ಮನೋರಂಜನೆ

ಮಳೆ ನಡುವೆ ಆಸ್ಟ್ರೇಲಿಯದ ರನ್ ಹೊಳೆ: ಮೊದಲ ಟೆಸ್ಟ್: ಸ್ಮಿತ್,ಕ್ಲಾರ್ಕ್ ಶತಕ; ಆಸೀಸ್ 517/7

Pinterest LinkedIn Tumblr

calarl

ಅಡಿಲೇಡ್, ಡಿ.10: ಪ್ರವಾಸಿ ಭಾರತ ವಿರುದ್ಧದ ಮೊದಲ ಟೆಸ್ಟ್‌ನ ಎರಡನೆ ದಿನ ಬುಧವಾರ ಮಳೆ ಆಗಾಗ ಅಡ್ಡಿ ಪಡಿಸಿದ್ದರೂ ಆಸ್ಟ್ರೇಲಿಯದ ನಾಯಕ ಮೈಕಲ್ ಕ್ಲಾರ್ಕ್ ಮತ್ತು ಆಲ್‌ರೌಂಡರ್ ಸ್ಟೀವನ್ ಸ್ಮಿತ್‌ಗೆ ಶತಕ ದಾಖಲಿಸಲು ಯಾವುದೇ ತೊಂದರೆಯಾಗಲಿಲ್ಲ. ಇವರ ಶತಕದ ನೆರವಿನಲ್ಲಿ ಆಸ್ಟ್ರೇಲಿಯ ಬೃಹತ್ ಮೊತ್ತ ದಾಖಲಿಸಿದೆ.

ಆಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ನ ಎರಡನೆ ದಿನದಾಟ ಕೊನೆಗೊಂಡಾಗ ಆಸ್ಟ್ರೇಲಿಯ 120 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 517 ರನ್ ಗಳಿಸಿದೆ. ಸ್ಟೀವನ್ ಸ್ಮಿತ್ ಔಟಾಗದೆ 162 ಮತ್ತು ಇನ್ನೂ ಖಾತೆ ತೆರೆಯದ ಮಿಚೆಲ್ ಜಾನ್ಸನ್ ಔಟಾಗದೆ ಕ್ರೀಸ್‌ನಲ್ಲಿದ್ದರು.

ಗಾಯದಿಂದ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದ ಕ್ಲಾರ್ಕ್ 108ನೆ ಟೆಸ್ಟ್‌ನಲ್ಲಿ 28ನೆ ಶತಕ ಮತ್ತು ಸ್ಮಿತ್ 5ನೆ ಶತಕ ದಾಖಲಿಸಿದರು. ಭಾರತದ ಬೌಲರ್‌ಗಳ ಬೆವರಿಳಿಸಿದ ಕ್ಲಾರ್ಕ್ ಮತ್ತು ಸ್ಮಿತ್ ಆರನೆ ವಿಕೆಟ್‌ಗೆ 163 ರನ್‌ಗಳ ಜೊತೆಯಾಟ ನೀಡಿದರು. 30 ಓವರ್‌ಗಳ ಕಾಲ ಜೊತೆಯಾಗಿ ಬ್ಯಾಟ್ ಮಾಡಿದರು.

ಆಸ್ಟ್ರೇಲಿಯ ಮೊದಲ ದಿನ 89.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 354 ರನ್ ಗಳಿಸಿತ್ತು ಮೊದಲ ದಿನ 60 ರನ್ ಗಳಿಸಿ 43.2ನೆ ಓವರ್‌ನಲ್ಲಿ ಗಾಯಾಳುವಾಗಿ ನಿವೃತ್ತಿಯಾಗಿದ್ದ ಕ್ಲಾರ್ಕ್ ಮತ್ತು ಸ್ಮಿತ್ 72 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಕ್ಲಾರ್ಕ್ ಅವರು ಆಟ ಮುಂದುವರಿಸಿ 172 ಎಸೆತಗಳಲ್ಲಿ 15 ಬೌಂಡರಿಗಳ ನೆರವಿನಲ್ಲಿ ಶತಕ ಪೂರೈಸಿದರು. ಕ್ಲಾರ್ಕ್ ವಿಕೆಟ್ ಉಡಾಯಿಸಿರುವುದು ಭಾರತಕ್ಕೆ ಬುಧವಾರ ದೊರೆತ ದೊಡ್ಡ ಯಶಸ್ಸು. ಚೊಚ್ಚಲ ಟೆಸ್ಟ್ ಆಡುತ್ತಿರುವ ಉತ್ತರ ಪ್ರದೇಶದ ಲೆಗ್ ಸ್ಪಿನ್ನರ್ ಕರಣ್ ಶರ್ಮ ಈ ಅಮೂಲ್ಯವಾದ ವಿಕೆಟ್ ಪಡೆದರು. ಕ್ಲಾರ್ಕ್ ಔಟಾಗುವ ಮುನ್ನ 244 ನಿಮಿಷಗಳ ಬ್ಯಾಟಿಂಗ್‌ನಲ್ಲಿ 163 ಎಸೆತಗಳನ್ನು ಎದುರಿಸಿ 18 ಬೌಂಡರಿ ನೆರವಿನಲ್ಲಿ 128 ರನ್ ಗಳಿಸಿದರು. ಕ್ಲಾರ್ಕ್ 119.2ನೆ ಓವರ್‌ನಲ್ಲಿ ಕರಣ್ ಶರ್ಮ ಬೌಲಿಂಗ್‌ನಲ್ಲಿ ಸ್ಕ್ವಾರ್‌ಲೆಗ್‌ನಲ್ಲಿ ಫೀಲ್ಡಿಂಗ್ ನಿರತ ಚೇತೇಶ್ವರ ಪೂಜಾರಗೆ ಕ್ಯಾಚ್ ನೀಡಿದರು. ಆ ಓವರ್ ಕೊನೆಗೊಂಡ ಬಳಿಕ ಮಂದ ಬೆಳಕಿನ ಕಾರಣದಿಂದಾಗಿ ಆಟವನ್ನು ಸ್ಥಗಿತಗೊಳಿಸಲಾಯಿತು.

25ರ ಹರೆಯದ ಸ್ಮಿತ್‌ಗೆ ಎರಡು ಬಾರಿ ಜೀವದಾನ ನೀಡಿದ ಭಾರತದ ಆಟಗಾರರುಕೈ ಸುಟ್ಟುಕೊಂಡರು. ಸ್ಮಿತ್ 131 ರನ್ ಗಳಿಸಿದ್ದಾಗ ಕರಣ್ ಶರ್ಮ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಕ್ಯಾಚ್ ಕೈಚೆಲ್ಲಿದರು. 161ರನ್ ಗಳಿಸಿದ್ದಾಗ ಇಶಾಂತ್ ಶರ್ಮ ಜೀವದಾನ ನೀಡಿದರು.

ಸ್ಕೋರ್ ವಿವರ
ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್ 120 ಓವರ್‌ಗಳಲ್ಲಿ 517/7
ರೋಜರ್ಸ್‌ ಸಿ ಧವನ್ ಬಿ ಇಶಾಂತ್ ಶರ್ಮ 9, ಡೇವಿಡ್ ವಾರ್ನರ್ ಸಿ ಇಶಾಂತ್ ಶರ್ಮ ಬಿ ಕರಣ್ ಶರ್ಮ 145, ಶೇನ್ ವ್ಯಾಟ್ಸನ್ ಸಿ ಧವನ್ ಬಿ ವರುಣ್ ಆ್ಯರೊನ್ 14, ಮೈಕಲ್ ಕ್ಲಾರ್ಕ್ ಸಿ ಪೂಜಾರ ಬಿ ಕರಣ್ ಶರ್ಮ 128, ಸ್ಟೀವನ್ ಸ್ಮಿತ್ ಅಜೇಯ 162, ಮಿಚೆಲ್ ಮಾರ್ಷ್ ಸಿ ಕೊಹ್ಲಿ ಬಿ ಆ್ಯರೊನ್ 41, ನಥನ್ ಲಿನ್ ಬಿ ಮುಹಮ್ಮದ್ ಶಮಿ 3, ಹಡ್ಡಿನ್ ಸಿ ಸಹಾ ಬಿ ಮುಹಮ್ಮದ್ ಶಮಿ 0, ಮಿಚೆಲ್ ಜಾನ್ಸನ್ ಔಟಾಗದೆ 0,ಇತರೆ 15
ವಿಕೆಟ್ ಪತನ: 1-50, 2-88, 2-206, 3-258, 4-345, 5-352, 6-354, 7-517.
ಬೌಲಿಂಗ್
ಮುಹಮ್ಮದ್ ಶಮಿ 24-2-120-2, ವರುಣ್ ಆರೊನ್ 23-1-136-2, ಇಶಾಂತ್ ಶರ್ಮ 27-5-85-1, ಕರಣ್ ಶರ್ಮ 33-1-143-2, ಮುರಳಿ ವಿಜಯ್ 13-3-29-0.

2ನೆ ದಿನದ ಅಂಕಿ-ಅಂಶ
ಕ್ಲಾರ್ಕ್ 28ನೆ ಶತಕ
-2,042: ಮೈಕಲ್ ಕ್ಲಾರ್ಕ್ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 2,042 ರನ್ ಸಂಪಾದಿಸಿದ್ದಾರೆ. ಅವರು ಈ ಸಾಧನೆ ಮಾಡಿದ 5ನೆ ದಾಂಡಿಗ. ರಿಕಿ ಪಾಂಟಿಂಗ್(2,555) ರನ್ ದಾಖಲಿಸಿದ್ದಾರೆ.
-1,407: ಕ್ಲಾರ್ಕ್ ಅವರು ಅಡಿಲೇಡ್ ಓವಲ್‌ನಲ್ಲಿ 100.50 ಸರಾಸರಿಯಂತೆ 1,407 ರನ್ ಮಾಡಿದ್ದಾರೆ. -3: ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯದ ಪರ ಮೂವರು ದಾಂಡಿಗರು ಶತಕ ಸಿಡಿಸಿದ್ದಾರೆ.
-6: ಆಸ್ಟ್ರೇಲಿಯದ ಮೂವರು ದಾಂಡಿಗರು ಒಂದೇ ಇನಿಂಗ್ಸ್‌ನಲ್ಲಿ 6 ಬಾರಿ ಶತಕ ದಾಖಲಿಸಿದ್ದಾರೆ.
-5.91: ವರುಣ್ ಆ್ಯರೊನ್ ಇಕಾನಮಿ ರೇಟ್. ಅವರು 23 ಓವರ್ ಬೌಲಿಂಗ್ ನಡೆಸಿ 136 ರನ್ ನೀಡಿದ್ದಾರೆ. ಈ ಹಿಂದೆ ಕಪಿಲ್ ದೇವ್ ಇಂತಹದ್ದೇ ಕಳಪೆ ಪ್ರದರ್ಶನ ನೀಡಿದ್ದರು. ಕಪಿಲ್ ದೇವ್ 1983ರಲ್ಲಿ ಪಾಕಿಸ್ತಾನ ವಿರುದ್ಧ 38.4 ಓವರ್ ಬೌಲಿಂಗ್ ನಡೆಸಿ 220 ರನ್ ನೀಡಿದ್ದರು.
-4: ಸ್ಮಿತ್ ನಂ.5 ಕ್ರಮಾಂಕದಲ್ಲಿ ಆಡಿ 4 ಶತಕ ದಾಖಲಿಸಿದ್ದಾರೆ.

Write A Comment