ಮನೋರಂಜನೆ

‘420’ ಪಾತ್ರಕ್ಕೆ ನಟಿಯರು ಸೈ: ವಂಚಕರ ಪಾತ್ರದಲ್ಲಿ ಸೋನಂ ಕಪೂರ್‌

Pinterest LinkedIn Tumblr

psmec20sonam

ವಂಚಕರ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲು ನಟೀಮಣಿಯರು ಹಿಂದೇಟು ಹಾಕುತ್ತಿಲ್ಲ. ಇಂತಹದ್ದೊಂದು ಪಾತ್ರ ನಿರ್ವಹಿಸಲು ಬಿ–ಟೌನ್‌ ಬೆಡಗಿ ಸೋನಂ ಕಪೂರ್‌ ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಈ ರೀತಿಯ ಪಾತ್ರಗಳು ಪುರುಷರಿಗೆ ಮಾತ್ರ ಎಂಬ ಕಾಲ ದೂರವಾಗಿದೆ ಎಂದು ಚಿತ್ರೋದ್ಯಮದ ತಜ್ಞರು ಇದಕ್ಕೆ ಪೂರಕವಾಗಿ ಹೇಳಿದ್ದಾರೆ.

‘ಪುರುಷರು ವಂಚಕನ ಪಾತ್ರ ನಿರ್ವಹಿಸುವುದಾದರೆ, ಮಹಿಳೆಯರು ಅಂಥ ಪಾತ್ರಕ್ಕೆ ಯಾಕಾಗಬಾರದು? ಅವರೂ ಪುರುಷರಂತೆ ಉತ್ತಮವಾಗಿ ನಟಿಸಬಲ್ಲರು’ ಎಂದು ಚಿತ್ರೋದ್ಯಮದ ತಜ್ಞ ಆಮೋದ್‌ ಮೆಹ್ರಾ ಹೇಳುತ್ತಾರೆ.

‘ವಂಚಕ ಅಥವಾ ಮೋಸಗಾರನ ಪಾತ್ರ ನಿರ್ವಹಿಸುವುದು ನಟಿಯರಿಗೆ ಕಷ್ಟದ ಸಂಗತಿಯೇನಲ್ಲ. ಈ ರೀತಿಯ ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡಿದಲ್ಲಿ ಚಿತ್ರರಂಗ ಪುರುಷ ಪ್ರಧಾನ ಎಂಬ ಭಾವನೆ ಕಡಿಮೆಯಾಗುತ್ತದೆ’ ಎಂದೂ ಹೇಳಿದ್ದಾರೆ.

ಸೋನಂ ಈಗ ಈ ರೀತಿಯ ಪಾತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ಆದರೆ, ಅದಾಗಲೇ ಅನೇಕ ನಟಿಯರು ಈ ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪರಿಣೀತಿ ಚೋಪ್ರಾ ಅವರು ‘ದಾವತ್‌–
ಏ–ಇಷ್ಕ್‌’ ಮತ್ತು ‘ದೇಡ್‌ ಇಷ್ಕಿಯಾ’ ಚಿತ್ರಗಳಲ್ಲಿ, ಮಾಧುರಿ ದೀಕ್ಷಿತ್‌ ಮತ್ತು ಹುಮಾ ಖುರೇಷಿ ಇಂತಹುದೇ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಎರಡೂ ಚಿತ್ರಗಳು ಹಣ ಗಳಿಸಲಿಲ್ಲ. ಆದರೆ, ಅವರ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದವು.

ರಾಣಿ ಮುಖರ್ಜಿ (ಬಂಟಿ ಔರ್‌ ಬಬ್ಲಿ; ೨೦೦೫), ಐಶ್ವರ್ಯಾ ರೈ ಬಚ್ಚನ್‌ (ಧೂಮ್‌:೨ ; ೨೦೦೬), ಕತ್ರಿನಾ ಕೈಫ್‌ (ರೇಸ್‌; ೨೦೦೮) ಮತ್ತು ಅನುಷ್ಕಾ ಶರ್ಮಾ (ಬದ್ಮಾಷ್‌ ಕಂಪೆನಿ; ೨೦೧೦) ಸೇರಿದಂತೆ ಇತರ ಚಿತ್ರಗಳು ಮಹಿಳಾ ಪ್ರಧಾನವಾಗಿದ್ದವು.

‘ಹೇಮಾ ಮಾಲಿನಿ ಇರಲಿ, ಪರ್ವೀನ್ ಬಾಬಿ, ಶಬಾನಾ ಅಜ್ಮಿ, ಬಿಂದಿಯಾ ಗೋಸ್ವಾಮಿ, ನೀತು ಸಿಂಗ್‌, ಮಾಧುರಿ, ಐಶ್ವರ್ಯಾ ಅಥವಾ ವಿದ್ಯಾ ಬಾಲನ್‌ ಯಾರೇ ಆಗಿರಲಿ ಅವರು ನಟಿಸಿದ ಚಿತ್ರಗಳು ಉತ್ತಮವಾಗಿ ಓಡಿವೆ’ ಎನ್ನುತ್ತಾರೆ ಚಿತ್ರೋದ್ಯಮದ ಇನ್ನೊಬ್ಬ ತಜ್ಞ ಅತುಲ್‌ ಮೋಹನ್‌.

‘ನಿಜ ಹೇಳಬೇಕೆಂದರೆ ಬಾಲಿವುಡ್‌ನಲ್ಲಿ ಹೀರೊಯಿನ್‌ಗಳು ಸಾಹಸಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಬಹಳ ವಿರಳ. ಯಾಕೆ ಈ ರೀತಿಯ ಚಿತ್ರ ಮಾಡಬಾರದು ಅಂದುಕೊಂಡು ಚಿತ್ರ ತಯಾರಿಸಲು ಮುಂದಾದೆ’ ಎಂದು ಸೋನಂ ಕಪೂರ್‌ ಅವರನ್ನು ಹಾಕಿಕೊಂಡು ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸಿರುವ ಅರ್ಬಾಜ್‌ ಖಾನ್‌ ಹೇಳಿದ್ದಾರೆ.

Write A Comment