ಕೆ ತಾಗಿದ ಗುಂಡು­ಗಳು ಬಾಯಿ ಬಳಿಯಿಂದ ತೂರಿಕೊಂಡು ಹೊರಗೆ ಹೋಗಿವೆ. ಹೀಗಾಗಿ ಅದರ ದೇಹದಲ್ಲಿ ಯಾವುದೇ ಗುಂಡುಗಳು ಉಳಿದಿಲ್ಲ. ಗುಂಡೇಟಿಗೆ ರಕ್ತ ಗಂಟಲು ಸೇರಿ ಉಸಿರಾಟಕ್ಕೆ ತೊಂದರೆಯಾಗಿ ಮೃತಪಟ್ಟಿದೆ ಎಂದು ವೈದ್ಯರು ದೃಢೀಕರಿಸಿದ್ದಾರೆ.

Write A Comment