ಮನೋರಂಜನೆ

ನಾಲ್ಕನೆ ಏಕದಿನ: ನ್ಯೂಝಿಲೆಂಡ್‌ಗೆ ರೋಚಕ ಜಯ; ಸರಣಿ ಸಮಬಲ, ವಿಲಿಯಮ್ಸನ್ ಶತಕ

Pinterest LinkedIn Tumblr

wiliamson1ಅಬುಧಾಬಿ, ಡಿ.18: ನಾಯಕ ಕೇನೆ ವಿಲಿಯಮ್ಸನ್ ಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡ ಪಾಕಿಸ್ತಾನ ವಿರುದ್ಧದ ನಾಲ್ಕನೆ ಏಕದಿನ ಪಂದ್ಯವನ್ನು 7 ರನ್‌ನಿಂದ ರೋಚಕವಾಗಿ ಗೆದ್ದುಕೊಂಡಿದೆ.

ಈ ಗೆಲುವಿನೊಂದಿಗೆ ನ್ಯೂಝಿಲೆಂಡ್ ತಂಡ ಪಾಕ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-2 ರಿಂದ ಸಮಬಲ ಸಾಧಿಸಿದೆ. ಶುಕ್ರವಾರ ಐದನೆ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲೆಂಡ್ ತಂಡ ವಿಲಿಯಮ್ಸನ್ ಶತಕ(123 ರನ್, 105 ಎಸೆತ, 12 ಬೌಂಡರಿ) ಮಾರ್ಟಿನ್ ಗಪ್ಟಿಲ್(58 ರನ್, 78 ಎಸೆತ, 7 ಬೌಂ.) ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿತ್ತು.

ಗೆಲ್ಲಲು 300 ರನ್ ಕಠಿಣ ಸವಾಲು ಪಡೆದ ಪಾಕ್‌ಗೆ ಹಿರಿಯ ಬ್ಯಾಟ್ಸ್‌ಮನ್ ಯೂನಿಸ್‌ಖಾನ್ ಆರು ವರ್ಷಗಳ ನಂತರ ಸಿಡಿಸಿದ ಶತಕದ ಹೊರತಾಗಿಯೂ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 292 ರನ್ ಗಳಿಸಲಷ್ಟೇ ಶಕ್ತವಾಯಿತು.

ಎರಡು ರನ್ ಗಳಿಸಿದ್ದಾಗ ರಾಸ್ ಟೇಲರ್ ಅವರಿಂದ ಜೀವದಾನ ಪಡೆದಿದ್ದ ಯೂನಿಸ್ 74 ಇನಿಂಗ್ಸ್‌ಗಳ ನಂತರ 117 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳಿದ್ದ 103 ರನ್ ಗಳಿಸಿದರು. ಯೂನಿಸ್‌ಖಾನ್‌ರನ್ನು 45ನೆ ಓವರ್‌ನಲ್ಲಿ ಪೆವಿಲಿಯನ್‌ಗೆ ಕಳುಹಿಸಿದ ಕಿವೀಸ್‌ನ ಹಿರಿಯ ಸ್ಪಿನ್ನರ್ ವೆಟೋರಿ (3-53) ಪಾಕ್‌ನ ಗೆಲುವಿನ ಆಸೆಗೆ ತಣ್ಣೀರೆರಚಿದರು.

ಶಾಹಿದ್ ಅಫ್ರಿದಿ(49 ರನ್, 25 ಎಸೆತ, 5 ಬೌಂ.,2 ಸಿಕ್ಸರ್) ಹಾಗೂ ಯೂನಿಸ್ ಆರನೆ ವಿಕೆಟ್‌ಗೆ 66 ರನ್ ಸೇರಿಸಿ ಪಾಕ್‌ನ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದ್ದರು. ಆದರೆ,ಅಫ್ರಿದಿ ವಿಕೆಟನ್ನು ಪಡೆದ ಮಿಲ್ನೆ ಕಿವೀಸ್‌ಗೆ ಮೇಲುಗೈ ಒದಗಿಸಿದರು.

2008ರಲ್ಲಿ ಅಬುಧಾಬಿಯಲ್ಲಿ ವೆಸ್ಟ್‌ಇಂಡೀಸ್‌ನ ವಿರುದ್ಧ ಕೊನೆಯ ಬಾರಿ ಏಕದಿನ ಶತಕವನ್ನು ಬಾರಿಸಿದ್ದ ಯೂನಿಸ್ ಬುಧವಾರ ನಾಸಿರ್ ಜಮ್ಶೆಡ್ (30)ರೊಂದಿಗೆ 2ನೆ ವಿಕೆಟ್‌ಗೆ 49 ರನ್ ಹಾಗೂ ಉಮರ್ ಅಕ್ಮಲ್ (29) ಅವರೊಂದಿಗೆ 5ನೆ ವಿಕೆಟ್‌ಗೆ 90 ರನ್ ಸೇರಿಸಿದ್ದರು. 37ರ ಹರೆಯದ ಯೂನಿಸ್ ಏಕದಿನ ಶತಕ ಸಿಡಿಸಿದ ಪಾಕ್‌ನ ಹಿರಿಯ ಆಟಗಾರ ಎನಿಸಿಕೊಂಡರು. 35ನೆ ಹರೆಯದಲ್ಲಿ ಶತಕ ಸಿಡಿಸಿದ್ದ ಝಹೀರ್ ಅಬ್ಬಾಸ್ ದಾಖಲೆಯನ್ನು ಮುರಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ ವಿಲಿಯಮ್ಸನ್ ಸಾಹಸದ ನೆರವಿನಿಂದ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ಮೂರನೆ ಗರಿಷ್ಠ ಸ್ಕೋರ್ ದಾಖಲಿಸಿತು. ಗಪ್ಟಿಲ್‌ರೊಂದಿಗೆ 2ನೆ ವಿಕೆಟ್‌ಗೆ 44 ರನ್ ಹಾಗೂ ಟೇಲರ್ ಅವರೊಂದಿಗೆ 3ನೆ ವಿಕೆಟ್‌ಗೆ 63 ರನ್ ಗಳಿಸಿದ ವಿಲಿಯಮ್ಸನ್ ತಂಡ ಉತ್ತಮ ಸ್ಕೋರ್ ದಾಖಲಿಸಲು ನೆರವಾದರು. ಮೊದಲ ವಿಕೆಟ್‌ಗೆ 81 ರನ್ ಗಳಿಸಿದ ಗಪ್ಟಿಲ್ ಹಾಗೂ ಬ್ರೌನ್‌ಲೀ ಕಿವೀಸ್‌ಗೆ ಉತ್ತಮ ಆರಂಭವನ್ನು ಒದಗಿಸಿದ್ದರು.

ಪಂದ್ಯ ಆರಂಭಕ್ಕೆ ಮೊದಲು ಉಭಯ ತಂಡಗಳ ಆಟಗಾರರು ಪೇಶಾವರದಲ್ಲಿ ಮಂಗಳವಾರ ತಾಲಿಬಾನ್ ಉಗ್ರರಿಗೆ ಬಲಿಯಾದವರ ಸ್ಮರಣಾರ್ಥ 2 ನಿಮಿಷ ವೌನ ಪ್ರಾರ್ಥನೆ ನಡೆಸಿದರು.

ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್: 50 ಓವರ್‌ಗಳಲ್ಲಿ 299/5
(ಕೇನೆ ವಿಲಿಯಮ್ಸನ್ 123, ಮಾರ್ಟಿನ್ ಗಪ್ಟಿಲ್ 58, ಇರ್ಫಾನ್ 2-53)
ಪಾಕಿಸ್ತಾನ: 50 ಓವರ್‌ಗಳಲ್ಲಿ 292/8
(ಯೂನಿಸ್‌ಖಾನ್ 103, ಅಫ್ರಿದಿ 49, ಜಮ್ಶೆಡ್ 30, ವೆಟೋರಿ 3-53).

Write A Comment