ಅಂತರಾಷ್ಟ್ರೀಯ

ಬೆಂಗಳೂರು ಸತ್ಯಾರ್ಥಿ, ಮಲಾಲಾರಿಂದ ನೊಬೆಲ್ ಶಾಂತಿ ಪ್ರಶಸ್ತಿ ಸ್ವೀಕಾರ

Pinterest LinkedIn Tumblr

2014_12img10_Dec_2014_AP12_10_2014_000224B

ಓಸ್ಲೊ, ಡಿ.10: ಮಕ್ಕಳ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಅಪಾರವಾಗಿ ಶ್ರಮಿಸಿರುವ ಭಾರತದ ಕೈಲಾಶ್ ಸತ್ಯಾರ್ಥಿ ಹಾಗೂ ಪಾಕಿಸ್ತಾನದ ಬಾಲಕಿ ಮಲಾಲಾ ಯೂಸುಫ್‌ಝಾಯಿ 2014ನೆ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಬುಧವಾರ ಓಸ್ಲೊದಲ್ಲಿ ಏರ್ಪಡಿಸಲಾಗಿದ್ದ ವರ್ಣರಂಜಿತ ಸಮಾರಂಭದಲ್ಲಿ ಜಂಟಿಯಾಗಿ ಸ್ವೀಕರಿಸಿದ್ದಾರೆ.

ಭಾರತದಲ್ಲಿನ ಬಾಲ್ಯ ವಂಚಿತ ಮಕ್ಕಳ ಶಿಕ್ಷಣ ಹಾಗೂ ಹಕ್ಕುಗಳಿಗಾಗಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಕೈಲಾಶ್ ಸತ್ಯಾರ್ಥಿಯವರಿಗೆ ಹಾಗೂ ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ನಡೆಸಿರುವ ಹೋರಾಟವನ್ನು ಪರಿಗಣಿಸಿ ಮಲಾಲಾ ಯೂಸುಫ್‌ಝಾಯಿಗೆ ಜಂಟಿಯಾಗಿ ಈ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ.

‘‘ಅಲ್‌ಫ್ರೆಡ್ ನೊಬೆಲ್‌ರ ಮನಸ್ಸಿನ ಭಾವನೆಗೆ ಸರಿಯಾಗಿ ಸಂಕ್ಷಿಪ್ತವಾಗಿ ಹೇಳುವುದಾದರೆ ಸತ್ಯಾರ್ಥಿ ಹಾಗೂ ಯೂಸುಫ್‌ಝಾಯಿ ನಿಜವಾದ ಶಾಂತಿಯ ನಾಯಕರು’’ ಎಂದು ಪ್ರಶಸ್ತಿ ಪ್ರದಾನಕ್ಕೆ ಮುನ್ನ ಮಾಡಿದ ಭಾಷಣದಲ್ಲಿ ನಾರ್ವೆಯ ನೊಬೆಲ್ ಸಮಿತಿಯ ಮುಖ್ಯಸ್ಥ ತಾರ್ಬ್‌ಜಾರ್ನ್ ಜ್ಯಾಗ್ಲಂಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘‘ಓರ್ವ ಎಳೆಯ ಬಾಲಕಿ ಮತ್ತು ಇನ್ನೋರ್ವ ಸ್ವಲ್ಪಮಟ್ಟಿಗೆ ವಯೋವೃದ್ಧ, ಒಬ್ಬರು ಪಾಕಿಸ್ತಾನದಿಂದ ಹಾಗೂ ಇನ್ನೋರ್ವರು ಭಾರತದಿಂದ, ಒಬ್ಬರು ಮುಸ್ಲಿಮ್ ಹಾಗೂ ಮತ್ತೊಬ್ಬರು ಹಿಂದೂ; ಇಬ್ಬರೂ ಜಗತ್ತಿಗೆ ಇಂದು ಅಗತ್ಯವಾಗಿರುವ ಎರಡು ಸಂಕೇತಗಳು: ಹೆಚ್ಚಿನ ಏಕತೆ. ಎರಡು ರಾಷ್ಟ್ರಗಳ ನಡುವಿನ ಭ್ರಾತೃತ್ವ!’’ ಎಂದವರು ಉದ್ಗರಿಸಿದ್ದಾರೆ.

ಸತ್ಯಾರ್ಥಿ(60)ಯವರು ತನ್ನ ಇಲೆಕ್ಟ್ರಿಕಲ್ ಎಂಜಿನಿಯರ್ ಉದ್ಯೋಗವನ್ನು ತೊರೆದು ಬಲವಂತದ ಕೆಲಸ ಹಾಗೂ ಕಳ್ಳಸಾಗಣೆಯಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ ಸೇವಾ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರತಿಪಾದಿಸುತ್ತಿರುವ ಮಲಾಲಾ ಯೂಸುಫ್‌ಝಾಯಿ(17) ಎರಡು ವರ್ಷಗಳ ಹಿಂದೆ ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್‌ನ ಭೀಕರ ಗುಂಡಿನ ದಾಳಿಯಿಂದ ತುಸು ಮಾತ್ರದಿಂದಲೇ ಪ್ರಾಣಾಪಾಯದಿಂದ ಪಾರಾಗಿದ್ದಳು. ಈ ಸಾಧನೆಯನ್ನು ಪರಿಗಣಿಸಿ ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಯು ಅಕ್ಟೋಬರ್ 10ರಂದು ಈ ಸಾಲಿನ ಪ್ರಶಸ್ತಿಯನ್ನು ಇವರಿಬ್ಬರಿಗೆ ಘೋಷಿಸಿತ್ತು.

ವಿಜೇತರು ನೊಬೆಲ್ ಪದಕ, ಮಾನಪತ್ರ ಹಾಗೂ ನಗದು ಬಹುಮಾನ ಸ್ವೀಕರಿಸಿದರು. ಅವರು 11 ಲಕ್ಷ ಡಾಲರ್ ಬಹುಮಾನದ ಮೊತ್ತವನ್ನು ಹಂಚಿಕೊಳ್ಳುವರು. ಹಿಂಸಾಚಾರ ಹಾಗೂ ದಮನವನ್ನು ಯಾವುದೇ ಧರ್ಮದಲ್ಲಿ ಸಮರ್ಥಿಸಲಾಗದು ಎಂದು ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಯ ಮುಖ್ಯಸ್ಥ ಅಭಿಪ್ರಾಯಿಸಿದರು. ಇಸ್ಲಾಂ, ಕ್ರಿಶ್ಚಿಯನ್, ಯಹೂದಿ, ಹಿಂದೂ, ಬೌದ್ಧ ಧರ್ಮಗಳು ಜೀವಗಳನ್ನು ರಕ್ಷಿಸುತ್ತವೆ ಮತ್ತು ಜೀವ ತೆಗೆಯಲು ಅವನ್ನು ಬಳಸಲಾಗದು ಎಂದವರು ಹೇಳಿದ್ದಾರೆ. ‘‘ನಾವಿಂದು ಗೌರವಿಸುತ್ತಿರುವ ಇಬ್ಬರು ಕೂಡಾ ಈ ನಿಲುವಿಗೆ ಅತ್ಯಂತ ಬದ್ಧರಾಗಿದ್ದಾರೆ’’ ಎಂದವರು ನುಡಿದರು.

‘‘ಮಹಾತ್ಮಾ ಗಾಂಧಿಯವರು ನೀಡಿರುವ ಸಿದ್ಧಾಂತದಂತೆ ಅವರು ಬದುಕುತ್ತಿದ್ದಾರೆ. ಗಾಂಧೀಜಿ ಹೇಳಿದ್ದರು: ನಾನು ಸಾಯಬಹುದಾದ ಹಲವು ಕಾರಣಗಳಿವೆ. ನಾನು ಕೊಲ್ಲಬಹುದಾದ ಯಾವುದೇ ಕಾರಣಗಳಿಲ್ಲ’’ ಎಂದು ಜಾಗ್ಲಂಡ್ ಉಲ್ಲೇಖಿಸಿದ್ದಾರೆ.

ಸತ್ಯಾರ್ಥಿಯವರ ಸೇವಾ ಸಂಸ್ಥೆ ‘ಬಚ್‌ಪನ್ ಬಚಾವೊ ಆಂದೋಲನ್’ (ಬಾಲ್ಯ ರಕ್ಷಿಸಿ ಚಳವಳಿ) ಭಾರತದಾದ್ಯಂತದ ಕಾರ್ಖಾನೆ ಹಾಗೂ ಕಾರ್ಯಾಗಾರಗಳಲ್ಲಿ ಜೀತಕ್ಕೊಳಗಾಗಿದ್ದ 80 ಸಾವಿರಕ್ಕೂ ಅಧಿಕ ಮಕ್ಕಳನ್ನು ವಿಮುಕ್ತಿಗೊಳಿಸಿ ಅವರಿಗೆ ಬಾಲ್ಯವನ್ನು ಮರಳಿಸುವ ಮಹತ್ತರ ಸಾಧನೆಗೈದಿದೆ.

ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ)ಯ ಪ್ರಕಾರ ಪ್ರಪಂಚದಲ್ಲಿ ಸುಮಾರು 168 ದಶಲಕ್ಷ ಬಾಲಕಾರ್ಮಿಕರಿದ್ದು, ಭಾರತವೊಂದರಲ್ಲೇ ಅವರ ಸಂಖ್ಯೆಯು ಸುಮಾರು 60 ದಶಲಕ್ಷದಷ್ಟಾಗಿದೆ.

ತಾಲಿಬಾನ್‌ನ ಭೀಕರ ಗುಂಡಿನ ದಾಳಿಗೆ ಒಳಗಾದ ಬಳಿಕವೂ ಹೆಣ್ಣು ಮಕ್ಕಳ ಶಿಕ್ಷಣ ಪರ ಹೋರಾಟಗಾರ್ತಿ ಮಲಾಲಾ, ವಿಶೇಷವಾಗಿ ಪಾಕಿಸ್ತಾನದಂತಹ ರಾಷ್ಟ್ರದಲ್ಲಿ ಮಕ್ಕಳ ಹಕ್ಕುಗಳು ಹಾಗೂ ಹೆಣ್ಣುಮಕ್ಕಳ ಶಿಕ್ಷಣ ಪರವಾದ ತನ್ನ ಚಳವಳಿಯನ್ನು ಮುಂದುವರಿಸುವ ನಿರ್ಧಾರವನ್ನು ಪ್ರಕಟಿಸಿದ್ದಾಳೆ.

ಮಲಾಲಾ ಕಳೆದ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಪಟ್ಟಿಗೂ ನಾಮನಿರ್ದೇಶನಗೊಂಡಿದ್ದಳು.

Write A Comment