ಅಂತರಾಷ್ಟ್ರೀಯ

ರಾಜಕಾರಣಿಗಳ ಮಕ್ಕಳನ್ನೂ ಬಿಡುವುದಿಲ್ಲ: ತಾಲಿಬಾನ್

Pinterest LinkedIn Tumblr

Taliban-militants

ಇಸ್ಲಾಮಾಬಾದ್: ಪೇಶಾವರದ ಶಾಲೆ ಮೇಲೆ ತಾಲಿಬಾನ್ ಉಗ್ರರು ದಾಳಿ ಮಾಡಿ ನೂರಾರು ಮಕ್ಕಳ ಹತ್ಯೆಗೈದ ಪ್ರಕರಣಕ್ಕೆ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಇನ್ನೊಂದೆಡೆ ತಾಲಿಬಾನ್ ಉಗ್ರರಿಂದ ಇನ್ನಷ್ಟು ಮಕ್ಕಳನ್ನು ಕೊಲ್ಲುವ ಬೆದರಿಕೆಯೂ ಕೇಳಿಬಂದಿದೆ.

”ಉಗ್ರಗಾಮಿಗಳನ್ನು ಗಲ್ಲಿಗೇರಿಸುವ ಕೆಲಸವನ್ನು ಪಾಕ್ ಸರಕಾರ ಮುಂದುವರಿಸಿದರೆ ಪ್ರಧಾನಿ ನವಾಜ್ ಷರೀಫ್ ಅವರ ಕುಟುಂಬದವರೂ ಸೇರಿದಂತೆ ರಾಜಕಾರಣಿಗಳ ಹಾಗೂ ಸೇನಾಧಿಕಾರಿಗಳ ಮಕ್ಕಳನ್ನು ಕೊಂದು ಸೇಡು ತೀರಿಸಿಕೊಳ್ಳುತ್ತೇವೆ,” ಎಂದು ನವಾಜ್ ಷರೀಫ್‌ಗೆ ನೇರ ಎಚ್ಚರಿಕೆಯನ್ನು ತೆಹ್ರಿಕ್ ಇ ತಾಲಿಬಾನ್‌ನ ವಕ್ತಾರ ಮೊಹಮ್ಮದ್ ಖರಸಾನಿ ರವಾನಿಸಿದ್ದಾನೆ. ಈತ ತೆಹ್ರಿಕ್ ಇ ತಾಲಿಬಾನ್ ಮುಖ್ಯಸ್ಥ ಮುಲ್ಲಾ ಫಜುಲ್ಲಾನ ಉನ್ನತ ಕಮಾಂಡರ್‌ಗಳಲ್ಲೊಬ್ಬ ಎನ್ನಲಾಗಿದೆ. ನವಾಜ್ ಮನೆಯನ್ನು ಶೋಕದ ಕೇಂದ್ರವಾಗಿಸುವುದಾಗಿ ಆತ ಇ-ಮೇಲ್ ಮಾಡಿ ಬೆದರಿಸಿದ್ದಾನೆ.

ಈ ಪತ್ರ ಅಸಲಿಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ಹೇಳಿದ್ದು, ಪತ್ರದಲ್ಲಿ ಉಗ್ರರು ತಮ್ಮ ಕುಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ”ಮಕ್ಕಳೂ ಅವರ ಹೆತ್ತವರ ದಾರಿಯಲ್ಲೇ ಸಾಗಲು ಬದ್ಧರಾಗಿರುವ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಬೇಕಾಯಿತು,” ಎಂದು ಸಮರ್ಥಿಸಿಕೊಳ್ಳಲಾಗಿದೆ.

ಪತ್ರದಲ್ಲಿ ಭಾರತದ ಯಾವುದೇ ಪ್ರಸ್ತಾವವಿಲ್ಲ. ಆದರೆ ಪಾಕ್‌ನಲ್ಲಿ ಗಲ್ಲು ಶಿಕ್ಷೆಗೆ ಒಳಾಗಿರುವ ಒಮರ್ ಶೇಕ್, ಕಂದಹಾರ್ ವಿಮಾನ ಅಹರಣದ ಉಗ್ರರಲ್ಲೊಬ್ಬ ಹಾಗೂ ಪತ್ರಕರ್ತ ಡೇನಿಯಲ್ ಪರ್ಲ್ ಹತ್ಯೆ ಮಾಡಿರುವವನ ಬಗ್ಗೆ ಪ್ರಸ್ತಾಪಿಸಲಾಗಿದೆ.

ಸಹಾನುಭೂತಿ ಭಂಗ:

”ಮಕ್ಕಳ ಮೇಲೆ ಉಗ್ರರು ನಡೆಸಿದ ದಾಳಿಯು, ಉಗ್ರರ ಬಗ್ಗೆ ಸಹಾನುಭೂತಿ ಉಳ್ಳವರನ್ನೂ ಕಂಗೆಡಿಸಿದೆ. ಅಫಘಾನಿಸ್ತಾನದಲ್ಲಿ ಜಿಹಾದಿಗಳ ಮೇಲೆ ಅಮೆರಿಕ ಸಾರಿರುವ ಸಮರಕ್ಕೆ ಪಾಕ್ ಸೇನೆ ಕೈಜೋಡಿಸಿದೆ ಎನ್ನುವ ಅಸಮಾಧಾನಗಳು ಅನೇಕ ಪಾಕಿಸ್ತಾನಿಯರಲ್ಲಿವೆ. ಆದರೆ ಮಕ್ಕಳ ಮೇಲಿನ ದಾಳಿಗಳು ಪಾಕಿಸ್ತಾನಿಯರಿಗೆ ಉಗ್ರಗಾಮಿಗಳ ಮೇಲಿದ್ದ ಸಹಾನುಭೂತಿಯನ್ನು ಹಾಳು ಮಾಡುತ್ತಿದೆ,” ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ವಾಯವ್ಯ ಭಾಗದಲ್ಲಿರುವ ಉಗ್ರರ ವಿರುದ್ಧ ಹೊರಾಟ ಮುಂದುವರಿಸಲು ಪಾಕ್ ಸರಕಾರಕ್ಕೆ ಸಾರ್ವಜನಿಕ ಬೆಂಬಲದ ಅಗತ್ಯವಿದೆ ಎಂದವರು ಹೇಳಿದ್ದಾರೆ.

ಅಮೆರಿಕದಿಂದ 100 ಕೋಟಿ ಡಾಲರ್:

ವಾರ್ಷಿಕ ರಕ್ಷಣಾ ನೀತಿ ವಿಧೇಯಕಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸಹಿ ಹಾಕಿದ್ದು, ಇದರ ಪರಿಣಾಮ ಪಾಕಿಸ್ತಾನಕ್ಕೆ 100 ಕೋಟಿ ಡಾಲರ್ ನೆರವು ಅಮೆರಿಕದಿಂದ ಹರಿದು ಬರಲಿದೆ.

ಅಫಘಾನಿಸ್ತಾನದ ತಾಲಿಬಾನ್ ನಿಗ್ರಹ ಸಮರಕ್ಕೆ ಪಾಕ್ ಬೆಂಬಲ ನೀಡಿದ್ದು, ಖರ್ಚು ವೆಚ್ಚಿನ ಸಲುವಾಗಿ ಅಮೆರಿಕ ನೆರವು ನೀಡುತ್ತಾ ಬಂದಿದೆ.

ಜಂಟಿ ಕಾರ್ಯಾಚರಣೆಗೆ ನಕಾರ:

ಉಗ್ರರ ವಿರುದ್ಧ ಅಫಘಾನಿಸ್ತಾನದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸುವ ಪ್ರಸ್ತಾಪವನ್ನು ತಳ್ಳಿಹಾಕಿರುವ ಪಾಕ್ ಪ್ರಧಾನಿ ಸಲಹೆಗಾರ ಸರ್ತಾಜ್ ಅಜೀಜ್, ”ಉಭಯ ದೇಶಗಳು ಗಡಿಯ ತಮ್ಮತಮ್ಮ ಭಾಗಗಳಲ್ಲಿ ಉಗ್ರರ ವಿರುದ್ಧ ಸಮರ ಮುಂದುವರಿಸಲಿವೆ. ಉಭಯ ದೇಶಗಳು ಜಂಟಿ ಕಾರ್ಯಾಚರಣೆ ಬದಲಿಗೆ, ಸಮನ್ವಯದ ಕಾರ್ಯಾಚರಣೆಗಳನ್ನು ನಡೆಸಲಿವೆ,” ಎಂದಿದ್ದಾರೆ.

”ಮುಂಬಯಿ ದಾಳಿ ರೂವಾರಿ ಜಾಕಿರ್ ರೆಹಮಾನ್‌ನನ್ನು ಜಾಮೀನಿನನ್ವಯ ಬಿಡುಗಡೆ ಮಾಡಿಲ್ಲ. ಭಯೋತ್ಪಾದನೆ ತಡೆಗೆ ಪಾಕ್ ಪ್ರಯತ್ನಗಳನ್ನು ನಡೆಸಿದಂತೆಯೇ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದ ವಿಚಾರಣೆಯನ್ನು ಭಾರತ ತ್ವರಿತಗೊಳಿಸಬೇಕು,” ಎಂದು ಸರ್ತಾಜ್ ಹೇಳಿದ್ದಾರೆ. 2007ರಲ್ಲಿ ದಿಲ್ಲಿ-ಲಾಹೋರ್ ನಡುವಿನ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ 70 ಮಂದಿ ಬಲಿಯಾಗಿದ್ದರು. ಇವರಲ್ಲಿ ಬಹುತೇಕ ಪಾಕಿಸ್ತಾನಿಯರೇ ಇದ್ದರು.

ಈ ನಿರ್ದಯಿ ಮೂರು ಮಕ್ಕಳ ತಂದೆ!

”ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಸೇನೆ ಮತ್ತು ಬೇಹುಗಾರಿಕೆ ಸಂಸ್ಥೆ ನಿಲ್ಲಿಸದೇ ಹೋದರೆ, ಇನ್ನಷ್ಟು ದಾಳಿಗಳನ್ನು ನಡೆಸಲಾಗುವುದು,” ಎಂದು ಪೇಶಾವರ ಹತ್ಯಾಕಾಂಡದ ರೂವಾರಿ ಉಮರ್ ಮನ್ಸೂರ್ ಬೆದರಿಸಿದ್ದಾನೆ. ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನದ(ಟಿಟಿಪಿ) ವೆಬ್‌ಸೈಟ್‌ನಲ್ಲಿ ಈ ವಿಡಿಯೊ ಹಾಕಲಾಗಿದ್ದು, ಇದು ಇಂಗ್ಲಿಷ್ ಉಪ ಶೀರ್ಷಿಕೆಗಳನ್ನೂ ಒಳಗೊಂಡಿದೆ.

132 ಮಕ್ಕಳ ಕಗ್ಗೊಲೆಗೆ ಕಾರಣನಾದ ಉಮರ್ ಮನ್ಸೂರ್‌ಗೆ ಮೂವರು ಮಕ್ಕಳಿದ್ದಾರೆ. 36 ವರ್ಷದ ಮನ್ಸೂರ್‌ಗೆ ವಾಲಿಬಾಲ್ ಎಂದರೆ ಪ್ರಾಣ. ಈತನಿಗೆ ‘ಸ್ಲಿಮ್’ ಎನ್ನುವ ಅಡ್ಡಹೆಸರೂ ಇದೆ. ಆರು ಪಾಕ್ ತಾಲಿಬಾನಿಯನ್ನರನ್ನು ಸಂದರ್ಶನ ಮಾಡಿರುವ ರಾಯ್ಟರ್ ಸುದ್ದಿಸಂಸ್ಥೆಯು, ಪೇಶಾವರ ಹತ್ಯಾಕಾಂಡದ ರೂವಾರಿ ಮನ್ಸೂರ್ ಎಂದು ಸ್ಪಷ್ಟಪಡಿಸಿದೆ. ಇದಕ್ಕೆ ಪೂರಕವಾಗಿ ಟಿಟಿಪಿ ವಿಡಿಯೊದಲ್ಲಿ ಸುಳಿವುಗಳು ಸಿಕ್ಕಿವೆ. ”ಮನ್ಸೂರ್ ಕಡ್ಡಾಯವಾಗಿ ಜಿಹಾದ್ ತತ್ತ್ವಗಳನ್ನು ಪಾಲಿಸುತ್ತಾನೆ, ಈತ ಮುಲ್ಲಾ ಫಜುಲ್ಲಾ ಆಪ್ತರಲ್ಲಿ ಪ್ರಮುಖ,” ಎಂದು ಸಂದರ್ಶನದಲ್ಲಿ ಈ ತಾಲಿಬಾನಿಗಳು ಹೇಳಿದ್ದಾರೆ.

Write A Comment