ಕರ್ನಾಟಕ

ಗೋಲ್‌ ಗುಂಬಜ್: ಗುಂಬಜ್‌ ಮೇಲಿಂದ ಬಿದ್ದ ಸಿನಿಮಾ

Pinterest LinkedIn Tumblr

ಚಿತ್ರ: ಗೋಲ್‌ ಗುಂಬಜ್
ತಾರಾಗಣ: ಧನುಷ್‌, ಪೂರ್ಣಿಮಾ, ನಕುಲ್, ರಾಜು, ವೆಂಕಟೇಶಪ್ಪ, ಅನಿಲ್ ಮತ್ತಿತರರು.
ನಿರ್ದೇಶನ:  ಧನುಷ್‌
ನಿರ್ಮಾಪಕರು:  ಮುತ್ತುರಾಜ್

pvec06Dec14Goal gumbaj

ಈ ಚಿತ್ರದ ಶೀರ್ಷಿಕೆಗೂ ಕಥೆಗೂ ಸಂಬಂಧವಿಲ್ಲ ಎಂಬುದು ಮೊದಲು ಸ್ಪಷ್ಟಪಡಿಸಬೇಕಾದ ಸಂಗತಿ. ಚಿತ್ರದೊಳಗಿನ ಕಥೆ, ದೃಶ್ಯಗಳ ಜೋಡಣೆ, ಅಭಿನಯ, ಸಂಗೀತ, ತಾಂತ್ರಿಕ ಕಾರ್ಯಗಳ ನಡುವೆಯೂ ಸಂಬಂಧವಿಲ್ಲ ಎನ್ನುವುದು ಎರಡನೇ ಸಂಗತಿ.

ಸಹನೀಯ ಸಿನಿಮಾ ಸೃಷ್ಟಿಯಾಗಲು ಅಗತ್ಯವಿರುವ ಅಂಶಗಳಿಲ್ಲಿ ಗೈರು. ಮರಳು, ಮಣ್ಣು, ಇಟ್ಟಿಗೆ, ಕಲ್ಲು ಇತ್ಯಾದಿಗಳು ಇಲ್ಲದೆಯೂ ‘ಗೋಲ್‌ ಗುಂಬಜ್‌’ ನಿರ್ಮಿಸಿದ್ದಾರೆ ಧನುಷ್‌. ಆದರೆ ಅದರ ಗುಣಮಟ್ಟವನ್ನು ಅಳೆಯುವಷ್ಟು ಮಾನಸಿಕ ಸ್ಥೈರ್ಯ ಸಹೃದಯ ಪ್ರೇಕ್ಷಕರಲ್ಲಿ ಇರಬೇಕಷ್ಟೆ. ಈ ಎಲ್ಲಾ ‘ಇಲ್ಲ’ಗಳ ನಡುವೆಯೂ ಎರಡು ಗಮನಾರ್ಹ ಸಂಗತಿಗಳು ‘ಗೋಲ್‌ ಗುಂಬಜ್‌’ನಲ್ಲಿದೆ.

ಒಂದನೆಯದು ಅಸಂಬದ್ಧ ಕಥನವಾದರೂ ಸಾಮಾಜಿಕ ಕಳಕಳಿಯ ಅಂಶವೊಂದನ್ನು ಒಳಗೊಂಡಿರುವುದು. ಮತ್ತೊಂದು ಅಪಕ್ವತೆ, ಅಪ್ರಬುದ್ಧತೆ ಪ್ರತಿ ಸನ್ನಿವೇಶದಲ್ಲಿ ಕಾಣಿಸಿದರೂ ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಗೀತ ನಿರ್ದೇಶನ, ನಿರ್ದೇಶನದ ಜತೆಗೆ ನಾಯಕನ ಪಾತ್ರವನ್ನೂ ನಿಭಾಯಿಸಿರುವ ಧನುಷ್‌ ಅವರ ಎದೆಗಾರಿಕೆ.

‘ಸಪ್ತಸ್ವರಗಳ ಪ್ರೀತಿಯ ಪ್ರತಿಧ್ವನಿ’ ಎನ್ನುವುದು ‘ಗೋಲ್‌ ಗುಂಬಜ್‌’ನ ಅಡಿ ಶೀರ್ಷಿಕೆ. ಗೋಳ ಗುಮ್ಮಟದೊಳಗೆ ಸದ್ದು ಪ್ರತಿಧ್ವನಿಸುವಂತೆ ಇಲ್ಲಿ ನಾಯಕನ ಕಿರುಚಾಟ, ನಾಯಕಿಯ ಅಳು ಚಿತ್ರದುದ್ದಕ್ಕೂ ಪ್ರತಿಧ್ವನಿಸುತ್ತಲೇ ಇರುತ್ತದೆ. ಸಕಲ ಹೊಣೆಗಾರಿಕೆಗಳನ್ನು ನಿರ್ವಹಿಸಿರುವ ಧನುಷ್‌ ಅವರಲ್ಲಿ ಚಿತ್ರದುದ್ದಕ್ಕೂ ಪ್ರೇಮಿಯಾಗಿ, ತ್ಯಾಗಿಯಾಗಿ ಪ್ರೇಕ್ಷಕನನ್ನು ಭಾವುಕವಾಗಿ ಸೆಳೆಯುವ ಹಪಹಪಿ ವ್ಯಕ್ತವಾಗುತ್ತದೆ. ಸ್ವಪ್ರಶಂಸೆಯ ತುಡಿತ ಸಂಭಾಷಣೆಗಳಲ್ಲಿ ಇಣುಕುತ್ತದೆ. ‘ಮದ್ಯಪಾನ ಮತ್ತು ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂಬ ಎಚ್ಚರಿಕೆಯ ಬರಹ ಕಾಣದ ಸನ್ನಿವೇಶ ಅಪರೂಪ.

ನೋವಿನ ಮರೆವಿಗೆ ಕುಡಿತವೇ ಮದ್ದು ಎಂಬ ಹಳೆಯ ತತ್ವ ಅವರನ್ನು ತೀವ್ರವಾಗಿ ಕಾಡಿದಂತಿದೆ. ‘ಮಾರಕ ರೋಗದಿಂದ ದೂರವಿರಿ’ ಎಂಬ ಒಳ್ಳೆಯ ಸಂದೇಶವನ್ನು ನೀಡುವ ಉದ್ದೇಶ ಅಂತ್ಯದಲ್ಲಿ ಕಂಡರೂ, ಕಥನವನ್ನು ಕಟ್ಟಿಕೊಟ್ಟಿರುವ ಬಗೆ ಸಿನಿಮಾ ರಸಿಕನ ಅಭಿರುಚಿಗೇ ಮಾರಕವಾಗುವಂತಿದೆ!

ಕಿರುತೆರೆ ಮೂಲಕ ಜನಪ್ರಿಯತೆ ಗಳಿಸಿದ ನಿರೂಪಕ, ಪ್ರೀತಿಗಾಗಿ ವೇಷವನ್ನೂ ಬದಲಿಸಬಲ್ಲ ಪ್ರೇಮಿ. ಮದುವೆಗೆ ಮುನ್ನ ಅಚಾನಕ್ಕಾಗಿ ನಡೆಯುವ ವೇಶ್ಯೆಯ ಸಂಗ ಆತನ ಬದುಕನ್ನು ಬದಲಿಸುತ್ತದೆ. ತನಗೆ ಮಾರಕ ಕಾಯಿಲೆ ಬಂದಿದೆ ಎಂದು ಮದುವೆಯಾದ ರಾತ್ರಿಯೇ ತಿಳಿಯುವ ಆತ ವಿಷಯ ಮುಚ್ಚಿಟ್ಟು ಪತ್ನಿಯಿಂದ ದೂರವಿರಲು ಪ್ರಯತ್ನಿಸುತ್ತಾನೆ. ಆಕೆ ಸಹನಶೀಲೆ. ಆತ ಕೊಡುವ ಕಷ್ಟಗಳನ್ನೆಲ್ಲಾ ಸಹಿಸಿಕೊಳ್ಳುವಾಕೆ. ಕೊನೆಗೆ ಆಕೆಯಿಂದ ದೂರವಿದ್ದೇ ನಾಯಕ ಸಾಯುತ್ತಾನೆ. ಇದು ಚಿತ್ರದ ಒಟ್ಟಾರೆ ಕಥೆ.

ಅಭಿನಯದಲ್ಲಿಯೂ ಧನುಷ್‌ ನಿರಾಸೆ ಮೂಡಿಸು­ತ್ತಾರೆ. ಕುಡಿಯುವುದೊಂದೇ ಅವರ ಅಭಿನಯ. ನಾಯಕಿ ಪೂರ್ಣಿಮಾ ಭಾವುಕ ಸನ್ನಿವೇಶಗಳಲ್ಲಿ ಗಮನ ಸೆಳೆಯುತ್ತಾರೆ.

Write A Comment