ಮನೋರಂಜನೆ

ಬಣ್ಣದ ಲೋಕದಿಂದ ದೂರವಿದ್ದ ನಟಿ ಪ್ರೇಮಾ ಮತ್ತೆ ಕ್ಯಾಮೆರಾ ಕಣ್ಣಲ್ಲಿ ಸೆರೆ

Pinterest LinkedIn Tumblr

prema

ದೀರ್ಘಕಾಲ ಬಣ್ಣದ ಲೋಕದಿಂದ ದೂರವಿದ್ದ ನಟಿ ಪ್ರೇಮಾ ಈಗ ಮತ್ತೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಆದರೆ ಅವರ ಮರುಪ್ರವೇಶ ಆಗಿರುವುದು ಸಿನಿಮಾ ಲೋಕಕ್ಕೆ ಅಲ್ಲ. ವಿನ್ಯಾಸಕ ಗಿರೀಶ್ ಅವರ ‘ಸರ್ಗಾ’ ಸಂಗ್ರಹದ ದಿರಿಸುಗಳಿಗೆ ರಾಯಭಾರಿ ಆಗಿರುವುದರಿಂದ ಅವರು ಕ್ಯಾಮೆರಾ ಎದುರಿಸಿದ್ದು.

ಶಿವರಾಜ್ ಕುಮಾರ್ ನಾಯಕರಾಗಿದ್ದ ‘ಸವ್ಯಸಾಚಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಪ್ರೇಮಾಗೆ ಬ್ರೇಕ್ ಕೊಟ್ಟದ್ದು ಉಪೇಂದ್ರ ನಿರ್ದೇಶನದ ‘ಓಂ’. ‘ನಮ್ಮೂರ ಮಂದಾರ ಹೂವೇ’, ‘ಕನಸುಗಾರ’, ‘ಉಪೇಂದ್ರ’, ‘ಯಜಮಾನ’, ‘ಆಪ್ತಮಿತ್ರ’ ಇನ್ನಿತರ ಚಿತ್ರಗಳಲ್ಲಿ ಪ್ರೇಮಾ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ.

ಕಣ್ಣಿನಲ್ಲಿಯೇ ಭಾವ ತುಳುಕಿಸುವ ಪ್ರೇಮಾ ಮಹಿಳೆಯರ ಅಚ್ಚುಮೆಚ್ಚಿನ ನಟಿ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗದಿಂದ ದೂರವಾಗಿದ್ದ ಅವರು ‘ಶಿಶಿರ’ ಚಿತ್ರದ ಮೂಲಕ ಮತ್ತೊಮ್ಮೆ ಚಂದನವನದಲ್ಲಿ  ಕಾಣಿಸಿಕೊಂಡಿದ್ದರು. ಅವರು ‘ಮೆಟ್ರೊ’ದೊಂದಿಗೆ ಒಂದಷ್ಟು ಮಾತು ಹಂಚಿಕೊಂಡರು.

**‘ಸರ್ಗಾ’ ಸಂಗ್ರಹದ ಕುರಿತು ನಿಮ್ಮ ಅಭಿಪ್ರಾಯವೇನು?
ಇದೇ ಮೊದಲ ಬಾರಿ ನಾನು  ವಿನ್ಯಾಸಕರೊಬ್ಬರ ಸಂಗ್ರಹಕ್ಕೆ ರಾಯಭಾರಿಯಾಗಿರುವುದು. ಗಿರೀಶ್ ಅವರ ಸಂಗ್ರಹ ನನಗೆ ತುಂಬ ಇಷ್ಟವಾಯಿತು. ಇದರಲ್ಲಿ ಹೊಸತನ ಇದೆ. ಮುಂಬೈಯಿಂದ ರೂಪದರ್ಶಿಗಳು ಬಂದಿದ್ದರು. ನಂದಿ ಬೆಟ್ಟದಲ್ಲಿ ಇದರ ಶೂಟಿಂಗ್ ಮಾಡಿದ್ದು. ಕಲರ್ ಕಾಂಬಿನೇಷನ್, ವಿನ್ಯಾಸ ಎಲ್ಲವೂ ನನ್ನ ಮನಸ್ಸಿಗೆ ಹಿಡಿಸಿತು.

**ನೀವೂ ಡಿಸೈನರ್ ದಿರಿಸು ಪ್ರಿಯರೇ?
ಕ್ರಿಯೇಟಿವ್ ವಿನ್ಯಾಸವಿರುವ ಉಡುಪುಗಳು ನನಗೆ ತುಂಬ ಇಷ್ಟ. ಅದು ಡಿಸೈನರ್ ಆದರೂ ಸರಿಯೇ, ಚಿಕ್ಕ ಅಂಗಡಿಯಲ್ಲಿ ಸಿಗುವುದಾದರೂ ಸರಿಯೇ. ನಾವು ಕೊಂಡುಕೊಳ್ಳುವ ಉಡುಪುಗಳಲ್ಲಿ ಹೊಸತನವಿದ್ದರೆ ಮನಸ್ಸಿಗೆ ಇಷ್ಟವಾಗುತ್ತದೆ.

**ನೀವು ಸಿನಿಮಾ ಜಗತ್ತಿನಿಂದ ಬ್ರೇಕ್ ತೆಗೆದುಕೊಂಡಿದ್ದು ಯಾಕೆ?
ಹದಿನಾಲ್ಕು ವರ್ಷದಿಂದ ಸಿನಿಮಾಲೋಕದಲ್ಲಿದ್ದೆ. ಒಂದೇ ರೀತಿಯ ಕತೆಗಳು ಬರುತ್ತಿದ್ದವು. ಹಾಗಾಗಿ ಬ್ರೇಕ್ ಬೇಕು ಅನಿಸಿತ್ತು. ಯಾವಾಗಲೂ ಮೇಕಪ್ ಹಚ್ಚಿಕೊಂಡೇ ಇರಲು ಆಗುವುದಿಲ್ಲ. ಮನಸ್ಸು ಬದಲಾವಣೆ ಬಯಸುತ್ತದೆ. ಬಣ್ಣದ ಲೋಕದ ಹೊರತು ನನಗೂ ಒಂದು ಜೀವನವಿದೆ. ನನಗೆ ನಾನು ಸಮಯ ನೀಡಬೇಕಾಗಿತ್ತು. ಹಾಗಾಗಿ ಬ್ರೇಕ್ ತೆಗೆದುಕೊಂಡೆ.

**ನಟಿಯರಿಗೆ ಮದುವೆಯಾದ ನಂತರ ಅವಕಾಶಗಳ ಕೊರತೆ ಕಾಣಿಸುತ್ತದೆ. ಇದು ನಿಮ್ಮ ವಿಷಯದಲ್ಲೂ ನಿಜವೇ ಆಯಿತೆ?
ಮದುವೆಯಾದ ತಕ್ಷಣ ನಟಿಯರ ಪ್ರತಿಭೆ ಮಂಕಾಗುವುದಿಲ್ಲ. ಅದನ್ನು ನಮ್ಮ ನಿರ್ದೇಶಕರು ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮಲ್ಲಿ ಮದುವೆಯಾದ ಮೇಲೆ ಪೋಷಕ ಪಾತ್ರಗಳಲ್ಲಿ ನಟಿಸುವಂತೆ ಕೇಳುತ್ತಾರೆ. ಪ್ರೇಮಾಗೆ ವಯಸ್ಸಾಗಿದೆ ಎಂದು ಅವರೇ ನಿರ್ಧಾರ ಮಾಡಿಬಿಡುತ್ತಾರೆ. ಅದರೆ ಹಿಂದಿ ಚಿತ್ರರಂಗದಲ್ಲಿ ಮದುವೆಯಾದ ಕಾಜೋಲ್‌ ಅನ್ನು ಹಾಕಿಕೊಂಡು ಹೊಸತನದ ಸಿನಿಮಾ ಮಾಡುತ್ತಾರೆ. ನಮ್ಮಲ್ಲೂ ಆ ರೀತಿಯ ಬದಲಾವಣೆ ಆಗಬೇಕು. ಹಾಗೆ ಆದರೆ ಪ್ರತಿಭಾವಂತ ಕಲಾವಿದರಿಗೆ ಬೆಲೆ ಸಿಗುತ್ತದೆ.

**‘ಶಿಶಿರ’ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?
ಅದು ಪ್ರಯೋಗಾತ್ಮಕ ಚಿತ್ರವಾದ ಕಾರಣ ಬೇಡ ಅನ್ನಲು ಮನಸ್ಸಾಗಲಿಲ್ಲ. ಚಿತ್ರಕತೆ ತುಂಬ ಚೆನ್ನಾಗಿತ್ತು.

**ಮತ್ತೆ ನಟನೆಗೆ ಮರಳುವ ಮನಸ್ಸು ಇದೆಯಾ?
ತುಂಬಾ ಅವಕಾಶಗಳು ಬಂದಿವೆ. ಉತ್ತಮ ಕಥೆ ಹಾಗೂ ಅದರಲ್ಲಿನ ನನ್ನ ಪಾತ್ರ ಹಿಡಿಸಿದರೆ ನಾನು ನಟಿಸಲು ಸಿದ್ಧ. ಫ್ಯಾಮಿಲಿ ನೋಡುವಂತಹ ಸಿನಿಮಾ ಮಾಡಬೇಕು ಎಂಬ ಆಸೆ ಇದೆ.  ಸವಾಲಿನ ಪಾತ್ರಗಳು ನನಗೆ ಇಷ್ಟ.

**ನಿಮಗೆ ಸವಾಲು ಅನಿಸಿದ ಪಾತ್ರ ಯಾವುದು?
ನಾನು ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದೇನೆ. ನನ್ನ ಯಾವ ಪಾತ್ರವೂ ಪುನರಾರ್ವತನೆ ಆಗಿಲ್ಲ. ‘ನಮ್ಮೂರ ಮಂದಾರ ಹೂವೇ’ ಚಿತ್ರದಲ್ಲಿ ನನ್ನದು ತುಂಬಾ ಸವಾಲಿನ ಪಾತ್ರ. ಶಿರಸಿ ಭಾಷೆ ನನಗೆ ಕಷ್ಟವಾಗಿತ್ತು. ಅದೂ ಅಲ್ಲದೆ ಆ ಸಿನಿಮಾ ನಾಯಕಿ ಕೇಂದ್ರಿತವಾಗಿತ್ತು. ಇನ್ನು ರಮೇಶ್, ಶಿವರಾಜ್ಕುಮಾರ್ ಅವರ ಜತೆ ಕೆಲಸ ಮಾಡುವಾಗ ಏನೋ ಹೊಸತನ ಇತ್ತು. ನಾವು ಮೂವರೂ ಕ್ರಿಯೇಟಿವಿಟಿಗೆ ಜಾಸ್ತಿ ಒತ್ತು ನೀಡುತ್ತಿದ್ದೆವು.

**ಕನ್ನಡ ಚಿತ್ರರಂಗದ ಬಗ್ಗೆ ನಿಮ್ಮ ಅನಿಸಿಕೆ ಏನು?
ಈಗಿನ ಕನ್ನಡ ಚಿತ್ರರಂಗ ಬ್ಯುಸಿನೆಸ್ ಆಗಿ ಹೋಗಿದೆ. ಇವರನ್ನು ಹಾಕಿ ಸಿನಿಮಾ ಮಾಡಿದರೆ ಎಷ್ಟು ಹಣ ಬರುತ್ತದೆ ಎಂದು ಯೋಚಿಸುತ್ತಿದ್ದಾರೆ. ಮೊದಲಿದ್ದ ಕ್ರಿಯೇಟಿವಿಟಿ ಕಡಿಮೆಯಾಗಿದೆ. ಆಗ ಹೊಸತನ ಜಾಸ್ತಿ ಇತ್ತು. ಸೃಜನಶೀಲ ನಿರ್ದೇಶಕರು ಇದ್ದಿದ್ದರು.

**ಈಗಲೂ ಫಿಟ್‌ನೆಸ್ ಕಾಯ್ದಿಟ್ಟುಕೊಂಡಿದ್ದೀರಿ. ಇದರ ಗುಟ್ಟೇನು?
ನನಗೆ ದೇಹ ದಂಡಿಸುವುದು, ಫಿಟ್‌ ಆಗಿರುವುದು ಎಂದರೆ ಮೊದಲಿನಿಂದಲೂ ಇಷ್ಟ. ಯೋಗ, ಧ್ಯಾನ, ವಾಕಿಂಗ್, ಜಾಗಿಂಗ್ ಇವೆಲ್ಲ ನನ್ನನ್ನು ಫಿಟ್ ಆಗಿಸಿವೆ. ಡಯೆಟ್ ಮಾಡುವುದಿಲ್ಲ. ಚೆನ್ನಾಗಿ ಊಟ, ನಿದ್ದೆ ಮಾಡುತ್ತೇನೆ. ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುತ್ತೇನೆ. ನಗುನಗುತ್ತಾ ಇರುತ್ತೇನೆ. ಇದೇ ನನ್ನ ಸೌಂದರ್ಯದ ಗುಟ್ಟು.

**ಈಗ ಏನು ಮಾಡುತ್ತಿದ್ದೀರಿ?
ನನ್ನ ಜೀವನದ ಪ್ರತಿಕ್ಷಣವನ್ನು ಖುಷಿಯಿಂದ ಅನುಭವಿಸುತ್ತಿದ್ದೇನೆ.

****
ಸರ್ಗಾ ಸಂಗ್ರಹದ ಪ್ರದರ್ಶನ ಇದೇ ಭಾನುವಾರ ಕಲಾರಸ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ.
ಸ್ಥಳ: ಕಲಾರಸ ಆರ್ಟ್ ಗ್ಯಾಲರಿ, ಹೈ ಸ್ಟ್ರೀಟ್, 6ನೇ ಮಹಡಿ, 11ನೇ ಮುಖ್ಯರಸ್ತೆ, ಜಯನಗರ 4ನೇ ಬ್ಲಾಕ್. ಸಂಜೆ 6.30.

***
ಹೊಸ ಬಗೆ ವಿನ್ಯಾಸವನ್ನು ಪರಿಚಯಿಸುವ ಉದ್ದೇಶದಿಂದ ನಾನು ದಿರಿಸುಗಳನ್ನು ವಿನ್ಯಾಸ ಮಾಡಿದ್ದೇನೆ. ಈ ಉಡುಪುಗಳಿಗೆ ಸಾಂಪ್ರದಾಯಿಕ, ಆಧುನಿಕ ಫ್ಯಾಶನ್ ಸ್ಪರ್ಶ ನೀಡಿದ್ದೇನೆ. ಅದೂ ಅಲ್ಲದೆ ಎಲ್ಲರ ಕೈಗೆಟುಕುವ ದರದಲ್ಲಿ ವಿನ್ಯಾಸ ಮಾಡಬೇಕು ಎಂಬುದು ನನ್ನ ಆಸೆ. ಅದು ಈ ಸಂಗ್ರಹದ ಮೂಲಕ ಸಾಧ್ಯವಾಗಲಿದೆ.
–ಗಿರೀಶ್, ವಿನ್ಯಾಸಕ

Write A Comment