ಕರ್ನಾಟಕ

ಕರಡಿ ದಾಳಿ: ಆಸ್ಪತ್ರೆಯಲ್ಲಿ ವೈದ್ಯರ ದಬ್ಬಾಳಿಕೆ; ವಾಟರ್‌ಮನ್ ತಿಮ್ಮಯ್ಯ ಬದುಕು ದುಸ್ತರ

Pinterest LinkedIn Tumblr

ti

ಮಧುಗಿರಿ: ತಾಲ್ಲೂಕಿನ ಗರಣಿ ಗ್ರಾಮ ಪಂಚಾಯಿತಿಯ ವಾಟರ್ ಮನ್ ತಿಮ್ಮಯ್ಯ ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡು 44 ದಿನ ಕಳೆದರೂ ಆರೋಗ್ಯ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 41 ದಿನ ವೈದ್ಯರು ಚಿಕಿತ್ಸೆ ನೀಡಿದರೂ ಸಹ ಗುಣಮುಖರಾಗದ ಕಾರಣ ಶನಿವಾರ ರಾತ್ರಿ ಅವರು ಗರಣಿ ಗ್ರಾಮಕ್ಕೆ ಹಿಂದಿರುಗಿದರು.

‘ಆಸ್ಪತ್ರೆಯ ಕೆಲ ವೈದ್ಯರು, ನರ್ಸ್‌ಗಳ ದಬ್ಬಾಳಿಕೆ ಸಹಿಸಲಾಗದೆ ಗ್ರಾಮಕ್ಕೆ ವಾಪಸ್ ಬರುವುದು ಅನಿ­ವಾ­ರ್ಯ­ವಾಯಿತು’ ಎಂದು ತಿಮ್ಮಯ್ಯ ಪತ್ನಿ ಸಾಕಮ್ಮ ಅವರು ಗ್ರಾಮಕ್ಕೆ ಭೇಟಿ ನೀಡಿದ  ಪ್ರತಿನಿಧಿಗೆ ತಿಳಿಸಿದರು.

‘ತಿಮ್ಮಯ್ಯ ಅವರನ್ನು ಊರಿಗೆ ಕರೆದುಕೊಂಡು ಹೋಗ­ಲಿಲ್ಲ ಎಂದರೆ ಪೊಲೀಸ್ ಇಲಾಖೆಗೆ ದೂರು ನೀಡು­ವುದಾಗಿ ಮತ್ತು ಯಾವುದಾದರೂ ಆಶ್ರಮಕ್ಕೆ ಬಿಡು­ವುದಾಗಿ ಕೆಲ ವೈದ್ಯರು, ನರ್ಸ್‌ಗಳು ಹೆದರಿಸಿ­ದರು. ಹೀಗಾಗಿ ಊರಿಗೆ ಬರುವುದು ಅನಿವಾರ್ಯ­ವಾಯಿತು. ನಮ್ಮ ಕೈಯಲ್ಲಿ ಹಣವಿಲ್ಲದ ಕಾರಣ ಇಂಥ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದೆ. ಕೂಲಿ–ನಾಲಿ ಮಾಡಿ ಜೀವನ ನಡೆಸುವವರಿಗೆ ಇಂಥ ಕಷ್ಟಗಳು ಬರಬಾರದು’ ಎಂದು ಅಳಲು ತೋಡಿಕೊಂಡರು.

‘ಕರಡಿ ದಾಳಿಯಿಂದ ಗಾಯಗೊಂಡಿದ್ದ ತಿಮ್ಮಯ್ಯ ಅವರನ್ನು ಬೆಂಗಳೂರು ಆಸ್ಪತ್ರೆಗೆ ಸೇರಿಸಿ ಹೋದ ಅಧಿ­ಕಾರಿಗಳು ಈವರೆಗೂ ನಮ್ಮ ಕಡೆ ತಿರುಗಿಯೂ ನೋಡಿಲ್ಲ’ ಎಂದು ದೂರಿದರು.

ಮುಖಕ್ಕೆ ತೀವ್ರ ಗಾಯ: ಕರಡಿ ದಾಳಿಯಿಂದಾಗಿ ತಿಮ್ಮಯ್ಯ ಅವರಿಗೆ ಎಡ ಕಣ್ಣು ಕಾಣಿಸುತ್ತಿಲ್ಲ. ಎಡ ಕೈ ಸ್ವಾಧೀನವಿಲ್ಲ, ಮುಖದಲ್ಲಿರುವ ಚರ್ಮ ಮತ್ತು ಗದ್ದ­ವನ್ನು ಕರಡಿ ಸಂಪೂರ್ಣವಾಗಿ ಕಿತ್ತು ಹಾಕಿದೆ. ಓಡಾ­ಡಲು ಸಾಧ್ಯವಿಲ್ಲ. ಸರಿಯಾಗಿ ಮಾತನಾಡಲು ಆಗು­ತ್ತಿಲ್ಲ. ಮುಖ  ವಿರೂಪಗೊಂಡಿದೆ.

ದ್ರವಾಹಾರ: ಮುಖದಲ್ಲಿ ತೀವ್ರ ಗಾಯವಾಗಿರುವ ಕಾರಣ ಅಗಿದು ತಿನ್ನಲು ಸಾಧ್ಯವಾಗುತ್ತಿಲ್ಲ್ಲ. ಗಂಟಲಿಗೆ ಹಾಲು ಅಥವಾ ಗಂಜಿ ಹಾಕಿದರೆ ನುಂಗುತ್ತಾರೆ.

ಗ್ರಾಮಸ್ಥರ ಹಿಂದೇಟು: ತಿಮ್ಮಯ್ಯ ಅವರ ಮುಖ ವಿರೂಪಗೊಂಡಿರುವ ಕಾರಣ ಅವರನ್ನು ನೋಡಲೂ ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ‘ತಿಮ್ಮಯ್ಯನ ಮುಖವನ್ನು ಕರಡಿ ಕಿತ್ತು ಹಾಕಿದ ದೃಶ್ಯಗಳೇ ಕಣ್ಣ ಮುಂದೆ ಬರುತ್ತವೆ. ಆತನ ಹೆಸರು ಕೇಳಿದರೂ ಹೆದರಿಕೆಯಾಗುತ್ತದೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

ಪರಿಹಾರಕ್ಕೆ ಒತ್ತಾಯ: ತಿಮ್ಮಯ್ಯ ಮತ್ತು ಅವರನ್ನು ಅವಲಂಬಿಸಿರುವ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡ­ಬೇಕು. ತಿಮ್ಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು­ತ್ತಿ­ದ್ದಾಗ ಯಾವುದೇ ಅಧಿಕಾರಿ ಭೇಟಿ ನೀಡಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪರಿಹಾರ ನೀಡಲು ಉನ್ನತ ಮಟ್ಟದ ಅಧಿಕಾರಿಗಳು ಗಮನ ನೀಡದಿದ್ದರೆ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥ ಹೇಳಿದ್ದಾರೆ.

Write A Comment