ಕರ್ನಾಟಕ

ಹೈಕೋರ್ಟ್ ಆವರಣದಲ್ಲೇ ಬೀದಿನಾಯಿಗಳ ಹಾವಳಿ; ಐವರನ್ನು ಕಚ್ಚಿ ಗಾಯಗೊಳಿಸಿದ ನಾಯಿಯನ್ನು ಹಿಡಿದ ಪಾಲಿಕೆ ಸಿಬ್ಬಂದಿ

Pinterest LinkedIn Tumblr

dog_file_photo

ಬೆಂಗಳೂರು: ‘ಬೀದಿನಾಯಿ ಹಾವಳಿಯಿಂದ ಸಾರ್ವಜನಿಕರನ್ನು ರಕ್ಷಿಸಿ’ಎಂದು ಬಿಬಿಎಂಪಿಗೆ ನಿರ್ದೇಶನ ನೀಡುವ ಹೈಕೋರ್ಟ್ ಆವರಣದಲ್ಲೇ ಶನಿವಾರ ಬೀದಿನಾಯಿಯೊಂದು ನ್ಯಾಯಮೂರ್ತಿಗಳ ಅಂಗರಕ್ಷಕ ಸೇರಿದಂತೆ ಐವರಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ.

ಕಬ್ಬನ್ ಪಾರ್ಕ್‌ಗೆ ಬರುವ ಬಹುತೇಕರು ತಿಂಡಿ ತಿನಿಸು ಹಾಕುವುದರಿಂದ ಅದಕ್ಕೆ ಹೊಂದಿಕೊಂಡಿರುವ ಹೈಕೋರ್ಟ್ ಆವರಣದಲ್ಲಿ ಇತ್ತೀಚೆಗೆ ನಾಯಿಗಳ ಹಾವಳಿ ಹೆಚ್ಚಾಗಿದೆ. ಆ ಪೈಕಿ ಒಂದು ನಾಯಿ ಶುಕ್ರವಾರ ಹೈಕೋರ್ಟ್ ಸಿಬ್ಬಂದಿಯೊಬ್ಬರನ್ನು ಕಚ್ಚಿತ್ತು.

ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ ಎನ್ನಲಾದ ನಾಯಿ ಶನಿವಾರ ಮತ್ತೆ ಐವರನ್ನು ಕಚ್ಚಿ ಗಾಯಗೊಳಿಸಿದೆ. ಬೆಳಗ್ಗೆಯಿಂದ ಮಧ್ಯಾಹ್ನ 2ಗಂಟೆ ಅವಧಿಯಲ್ಲಿ ರಿಜಿಸ್ಟ್ರಾರ್ ಜನರಲ್ ಕಾರಿನ ಚಾಲಕ ಚಿಕ್ಕಚನ್ನಯ್ಯ, ನ್ಯಾಯಮೂರ್ತಿಗಳ ಅಂಗರಕ್ಷಕ ವಿಜಯ್ ಹಾಗೂ ಪೊಲೀಸ್ ಪೇದೆಗೆ ಕಚ್ಚಿತು. ಸಮೀಪದಲ್ಲೇ ಇದ್ದ ಸ್ವಚ್ಛತಾ ಸಿಬ್ಬಂದಿಯ ಮೇಲೂ ಎರಗಿದ ನಾಯಿ, ಸ್ವಲ್ಪ ಹೊತ್ತಿನ ಬಳಿಕ ಮರಗೆಲಸಗಾರನ ಕಾಲಿಗೂ ಕಚ್ಚಿದೆ. ಆನಂತರ ರಿಜಿಸ್ಟ್ರಾರ್ ಜನರಲ್ ಕಚೇರಿಯಿಂದ ಪಾಲಿಕೆ ಅಧಿಕಾರಿಗಳಿಗೆ ಕರೆ ಮಾಡಿ ಅದನ್ನು ಸೆರೆ ಹಿಡಿಸಲಾಗಿದೆ. ನಾಯಿ ದಾಳಿಯಿಂದ ಗಾಯಗೊಂಡವರು ಹೈಕೋರ್ಟ್ ಆವರಣದಲ್ಲಿರುವ ಪ್ರಾಥಮಿಕ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

”ಇತ್ತೀಚಿನ ದಿನಗಳಲ್ಲಿ ಹೈಕೋರ್ಟ್ ಆವರಣದಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರವಾಗಿದೆ. ಆ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಏನೂ ಪ್ರಯೋಜನವಾಗಿಲ್ಲ. ಇದೀಗ ಐದು ಜನಕ್ಕೆ ಕಚ್ಚಿದ ಮೇಲೆ ಒಂದು ನಾಯಿಯನ್ನು ಹಿಡಿಸಿದ್ದಾರೆ. ಕೋರ್ಟ್ ಆವರಣದಲ್ಲಿ 30-40 ಬೀದಿನಾಯಿ ಬೀಡುಬಿಟ್ಟಿವೆ. ಅವುಗಳನ್ನೂ ಸೆರೆ ಹಿಡಿದು ಬೇರೆಡೆ ಸಾಗಿಸಬೇಕು. ಇಲ್ಲವಾದರೆ ಇನ್ನಷ್ಟು ಮಂದಿಯ ಮೇಲೆ ನಾಯಿಗಳು ದಾಳಿ ನಡೆಸುವ ಸಾಧ್ಯತೆ ಇದೆ, ”ಎನ್ನುತ್ತಾರೆ ಪ್ರತ್ಯಕ್ಷದರ್ಶಿ ಗಂಗವೀರಯ್ಯ.

ದಾಳಿ ನಡೆಸಿದ ನಾಯಿ ಸೆರೆ ”ಹೈಕೋರ್ಟ್ ಆವರಣದಲ್ಲಿ ನಾಯಿಯೊಂದು ಕೆಲವರಿಗೆ ಕಚ್ಚಿ ಗಾಯಗೊಳಿಸಿರುವುದಾಗಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಕಚೇರಿಯಿಂದ ಮಧ್ಯಾಹ್ನ 2.30ರ ಹೊತ್ತಿಗೆ ಮಾಹಿತಿ ಬಂತು. ತಕ್ಷಣವೇ ಸಿಬ್ಬಂದಿ ಹಾಗೂ ಸರ್ವೋದಯ ಸೇವಾಭಾವಿ ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಹೈಕೋರ್ಟ್ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ನಾಯಿಯನ್ನು ಸೆರೆಹಿಡಿಯಲಾಯಿತು,” ಎಂದು ಪಾಲಿಕೆಯ ಪಶುಪಾಲನಾ ವಿಭಾಗದ ಸಹಾಯಕ ನಿರ್ದೇಶಕ ಎಲ್.ಕಾಂತರಾಜು ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.

”ಬಳಿಕ ನಾಯಿಯನ್ನು ಕ್ವೀನ್ಸ್ ರಸ್ತೆಯಲ್ಲಿರುವ ಸಂತಾನಶಕ್ತಿ ಹರಣ ಚಿಕಿತ್ಸಾ ಕೇಂದ್ರಕ್ಕೆ ಸಾಗಿಸಲಾಯಿತು. ನಾಯಿಯನ್ನು 24 ಗಂಟೆಯಿಂದ 11 ದಿನಗಳವರೆಗೆ ನಿಗಾ ಘಟಕದಲ್ಲಿರಿಸಿ ಪರಿಶೀಲಿಸಲಾಗುವುದು. ಈ ಅವಧಿಯಲ್ಲಿ ನಾಯಿ ಮೃತಪಟ್ಟರೆ ಬಳಿಕ ಇತರೆ ಪರೀಕ್ಷೆಗಳಿಗೆ ಒಳಪಡಿಸಿ ವರದಿ ಪಡೆಯಲಾಗುವುದು. ನಾಯಿ ಕಡಿತಕ್ಕೆ ಒಳಗಾದವರು ಈಗಾಗಲೇ ಒಂದು ಸುತ್ತಿನ ಚಿಕಿತ್ಸೆ ಪಡೆದಿದ್ದಾರೆ. ಎರಡನೇ ಸುತ್ತಿನ ಚಿಕಿತ್ಸೆಯನ್ನು ಹಲಸೂರಿನಲ್ಲಿರುವ ಪಾಲಿಕೆಯ ರೆಫರಲ್ ಆಸ್ಪತ್ರೆಯಲ್ಲಿ ಪಡೆಯುವಂತೆ ಶಿಫಾರಸು ಮಾಡಲಾಗಿದೆ. ಒಂದೊಮ್ಮೆ 11 ದಿನದೊಳಗೆ ನಾಯಿ ಮೃತಪಟ್ಟರೆ ಗಾಯಗೊಂಡವರು ಹೆಚ್ಚುವರಿ ಚಿಕಿತ್ಸೆ ಪಡೆಯಬೇಕಾಗುತ್ತದೆ,” ಎಂದರು.

”ಹೈಕೋರ್ಟ್ ಸೇರಿದಂತೆ ಕಬ್ಬನ್ ಪಾರ್ಕ್ ಆವರಣದಲ್ಲಿ ನಿಯಮಿತವಾಗಿ ತಪಾಸಣೆ ನಡೆಸಿ ಬೀದಿನಾಯಿಗಳನ್ನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಇತರೆ ಸಂದರ್ಭದಲ್ಲಿ ಪೂರ್ವಭಾವಿಯಾಗಿ ಈ ಪ್ರದೇಶದಲ್ಲಿ ಪರಿಶೀಲನೆ ನಡೆಸಿ ಅಪಾಯಕಾರಿ ನಾಯಿಗಳಿದ್ದರೆ ಸೆರೆ ಹಿಡಿಯಲಾಗುತ್ತಿದೆ. ತಪಾಸಣೆ ಕಾರ್ಯ ಮುಂದುವರಿಯಲಿದೆ,” ಎಂದು ಹೇಳಿದರು.

Write A Comment