ಕರ್ನಾಟಕ

ಬೆಂಗಳೂರು ಸ್ಫೋಟ ಸ್ಥಳಕ್ಕೆ ಎನ್‌ಐಎ ತಂಡ; ರಾಜ್ಯಾದ್ಯಂತ ಕಟ್ಟೆಚ್ಚರ

Pinterest LinkedIn Tumblr

NIA

ಬೆಂಗಳೂರು, ಡಿ. 29: ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ರವಿವಾರ ಲಘು ಬಾಂಬ್ ಸ್ಫೋಟ ನಡೆದ ಸ್ಥಳಕ್ಕೆ ವಿಧಿ-ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಶ್ವಾನದಳದ ಅಧಿಕಾರಿಗಳು, ಎನ್‌ಐಎ ತಂಡ, ಕೇಂದ್ರ ಗುಪ್ತಚರ ಅಧಿಕಾರಿಗಳು, ತಮಿಳುನಾಡು ಪೊಲೀಸರು, ಆಂಧ್ರಪ್ರದೇಶದ ಪೊಲೀಸರು ಭೇಟಿ ನೀಡಿ ಕೂಲಂಕಷ ಪರಿಶೀಲನೆ ಕೈಗೊಂಡಿದ್ದಾರೆ. ಸ್ಫೋಟದಿಂದ ಓರ್ವ ಮಹಿಳೆ ಮೃತಪಟ್ಟು ಮೂವರು ಗಾಯಗೊಂಡಿದ್ದರು.
ಸ್ಫೋಟದ ವಸ್ತುಗಳು ಪತ್ತೆ: ಬಾಂಬ್ ಸ್ಫೋಟದ ಸ್ಥಳದಲ್ಲಿ ಸ್ಫೋಟಕ್ಕೆ ಬಳಕೆಯಾಗಿದ್ದ ಮೊಳೆ, ರಾಸಾಯನಿಕ ವಸ್ತುಗಳು ಸೇರಿದಂತೆ ವಸ್ತುಗಳು ಪತ್ತೆಯಾಗಿವೆ. ಅವುಗಳನ್ನು ವಿಧಿ-ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು

ಪರೀಕ್ಷೆಗೆ ಒಳಪಡಿಸಿದ್ದು, ಸಂಜೆ ವೇಳೆಗೆ ಸ್ಫೋಟದ ಬಗ್ಗೆ ಪೂರ್ಣ ಮಾಹಿತಿ ದೊರೆಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳ್ಕಕೆ ಗೃಹ ಸಚಿವರ ಭೇಟಿ:

ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ನೆರವಿನೊಂದಿಗೆ ಪೊಲೀಸರು ನಡೆಸುತ್ತಿರುವ ಶೋಧ ಕಾರ್ಯಾಚರಣೆಯನ್ನು ಗೃಹ ಸಚಿವರು ಪರಿಶೀಲಿಸಿದರು. ಪೊಲೀಸರಿಗೆ ಈ ಕಾರ್ಯಾಚರಣೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗುವುದು ಎಂದು ಅವರು ಹೇಳಿದರು.

ನಗರದಾದ್ಯಂತ ವ್ಯಾಪಕ ಕಟ್ಟೆಚ್ಚರ
ಲಘು ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ, ವಿಕಾಸಸೌಧ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಸ್-ರೈಲ್ವೆ ನಿಲ್ದಾಣ ಸೇರಿ ನಗರದಾದ್ಯಂತ ವ್ಯಾಪಕ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಗೃಹ ಸಚಿವ ಕೆ.ಜೆ. ಜಾರ್ಜ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲಾಲ್ ರುಕ್ಮೊ ಪಚಾವೋ, ಗೃಹ ಇಲಾಖೆ ಕಾರ್ಯದರ್ಶಿ ಪಟಾನಾಯಕ್‌ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಸೇರಿ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಬಾಂಬ್ ಸ್ಫೋಟ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿ ತಪ್ಪಿತಸ್ಥರನ್ನು ತ್ವರಿತಗತಿಯಲ್ಲಿ ಬಂಧಿಸಬೇಕು. ಅಲ್ಲದೆ, ಆತಂಕಕ್ಕೆ ಒಳಗಾಗಿರುವ ಜನ ಸಾಮಾನ್ಯರಲ್ಲಿ ಭಯ ನಿವಾರಣೆ ಮಾಡಿ ವಿಶ್ವಾಸ ಮೂಡಿಸುವ ಕೆಲಸ ಶೀಘ್ರಗತಿಯಲ್ಲಿ ಆಗಬೇಕೆಂದು ಹೇಳಿದ್ದಾರೆ.

ಆ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಕಟ್ಟೆಚ್ಚರ ಕೈಗೊಳ್ಳಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಾತ್ರವಲ್ಲ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಿದ್ದು ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಪತ್ತೆಗೆ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಘಟನಾ ಸ್ಥಳದಲ್ಲಿ ದೊರೆತ ಸಾಕ್ಷಾಧಾರಗಳು, ಘಟನಾ ಸ್ಥಳದಲ್ಲಿ ದೊರೆತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದು, ಆಂಧ್ರ, ತಮಿಳುನಾಡು ಸೇರಿ ಹೊರ ರಾಜ್ಯಗಳಿಗೆ ತನಿಖಾ ತಂಡಗಳನ್ನು ರವಾನಿಸಲಾಗಿದ್ದು, ಮೊಬೈಲ್ ಕರೆಗಳ ಪರಿಶೀಲನಾ ಕಾರ್ಯ ನಡೆಸಲಾಗುತ್ತಿದೆ.

ನೂತನ ವರ್ಷಕ್ಕೆ ಅಡ್ಡಿಯಿಲ್ಲ: ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ನೂತನ ವರ್ಷಾಚರಣೆಗೆ ಯಾವುದೇ ಅಡ್ಡಿಯಿಲ್ಲ. ನಗರದಲ್ಲಿ ವ್ಯಾಪಕ ಬಿಗಿ ಬಂದೋ ಬಸ್ತ್ ಕಲ್ಪಿಸಲಾಗಿದ್ದು, ಜನತೆ ನಿರಾತಂಕವಾಗಿ ನೂತನ ವರ್ಷಾಚರಣೆ ನಡೆಸಬಹುದು ಎಂದು ಪೊಲೀಸರು ಆಭಯ ನೀಡಿದ್ದಾರೆ.

ರಾಷ್ಟ್ರ ವಿರೋಧಿ ಕೃತ್ಯ
ಬೆಂಗಳೂರು ನಗರದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಪೊಲೀಸ್ ಭದ್ರತೆ ಮತ್ತು ಗುಪ್ತಚರ ಇಲಾಖೆಯ ವೈಫಲ್ಯ ಕಾರಣವಲ್ಲ. ಈ ಘಟನೆ ರಾಷ್ಟ್ರ ವಿರೋಧಿ ಕೃತ್ಯವಾಗಿದ್ದು, ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. – ಕೆ.ಜೆ.ಜಾರ್ಜ್, ಗೃಹ ಸಚಿವ

5 ಲಕ್ಷ ರೂ. ಪರಿಹಾರ
ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಮಹಿಳೆಯ ಶವವನ್ನು ಚೆನ್ನೈಗೆ ರವಾನಿಸುವ ವ್ಯವಸ್ಥೆ ಮಾಡಲಾಗುವುದು. ಸ್ಫೋಟದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ. -ಸಿದ್ದರಾಮಯ್ಯ, ಮುಖ್ಯಮಂತ್ರಿ

ನಾಲ್ಕು ಪೊಲೀಸ್ ತಂಡಗಳ ರಚನೆ
ಬೆಂಗಳೂರು ನಗರದಲ್ಲಿ ಬಾಂಬ್ ಸ್ಫೋಟಿಸಿದವರು ಬೆಂಗಳೂರು ನಗರದ ಸುತ್ತಮುತ್ತಲ ಜಿಲ್ಲೆಗಳಲ್ಲಿ ತಲೆ ಮರೆಸಿ ಕೊಂಡಿರಬಹುದೆಂಬ ಶಂಕೆಯ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯು ನಾಲ್ಕು ಪೊಲೀಸ್ ತಂಡಗಳನ್ನು ರಚಿಸಿ ಬೆಂಗಳೂರು ನಗರದ ಅಕ್ಕ-ಪಕ್ಕದ ಜಿಲ್ಲೆಗಳಿಗೆ ತನಿಖೆಗೆ ಕಳುಹಿಸಿದೆ.

Write A Comment