ಕರ್ನಾಟಕ

ಬಳ್ಳಾರಿ ಟು ಬ್ರಿಟನ್: ಹಳ್ಳಿ ಹೈದನ ಫಾರಿನ್ ಟೂರ್

Pinterest LinkedIn Tumblr

ss1

ಬಳ್ಳಾರಿ ಜಿಲ್ಲೆಯ ಸಂಡೂರಿನ ರೈತ ಮುಖಂಡ ಲಕ್ಷ್ಮಣಕುಮಾರ್ ನಾಯ್ಡು ಬ್ರಿಟಿಷ್-ಸೌತ್ ಇಂಡಿಯಾ ಕೌನ್ಸಿಲ್ ಆಫ್ ಕಾಮರ್ಸ್ ಸಂಸ್ಥೆ ಆಯೋಜಿಸಿದ್ದ ‘ಯುಕೆ-ಕರ್ನಾಟಕ ಬಿಸಿನೆಸ್ ಮೀಟ್ 2014’ನಲ್ಲಿ ಪಾಲ್ಗೊಂಡು ಬ್ರಿಟನ್‌ ಪಾರ್ಲಿಮೆಂಟ್‌ನಲ್ಲಿ ನಮ್ಮ ನೆಲ, ನಮ್ಮ ಜಲ, ನಮ್ಮ ಕೃಷಿಯ ಬಗ್ಗೆ ಕನ್ನಡದಲ್ಲಿಯೇ ಮಾತನಾಡಿ ಕರ್ನಾಟಕವನ್ನು ಪ್ರತಿನಿಧಿಸಿದ ಬಗೆ ಅಚ್ಚರಿ ಮೂಡಿಸುವಂಥದ್ದು. ಅವರ ಅನುಭವ ಕಥನವನ್ನು ಅವರ ಮಾತಿನಲ್ಲಿಯೇ ಕೇಳಿ…

ನಮ್ಮೂರು ಸಂಡೂರು. ಓದಿ ಬೆಳೆದಿದ್ದೆಲ್ಲ ಅಲ್ಲಿಯೇ. ಕನ್ನಡ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. ಬಿತ್ತುವ, ಹರಗುವ ಕೆಲಸವೆಂದರೆ ಪ್ರೀತಿ. ಅಪ್ಪನ ಕಾಲದ ನಂತರ ರೈತ ಮುಖಂಡನ ಪಟ್ಟ ಬೇಡವೆಂದರೂ ಹಿಂದೆ ಬಂದಿತ್ತು. ರೈತ ಚಳುವಳಿ, ಹೋರಾಟ ಅಂತೆಲ್ಲ ಹೆಚ್ಚೆಂದರೆ ಬೆಂಗಳೂರಿನವರೆಗೂ ಓಡಾಡಿದ್ದೆ. ಆದರೆ ಇದ್ದಕ್ಕಿದ್ದಂತೆ ‘ಬ್ರಿಟನ್’ ಅನ್ನೋ ಕಾಣದ ಊರಿಂದ  ಆಹ್ವಾನ ಬಂದರೆ ಹೇಗಾಗಬಾರದು! ಹಾಗೇ ಆಗಿತ್ತು ಆ ದಿನ.

‘ಯುಕೆ-ಕರ್ನಾಟಕ ಬಿಸಿನೆಸ್ ಮೀಟ್ 2014’ ಕಾರ್ಯಕ್ರಮದಲ್ಲಿ ನಮ್ಮ ದೇಶದ, ಅದರಲ್ಲೂ ಕರ್ನಾಟಕದ ಕೃಷಿ ಪದ್ಧತಿ, ಇಲ್ಲಿನ ಸಮಸ್ಯೆ–ಸವಾಲುಗಳ ಬಗ್ಗೆ ಮಾತನಾಡಬೇಕು ಎಂದು ಹೇಳಿದಾಗ ಕ್ಷಣ ದಿಗಿಲಾಯಿತು. ಇಲ್ಲಿ ನಮ್ಮವೇ ಆದ ಮೂಟೆ ಮೂಟೆ ಸಮಸ್ಯೆಗಳಿವೆ ನಿಜ. ಅವುಗಳ ಬಗ್ಗೆ ಗಂಟೆಗಟ್ಟಲೇ ಮಾತನಾಡಬಹುದು. ಆದರೆ ಬ್ರಿಟನ್‌ನಲ್ಲಿ…!

ಕೂಡಲೇ ನೆನಪಾಗಿದ್ದು ಗೆಳೆಯ ಮಂಜುನಾಥ. ಅವನಿಗೆ ಫೋನ್ ಮಾಡಿ ಈ ಬಗ್ಗೆ ಹೇಳಿದೆ. ಏನೂ ಯೋಚನೆ ಮಾಡಬೇಡ, ಜೊತೆಗೆ ನಾನಿರುತ್ತೇನೆ. ಒಪ್ಪಿಕೊಂಡು ಬಂದು ಬಿಡು ಎಂದ. ನನಗೆ ಭೀಮ ಬಲ ಬಂದಂತಾಯಿತು.

ಅವರೂ ಒಳ್ಳೆಯವರೇ…
ಅಂದಹಾಗೆ ನಮಗೆಲ್ಲ ಬ್ರಿಟಿಷರೆಂದರೆ ಏನೋ ತಾತ್ಸಾರ. ಅವರ ಸಂಸ್ಕೃತಿ, ರೀತಿ ರಿವಾಜುಗಳ ಬಗ್ಗೆ ನಮಗೆ ಅನುಮಾನ. ಆದರೆ ಅಲ್ಲಿನ ಜನ ತುಂಬ ಒಳ್ಳೆಯವರು. ಆ ಕಾಲಕ್ಕೆ ನಮ್ಮ ತುತ್ತನ್ನು ಕಿತ್ತುಕೊಂಡವರು, ನಮ್ಮ ನೆಲದಲ್ಲೇ ನಮ್ಮನ್ನಾಳಿ ಹೋದರು ಎನ್ನುವ ಸಿಟ್ಟನ್ನು ಬದಿಗಿಟ್ಟು ನೋಡಿದರೆ ಈಗಲೂ ಅವರಿಂದ ಕಲಿಯಬೇಕಾದ್ದು ಬಹಳಷ್ಟಿದೆ.

ನಾವು ಬಳ್ಳಾರಿಯಿಂದ ಬೆಂಗ್ಳೂರಿಗೆ ಬರಬೇಕಾದರೆ ಹೊಸ ವೇಷ ತೊಟ್ಟು ಬರಬೇಕು. ಕೃಷಿಕನಂತೆ ಇಲ್ಲಿ ಬಂದರೆ ನಮ್ಮನ್ನು ನೋಡಿ ಕಿಸಕ್ ಅಂದವರೂ ಇದ್ದಾರೆ. ಆದರೆ ಅಲ್ಲಿ ಯಾರು ಹೇಗೇ ಇದ್ದರೂ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ನಮ್ಮ ಸಂಸ್ಕೃತಿ ಎಂದು ಸುಮ್ಮನಾಗುತ್ತಾರೆ.

ss2

ನನಗೆ ಇಂಗ್ಲೀಷು ಗೊತ್ತಿಲ್ಲ. ಕನ್ನಡದಲ್ಲೇ ಮಾತನಾಡುತ್ತೇನೆ ಎಂದೆ ಅಳುಕಿನಿಂದ. ಅವರಲ್ಲಿ ಯಾರೂ ಈ ಬಗ್ಗೆ ಅಚ್ಚರಿ ಅಥವಾ ಅಸಹ್ಯ ಭಾವನೆಯನ್ನು ವ್ಯಕ್ತಪಡಿಸಲಿಲ್ಲ. ದುಭಾಷಿಯೊಬ್ಬರು ನನ್ನ ಮಾತನ್ನು ಅತ್ಯಂತ ಪ್ರೀತಿಯಿಂದ, ಯಥಾವತ್ತು ಇಂಗ್ಲಿಷ್‌ಗೆ ಭಾಷಾಂತರ ಮಾಡಿ ಹೇಳುತ್ತಿದ್ದರು. ಸಾಲದಿಂದ ಬೇಸತ್ತು ರೈತರು ನಮ್ಮಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವ ಸಂಗತಿ ಕೇಳಿ ಅವರು ಬಹಳ ವಿಷಾದ ವ್ಯಕ್ತಪಡಿಸಿದರು. ತೀರಿಸಲು ಸಾಧ್ಯವಾಗದಷ್ಟು ಸಾಲ ಮಾಡಿಕೊಳ್ಳಬೇಕೆ? ಸರ್ಕಾರ ನಮ್ಮ ಸಾಲ ತೀರಿಸಲಿ ಎಂದು ಬಯಸುವುದು ಎಷ್ಟು ಸರಿ? ಎನ್ನುವುದು ಅವರ ಪ್ರಶ್ನೆ.

ಬ್ರಿಟಿಷರ ಕೃಷಿ ಏನೂ ಕಡಿಮೆ ಇಲ್ಲ
ಅಲ್ಲಿನ ರೈತರು ನಮ್ಮ ಸಾಫ್ಟ್‌ವೇರ್ ದಿಗ್ಗಜರಿಗಿಂತ ಕಡಿಮೆ ಏನಿಲ್ಲ. ಶಿಸ್ತು, ಸಂಯಮ, ಬದ್ಧತೆ, ತಂತ್ರಜ್ಞಾನ, ಸಮಯ ಪ್ರಜ್ಞೆ, ಪ್ರೀತಿ… ಇದೆಲ್ಲದರ ಸಮ್ಮಿಳಿತವೇ ಅಲ್ಲಿನ ಕೃಷಿ ಪದ್ಧತಿ. ಅಲ್ಲಿ ಮನುಷ್ಯರಿಗಿಂತ ಮಷೀನುಗಳೇ ಹೆಚ್ಚು. ಕಾರ್ಮಿಕರ ಸಂಖ್ಯೆ ತೀರಾ ಕಡಿಮೆ. ಕಾರ್ಮಿಕರು ಸಿಗುತ್ತಿಲ್ಲ ಎಂದು ಅವರು ನಮ್ಮಂತೆ ಗೊಳೊ ಎಂದು ಅಳುವುದಿಲ್ಲ. ಮಷೀನುಗಳ ಮೂಲಕ ಕೆಲಸ ಮಾಡಿಕೊಂಡು ಅತ್ಯುತ್ತಮ ಫಸಲು ತೆಗೆಯುತ್ತಾರೆ. ನಮ್ಮಲ್ಲಿ ನಾಲ್ಕು ಎಕರೆ ಜಮೀನಿಗೆ ಹತ್ತಾರು ಜನ ದುಡಿಯುತ್ತಾರೆ. ಅವರಲ್ಲಿ ಸಾವಿರಾರು ಎಕರೆ ಭೂಮಿಗೆ ನಾಲ್ಕೇ ಜನ ದುಡಿಯುತ್ತಾರೆ. ಅವರೂ ಕಷ್ಟ ಪಡುತ್ತಾರೆ. ಆ ಕಷ್ಟಕ್ಕೆ ತಕ್ಕ ಪ್ರತಿಫಲ ತೆಗೆಯುವುದೂ ಅವರಿಗೆ ಗೊತ್ತಿದೆ. ಮಳೆ ಬಾರದೇ ದೇವರು ಅನ್ಯಾಯ ಮಾಡಿದ, ಸಬ್ಸಿಡಿ ಕೊಡದೇ, ಸಾಲ ಮನ್ನಾ ಮಾಡದೇ ಸರ್ಕಾರ ಮೋಸ ಮಾಡಿತು ಎಂದು ಅವರೇನೂ ಹಲುಬುವುದಿಲ್ಲ. ತಮ್ಮ ಯಶಸ್ಸಿಗೂ, ಸೋಲಿಗೂ ತಾವೇ ಕಾರಣ ಎನ್ನುವುದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ.

ಅಲ್ಲಿನ ಬೆಳೆ ಭಿನ್ನ
ಬ್ರಿಟನ್, ಲಂಡನ್ ಸೇರಿದಂತೆ ಅಲ್ಲಿನ ಪರಿಸರವೇ ಅಲ್ಲಿನ ಕೃಷಿಕರಿಗೊಂದು ವರದಾನ ಎನ್ನಬಹುದು. ಬಹುತೇಕ ವರ್ಷವಿಡೀ ಜಿನುಗುವ ಹನಿ ಅವರ ಭೂಮಿಗೆ ಬರದ ಛಾಯೆ ಬೀಳಗೊಡುವುದಿಲ್ಲ. ಅಲ್ಲಿನ ಪ್ರಮುಖ ಬೆಳೆ ಗೋಧಿ. ಶೇ 50ರಷ್ಟು ಭೂಮಿಯಲ್ಲಿ ಇದನ್ನೇ ಬೆಳೆಯಲಾಗುತ್ತದೆ. ಉಳಿದಂತೆ ಗೋಧಿ ಮತ್ತು ಬಾರ್ಲಿ, ಓಟ್ಸ್ ಮತ್ತು ಪೊಟ್ಯಾಟೊ ಪ್ರಮುಖ ಬೆಳೆಗಳು. ನಮ್ಮಂತೆ ಎಲ್ಲಾ ರೈತರು ಒಂದೇ ಸಮಯಕ್ಕೆ ಒಂದೇ ಬೆಳೆ ಹಾಕಿ, ಬೆಲೆ ಭೂಮಿಗೆ ಕುಸಿಯಿತು ಎಂದು ರೋಧಿಸುವುದಿಲ್ಲ. ಅಲ್ಲಿ ಕೃಷಿಯನ್ನು ಪ್ರತಿಯೊಬ್ಬರೂ ಸೂಕ್ತ ರೀತಿಯಲ್ಲಿ ಅಧ್ಯಯನ ಮಾಡಿ, ಯಾರು ಏನು ಬೆಳೆಯುತ್ತಿದ್ದಾರೆ ಎನ್ನುವುದನ್ನು ಗಮನಿಸಿ, ಒಬ್ಬರು ಒಂದೊಂದು ರೀತಿಯ ಬೆಳೆಗೆ ಆದ್ಯತೆ ನೀಡುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಸಮರ ಉಂಟಾಗುವುದಿಲ್ಲ.

‘ಕಿಸಾನ್ ಹಬ್’ ಅನ್ನೊ ರೈತ ಸಂಘ
ಅಲ್ಲಿನ ರೈತ ಸಂಘಗಳು ನಮ್ಮ ಸಂಘಗಳಿಗಿಂತ ಹೆಚ್ಚು ಚುರುಕಾಗಿ, ವೈಜ್ಞಾನಿಕವಾಗಿ ಕಾರ್ಯನಿರ್ವಹಿಸುತ್ತವೆ. ಅಂಥವುಗಳಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಕಿಸಾನ್ ಹಬ್ ಕೂಡ ಒಂದು. ಅದು ಅಲ್ಲಿನ ರೈತರಿಗೆ ಯಾವ ಕಾಲಕ್ಕೆ, ಯಾವ ಬೆಳೆ ಉತ್ತಮ, ಎಷ್ಟು ಗೊಬ್ಬರ, ಎಷ್ಟು ನೀರನ್ನು ಹಾಕಬೇಕು, ಯಾವ ಸಮಯದಲ್ಲಿ ಬೆಳೆ ಕಠಾವು ಮಾಡಬೇಕು ಎನ್ನುವುದನ್ನೆಲ್ಲ ಅತ್ಯಂತ ಕರಾರುವಕ್ಕಾಗಿ ತಿಳಿಸುತ್ತದೆ. ಅಲ್ಲಿನ ಹವಾಮಾನ ಇಲಾಖೆಯ ಮುನ್ಸೂಚನೆಯೂ ಅಷ್ಟೇ ನಿಖರವಾಗಿರುತ್ತದೆ. ನಾಲ್ಕು ಗಂಟೆಗೆ ತುಂತುರು ಮಳೆ ಎಂದರೆ ಸರಿಯಾಗಿ ನಾಲ್ಕು ಗಂಟೆಯೇ.

ಕಿಸಾನ್ ಹಬ್‌ನ ಕೆಲವು ಯೋಜನೆಗಳಾದರೂ ನಮ್ಮ ರೈತರಿಗೆ ಸಿಗಬೇಕು ಎನ್ನುವ ಕಳಕಳಿ ನನ್ನದು, ಹೀಗಾಗಿ ಅದರ ಮುಖ್ಯಸ್ಥರಾದ ಸಚಿನ್ ಶಿಂಧೆ ಅವರನ್ನು ಕರ್ನಾಟಕಕ್ಕೆ ಬಂದು ನಮ್ಮ ರೈತರನ್ನು ಭೇಟಿ ಮಾಡಿ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದೇನೆ.

ಅಲ್ಲಿಯೂ ನಮ್ಮೂರ ಊಟ ಉಂಟು
‘ಬನ್ಸೂರಿ’ ಅಂತ ಒಂದು ಹೋಟೆಲ್ ಸಿಕ್ಕು ಜೀವ ಉಳಿಸಿತು. ಪಿಜ್ಜಾ ಬರ್ಗರ್ ಬಾಯಿಗೆ ರುಚಿ. ಒಂದಿನ ತಿನ್ನಬಹುದು. ಆದರೆ ಅಲ್ಲಿದ್ದ ಇಪ್ಪತ್ತೂ ದಿನ ಅದನ್ನೇ ತಿನ್ನು ಎಂದಿದ್ದರೆ ನಾನು ಆಸ್ಪತ್ರೆ ಸೇರುತ್ತಿದ್ದೆ. ಪುಣ್ಯಕ್ಕೆ ಬನ್ಸೂರಿ ಎನ್ನುವ ನಮ್ಮವರದೇ ಆದ ಹೋಟೆಲ್ ಸಿಕ್ಕಿತು. ಇಡ್ಲಿ, ದೋಸೆ, ಚಪಾತಿ, ಅನ್ನದ ಊಟ ತೃಪ್ತಿ ಕೊಟ್ಟಿತು.
***

ಬ್ರಿಟಿಷ್-ಸೌತ್ ಇಂಡಿಯಾ ಕೌನ್ಸಿಲ್ ಆಫ್ ಕಾಮರ್ಸ್ ಸಂಸ್ಥೆಯು ಪ್ರತಿವರ್ಷ ಒಬ್ಬ ರೈತನನ್ನು ಕರೆಸಿ ಉಭಯ ರಾಷ್ಟ್ರಗಳ ಕೃಷಿ ಪದ್ಧತಿ, ಸವಾಲು, ಸಾಧನೆ, ಸಮಸ್ಯೆಗಳ ಕುರಿತು ಅಧ್ಯಯನ, ಚರ್ಚೆ, ಸಂವಾದಗಳನ್ನು ಏರ್ಪಡಿಸುತ್ತದೆ. ಈ ಬಾರಿಯ ಆಹ್ವಾನ ಬಳ್ಳಾರಿಯ ರೈತನನ್ನು ಹುಡುಕಿಕೊಂಡು ಬಂದಿತ್ತು.

‘ಅರ್ಧ ರಾತ್ರಿಯಲ್ಲಿ ರೈತನೊಬ್ಬ ಬಂದು ಬಾಗಿಲು ತಟ್ಟಿದರೂ ಎದ್ದು ಅವನ ಕಷ್ಟ–ಸುಖ ಆಲಿಸು, ನಿನ್ನಿಂದ ಸಾಧ್ಯವಾದ ಸಹಾಯ ಮಾಡು’ ಎಂದು ಅಪ್ಪ ಸಾಯಿನಾಥ ಹೇಳಿದ ಮಾತು ಇಂದಿಗೂ ನೆನಪಿದೆ ಎನ್ನುವ ಲಕ್ಷ್ಮಣಕುಮಾರ್ ನಾಯ್ಡು, ಬಾಲ್ಯದಿಂದಲೂ ರೈತರ ಬಗ್ಗೆ ಕಳಕಳಿ, ಅವರ ಸಮಸ್ಯೆಗೆ ತಕ್ಷಣವೇ ಸ್ಪಂದಿಸುವ ಗುಣವನ್ನು ತಮ್ಮ ತಂದೆಯಿಂದ ಬಳುವಳಿಯಾಗಿ ಪಡೆದುಕೊಂಡವರು. ರೈತ ಪ್ರತಿನಿಧಿಯಾಗಿ ಇಲ್ಲಿನ ಸ್ಥಿತಿ–ಗತಿಯನ್ನು ಬ್ರಿಟನ್‌ವರೆಗೂ ಹರವಿ ಬಂದ ಖುಷಿ ಅವರಲ್ಲಿ ಇನ್ನಷ್ಟು ಚೈತನ್ಯ ತುಂಬಿದೆ. (ವೈಜ್ಞಾನಿಕ  ಕೃಷಿ ಪದ್ಧತಿಯ ಬಗ್ಗೆ ಮಾಹಿತಿಗೆ: 95906 25619 ).

Write A Comment