ಮನೋರಂಜನೆ

ರಣಜಿ ಟ್ರೋಫಿ: ಕರ್ನಾಟಕ ಜಯಭೇರಿ: ಬೌಲರ್ ಅರವಿಂದ್, ವಿನಯ್ ಕುಮಾರ್ ಕೈಚಳಕ

Pinterest LinkedIn Tumblr

Shrinath-Arvind

ಬೆಂಗಳೂರು, ಡಿ.10: ಅರವಿಂದ್ ಶ್ರೀನಾಥ್(4-9) ಹಾಗೂ ವಿನಯ್ ಕುಮಾರ್ (3-20)ಅವರ ಅತ್ಯುತ್ತಮ ಬೌಲಿಂಗ್‌ನ ಸಹಾಯದಿಂದ ಕರ್ನಾಟಕ ತಂಡ ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ 285 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಎರಡು ಇನಿಂಗ್ಸ್‌ಗಳಲ್ಲಿ 61 ರನ್‌ಗೆ 8 ವಿಕೆಟ್‌ಗಳನ್ನು ಪಡೆದ ಶ್ರೀನಾಥ್ ಯಶಸ್ವಿ ಬೌಲರ್ ಎನಿಸಿಕೊಂಡರು. ಶ್ರೀನಾಥ್ ಬುಧವಾರ ಇಲ್ಲಿ ನಡೆದ ಎರಡನೆ ಇನಿಂಗ್ಸ್‌ನಲ್ಲಿ ಕೇವಲ 9 ರನ್‌ಗೆ 4 ವಿಕೆಟ್‌ಗಳನ್ನು ಕಬಳಿಸಿ ತಮಿಳುನಾಡು ತಂಡವನ್ನು 34.3 ಓವರ್‌ಗಳಲ್ಲಿ 82 ರನ್‌ಗೆ ಆಲೌಟ್ ಮಾಡಿದರು. ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಕರ್ನಾಟಕ 290 ರನ್ ಗಳಿಸಿತ್ತು.

ಇದಕ್ಕುತ್ತರವಾಗಿ ತಮಿಳುನಾಡು 274 ರನ್ ಗಳಿಸಿತ್ತು. ಶ್ರೀನಾಥ್ ನೆರವಿನಿಂದ ಕರ್ನಾಟಕ 16 ರನ್ ಮುನ್ನಡೆ ಪಡೆದಿತ್ತು. ಎರಡನೆ ಇನಿಂಗ್ಸ್‌ನಲ್ಲಿ ರಾಬಿನ್ ಉತ್ತಪ್ಪ (76), ಮಯಾಂಕ್ ಅಗರವಾಲ್(80) ಹಾಗೂ ಸ್ಟುವರ್ಟ್ ಬಿನ್ನಿ(77) ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ತಮಿಳುನಾಡು ತಂಡದ ಗೆಲುವಿಗೆ 368 ರನ್ ಗುರಿ ನೀಡಿತ್ತು.

ಶ್ರೀನಾಥ್ ಹಾಗೂ ವಿನಯ್ ಅವರ ಅಮೋಘ ಬೌಲಿಂಗ್‌ಗೆ ನಿರುತ್ತರವಾದ ತಮಿಳುನಾಡು 82 ರನ್‌ಗೆ ಆಲೌಟಾಯಿತು. ತಮಿಳುನಾಡು ಆರಂಭಿಕ ಆಟಗಾರರಾದ ಕೌಶಿಕ್ ಗಾಂಧಿ(1) ಹಾಗೂ ಅಭಿನವ್ ಮುಕುಂದ್(16)ರನ್ನು ಅಲ್ಪಮೊತ್ತಕ್ಕೆ ಕಳೆದುಕೊಂಡಿತು. ದಿನೇಶ್ ಕಾರ್ತಿಕ್(1) ಹಾಗೂ ಬಾಬಾ ಅಪರಾಜಿತ್(13) ವಿಕೆಟನ್ನು ಕಬಳಿಸಿದ ಶ್ರೇಯಸ್ ಗೋಪಾಲ್ ಆತಿಥೇಯರಿಗೆ ಮೇಲುಗೈ ಒದಗಿಸಿಕೊಟ್ಟರು.

34 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡ ತಮಿಳುನಾಡು ಆ ನಂತರ ಚೇತರಿಸಿಕೊಳ್ಳಲಿಲ್ಲ. ಬಿಗಿ ಬೌಲಿಂಗ್ ನಡೆಸಿದ ವಿನಯ್ ಹಾಗೂ ಶ್ರೀನಾಥ್ ಅವರು ಇಂದರ್‌ಜಿತ್(12), ರಾಮಸ್ವಾಮಿ ಪ್ರಸನ್ನ(1), ವಿಜಯ್ ಶಂಕರ್(8), ರಂಗರಾಜನ್(10), ಎಲ್ ಬಾಲಾಜಿ(0) ಹಾಗೂ ಮುಹಮ್ಮದ್(0) ವಿಕೆಟನ್ನು ಕಬಳಿಸಿದರು.

ಇದಕ್ಕೂ ಮೊದಲು ನಾಲ್ಕನೆ ಹಾಗೂ ಅಂತಿಮ ದಿನದಾಟದಲ್ಲಿ 4 ವಿಕೆಟ್‌ಗೆ 247 ರನ್‌ನಿಂದ ಬ್ಯಾಟಿಂಗನ್ನು ಮುಂದುವರಿಸಿದ ಕರ್ನಾಟಕ 5ಕ್ಕೆ 351 ರನ್‌ಗೆ ಎರಡನೆ ಇನಿಂಗ್ಸನ್ನು ಡಿಕ್ಲೇರ್ ಮಾಡಿತು. ಸ್ಟುವರ್ಟ್ ಬಿನ್ನಿ(77 ರನ್, 68 ಎ, 6 ಬೌಂ, 4 ಸಿ.) ಹಾಗೂ ಮನೀಷ್ ಪಾಂಡೆ (ಅಜೇಯ 56, 6 ಬೌಂಡರಿ, 1 ಸಿ.) ಆತಿಥೇಯರು ಕ್ಷಿಪ್ರ ರನ್ ಕಲೆ ಹಾಕಲು ನೆರವಾದರು.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಪ್ರಥಮ ಇನಿಂಗ್ಸ್: 290 ರನ್
ತಮಿಳುನಾಡು ಪ್ರಥಮ ಇನಿಂಗ್ಸ್: 274 ರನ್
ಕರ್ನಾಟಕ ದ್ವಿತೀಯ ಇನಿಂಗ್ಸ್75.5 ಓವರ್‌ಗಳಲ್ಲಿ 351/5
(ರಾಬಿನ್ ಉತ್ತಪ್ಪ 76, ಮಯಾಂಕ ಅಗರವಾಲ್ 80, ಬಿನ್ನಿ 77, ಮನೀಷ್ ಪಾಂಡೆ ಅಜೇಯ 56, ರಂಗರಾಜನ್ 2-96)
ತಮಿಳುನಾಡು ದ್ವಿತೀಯ ಇನಿಂಗ್ಸ್34.3 ಓವರ್‌ಗಳಲ್ಲಿ 82 ರನ್
(ಮುಕುಂದ್ 16, ಅರವಿಂದ್ ಶ್ರೀನಾಥ್ 4-9, ವಿನಯ್ ಕುಮಾರ್ 3-20)
ಪಂದ್ಯಶ್ರೇಷ್ಠ: ಅರವಿಂದ್ ಶ್ರೀನಾಥ್.

Write A Comment