ಮನೋರಂಜನೆ

‘ಮಸ್ತಿ ಹೈ ಮಸ್ತಿ ಹೈ, ಲೋಗ್‌ ಕೆಹೆತೆ ಹೈ..’ ಗೀತೆ: ‘ಹರಿ’ ಗಾಯನಕ್ಕೆ ತಲೆದೂಗಿದವರು…

Pinterest LinkedIn Tumblr

m4

ತಣ್ಣಗೆ ಬೀಸುವ ಗಾಳಿ.. ಸುತ್ತಲಿನ ಎತ್ತರದ ಕಟ್ಟಡಗಳ ನಡುವಣ ಪುಟ್ಟ ಬಯಲಲ್ಲಿ ಕಟ್ಟಿದ ಬಣ್ಣ ಬಣ್ಣದ ದೀಪಗಳ ವೇದಿಕೆ ಅದು. ವೇದಿಕೆಯೆದುರು ಸಾಲಾಗಿ ಜೋಡಿಸಿದ್ದ ಕುರ್ಚಿಯಲ್ಲಿ ಕುಳಿತ ನೂರಾರು ಜನರ ಕಣ್ಣು ಖಾಲಿ ವೇದಿಕೆಯತ್ತಲೇ ನೆಟ್ಟಿತ್ತು ಕೈಯಲ್ಲಿನ ಟಿಕೆಟ್ ಅನ್ನು ತೊಡೆಗೆ ತಟ್ಟಿಕೊಳ್ಳುತ್ತಿರುವ ರೀತಿಯಲ್ಲಿಯೇ ಅವರ ನಿರೀಕ್ಷೆಯ ತೀವ್ರತೆ ವ್ಯಕ್ತವಾಗುತ್ತಿತ್ತು.

ಈಚೆಗೆ ನಗರದ ಫಿನಿಕ್ಸ್‌ ಮಾರ್ಕೆಟ್‌ ಸಿಟಿಯಲ್ಲಿ ನಡೆದ ‘ಅಲೈವ್‌ ಇಂಡಿಯಾ ಇನ್‌ ಕಾನ್ಸರ್ಟ್‌’ ಸೀಸನ್‌–3 ಯಲ್ಲಿ ಕಾರ್ಯಕ್ರಮ ಆರಂಭಕ್ಕೂ ಮೊದಲಿನ ಸ್ಥಿತಿಯ ಚಿತ್ರಣ ಹೀಗಿತ್ತು. ಅಂದಹಾಗೆ, ಅವರೆಲ್ಲರ ಕಾತರದ ಕಂಗಳು ಅರಸುತ್ತಿದ್ದದ್ದು ಗಜಲ್‌ ಮೋಡಿಗಾರ ಹರಿಹರನ್‌ ಅವರಿಗಾಗಿ.

ಸಂಜೆ 6.30ಕ್ಕೆ ಎಂದು ಸಮಯ ನಿಗದಿಯಾಗಿತ್ತು. 7 ಗಂಟೆಗೆ ‘ನಮಸ್ಕಾರ ಬೆಂಗಳೂರು.. ಕರ್ನಾಟಕ ಅಂದಮೇಲೆ ಕನ್ನಡ ಮಾತನಾಡಲೇಬೇಕಲ್ಲ’ ಎನ್ನುತ್ತಾ ಕಾರ್ಯಕ್ರಮ ನಿರೂಪಕ ಸಂತೋಷ್‌ ವೇದಿಕೆಗೆ ಬಂದರು. ಕನ್ನಡ ಮಾತನಾಡಬೇಕು ಎಂದು ಹೇಳಿದರೂ ಅವರ ಮುಂದಿನ ಮಾತುಗಳು ಮಾತ್ರ ಕನ್ನಡಕ್ಕಿಂತ ಹೆಚ್ಚು ಇಂಗ್ಲಿಷ್‌ ಹಿಂದಿಯಲ್ಲಿಯೇ ಇದ್ದವು.

ಇನ್ನೇನು ಹರಿಹರನ್‌ ಕಾರ್ಯಕ್ರಮ ಆರಂಭವಾಗುತ್ತದೆ ಎನ್ನುವಷ್ಟರಲ್ಲಿಯೇ ಬಗೆಬಗೆಯ ಬಟ್ಟೆ ತೊಟ್ಟ ರೂಪದರ್ಶಿಯರು ಸೊಂಟ ಬಳುಕಿಸುತ್ತಾ ವೇದಿಕೆಯ ಮೇಲೆ ಹೆಜ್ಜೆ ಹಾಕತೊಡಗಿದರು.

ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಕಾರ್ಯಕ್ರಮದ ಪ್ರಾಯೋಜಕ ಸಂಸ್ಥೆ ಮ್ಯಾಕ್ಸ್‌ ‘ವಿಂಟರ್‌ ಕಲೆಕ್ಷನ್‌ ಫ್ಯಾಷನ್‌ ಷೋ’ ಏರ್ಪಡಿಸಿತ್ತು. ಸ್ತ್ರೀ, ಪುರುಷ ರೂಪದರ್ಶಿಗಳು ಚಳಿಗಾಲಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಬಟ್ಟೆಗಳನ್ನು ಧರಿಸಿ ರ್‌್ಯಾಂಪ್‌ವಾಕ್‌ ಮಾಡಿದರು.
ಇದರ ನಡುವೆಯೇ ಪ್ರೇಕ್ಷಕರಿಂದಲೇ ಆಯ್ದ ಕೆಲವರನ್ನು ವೇದಿಕೆಗೆ ಕರೆದು ಬೆಕ್ಕಿನ ನಡಿಗೆಗೆ ಅವಕಾಶ ನೀಡುವ ‘ಟೈಂ ಪಾಸ್‌’ ಆಟಗಳೂ ನಡೆದವು. ಇವೆಲ್ಲಾ ಮುಗಿದು ಹರಿಹರನ್‌ ವೇದಿಕೆ ಹತ್ತುವಷ್ಟರಲ್ಲಿ ಗಂಟೆ ಎಂಟಾಗಿತ್ತು.

m3(2)

ತಮ್ಮ ಎಂದಿನ ವಿಶಿಷ್ಟ ಹೇರ್‌ ಸ್ಟೈಲ್‌ನಲ್ಲಿ ವೇದಿಕೆಯ ಮೇಲೆ ಕಾಣಿಸಿಕೊಂಡ ಹರಿಹರನ್‌ ‘ವಕ್ರತುಂಡ ಮಹಾಕಾಯ.’ ಎಂದು ವಿಘ್ನೇಶನನ್ನು ಪ್ರಾರ್ಥಿಸುವುದರ ಮೂಲಕ ಗಾನಯಾನಕ್ಕೆ ನಾಂದಿ ಹಾಡಿದರು. ಆಗಲೇ ಕಾದು ಕಾದು ತಾಳ್ಮೆ ಕಳೆದುಕೊಳ್ಳುತ್ತಿದ್ದ ಪ್ರೇಕ್ಷಕರು ಹರಿಹರನ್‌ ಅವರನ್ನು ನೋಡಿದ್ದೇ ಸಿಟ್ಟೆಲ್ಲ ಮರೆತು ಸಂಗೀತವನ್ನು ಆಸ್ವಾದಿಸತೊಡಗಿದರು.

ಚಳಿಗಾಳಿ ಜೋರುಗೊಳ್ಳುತ್ತಿದ್ದಂತೆಯೇ ಹರಿಹರನ್‌ ಧ್ವನಿಯ ಕಾವೂ ಏರುತ್ತಲೇ ಹೋಯಿತು. ಸಹವಾದ್ಯಗಾರರನ್ನು ಹುರಿದುಂಬಿಸುತ್ತಾ ವೇದಿಕೆಯ ಮೇಲೆಲ್ಲ ಓಡಾಡುತ್ತಾ ಅವರು ಹಾಡುತ್ತಿದ್ದರೆ ಸುತ್ತಲಿನ ಕಟ್ಟಡದ ಮೇಲೆ ನಿಂತು ನೋಡುತ್ತಿದ್ದ ಜನರೂ ಮೂಕರಾದರು.
ಪ್ರಾರ್ಥನೆಯ ನಂತರ ‘ಸಖಿಯೇ …’ ಎಂಬ ತಮಿಳು ಗೀತೆ ಹಾಡಿದರು. ನಂತರ ಹಿಂದಿ ಹಾಡೊಂದನ್ನು ಹಾಡಿ, ‘ಮೈ ಆಟೋಗ್ರಾಫ್‌’ ಚಿತ್ರದ ‘ಸವಿ ಸವಿ ನೆನಪು ಸಾವಿರ ನೆನಪು’ ಚಿತ್ರದ ಮೂಲಕ ಕನ್ನಡಗೀತೆ ಹಾಡಿದಾಗ ಪ್ರೇಕ್ಷಕರಲ್ಲಿ ಹರ್ಷೋದ್ಘಾರವೆದ್ದಿತು.
ಗೀತಸಾಹಿತ್ಯವನ್ನು ತಪ್ಪು ತಪ್ಪಾಗಿ ಹೇಳಿದರೂ ಅವರ ಸುಮಧುರ ಕಂಠಸಿರಿ ಆ ತಪ್ಪುಗಳೆಲ್ಲ ಮುಚ್ಚಿ ಹೋಗಿಬಿಡುವಷ್ಟು ಪರವಶಗೊಳಿಸುತ್ತಿತ್ತು.

ಸವಿ ಸವಿ ನೆನಪು ಹಾಡಿನಿಂದ ಬಾಲ್ಯದ ನೆನಪಿಗೆ ಜಾರಿದ ಪ್ರೇಕ್ಷಕರನ್ನು ಮರಳಿ ಹರೆಯಕ್ಕೆ ತರಲು ಹರಿಹರನ್‌ ಆಯ್ದುಕೊಂಡದ್ದು ಮಣಿರತ್ನಂ ನಿರ್ದೇಶನದ ‘ಬಾಂಬೆ’ ಚಿತ್ರದ ಜನಪ್ರಿಯ ಗೀತೆ ‘ರೋಜಾ ಜಾನೇ ಮನ್‌..’. ಸಂಗೀತ ಮಾಂತ್ರಿಕ ಎ.ಆರ್‌. ರೆಹಮಾನ್‌ ಸಂಯೋಜನೆಯಲ್ಲಿ ಮೂಡಿಬಂದ ಈ ಹಾಡಿನ ‘ಆಂಕೋ ಮೇ ತೂ ಹೇ, ಆಂಸೂವೋಮೆ ತೂ ಹೈ; ಆಂಕೆ ಬಂದ್‌ ಕರ್‌ ದೇ ತೋ ಮನ್‌ ಮೆ ಬೀ ತೂ ಹೈ’ ಎಂದು ಸಾಲುಗಳನ್ನು ಹೇಳುತ್ತಿದ್ದರೆ ಕೈಗಳನ್ನು ಮೇಲಕ್ಕೆತ್ತಿ ಅತ್ತಿತ್ತ ತೂಗುತ್ತಾ ಸ್ಪಂದಿಸುತ್ತಿದ್ದ ಹುಡುಗರ ಎದೆಯಲ್ಲಿ ಹಳೆ ಪ್ರೀತಿಯ ನೆನಪುಗಳು ಬಿಚ್ಚಿಕೊಳ್ಳುತ್ತಿದ್ದರೆ, ವಯಸ್ಸಾದವರು ಪಕ್ಕದಲ್ಲಿನ ತಮ್ಮ ಸಂಗಾತಿಗಳನ್ನು ನೋಡಿ ಮುಗುಳ್ನಗುತ್ತಿದ್ದರು.
ನಂತರ ಅದೇ ಚಿತ್ರದ ‘ತೂ ಹಿ ರೇ ತೂ ಹಿ ರೇ.. ತೆರೆ ಬಿನಾ ಮೈ ಕೈಸೆ ಜೀಯೂ’ ಹಾಡಿಗೆ ಜಿಗಿದಾಗ ಮಾತ್ರ ಆ ಸ್ವರದಲ್ಲಿನ ವಿರಹವೇದನೆಯ ತಾಪಕ್ಕೆ ಸುತ್ತಿ ಸುಳಿಯುತ್ತಿದ್ದ ‘ಥಂಡಿ ಥಂಡಿ ಹವಾ’ ಕೂಡ ಬೆಚ್ಚಗಾದಂತಿತ್ತು.

ಹರಿಹರನ್‌ ಪ್ರಯೋಗಶಾಲಿ ಮನೋಧರ್ಮದವರು. ಅವರ  ಪ್ರಯೋಗಧರ್ಮ ಈ ಕಾರ್ಯಕ್ರಮದಲ್ಲಿಯೂ ಎದ್ದು ಕಾಣುವಂತಿತ್ತು.
ಭಾಷೆ, ವಾದ್ಯ, ಸಂಯೋಜನೆ ಎಲ್ಲದರಲ್ಲಿಯೂ ಅವರು ಒಂದರಿಂದ ಇನ್ನೊಂದಕ್ಕೆ ಜಿಗಿಯುತ್ತ, ಎಲ್ಲವನ್ನೂ ಸೇರಿಸಿ ಹೊಸದೇನೋ ಕಟ್ಟುತ್ತಿದ್ದರು. ತಮಿಳು ಭಾಷೆಯಿಂದ ಆರಂಭವಾದ ‘ಚಂದಾ ರೇ ಚಂದಾ’ ಹಾಡು ಮಧ್ಯದಲ್ಲಿ ಒಮ್ಮೆಲೆ ಹಿಂದಿಗೆ ಜಿಗಿಯುತ್ತಿತ್ತು. ಚಿತ್ರಗೀತೆಯನ್ನು ಹಾಡುತ್ತಲೇ ನಡುವಲ್ಲಿ ಗಜಲ್‌ನ ತೆಳು ಘಮಲನ್ನು ಬೀರುತ್ತಿದ್ದರು. ಜತೆಗೆ ಹಿಂದೂಸ್ತಾನಿ ಸಂಗೀತ ಶೈಲಿಯ ಗಂಧವೂ ಸುಳಿಯುತ್ತಿತ್ತು. ತಬಲಾದೊಟ್ಟಿಗೇ ರಿದಂ ಪ್ಯಾಡ್‌ ಕೂಡ ಧುಮುಗುಡುತ್ತಿತ್ತು. ಹಾರ್‍ಮೋನಿಯಂ ಜತೆಯಲ್ಲಿಯೇ ಗಿಟಾರ್‌ ಮತ್ತು ಸ್ಯಾಕ್ಸೋಪೋನ್‌ಗಳು ಮೇಳೈಸುತ್ತಿದ್ದವು.

ಹೀಗೆ ಹಲವು ಪ್ರಕಾರಗಳ ಸೇರಿಸಿ ಹೊಸತನ ಹೊಳೆ ಹರಿಸುವ ಹರಿಹರನ್‌ ಇಂಗಿತ ಸ್ಪಷ್ಟವಾಗಿ ವ್ಯಕ್ತವಾಗಿದ್ದು ತಮ್ಮ ಮಗ ಅಕ್ಷಯ್‌ ಜತೆ ಸೇರಿ ಹಾಡಿದ ‘ಕೃಷ್ಣಾ ನೀ ಬೇಗನೆ ಬಾರೋ’ ಹಾಡಿನಲ್ಲಿ. ಇದು ಹೇಳಿ ಕೇಳಿ ಭಕ್ತಿಗೀತೆ. ಆದರೆ ಇದನ್ನು ಹಿಂದೂಸ್ತಾನಿ ಸಂಗೀತ, ಪಾಶ್ಚಾತ್ಯ ಸಂಗೀತಗಳೆರಡನ್ನೂ ಜೋಡಿಸಿ ಈ ಗಾಯನವನ್ನು ಪ್ರಸ್ತುತಪಡಿಸಿದ ರೀತಿ ಚೆನ್ನಾಗಿತ್ತು.

ರಾತ್ರಿ ಏರುತ್ತಿದ್ದಂತೆಯೇ ಪ್ರೇಕ್ಷಕರ ಉಮೇದಿಯೂ ಏರುತ್ತಿತ್ತು. ವೇದಿಕೆಯ ಮುಂಭಾಗದಲ್ಲಿ ಕೆಲವು ಜನರು ಮೈಮರೆತು ಹೆಜ್ಜೆ ಹಾಕುತ್ತಿದ್ದರೆ, ಕುರ್ಚಿಗಳ ನಡುವೆಯೇ ನಿಂತು ನೃತ್ಯಸ್ಪಂದನ ನೀಡುವವರ ಸಂಖ್ಯೆಯೇನೂ ಕಮ್ಮಿಯಿರಲಿಲ್ಲ.
ಹಾಡಿನ ನಡುವೆಯೇ ನಡೆದ ಕಿರು ವಾದ್ಯಗೋಷ್ಠಿಯೂ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿತು.

Write A Comment