ಮನೋರಂಜನೆ

ಐದನೇ  ದಿನಕ್ಕೆ ಕಾಲಿ­ಟ್ಟ 7ನೇ ಅಂತರರಾಷ್ಟ್ರೀಯ ಸಿನಿಮೋತ್ಸವ: ಸಿನಿಮಾ ತಂತ್ರಜ್ಞರಿಗೆ ‘ಉತ್ಸವ’ದ ಬೆಳಕು

Pinterest LinkedIn Tumblr

harivu

ಬೆಂಗಳೂರು: ನಗರದಲ್ಲಿ ನಡೆಯು­ತ್ತಿರುವ ಏಳನೇ ಅಂತರರಾಷ್ಟ್ರೀಯ ಸಿನಿಮೋತ್ಸವ ಐದನೇ  ದಿನಕ್ಕೆ ಕಾಲಿ­ಟ್ಟಿದ್ದು ಉತ್ತಮ ಸ್ಪಂದನ ವ್ಯಕ್ತವಾಗಿದೆ. ಸಿನಿಮೋತ್ಸವಗಳು ‘ಪ್ರಯೋಗಗಳ ಪ್ರದರ್ಶನ ಪೆಟ್ಟಿಗೆ’. ಗಲ್ಲಾ­ಪೆಟ್ಟಿಗೆ­ಯಲ್ಲಿ ಗೆದ್ದ ಚಿತ್ರಗಳು ಪ್ರದ­ರ್ಶನ­ವಾಗುವು­ದಕ್ಕಿಂತ ಪ್ರಮುಖವಾಗಿ ಆಯಾ ದೇಶ­ಗಳಲ್ಲಾದ ಪ್ರಯೋಗಾತ್ಮಕ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

ಕಥನ ನಿರ್ವಹ­ಣೆಯ ದೃಷ್ಟಿ­ಯಲ್ಲಿ ಹೊಸ ಜಗತ್ತನ್ನು ತೋರಿ­ಸುವ ಸಿನಿಮಾಗಳು ಇಲ್ಲಿ ಪ್ರದರ್ಶನ­ವಾಗು­ವು­ದರಿಂದ ಸ್ಥಳೀಯ ಚಿತ್ರರಂಗದ ಬೆಳವಣಿಗೆಗೆ ಪೂರಕವಾಗುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದರೆ ಬೆಂಗಳೂರು ಸಿನಿಮೋತ್ಸವ ಆಶಾ­ದಾಯಕ­ವಾಗಿ ಕಾಣಿಸುತ್ತಿದೆ. ಚಿತ್ರರಂಗ­ದಲ್ಲಿ ಭವಿಷ್ಯ ಹುಡುಕುತ್ತಿರುವ ಯುವ ತಂತ್ರಜ್ಞರು, ಸಿನಿಮಾ ನಿರ್ಮಾತೃಗಳು, ವಿದ್ಯಾರ್ಥಿಗಳು, ಸದಭಿರುಚಿಯ ಸಿನಿಮಾಸಕ್ತರು, ‘ಉತ್ಸವ’ಕ್ಕೆ ಹೆಚ್ಚು ಸ್ಪಂದಿಸುತ್ತಿದ್ದಾರೆ.

ಪ್ರಮುಖವಾಗಿ ಇರಾನ್‌, ಕೊರಿಯಾ ಚಿತ್ರಗಳ ಮೇಲೆ ಯುವ ತಂತ್ರಜ್ಞರು ಗಮನ ಕೇಂದ್ರೀ­ಕರಿಸಿ­ದ್ದಾರೆ. ಸಿನಿಮೋತ್ಸವದ 11 ಪರದೆ­ಗಳಲ್ಲಿ ಒಟ್ಟು 2,400 ಮಂದಿಗೆ ಪಾಲ್ಗೊಳ್ಳಲು ಅವಕಾಶವಿದೆ. ಕಳೆದ ಬಾರಿ 2,200 ಪಾಸುಗಳನ್ನು ವಿತರಿಸ­ಲಾಗಿತ್ತು. ಈ ಬಾರಿ ಪಾಸುಗಳ ವಿತರಣೆ­ಯನ್ನು ಮುಂಚಿತವಾಗಿ ಆರಂಭಿಸಿದ್ದ­ರಿಂದ ಗರಿಷ್ಠ ಮಿತಿಯನ್ನು ಬಹುಬೇಗ ಮುಟ್ಟಲಾಗಿದೆ. ಉತ್ಸವಕ್ಕೆ ಚಾಲನೆ ದೊರೆತ ನಂತರವೂ ಪಾಸುಗಳಿಗೆ ಬೇಡಿಕೆ ವ್ಯಕ್ತವಾಗಿದೆ.

ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಆನ್‌ಲೈನ್‌ನಲ್ಲಿ ಹೆಚ್ಚು ಪಾಸುಗಳು ವಿತರಣೆಯಾಗಿವೆ. 1,100 ಪ್ರತಿನಿಧಿ­ಗಳು, 560 ವಿದ್ಯಾರ್ಥಿಗಳು ಹಾಗೂ ಸಿನಿಮಾರಂಗದವರಿಗೆಂದು 500 ಪಾಸು­ಗಳನ್ನು ಕೊಡಲಾಗಿದೆ. ಹಂಗೆರಿ, ಬಾಂಗ್ಲಾ, ಜರ್ಮನಿ ಸೇರಿದಂತೆ ವಿವಿಧ ದೇಶಗಳ 22 ಮಂದಿ ಅತಿಥಿಗಳು ಸಿನಿಮೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ. ಸಿನಿಮಾ ನಿರ್ಮಾಪಕರು, ನಿರ್ದೇಶ­ಕರು, ತೀರ್ಪುಗಾರರು ಸೇರಿದಂತೆ ಒಟ್ಟು 60 ಜನರು ಹೊರ ರಾಜ್ಯದಿಂದ ಪಾಲ್ಗೊಂಡಿ­ದ್ದಾರೆ.

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಸೇರಿದಂತೆ ಸಮಕಾಲೀನ ಸಮಸ್ಯೆಗಳನ್ನು ಪ್ರತಿ­ಬಿಂಬಿಸುವ ಜಾಗತಿಕ ಚಿತ್ರಗಳತ್ತ ಯುವ ಸಿನಿಮಾ ನಿರ್ಮಾತೃ­ಗಳು ಹೆಚ್ಚು ನೋಟ ಹರಿಸಿದ್ದು, ಈ ಚಿತ್ರ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಯೆ ವ್ಯಕ್ತವಾಗಿದೆ. ಬಹುಶಃ ಚಳಿಯ ಕಾರ­ಣಕ್ಕೆ ದಿನದ ಆರಂಭದ ಪ್ರದರ್ಶನ ಮತ್ತು ರಾತ್ರಿಯ ಪ್ರದರ್ಶನಗಳಿಗೆ ಜನಸಂದಣೆ ಕಡಿಮೆ ಇದೆ. ಉಳಿದಂತೆ ಮಧ್ಯಾಹ್ನ ಮತ್ತು ಸಂಜೆಯ ಪ್ರದರ್ಶನಗಳು ಸಂಘಟಕರ ನಿರೀಕ್ಷೆಯ ಮಟ್ಟದಲ್ಲಿದೆ.

ಸಿನಿಮೋತ್ಸವ­ದಲ್ಲಿ ಚಿತ್ರಗಳನ್ನು ನೋಡು­ವುದಷ್ಟೇ ಅಲ್ಲದೆ ಕಿರುಚಿತ್ರ ನಿರ್ಮಾಣ, ಆನ್‌ಲೈನ್‌ನಲ್ಲಿ ಕನ್ನಡ ಚಲನಚಿತ್ರಗಳಿಗೆ ವೇದಿಕೆ, ಲಿಂಗ ತಾರತಮ್ಯ, ಸಿನಿಮಾ ಛಾಯಾಗ್ರಹಣ, ಸಂಕಲನ ಹೀಗೆ ವಿವಿಧ ತಂತ್ರಜ್ಞಾನ ಸಂಬಂಧಿ ವಿಷಯಗಳ ಮೇಲೆ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಚರ್ಚೆ, ಸಂವಾದ ಹಾಗೂ ಕಾರ್ಯಾಗಾರಗಳು ನಡೆಯು­ತ್ತಿರು­ವುದು ಯುವ ಸಿನಿಮಾ ಮೋಹಿ­ಗಳಿಗೆ ಖುಷಿ ಮೂಡಿಸಿದೆ.
‘ಈಗಾಗಲೇ ಏಳು ಚಿತ್ರಗಳನ್ನು ನೋಡಿ­ದ್ದೇನೆ. ಎಲ್ಲವೂ ಉತ್ತಮ­ವಾಗಿವೆ.

ಮಹಿಳಾ ಶೋಷಣೆ, ಅದರ ವಿರುದ್ಧದ ಪ್ರತಿರೋಧ ತೋರುವ ದಕ್ಷಿಣ ಕೊರಿ­ಯಾದ ‘ಬಿಡೆವಿಲ್ಡ್‌’ ಚಿತ್ರದ ಕಥನ ನಿರೂ­ಪಣೆ ವಿಶಿಷ್ಟವಾಗಿ ಕಂಡಿತು. ಜಗತ್ತಿನ ಸಿನಿಮಾಗಳು ಒಂದೇ ಸೂರಿನಡಿ ನಮ್ಮ ತಂತ್ರಜ್ಞರಿಗೆ ಸಿಕ್ಕುವುದ­ರಿಂದ ಅವರ ಆಲೋಚನಾ ಕ್ರಮದ ಬೆಳವಣಿ­ಗೆಗೆ ನೆರವಾಗುತ್ತದೆ. ತಾಂತ್ರಿಕ ಅಂಶ, ಕಥೆಯ ನಿರೂಪಣೆ ಇತ್ಯಾದಿ ವಿಷಯ­ಗಳನ್ನು ನಮ್ಮ ಚಿತ್ರಗಳ ಜತೆ ತುಲನೆ ಮಾಡುವ ಜತೆಗೇ ನಾವು ಯಾವ ರೀತಿ ಹೊಸದಾಗಿ ಸಿನಿಮಾ­ಗಳ ಮೂಲಕ ಪ್ರತಿಕ್ರಿಯಿಸ-­ಬಹುದು ಎನ್ನುವುದನ್ನು ಸಿನಿಮೋತ್ಸವ ಕಟ್ಟಿಕೊಟ್ಟಿದೆ’ ಎನ್ನುತ್ತಾರೆ ಸಹ ನಿರ್ದೇಶಕ ಚಂದ್ರಶೇಖರ್.

‘ಯುವಕರೇ ಹೆಚ್ಚು; ವಿದೇಶಿಯರ ಮೆಚ್ಚುಗೆ’
ವಿಶೇಷವಾಗಿ ಯುವಕರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರದರ್ಶನಗೊಳ್ಳುತ್ತಿರುವ ಸಿನಿಮಾಗಳ ಗುಣಮಟ್ಟದ ಬಗ್ಗೆ ಅತಿಥಿಗಳಿಂದ ಮತ್ತು ಸಿನಿಮಾಸಕ್ತರಿಂದ ಮೆಚ್ಚುಗೆ ಬಂದಿದೆ. ಅಂತರರಾಷ್ಟ್ರೀಯ ಸಿನಿಮಾಗಳನ್ನು ನೋಡುವುದಷ್ಟೇ ಅಲ್ಲದೇ ಅಲ್ಲಿ ಯಾವ ರೀತಿ ಬೆಳವಣಿಗೆಗಳು ನಡೆಯುತ್ತಿವೆ? ಅದಕ್ಕೆ ನಾವು ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವ ದೃಷ್ಟಿಯಿಂದ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.

ಉತ್ಸವಕ್ಕೆ ವೆಚ್ಚ ಮಾಡಿರುವ ಹಣ ಅರ್ಥಪೂರ್ಣವಾಗಿ ಬಳಕೆಯಾಗುತ್ತಿದೆ. ಹೊಸತಲೆಮಾರಿನ ತಂತ್ರಜ್ಞರು ಸಿನಿಮೋತ್ಸವವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ವಿದೇಶಿ ಅತಿಥಿಗಳು ಕನ್ನಡ ಸಿನಿಮಾಗಳನ್ನು ಮೆಚ್ಚಿ ಮಾತನಾಡಿರುವುದು ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆ.
– ಎನ್.ಆರ್.ವಿಶುಕುಮಾರ್, ವಾರ್ತಾ ಇಲಾಖೆ ನಿರ್ದೇಶಕರು

Write A Comment