ಮನೋರಂಜನೆ

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ದಶಕದ ಸಂಭ್ರಮ

Pinterest LinkedIn Tumblr

doni-2

ಬೆಂಗಳೂರು, ಡಿ.23: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿರಿಸಿ ಮಂಗಳವಾರ ಹತ್ತು ವರ್ಷ ಸಂದಿದೆ.

ಧೋನಿ 23ರ ಹರೆಯದಲ್ಲಿ ಡಿ.23, 2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಚಿತ್ತಗಾಂಗ್‌ನಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡುವ ಮೂಲಕ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದರು. ಒಂದು ದಶಕದ ಹಿಂದೆ ಧೋನಿ ಚೊಚ್ಚಲ ಪಂದ್ಯದಲ್ಲಿ ಶೂನ್ಯಕ್ಕೆ ರನೌಟಾಗಿ ನಿರಾಸೆ ಮೂಡಿಸಿದ್ದರು.

ಏಳನೆ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಧೋನಿ ತಾನೆದುರಿಸಿದ ಮೊದಲ ಎಸೆತದಲ್ಲೇ ರನೌಟಾಗಿದ್ದರು. ಆ ನಂತರ ಹಿಂದಿರುಗಿ ನೋಡದ ಧೋನಿ ಪಾಕಿಸ್ತಾನ ವಿರುದ್ಧ ಆಡಿದ 5ನೆ ಪಂದ್ಯದಲ್ಲಿ 148 ರನ್ ಸಿಡಿಸಿ ವಿಶ್ವದ ಗಮನ ಸೆಳೆದಿದ್ದರು. ಭಾರತಕ್ಕೆ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ಧೋನಿ 50 ಓವರ್ ಹಾಗೂ 20 ಓವರ್ ಪಂದ್ಯಗಳಲ್ಲಿ ಭಾರತದ ಶ್ರೇಷ್ಠ ‘ಫಿನಿಶರ್’ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ರಾಹುಲ್ ದ್ರಾವಿಡ್‌ರಿಂದ ವಿಕೆಟ್‌ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡ ಧೋನಿ ಈ ತನಕ 315 ದಾಂಡಿಗರನ್ನು ಬಲಿ ಪಡೆದು ಶ್ರೇಷ್ಠ ವಿಕೆಟ್‌ಕೀಪರ್ ಎನಿಸಿಕೊಂಡಿದ್ದಾರೆ.

ಧೋನಿ ಕ್ರಿಕೆಟ್ ಚರಿತ್ರೆಯಲ್ಲಿ ಐಸಿಸಿಯ ಮೂರು ಟ್ರೋಫಿಗಳನ್ನು (ಟ್ವೆಂಟಿ-20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ) ಜಯಿಸಿದ ಏಕೈಕ ನಾಯಕನೆಂಬ ಹೆಗ್ಗಳಿಕೆಗೆೆ ಪಾತ್ರರಾಗಿದ್ದಾರೆ. ಧೋನಿ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ವಿಶ್ವದ ಶ್ರೇಷ್ಠ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದಾರೆ. 2007ರಲ್ಲಿ ಐಸಿಸಿ ಟ್ವೆಂಟಿ-20 ವಿಶ್ವಕಪ್, 2008ರಲ್ಲಿ ಆಸ್ಟ್ರೇಲಿಯದಲ್ಲಿ ತ್ರಿಕೋನ ಏಕದಿನ ಸರಣಿ, 2010ರಲ್ಲಿ ಏಷ್ಯಾ ಕಪ್, 2011ರಲ್ಲಿ ಐಸಿಸಿ ವಿಶ್ವಕಪ್, 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದ ಧೋನಿ ಇದೀಗ 2015ರ ವಿಶ್ವಕಪ್‌ನ ಮೇಲೆ ಕಣ್ಣಿಟ್ಟಿದ್ದಾರೆ. 2007ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮೊದಲ ಬಾರಿ ಭಾರತದ ನಾಯಕತ್ವವನ್ನು ವಹಿಸಿಕೊಂಡಿದ್ದ ಧೋನಿ ಯುವ ಪ್ರತಿಭೆಗಳ ನೆರವಿನಿಂದ ಫೈನಲ್‌ನಲ್ಲಿ ಪಾಕಿಸ್ತಾನವನ್ನು ರೋಚಕವಾಗಿ ಮಣಿಸಿ ಭಾರತಕ್ಕೆ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಟ್ಟಿದ್ದರು.

ಭಾರತದ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದರು. 2011ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಸಮರ್ಥವಾಗಿ ಮುನ್ನಡೆಸಿ ವಿಶ್ವಕಪ್ ಗೆಲ್ಲಲು ಕಾರಣರಾಗಿದ್ದರು. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ವೇಗದ ಬೌಲರ್ ನುವಾನ್ ಕುಲಶೇಖರ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದ ಧೋನಿ ಭಾರತಕ್ಕೆ 28 ವರ್ಷಗಳ ನಂತರ ವಿಶ್ವಕಪನ್ನು ಗೆದ್ದುಕೊಟ್ಟಿದ್ದರು. ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿದ್ದ ಧೋನಿ ಕ್ರಿಕೆಟ್‌ನಲ್ಲಿ ನಾಯಕನಾಗಿ ಐತಿಹಾಸಿಕ ಸಾಧನೆ ಮಾಡಿದ್ದರು. ಐಸಿಸಿ ಟೆಸ್ಟ್ ಹಾಗೂ ಏಕದಿನ ರ್ಯಾಂಕಿಂಗ್ಸ್‌ನಲ್ಲಿ ಭಾರತವನ್ನು ನಂ.1 ಸ್ಥಾನಕ್ಕೆ ತಲುಪಿಸಿದ್ದರು.

ಭಾರತದ ಯಶಸ್ವಿ ಟೆಸ್ಟ್ ನಾಯಕನಾಗಿರುವ ಧೋನಿ ತಂಡಕ್ಕೆ ಹಲವು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದರು. ‘ರಾಂಚಿಯ ಮಿಂಚು’ ಧೋನಿ ಈ ತನಕ 89 ಟೆಸ್ಟ್, 250 ಏಕದಿನ ಹಾಗೂ 50 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.

Write A Comment