ಮನೋರಂಜನೆ

ಐಪಿಎಲ್‌ನಿಂದ ದೂರ ಉಳಿಯುವೆ… ಬಿಸಿಸಿಐ ಬಿಡಲಾರೆ: ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ: ಸುಪ್ರೀಂಗೆ ಶ್ರೀನಿ ಮನವಿ

Pinterest LinkedIn Tumblr

srini____

ಹೊಸದಿಲ್ಲಿ, ಡಿ.10: ಐಪಿಎಲ್‌ನ ಎಲ್ಲ ಚಟುವಟಿಕೆಗಳಿಂದ ನಾನು ದೂರವಿರುತ್ತೇನೆ ಎಂದು ಬುಧವಾರ ಸುಪ್ರೀಂಕೋರ್ಟ್‌ಗೆ ತಿಳಿಸಿರುವ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಮುಂಬರುವ ಬಿಸಿಸಿಐ ಚುನಾವಣೆಯಲ್ಲಿ ತನಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ.

ಶ್ರೀನಿವಾಸನ್ ಪರ ವಕೀಲರಾದ ಕಪಿಲ್ ಸಿಬಲ್ ಅವರು ನ್ಯಾಯಮೂರ್ತಿ ಟಿ.ಎಸ್. ಥಾಕೂರ್ ನೇತೃತ್ವದ ನ್ಯಾಯಪೀಠದ ಮುಂದೆ ಬುಧವಾರ ಹಾಜರಾದರು. ಪ್ರಸ್ತಾವಿತ ಉನ್ನತ ಅಧಿಕಾರದ ಸಮಿತಿಯಿಂದ ಕ್ಲೀನ್ ಚಿಟ್ ಸಿಗುವ ತನಕ ಶ್ರೀನಿವಾಸನ್ ಐಪಿಎಲ್‌ನ ಎಲ್ಲ ಚಟುವಟಿಕೆಗಳಿಂದ ದೂರ ಉಳಿಯಲಿದ್ದಾರೆ ಎಂದು ನ್ಯಾಯಾಲಯಕ್ಕೆ ಸಿಬಲ್ ತಿಳಿಸಿದ್ದಾರೆ.

ಶ್ರೀನಿವಾಸನ್‌ರ ಸ್ವ ಹಿತಾಸಕ್ತಿ ವಿಷಯ ಹಾಗೂ ಮುದ್ಗಲ್ ಸಮಿತಿಯ ವರದಿಯನ್ನು ಆಧರಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಉನ್ನತ ಅಧಿಕಾರದ ಸಮಿತಿ ರಚಿಸುವ ಸುಪ್ರೀಂಕೋರ್ಟ್ ಪ್ರಸ್ತಾವನೆಗೆ ಬಿಸಿಸಿಐ ಬುಧವಾರ ವಿರೋಧ ವ್ಯಕ್ತಪಡಿಸಿದೆ. ಸುಪ್ರೀಂಕೋರ್ಟ್ ಉನ್ನತ ಅಧಿಕಾರದ ಸಮಿತಿ ರಚನೆಯ ಪ್ರಸ್ತಾವ ಬಿಸಿಸಿಐ ಸ್ವಾಯತ್ತತೆಗೆ ಧಕ್ಕೆ ತರುತ್ತದೆ. ಕ್ರಿಕೆಟ್ ಮಂಡಳಿಯ ಆಡಳಿತ ಮಂಡಳಿ ಮುದ್ಗಲ್ ಸಮಿತಿಯ ವರದಿಗೆ ಸಂಬಂಧಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಬಿಸಿಸಿಐ ಪರ ಹಿರಿಯ ವಕೀಲರಾದ ಸಿ. ಸುಂದರಂ ವಾದ ಮಂಡಿಸಿದರು.

ಇತ್ತೀಚೆಗಿನ ದಿನಗಳಲ್ಲಿ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್‌ನಿಂದ ಕ್ರಿಕೆಟ್ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ನ್ಯಾಯಾಲಯ, ಕ್ರೀಡೆಯ ಮೇಲೆ ಜನತೆ ಇಟ್ಟಿರುವ ನಂಬಿಕೆ ಕಾಪಾಡದೆ ಇದ್ದರೆ ಕ್ರಿಕೆಟ್ ಪಂದ್ಯ ಕುಸಿದು ಬೀಳಲಿದೆ ಎಂದು ಎಚ್ಚರಿಸಿದೆ.

ಚುನಾವಣೆ ಮುಂದೂಡಲು ಸೂಚನೆ:   ಜನವರಿ ಅಂತ್ಯದ ತನಕ ಕ್ರಿಕೆಟ್ ಮಂಡಳಿಯ ಚುನಾವಣೆಯನ್ನು ಮುಂದೂಡುವಂತೆ ಬಿಸಿಸಿಐಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಬಿಸಿಸಿಐ ಡಿ.17ಕ್ಕೆ ಚುನಾವಣೆ ನಿಗದಿ ಮಾಡಿದೆ. ಆದರೆ, ಡಿ.17ಕ್ಕಿಂತ ಮೊದಲು ಪ್ರಕರಣದ ವಿಚಾರಣೆ ಮುಗಿಯುವ ಸಾಧ್ಯತೆಯಿಲ್ಲದ ಕಾರಣ ಚುನಾವಣೆಯನ್ನು ಮುಂದೂಡುವುದು ಅನಿವಾರ್ಯ ಎಂದು ಕೋರ್ಟ್ ಹೇಳಿದೆ.

ಕಳೆದ ಎರಡು ದಿನಗಳಿಂದ ಐಪಿಎಲ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಡಿ.15, ಸೋಮವಾರ ವಿಚಾರಣೆ ಮುಂದುವರಿಸಲು ನಿರ್ಧರಿಸಿದೆ.

Write A Comment