ಮನೋರಂಜನೆ

ಅಬಾಟ್ ಜೀವನಶ್ರೇಷ್ಠ ಬೌಲಿಂಗ್: ಎನ್‌ಎಸ್‌ಡಬ್ಲೂ ತಂಡಕ್ಕೆ ಭರ್ಜರಿ ಜಯ

Pinterest LinkedIn Tumblr

abbott-sheffield-shield

ಮೆಲ್ಬೋರ್ನ್, ಡಿ.12: ಕಳೆದ ತಿಂಗಳು ದೇಶೀಯ ಪಂದ್ಯದ ವೇಳೆ ಬೌನ್ಸರ್ ಎಸೆದು ಆಸ್ಟ್ರೇಲಿಯದ ಉದಯೋನ್ಮುಖ ಆಟಗಾರ ಫಿಲಿಪ್ ಹ್ಯೂಸ್‌ಗೆ ಸಾವಿಗೆ ಕಾರಣರಾಗಿದ್ದ ಯುವ ವೇಗದ ಬೌಲರ್ ಸಿಯಾನ್ ಅಬಾಟ್ ಶುಕ್ರವಾರ ನ್ಯೂ ಸೌಥ್ ವೇಲ್ಸ್ ತಂಡ ಕ್ವೀನ್ಸ್‌ಲ್ಯಾಂಡ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಲು ದೊಡ್ಡ ಕೊಡುಗೆ ನೀಡಿದ್ದಾರೆ.

ಈ ಮೂಲಕ ಸಕ್ರಿಯ ಕ್ರಿಕೆಟ್‌ಗೆ ಮರಳಿದ್ದಾರೆ. ಅಬಾಟ್ ಕ್ವೀನ್ಸ್ ಲ್ಯಾಂಡ್ ತಂಡದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 53 ರನ್‌ಗೆ ಎರಡು ವಿಕೆಟನ್ನು ಕಬಳಿಸಿದ್ದರು. ಶುಕ್ರವಾರ ಪಂದ್ಯ ಡ್ರಾದತ್ತ ಮುಖ ಮಾಡಿದ್ದಾಗ ಜೀವನ ಶ್ರೇಷ್ಠ ಬೌಲಿಂಗ್ ಮಾಡಿದ್ದ ಅಬಾಟ್ (6-14) ಕ್ವೀನ್ಸ್‌ಲ್ಯಾಂಡ್ ತಂಡ ಎರಡನೆ ಇನಿಂಗ್ಸ್‌ನಲ್ಲಿ ಕೇವಲ 99 ರನ್‌ಗೆ ಆಲೌಟ್ ಆಗಲು ಕಾರಣರಾದರು.

ಈ ಪಂದ್ಯವನ್ನು ನ್ಯೂ ಸೌಥ್ ವೇಲ್ಸ್ ತಂಡ ಇನಿಂಗ್ಸ್ ಹಾಗೂ 80 ರನ್‌ನಿಂದ ಗೆದ್ದುಕೊಂಡಿತ್ತು. ಕಳೆದ ತಿಂಗಳು 22ರ ಹರೆಯದ ಅಬಾಟ್ ಎಸೆದ ಡೆಡ್ಲಿ ಬೌನ್ಸರ್ ಹ್ಯೂಸ್ ಕುತ್ತಿಗೆಗೆ ತಗಲಿ ದಾರುಣ ಸಾವನ್ನಪ್ಪಿದ್ದರು. ಹ್ಯೂಸ್ ಸಾವಿನ ನಂತರ ಅಬಾಟ್ ಖಿನ್ನತೆಗೆ ಒಳಗಾಗಿದ್ದರು. ಆಗ ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಾಗಿತ್ತು. ಮಾಜಿ ಆಟಗಾರರು, ಹ್ಯೂಸ್ ಸ್ನೇಹಿತರು ಹಾಗೂ ಇಡೀ ಕ್ರಿಕೆಟ್ ವಿಶ್ವವೇ ಅಬಾಟ್ ಬೆಂಬಲಕ್ಕೆ ನಿಂತು ಧೈರ್ಯ ತುಂಬಿತ್ತು.

ಹ್ಯೂಸ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಅಬಾಟ್‌ಗೆ ಹ್ಯೂಸ್ ಕುಟುಂಬ ಸದಸ್ಯರು ಸಾಂತ್ವನ ಹೇಳಿದ್ದಲ್ಲದೆ ಬೇಗನೆ ಕ್ರಿಕೆಟ್‌ಗೆ ಮರಳುವಂತೆ ವಿನಂತಿಸಿಕೊಂಡಿದ್ದರು.

ಇದೀಗ ಅಬಾಟ್, ಹ್ಯೂಸ್‌ಗೆ ಮಾರಣಾಂತಿಕ ಬೌನ್ಸರ್ ಎಸೆದಿದ್ದ ಸಿಡ್ನಿ ಕ್ರಿಕೆಟ್ ಮೈದಾನದಲ್ಲೇ ತನ್ನ ಕ್ರಿಕೆಟ್ ಜೀವನವನ್ನು ಪುನರಾರಂಭಿಸಿದ್ದಾರೆ. ಜೀವನಶ್ರೇಷ್ಠ ಬೌಲಿಂಗ್‌ನಿಂದ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಅಬಾಟ್ ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದನ್ನು ಕೇಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Write A Comment