ಮನೋರಂಜನೆ

ವಾರ್ನರ್ ಎರಡನೆ ಶತಕ; ಆಸ್ಟ್ರೇಲಿಯ ಮೇಲುಗೈ: ಕುತೂಹಲ ಘಟ್ಟದಲ್ಲಿ ಮೊದಲ ಟೆಸ್ಟ್

Pinterest LinkedIn Tumblr

VARNER____

ಅಡಿಲೇಡ್, ಡಿ.12: ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಸತತ ಎರಡನೆ ಶತಕದ ಸಹಾಯದಿಂದ ಆಸ್ಟ್ರೇಲಿಯ ತಂಡ ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಿದೆ.

ಟೆಸ್ಟ್‌ನ ನಾಲ್ಕನೆ ದಿನವಾಗಿರುವ ಶುಕ್ರವಾರ ಆಟ ನಿಂತಾಗ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟದಲ್ಲಿ 290 ರನ್ ಗಳಿಸಿದ್ದು, 363 ರನ್‌ಗಳ ಮುನ್ನಡೆ ಸಾಧಿಸಿದೆ.

ಸ್ಟೀವನ್ ಸ್ಮಿತ್ ಔಟಾಗದೆ 52 ರನ್ ಮತ್ತು ವಿಕೆಟ್ ಕೀಪರ್ ಬ್ರಾಡ್ ಹಡಿನ್ ಔಟಾಗದೆ 14 ರನ್ ಗಳಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ 145 ರನ್ ಗಳಿಸಿದ್ದ ವಾರ್ನರ್ ಎರಡನೆ ಇನಿಂಗ್ಸ್‌ನಲ್ಲೂ 102 ರನ್ ಗಳಿಸಿ ಆಸ್ಟ್ರೇಲಿಯ ತಂಡ ಮೇಲುಗೈ ಸಾಧಿಸಲು ನೆರವಾದರು.

ವಾರ್ನರ್ 66 ರನ್ ಗಳಿಸಿದ್ದಾಗ ವೇಗಿ ವರುಣ್ ಆ್ಯರೊನ್ ಎಸೆತದಲ್ಲಿ ಬೌಲ್ಡ್ ಆಗಿದ್ದರು. ಆದರೆ ರಿಪ್ಲೇಯಲ್ಲಿ ನೋಬಾಲ್ ಆಗಿ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಜೀವದಾನ ಪಡೆದರು. ಬಳಿಕ ವಾರ್ನರ್ ಈ ವರ್ಷ ಆಡಿರುವ 11ನೆ ಟೆಸ್ಟ್‌ನಲ್ಲಿ 6ನೆ ಶತಕ ಪೂರ್ಣಗೊಳಿಸಿದರು. 33ನೆ ಟೆಸ್ಟ್‌ನಲ್ಲಿ ಆಡುತ್ತಿರುವ ವಾರ್ನರ್ ತನ್ನ ಶತಕಗಳ ಸಂಖ್ಯೆಯನ್ನು 11ಕ್ಕೆ ಏರಿಸಿದರು.

ಟೆಸ್ಟ್ ಪಂದ್ಯವೊಂದರಲ್ಲಿ ಎರಡು ಶತಕ ದಾಖಲಿಸಿದ ಆಸ್ಟ್ರೇಲಿಯದ 5ನೆ ಆಟಗಾರ ಎನಿಸಿಕೊಂಡರು. 27ರ ಹರೆಯದ ಎಡಗೈ ಬ್ಯಾಟ್ಸ್‌ಮನ್ ವಾರ್ನರ್ 2014ರಲ್ಲಿ ಎರಡನೆ ಬಾರಿ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ್ದಾರೆ. ರಿಕಿ ಪಾಂಟಿಂಗ್ 2006ರಲ್ಲಿ ಒಂದೇ ವರ್ಷ ಎರಡು ಟೆಸ್ಟ್‌ಗಳಲ್ಲಿ ತಲಾ 2 ಶತಕ ದಾಖಲಿಸಿದ್ದರು. ವಾರ್ನರ್ ಕಳೆದ ಮಾರ್ಚ್ 1 ಮತ್ತು 4ರಂದು ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್‌ನಲ್ಲಿ 135 ಮತ್ತು 145 ರನ್ ದಾಖಲಿಸಿದ್ದರು.

ಭಾರತವನ್ನು ಮೊದಲ ಇನಿಂಗ್ಸ್‌ನಲ್ಲಿ 444 ರನ್‌ಗಳಿಗೆ ನಿಯಂತ್ರಿಸಿ 73 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದ ಆಸ್ಟ್ರೇಲಿಯಕ್ಕೆ ಎರಡನೆ ಇನಿಂಗ್ಸ್‌ನಲ್ಲಿ 12.1 ಓವರ್‌ಗಳಲ್ಲಿ 38 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಕ್ರಿಸ್ ರೋಜರ್ಸ್‌ (21) ಅವರು ಕರಣ್ ಶರ್ಮಗೆ ವಿಕೆಟ್ ಒಪ್ಪಿಸಿದರು. ಎರಡನೆ ವಿಕೆಟ್‌ಗೆ ವಾರ್ನರ್ ಮತ್ತು ಶೇನ್ ವ್ಯಾಟ್ಸನ್ 102 ರನ್‌ಗಳ ಜೊತೆಯಾಟ ನೀಡಿದರು. ಅಷ್ಟರಲ್ಲಿ 33 ರನ್ ಗಳಿಸಿದ ವ್ಯಾಟ್ಸನ್ ಅವರು ವೇಗಿ ಮುಹಮ್ಮದ್ ಶಮಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದ ನಾಯಕ ಮೈಕಲ್ ಕ್ಲಾರ್ಕ್ (7) ಬೇಗನೆ ನಿರ್ಗಮಿಸಿದರು.

ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ 4ನೆ ವಿಕೆಟ್‌ಗೆ 45 ರನ್ ಸೇರಿಸಿದರು. 53.5ನೆ ಓವರ್‌ನಲ್ಲಿ ಮುಹಮ್ಮದ್ ಶಮಿ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟಿದ ವಾರ್ನರ್ ಶತಕ ಪೂರ್ಣಗೊಳಿಸಿದರು. 154 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ವಾರ್ನರ್ ಶತಕ ತಲುಪಿದರು. 59.1ನೆ ಓವರ್‌ನಲ್ಲಿ ವಾರ್ನರ್ ಬೌಲ್ಡ್ ಆಗಿ ಕರಣ್ ಶರ್ಮಗೆ ಎರಡನೆ ಬಾರಿ ವಿಕೆಟ್ ಒಪ್ಪಿಸಿದರು.

ಮಾರ್ಷ್ ಆರ್ಭಟ:  ಸ್ಟೀವನ್ ಸ್ಮಿತ್‌ಗೆ 5ನೆ ವಿಕೆಟ್‌ಗೆ ಜೊತೆಯಾದ ಮಿಚೆಲ್ ಮಾರ್ಷ್ ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿದರು. 21 ನಿಮಿಷಗಳ ಬ್ಯಾಟಿಂಗ್‌ನಲ್ಲಿ 26 ಎಸೆತಗಳನ್ನು ಉತ್ತರಿಸಿ 4 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 40 ರನ್ ಗಳಿಸಿದರು. 19 ಎಸೆತಗಳಲ್ಲಿ 3 ಬೌಂಡರಿ ನೆರವಿನಲ್ಲಿ 16 ರನ್ ಗಳಿಸಿದ್ದ ಮಾರ್ಷ್ 64ನೆ ಓವರ್‌ನಲ್ಲಿ ಕರಣ್ ಶರ್ಮರನ್ನು ಚೆನ್ನಾಗಿ ದಂಡಿಸಿ 24 ರನ್ (6+4++0+6+2+6) ಕಬಳಿಸಿದರು. ಬಳಿಕ ರೋಹಿತ್ ಶರ್ಮ ಅವರು ಮಾರ್ಷ್‌ಗೆ ಗುಡುಗಲು ಅವಕಾಶ ನೀಡದೆ ಪೆವಿಲಿಯನ್ ಹಾದಿ ತೋರಿಸಿದರು. ಸ್ಮಿತ್ ಮತ್ತು ಮಾರ್ಷ್ ಜೊತೆಯಾಟದಲ್ಲಿ ತಂಡದ ಖಾತೆಗೆ 5.3 ಓವರ್‌ಗಳಲ್ಲಿ 9.63 ಸರಾಸರಿಯಂತೆ 53 ರನ್ ಸೇರ್ಪಡೆಗೊಂಡಿತು. ಮಾರ್ಷ್ ನಿರ್ಗಮನದ ಬಳಿಕ ಹಡಿನ್ ಅವರು ತೆರವಾದ ಜಾಗಕ್ಕೆ ಬಂದರು. ಸ್ಮಿತ್ ಮತ್ತು ಹಡಿನ್ ಮುಂದೆ ವಿಕೆಟ್ ಉರುಳದಂತೆ ನೋಡಿಕೊಂಡರು. ಇವರ ಜೊತೆಯಾಟದಲ್ಲಿ ತಂಡದ ಖಾತೆಗೆ 24 ರನ್ ಸೇರ್ಪಡೆಗೊಂಡಿದೆ. ಮೊದಲ ಇನಿಂಗ್ಸ್‌ನಲ್ಲಿ ಔಟಾಗದೆ 162 ರನ್ ಗಳಿಸಿದ್ದ ಸ್ಮಿತ್ ಅರ್ಧಶತಕ ದಾಖಲಿಸಿ ಐದನೆ ದಿನಕ್ಕೆ ಬ್ಯಾಟಿಂಗನ್ನು ಕಾಯ್ದುಕೊಂಡಿದ್ದಾರೆ.

ಭಾರತದ ಪರ ಚೊಚ್ಚಲ ಟೆಸ್ಟ್ ಆಡುತ್ತಿರುವ ಕರಣ್ ಶರ್ಮ 16 ಓವರ್‌ಗಳಲ್ಲಿ 95ಕ್ಕೆ 2 ವಿಕೆಟ್ ಪಡೆದರು. ಆದರೆ ಅವರು ದುಬಾರಿ ಬೌಲರ್ ಎನಿಸಿಕೊಂಡರು. ಮುಹಮ್ಮದ್ ಶಮಿ, ರೋಹಿತ್ ಶರ್ಮ ಮತ್ತು ವರುಣ್ ಆ್ಯರೊನ್ ತಲಾ 1 ವಿಕೆಟ್ ಹಂಚಿಕೊಂಡರು.

ಭಾರತ 444: ಮೂರನೆ ದಿನದಾಟದಂತ್ಯಕ್ಕೆ 97 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 369 ರನ್ ಮಾಡಿದ್ದ ಭಾರತ ಶುಕ್ರವಾರ ಬ್ಯಾಟಿಂಗ್ ಮುಂದುವರಿಸಿ ಈ ಮೊತ್ತಕ್ಕೆ 75 ರನ್ ಸೇರಿಸುವಷ್ಟರಲ್ಲಿ ಆಲೌಟಾಯಿತು. ಭಾರತವನ್ನು 98 ಓವರ್‌ಗಳಲ್ಲಿ ನಿಯಂತ್ರಿಸುವ ಕನಸು ಕಂಡಿದ್ದ ಆಸ್ಟ್ರೇಲಿಯದ ಲೆಕ್ಕಾಚಾರ ತಪ್ಪಾಯಿತು. ಗುರುವಾರ ದಿನಾಟದಂತ್ಯಕ್ಕೆ 33 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದ ರೋಹಿತ್ ಶರ್ಮ ಮತ್ತು 1 ರನ್ ಗಳಿಸಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಬ್ಯಾಟಿಂಗ್ ಮುಂದುವರಿಸಿ ತಂಡದ ಸ್ಕೋರ್‌ನ್ನು 107.5 ಓವರ್‌ಗಳಲ್ಲಿ 399ಕ್ಕೆ ತಲುಪಿಸಿದರು. ರೋಹಿತ್ ಶರ್ಮ 43 ರನ್ ಗಳಿಸಿ ಲಿನ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಕರಣ್ ಶರ್ಮ 4 ರನ್ ಗಳಿಸಿದರು. ವೃದ್ಧಿಮಾನ್ ಸಹಾಗೆ 8ನೆ ವಿಕೆಟ್‌ಗೆ ಮುಹಮ್ಮದ್ ಶಮಿ ಜೊತೆಯಾದರು. ಸಹಾ ಮತ್ತು ಶಮಿ ಜೊತೆಯಾಟದಲ್ಲಿ 8 ವಿಕೆಟ್‌ಗೆ 16ರನ್ ಸೇರ್ಪಡೆಗೊಂಡಿತು. ಸಹಾ 25 ರನ್ ಗಳಿಸಿ ಲಿನ್‌ಗೆ ವಿಕೆಟ್ ಒಪ್ಪಿಸಿದರು. ಇಶಾಂತ್ ಶರ್ಮ (0)ಖಾತೆ ತೆರೆಯಲಿಲ್ಲ. ಇವರ ವಿಕೆಟ್ ಪಡೆಯುವುದರೊಂದಿಗೆ ಲಿನ್ ತಾನು ಪಡೆದ ವಿಕೆಟ್‌ಗಳ ಸಂಖ್ಯೆಯನ್ನು 5ಕ್ಕೆ ಏರಿಸಿದರು.

ಅಂತಿಮ ವಿಕೆಟ್‌ಗೆ ಶಮಿ ಮತ್ತು ಆ್ಯರೊನ್ 22 ರನ್ ಸೇರಿಸಿ ತಂಡದ ಸ್ಕೋರನ್ನು 444ಕ್ಕೆ ತಲುಪಿಸಿದರು. 32 ನಿಮಿಷಗಳ ಬ್ಯಾಟಿಂಗ್‌ನಲ್ಲಿ 24 ಎಸೆತಗಳನ್ನು ಎದುರಿಸಿ 3ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 34 ರನ್ ಗಳಿಸಿದ ಸಮಿ ವಿಕೆಟ್‌ನ್ನು ಪೀಟರ್ ಸಿಡ್ಲ್ ಉಡಾಯಿಸುವುದರೊಂದಿಗೆ ಭಾರತದ ಮೊದಲ ಇನಿಂಗ್ಸ್ ಕೊನೆಗೊಂಡಿತು.
ಆಸ್ಟ್ರೇಲಿಯದ ಲಿನ್ 134ಕ್ಕೆ 5 ವಿಕೆಟ್, ಜಾನ್ಸನ್ ಮತ್ತು ಪೀಟರ್ ಸಿಡ್ಲ್ ತಲಾ 2 ಮತ್ತು ಹ್ಯಾರಿಸ್ 1 ವಿಕೆಟ್‌ಪಡೆದರು.

ಸ್ಕೋರ್ ಪಟ್ಟಿ
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 517/7 ಡಿಕ್ಲೇರ್
ಭಾರತ ಮೊದಲ ಇನಿಂಗ್ಸ್ 116.4 ಓವರ್‌ಗಳಲ್ಲಿ ಆಲೌಟ್ 444
ಮುರಳಿ ವಿಜಯ್ ಸಿ ಹಡಿನ್ ಬಿ ಜಾನ್ಸನ್ 53, ಶಿಖರ್ ಧವನ್ ಬಿ ಹ್ಯಾರೀಸ್ 25, ಚೇತೇಶ್ವರ ಪೂಜಾರ ಬಿ ಲಿನ್ 73, ವಿರಾಟ್ ಕೊಹ್ಲಿ ಸಿ ಹ್ಯಾರಿಸ್ ಬಿ ಜಾನ್ಸನ್ 115, ಅಜಿಂಕ್ಯ ರಹಾನೆ ಸಿ ವ್ಯಾಟ್ಸನ್ ಬಿ ಲಿನ್ 62, ರೋಹಿತ್ ಶರ್ಮ ಸಿ ಮತ್ತು ಬಿ ಲಿನ್ 43, ವೃದ್ಧಿಮಾನ್ ಸಹಾ ಸಿ ವ್ಯಾಟ್ಸನ್ ಬಿ ಲಿನ್ 25, ಕರಣ್ ಶರ್ಮ ಬಿ ಸಿಡ್ಲ್ 4, ಮುಹಮ್ಮದ್ ಶಮಿ ಸಿ ವ್ಯಾಟ್ಸನ್ ಬಿ ಸಿಡ್ಲ್ 34, ಇಶಾಂತ್ ಶರ್ಮ ಸಿ ಸ್ಮಿತ್ ಬಿ ಲಿನ್ 0, ವರುಣ್ ಆ್ಯರೊನ್ ಔಟಾಗದೆ 3, ಇತರೆ 7.
ವಿಕೆಟ್ ಪತನ: 1-30, 2-111, 3-192, 4-293, 5-367, 6-399, 7-406, 8-422, 9-422, 10-444.
ಬೌಲಿಂಗ್ ವಿವರ: ಜಾನ್ಸನ್ 22-6-102-2, ಹ್ಯಾರಿಸ್ 21-6-55-1, ಲಿನ್ 36-4-134-5, ಸಿಡ್ಲ್ 18.4-2-88-2, ಮಿಚೆಲ್ ಮಾರ್ಷ್ 11-4-29-0, ಶೇನ್ ವ್ಯಾಟ್ಸನ್ 5-1-13-0, ಸ್ಟೀವನ್ ಸ್ಮಿತ್ 3-0-19-0.
ಆಸ್ಟ್ರೇಲಿಯ ಎರಡನೆ ಇನಿಂಗ್ಸ್ 69 ಓವರ್‌ಗಳಲ್ಲಿ 290/5
ರೋಜರ್ಸ್‌ ಸಿ ರೋಹಿತ್ ಶರ್ಮ ಬಿ ಕರಣ್ ಶರ್ಮ 21, ಡೇವಿಡ್ ವಾರ್ನರ್ ಬಿ ಕರಣ್ ಶರ್ಮ 102, ಶೇನ್ ವ್ಯಾಟ್ಸನ್ ಬಿ ಮುಹಮ್ಮದ್ ಶಮಿ 33, ಮೈಕಲ್ ಕ್ಲಾರ್ಕ್ ಸಿ ವೃದ್ಧಿಮಾನ್ ಸಹಾ ಬಿ ಆ್ಯರೊನ್ 7, ಸ್ಟೀವನ್ ಸ್ಮಿತ್ ಔಟಾಗದೆ 52, ಮಿಚೆಲ್ ಮಾರ್ಷ್ ಸಿ ವಿಜಯ್ ಬಿ ರೋಹಿತ್ ಶರ್ಮ 40, ಬ್ರಾಡ್ ಹಡಿನ್ ಔಟಾಗದೆ 14, ಇತರೆ 21.
ವಿಕೆಟ್ ಪತನ: 1-38, 2-140, 3-168, 4-213, 5-266.
ಬೌಲಿಂಗ್ ವಿವರ: ಮುಹಮ್ಮದ್ ಶಮಿ 11-2-42-1, ಇಶಾಂತ್ ಶರ್ಮ 14-3-41-0, ಕರಣ್ ಶರ್ಮ 16-2-95-2, ಮುರಳಿ ವಿಜಯ್ 6-0-27-0, ರೋಹಿತ್ ಶರ್ಮ 12-2-35-1, ವರುಣ್ ಆ್ಯರೊನ್ 10-0-43-1.

Write A Comment