ಕರ್ನಾಟಕ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಕುಂಠಿತ: ಸಿದ್ದರಾಮಯ್ಯ

Pinterest LinkedIn Tumblr

 

pvec19dec14kpn42_0

ಸುವರ್ಣ ವಿಧಾನಸೌಧ (ಬೆಳಗಾವಿ): ಅಧಿಕಾರಿ­ಗಳ ನಿರ್ಲಕ್ಷ್ಯದಿಂದಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಿಗದಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ವಿಧಾನ ಪರಿಷತ್‌ಗೆ ತಿಳಿಸಿದರು.

ಬಿಜೆಪಿಯ ವೈ. ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ‘ಬೆಂಗ­ಳೂರು ನಗರದಲ್ಲಿ ₨ 3ರಿಂದ ₨ 4 ಸಾವಿರ ಕೋಟಿವರೆಗೆ ತೆರಿಗೆ ಸಂಗ್ರಹಿ­ಸಲು ಅವಕಾಶ ಇದೆ. ಆದರೆ, ಅಧಿಕಾರಿ­ಗಳ ನಿರ್ಲಕ್ಷ್ಯ ಧೋರಣೆ­ಯಿಂದಾಗಿ ನಿಗದಿ­ಯಷ್ಟು ತೆರಿಗೆ ಸಂಗ್ರಹ ಆಗುತ್ತಿಲ್ಲ’ ಎಂದರು.

‘ಅಧಿಕಾರಿಗಳು ಸರಿಯಾಗಿ ಕಾರ್ಯ-­ನಿರ್ವ­ಹಿಸುತ್ತಿಲ್ಲ. ಬಿಬಿಎಂಪಿಯಲ್ಲಿ ಇರುವವರು ಎಲ್ಲಿಗೂ ವರ್ಗಾವಣೆಗೊ­ಳ್ಳುವುದಿಲ್ಲ. ಒಂದು ವೇಳೆ ವರ್ಗ ಆದರೂ ರಾಜಕೀಯ, ಹಣದ ಪ್ರಭಾವ ಬಳಸಿ ಮತ್ತೆ ಅದೇ ಸ್ಥಾನಕ್ಕೆ ಬರುತ್ತಾರೆ’ ಎಂದು ಹೇಳಿದರು.

‘ಬೆಂಗಳೂರು ನಗರದಲ್ಲಿ 16 ಲಕ್ಷ ಆಸ್ತಿಗಳಿವೆ. ಆದರೆ 14 ಲಕ್ಷ ಆಸ್ತಿಗಳಿಂದ ಮಾತ್ರ ತೆರಿಗೆ ವಸೂಲು ಮಾಡಲಾಗುತ್ತಿದೆ. ಉಳಿದ ಎರಡು ಲಕ್ಷ ಆಸ್ತಿಗಳು ಅನಧಿಕೃತ ಎಂಬ ಕಾರಣಕ್ಕೆ ಪಾಲಿಕೆಯು ತೆರಿಗೆ ಸಂಗ್ರಹಿಸುತ್ತಿಲ್ಲ.  ಈ ಆಸ್ತಿಗಳಿಗೆ ವಿದ್ಯುತ್‌, ನೀರು ಸೇರಿದಂತೆ ಎಲ್ಲ ನಾಗರಿಕ ಸೌಲಭ್ಯಗಳನ್ನು ಕಲ್ಪಿಸ­ಲಾಗಿದೆ. ಇವುಗ­ಳಿಂದಲೂ ಪಾಲಿಕೆ ತೆರಿಗೆ ವಸೂಲು ಮಾಡ­ಬೇಕು. ಇದರ ಜೊತೆಗೆ ಹಲವು ವರ್ಷ­ಗಳಿಂದ ತೆರಿಗೆಯನ್ನು ಪರಿಷ್ಕರಿಸಲಾಗಿಲ್ಲ’ ಎಂದರು.

‘ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ. ಈ ವಿಚಾರ­ವಾಗಿ ಎರಡು ಬಾರಿ ಬಿಬಿಎಂಪಿ ಅಧಿಕಾರಿಗ­ಳೊಂದಿಗೆ ಸಭೆ ನಡೆಸಿದ್ದೇನೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ₨ 2,500 ಕೋಟಿ ತೆರಿಗೆ ಸಂಗ್ರಹಿ­ಸುವ ಗುರಿ ಹೊಂದಲಾಗಿತ್ತು. ಅದನ್ನು ಪರಿಷ್ಕರಿಸಿ ₨ 2,900 ಕೋಟಿಗೆ ಹೆಚ್ಚಿಸಲಾಗಿದೆ. ಡಿಸೆಂಬರ್‌ 8ರವರೆಗೆ ₨ 1406.57 ಕೋಟಿ ತೆರಿಗೆ ವಸೂಲು ಮಾಡ­ಲಾಗಿದೆ. ಇನ್ನು ಮೂರು ತಿಂಗಳಲ್ಲಿ ಸಾವಿರ ಕೋಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆ ಇದೆ’ ಎಂದರು.

‘ಪಾಲಿಕೆಯ ಆಡಳಿತಕ್ಕೆ ಚುನಾಯಿತ ಸಂಸ್ಥೆ ಇದೆ. ಹಾಗಾಗಿ, ಸರ್ಕಾರ ಪದೇ ಪದೇ ಮಧ್ಯ­ಪ್ರವೇ­ಶಿಸುವುದು ಸರಿಯಾಗುವುದಿಲ್ಲ. ಪ್ರತಿ ಬಾರಿಯೂ ಅದು ಸರ್ಕಾರವನ್ನು ಅವಲಂಬಿಸ­ಬಾರದು. ಸ್ವಾವಲಂಬನೆಗೆ ಹೆಚ್ಚು ಒತ್ತು ನೀಡಬೇಕು’ ಎಂದು ಅವರು ಸಲಹೆ ನೀಡಿದರು.
ಸಾಫ್ಟ್‌ವೇರ್‌, ತಜ್ಞರ ಸಮಿತಿ ಮಾಡಿ: ತೆರಿಗೆ ಸಂಗ್ರಹಕ್ಕೆ ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸಿ. ಇದೇ ವಿಚಾರಕ್ಕೆ ತಜ್ಞರ ಸಮಿತಿಯನ್ನೂ ರಚಿಸುವಂತೆ ನಾರಾಯಣ ಸ್ವಾಮಿ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು. ಈ ಸಲಹೆಯನ್ನು ಪರಿಶೀಲಿ­ಸುವ ಭರವಸೆ­ಯನ್ನು ಸಿದ್ದರಾಮಯ್ಯ ನೀಡಿದರು.

ಬಿಬಿಎಂಪಿ ವ್ಯಾಪ್ತಿಗೆ ತನ್ನಿ
ಉಪ ಸಭಾಪತಿ, ಜೆಡಿಎಸ್‌ನ ಪುಟ್ಟಣ್ಣ, ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ ಫೀಲ್ಡ್‌ ವ್ಯಾಪ್ತಿಯಲ್ಲಿನ ಅಪಾರ್ಟ್‌ಮೆಂಟ್‌ಗಳ ಮಾಲೀಕರು ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಿ­ದ್ದಾರೆ.ಈ ಅಪಾರ್ಟ್‌­ಮೆಂಟ್‌ಗಳನ್ನು ಪಾಲಿಕೆ ವ್ಯಾಪ್ತಿಗೆ ತರಬೇಕು ಒತ್ತಾಯಿಸಿದರು.

ಕೆರೆ ಒತ್ತುವರಿ ತೆರವು ಖಚಿತ: ಬಿಡಿಎ ವ್ಯಾಪ್ತಿಯಲ್ಲಿರುವ ಹೊಸಕೆರೆಹಳ್ಳಿ ಕೆರೆಯ 6 ಎಕರೆ 17 ಗುಂಟೆ ಜಾಗ ಒತ್ತುವರಿಯಾಗಿದೆ. ಅಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಅವು­ಗಳನ್ನು ತೆರವುಗೊಳಿಸಿ ಅಭಿವೃದ್ಧಿ ಪಡಿಸ­ಲಾಗುವುದು ಎಂದು ಮುಖ್ಯಮಂತ್ರಿ
ಹೇಳಿದರು.

ಹೊಸಕೆರೆಹಳ್ಳಿ ಕೆರೆಯ ಅಭಿವೃದ್ಧಿ ಕುರಿತು ಬಿಜೆಪಿಯ ರಾಮಚಂದ್ರ ಗೌಡ ಅವರ ಪ್ರಶ್ನೆಗೆ ಉತ್ತರಿ­ಸಿದ ಸಿದ್ದರಾಮಯ್ಯ, ಬಿಬಿಎಂಪಿ ವ್ಯಾಪ್ತಿಯಲ್ಲಿನ  123 ಕೆರೆಗಳ ಪೈಕಿ 118 ಕೆರೆಗಳನ್ನು ಅಭಿವೃದ್ಧಿಪಡಿಸಲು ಬಿಡಿಎಗೆ ಹಸ್ತಾಂತರಿಸಲಾಗಿದೆ. ಈ ಪೈಕಿ 13 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. 13 ಕೆರೆಗಳ ಅಭಿವೃದ್ಧಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

‘ಹೊಸಕೆರೆ ಹಳ್ಳಿ ಕೆರೆಯನ್ನು 2011ರಲ್ಲಿ ಬಿಡಿಎಗೆ ವಹಿಸಲಾಗಿತ್ತು. ಅದರ ಸಮಗ್ರ ಅಭಿವೃದ್ಧಿಗಾಗಿ ಟೆಂಡರ್‌ ಕರೆಯಲಾಗಿತ್ತು. ಆದರೆ, ಅಲ್ಲಿ ತ್ಯಾಜ್ಯ ಸಂಸ್ಕರಣ ಘಟಕವನ್ನು ಸ್ಥಾಪಿಸಲು ಬೆಂಗಳೂರು ಜಲಮಂಡಳಿ ನಿರಾಕರಿಸಿ­ದ್ದರಿಂದ ಟೆಂಡರ್‌ ಪ್ರಕ್ರಿಯೆಯನ್ನು ಬಿಡಿಎ ರದ್ದುಗೊಳಿಸಿತ್ತು. ಇದರಿಂದಾಗಿ ಈ ಯೋಜನೆ ನನೆಗುದಿಗೆ ಬಿದ್ದಿದೆ. ಬಿಡಿಎ ಮತ್ತು ಜಲಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು.

ತೆರವು ಖಚಿತ
ಈಗಾಗಲೇ ನಗರ­ದಲ್ಲಿ ಭೂಮಿ ಒತ್ತುವರಿ ತೆರವು ಕಾರ್ಯ ಆರಂಭಗೊಂಡಿದೆ. ಒತ್ತುವರಿ ಮಾಡಿ­ಕೊಂಡ­ವರು ಎಷ್ಟೇ ಬಲಾಢ್ಯರಾಗಿದ್ದರೂ, ಒತ್ತುವರಿ ತೆರವು ಖಚಿತ
– ಸಿದ್ದರಾಮಯ್ಯ, ಮುಖ್ಯಮಂತ್ರಿ

Write A Comment