ಮನೋರಂಜನೆ

ಧವನ್ -ಕೊಹ್ಲಿ ವಾಗ್ವಾದ: ಡ್ರೆಸ್ಸಿಂಗ್ ರೂಮ್‌ನಲ್ಲಿ ಅಶಾಂತಿ

Pinterest LinkedIn Tumblr

kovi

ಮೆಲ್ಬೋರ್ನ್,ಡಿ.23: ಎರಡನೆ ಟೆಸ್ಟ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಸೋಲು ಅನುಭವಿಸಿದ ಬೆನ್ನಲ್ಲೆ ಸೋಲಿಗೆ ಸಂಬಂಧಿಸಿ ತಂಡದ ಉಪನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ದಾಂಡಿಗ ಶಿಖರ್ ಧವನ್ ನಡುವೆ ವಾಗ್ವಾದ ನಡೆದಿರುವ ಹಿನ್ನೆಲೆಯಲ್ಲಿ ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಅಶಾಂತಿ ಕಂಡು ಬಂದಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ತಿಳಿಸಿದೆ.

ಮೂರನೆ ದಿನದಾಟದಂತ್ಯಕ್ಕೆ ಔಟಾಗದೆ ಕ್ರೀಸ್‌ನಲ್ಲಿದ್ದ ಆರಂಭಿಕ ದಾಂಡಿಗ ಶಿಖರ್ ಧವನ್ ನಾಲ್ಕನೆ ದಿನ ಅಭ್ಯಾಸದ ವೇಳೆ ಗಾಯಗೊಂಡಿದ್ದರು. ಈ ಕಾರಣದಿಂದಾಗಿ ಅವರು ಆಟ ಮುಂದುವರಿಸದೆ ಸ್ವಲ್ಪ ಹೊತ್ತು ವಿಶ್ರಾಂತಿ ಬಯಸಿದ್ದರು. ಪರಿಣಾಮವಾಗಿ ಉಪನಾಯಕ ವಿರಾಟ್ ಕೊಹ್ಲಿ ಆಡಲು ಕ್ರೀಸ್‌ಗೆ ಇಳಿಯಬೇಕಾಯಿತು. ಆದರೆ ಅವರು 11 ಎಸೆತಗಳನ್ನು ಎದುರಿಸಿದ್ದರೂ ಕೇವಲ 1 ರನ್ ಗಳಿಸಿ ಜಾನ್ಸನ್‌ಗೆ ವಿಕೆಟ್ ಒಪ್ಪಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಅವರು 18 ರನ್ ಗಳಿಸಿ ಔಟಾಗಿದ್ದರು ಇದು ಕೊಹ್ಲಿಗೆ ಧವನ್ ವಿರುದ್ಧ ಸಿಟ್ಟಿಗೆ ಕಾರಣವಾಗಿತ್ತು.

ಮೊದಲ ಟೆಸ್ಟ್‌ನಲ್ಲಿ ಕೊಹ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ ಎರಡು ಶತಕ ದಾಖಲಿಸಿದ್ದರು. ಆದರೆ ಎರಡನೆ ಟೆಸ್ಟ್‌ನಲ್ಲಿ ಅವರು ವಿಫಲರಾಗಿದ್ದರು. ಮೊದಲ ಇನಿಂಗ್ಸ್‌ನಲ್ಲಿ ವೈಫಲ್ಯ ಅನುಭವಿಸಿದ್ದರೂ, ಎರಡನೆ ಇನಿಂಗ್ಸ್‌ನಲ್ಲಿ ಚೆನ್ನಾಗಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದರು. ಆದರೆ ಧವನ್ ಗಾಯದ ಕಾರಣವನ್ನು ಮುಂದಿಟ್ಟು ಆಟ ಆರಂಭಿಸಲು ಒಪ್ಪಲಿಲ್ಲ. ಸಿಟ್ಟಿನಿಂದಲೇ ಕೊಹ್ಲಿ ಕ್ರೀಸ್‌ಗೆ ಇಳಿದಿದ್ದರು.

‘‘ ಧವನ್‌ಗೆ ಅಂತಹ ಗಾಯವಾಗಿಲ್ಲ. ಆತನಿಗೆ ಗಾಯವಾಗಿದೆ ಎನ್ನುವುದು ಸುಳ್ಳು ’’ ಎಂದು ಕೊಹ್ಲಿ ಕಿಡಿಕಾರಿದ್ದರು. ಇದಕ್ಕಾಗಿ ಧವನ್ ಕೊಹ್ಲಿಗೆ ತಿರುಗೇಟು ನೀಡಿದ್ದರು. ಧವನ್ ಮಧ್ಯಮ ಸರದಿಯಲ್ಲಿ ಆಡಲು ಇಳಿದು 81 ರನ್ ಗಳಿಸಿದ್ದರು. ಇದು ಭಾರತದ ಪರ ಎರಡನೆ ಇನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಆಗಿತ್ತು.

Write A Comment