ಕರ್ನಾಟಕ

ಘನತ್ಯಾಜ್ಯ ವಿಲೇವಾರಿ ಘಟಕ ವಿರೋಧಿಸಿ ರೈತನ ಆತ್ಮಹತ್ಯೆ; ತುಮಕೂರು ಬಳಿ ಹಿಂಸಾಚಾರ, ಇನ್ಸ್‌ಪೆಕ್ಟರ್‌ಗೆ ಗಾಯ

Pinterest LinkedIn Tumblr

pvec211214tm1

ತುಮಕೂರು: ಘನತ್ಯಾಜ್ಯ ವಿಲೇವಾರಿ ಘಟಕ ವಿರೋಧಿಸಿ ಆತ್ಮಹತ್ಯೆ ಮಾಡಿ­ಕೊಂಡ ರೈತನ ಶವ ಸಾಗಿಸುವಾಗ ಉದ್ರಿಕ್ತಗೊಂಡ ಜನರನ್ನು ನಿಯಂ­ತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿ­ಸಿದ ಘಟನೆ ಶನಿವಾರ ರಾತ್ರಿ ತಾಲ್ಲೂಕಿನ ಕಟಿಗೇನಹಳ್ಳಿಯಲ್ಲಿ ನಡೆದಿದೆ.

ಕಲ್ಲು ತೂರಾಟದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಅಬ್ದುಲ್‌ಖಾದರ್‌ ಗಂಭೀರ­-­ವಾಗಿ ಗಾಯಗೊಂಡಿದ್ದು ಪ್ರಜ್ಞೆ ಬಂದಿಲ್ಲ. ರಕ್ತಸ್ರಾವ ನಿಲ್ಲದ ಕಾರಣ ಅವರನ್ನು ಬೆಂಗಳೂರು ನಿಮ್ಹಾನ್ಸ್‌ಗೆ ಸಾಗಿಸಲಾಯಿತು. ಖಾದರ್‌ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಲಾಗಿದೆ ಎಂದು ಹೇಳಲಾ­ಗುತ್ತಿದೆ. ಮತ್ತೊಬ್ಬ ಇನ್ಸ್‌ಪೆಕ್ಟರ್‌ ರವಿ ಅವರಿಗೆ ಸಣ್ಣ ಗಾಯವಾಗಿದೆ.

ಲಾಠಿ ಪ್ರಹಾರದಲ್ಲಿ ಗ್ರಾಮಸ್ಥರಾದ ಶಂಕರಯ್ಯ, ಷಣ್ಮುಖಯ್ಯ ಗಾಯ­ಗೊಂಡಿ­ದ್ದಾರೆ. ಗಾಯಾಳು­ಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಕಾನ್‌ಸ್ಟೆಬಲ್‌ಗಳಿಗೆ ಗಾಯಗಳಾಗಿವೆ.

‘ಗ್ರಾಮಸ್ಥರು ಏಕಾಏಕಿ ಕಲ್ಲು ತೂರಾಟ ಮಾಡಿದ ಕಾರಣ ಪೊಲೀಸರು ಅನಿವಾರ್ಯವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಯಾರಿಗೂ ಗುಂಡೇಟು ಬಿದ್ದಿಲ್ಲ. ಸದ್ಯ, ಗ್ರಾಮದ ಹೊರಭಾಗದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಿಗ್ಗೆ ಗ್ರಾಮ ಪ್ರವೇಶಿಸಲಾಗುವುದು’ ಎಂದು ತಹಶೀಲ್ದಾರ್‌ ಮಾರುತಿ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ಘಟನೆಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ವ್ಯಾನ್‌ಗೆ ಬೆಂಕಿ ಹಚ್ಚಿ ಸುಡಲಾಗಿದೆ. ಮತ್ತೊಂದು ಪೊಲೀಸ್‌ ಜೀಪ್ ಜಖಂಗೊಳಿಸಲಾಗಿದೆ.
ವಾಹನದಿಂದ ಶವ ಇಳಿಸಿಕೊಳ್ಳಲು ಮುಂದಾದಾಗ ಪೊಲೀಸರು ಏಕಾಏಕಿ ಲಾಠಿ ಜಾರ್ಚ್ ಮಾಡಿದರು. ಗಾಳಿ­ಯಲ್ಲಿ ಗುಂಡು ಹಾರಿಸಿದರು. ಗ್ರಾಮಕ್ಕೆ ಪೊಲೀಸರು ಬಂದು ದೌರ್ಜನ್ಯ ಎಸಗಿ­ದರು ಎಂದು ಗ್ರಾಮಸ್ಥರು ದೂರಿದ್ದಾರೆ.

ಘಟನೆ ವಿವರ: ತ್ಯಾಜ್ಯ ಘಟಕಕ್ಕೆ ಹೊಂದಿಕೊಂಡಂತೆ 1.20 ಎಕರೆ ಭೂಮಿ ಹೊಂದಿರುವ  ಜಿ.ಶಿವ­ಕುಮಾರ್‌ ಶುಕ್ರವಾರ ರೈಲಿಗೆ ತಲೆ­ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಶನಿವಾರ  ಮರಣೋತ್ತರ ಪರೀಕ್ಷೆ ವೇಳೆ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಸೇರಿದ ಕಟಿಗೇನಹಳ್ಳಿ ಹಾಗೂ ಸುತ್ತಮುತ್ತ ಗ್ರಾಮಸ್ಥರು ಶವವನ್ನು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡಲು ಅವಕಾಶ ಕೊಡುವಂತೆ ಪಟ್ಟು ಹಿಡಿದರು.

ಶಿವಕುಮಾರ್‌ ಅಂಗವಿಕಲರಾಗಿದ್ದು, ತುಮಕೂರು ವಿ.ವಿ.ಯಲ್ಲಿ ಸಂಚಿತ ನಿಧಿಯ ನೌಕರರಾಗಿದ್ದರು. ಇವರ ಸಹೋದರ ಕೂಡ ಅಂಗವಿಕಲರು. ತಂದೆ–ತಾಯಿ ಸೇರಿ ಕುಟುಂಬದ ಏಳು ಮಂದಿಯ ಜವಾಬ್ದಾರಿ ಇವರದ್ದಾಗಿತ್ತು. ತ್ಯಾಜ್ಯ ಸಂಸ್ಕರಣಾ ಘಟಕದಿಂದ ಕೃಷಿ ಮಾಡಲು ಸಾಧ್ಯವಿಲ್ಲ. ಅಲ್ಲದೇ ಐದು ಮಾವಿನ ಮರಗಳಿದ್ದು, ಅವುಗಳ ವ್ಯಾಪಾರ ಆಗಿಲ್ಲ ಎಂದು ನೊಂದಿದ್ದ ಶಿವಕುಮಾರ್‌ ಕುಟುಂಬ ಮುಖ್ಯಮಂತ್ರಿಗಳಿಗೆ ದೂರು ಕೊಟ್ಟಿತ್ತು.

Write A Comment