ಕರ್ನಾಟಕ

ಯಶವಂತಪುರ-ಜೈಪುರ್, ಬಿಕನೇರ್-ಯಶವಂತಪುರ ರೈಲುಗಳಿಗೆ ಚಾಲನೆ: ಬೆಂಗಳೂರು ನಗರಕ್ಕೆ ಸ್ಥಳೀಯ ರೈಲು ಅನುಷ್ಠಾನಕ್ಕೆ ಪ್ರಯತ್ನ; ಸಚಿವ ಅನಂತ್ ಕುಮಾರ್

Pinterest LinkedIn Tumblr

pvec08dec14hSWR-04

ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದಲ್ಲಿ ಭಾನುವಾರ ಯಶವಂತಪುರ-–ಜೈಪುರ (ಸಾಪ್ತಾಹಿಕ ಪ್ರೀಮಿಯಂ) ಹಾಗೂ ಯಶವಂತಪುರ-–ಬಿಕನೇರ್ (ವಾರದಲ್ಲಿ ಎರಡು ಬಾರಿ)ಗೆ ಚಾಲನೆ ನೀಡಲಾಯಿತು. ಯಶವಂತಪುರ- ಜೈಪುರ ಸಾಪ್ತಾಹಿಕ ಪ್ರೀಮಿಯಂ (ರೈಲು ಸಂಖ್ಯೆ 22695/ 22696): ಈ ರೈಲು- ವಾರಕ್ಕೊಮ್ಮೆ ಸಂಚರಿಸಲಿದೆ. ಗುರುವಾರ ಬೆಳಿಗ್ಗೆ 11.30ಕ್ಕೆ ಯಶವಂತಪುರದಿಂದ ಹೊರಟು ಶನಿವಾರ ಬೆಳಿಗ್ಗೆ 6.35ಕ್ಕೆ ಜೈಪುರ ತಲುಪಲಿದೆ.

ಶನಿವಾರ ಸಂಜೆ 10.15ಕ್ಕೆ ಜೈಪುರ­ದಿಂದ ಹೊರಟು ಸೋಮವಾರ ಸಂಜೆ 5.55ಕ್ಕೆ ಯಶವಂತಪುರ ತಲುಪಲಿದೆ. 15 ದಿನ ಮುಂಚಿತವಾಗಿ ಆನ್‌ಲೈನ್‌ ಬುಕಿಂಗ್ ಮಾಡಬೇಕು. ರೈಲಿನಲ್ಲಿಯೇ ಬೆಳಿಗ್ಗೆ ತಿಂಡಿ ಮತ್ತು ಚಹಾ, ಮಧ್ಯಾಹ್ನ ಹಾಗೂ ರಾತ್ರಿ ಭೋಜನ ದೊರೆ­ಯಲಿದೆ. ಯಾದಗಿರಿ, ಕಲಬುರ್ಗಿ, ಪುಣೆ, ವಡೋದರ, ಅಜ್ಮೀರ್‌ನಲ್ಲಿ ನಿಲುಗಡೆಯಾಗಲಿದ್ದು, ಪ್ರಯಾಣಿಕರು ಈ ನಿಲ್ದಾಣಗಳಲ್ಲಿ ಹತ್ತಬಹುದು ಅಥವಾ ಇಳಿಯಬಹುದಾಗಿದೆ.

ಯಶವಂತಪುರ- ಬಿಕನೇರ್ ದ್ವೈಸಾಪ್ತಾಹಿಕ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16587/ 16588)- : ಈ ರೈಲು ಭಾನುವಾರ ಮತ್ತು ಶುಕ್ರವಾರ ಬೆಳಿಗ್ಗೆ 5 ಕ್ಕೆ ಯಶವಂತಪುರದಿಂದ ಹೊರಟು ಮಂಗಳವಾರ ಮತ್ತು ಭಾನುವಾರ ಬೆಳಿಗ್ಗೆ 7.10ಕ್ಕೆ ಬಿಕನೇರ್ ತಲುಪುತ್ತದೆ. ಮತ್ತೆ ಮಂಗಳವಾರ ಮತ್ತು ಭಾನುವಾರ ರಾತ್ರಿ 10ಕ್ಕೆ ಬಿಕನೇರ್‌­ನಿಂದ ಹೊರಡಲಿದ್ದು, ಶುಕ್ರವಾರ ಬೆಳಿಗ್ಗೆ 3.15ಕ್ಕೆ ಯಶವಂತಪುರಕ್ಕೆ ಹಿಂತಿರು­ಗುತ್ತದೆ. ವಿಜಯಪುರ, ಪುಣೆ, ವಡೋದರ, ಅಹಮದಾಬಾದ್, ಅಬು ರೋಡ್, ಜೋಧ್‌ಪುರ ಸೇರಿದಂತೆ 18 ಪ್ರಮುಖ ಸ್ಥಾನಗಳಲ್ಲಿ ನಿಲುಗಡೆ ಹೊಂದಲಿದೆ.

trainರೈಲುಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ­ಕುಮಾರ್, ‘ನಗರ ಸಂಚಾರದಟ್ಟಣೆ ತಗ್ಗಿಸಲು ಮುಂಬೈ ಮಾದರಿಯ ‘ಲೋಕಲ್ ಟ್ರೇನ್’ (ಸ್ಥಳೀಯ ರೈಲು) ಆರಂಭಿಸುವ ಬಗ್ಗೆ ಇದೇ ತಿಂಗಳಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅವರೊಂದಿಗೆ ಚರ್ಚಿಸಲಾಗುವುದು’ ಎಂದು  ತಿಳಿಸಿದರು.

‘ನಗರದ ಕೇಂದ್ರ ರೈಲು ನಿಲ್ದಾಣದಿಂದ ಈಗಾಗಲೇ ಮೈಸೂರು, ತುಮಕೂರು, ಕೆ.ಆರ್.ಪುರ ಹಾಗೂ ಯಲಹಂಕ ದಿಕ್ಕಿನಲ್ಲಿ ಮಾರ್ಗಗಳಿವೆ. ಅವುಗಳನ್ನು ಜೋಡಿ ಮಾರ್ಗಗಳನ್ನಾಗಿ ಮಾರ್ಪಡಿಸಿ, ವಿದ್ಯುದ್ದೀಕರಣಗೊಳಿಸಿ, ಕಡಿಮೆ ಭೂಸ್ವಾಧೀನ ಹಾಗೂ ವೆಚ್ಚದಲ್ಲಿ ಸ್ಥಳೀಯ ರೈಲು ಸೇವೆ ಆರಂಭಿಸಬಹುದು’ ಎಂದರು.

‘ಈ ಯೋಜನೆಯ ಕುರಿತು ತಿಂಗಳಲ್ಲಿ ನಾನು ಸೇರಿದಂತೆ ಇಂಧನ ಸಚಿವ ಡಿ.ವಿ. ಸದಾನಂದಗೌಡ, ಸಂಸದ ಪಿ.ಸಿ. ಮೋಹನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ರೈಲ್ವೆ ಸಚಿವರನ್ನು ಭೇಟಿ ಮಾಡಿ, ಮನದಟ್ಟು ಮಾಡಿಕೊಡಲಾಗು­ವುದು’ ಎಂದು ಹೇಳಿದರು.
‘ರೈಟ್ಸ್’ ಸಂಸ್ಥೆ ವರ್ತುಲ ರೈಲಿನ ಸಾಧಕ- ಬಾಧಕಗಳ ಕುರಿತು ಸಮೀಕ್ಷೆ ಮಾಡಿದೆ. ಆದರೆ, ಅದಕ್ಕೆ ಸಾಕಷ್ಟು ಭೂಸ್ವಾಧೀನ ಹಾಗೂ ಹಣ ಖರ್ಚಾಗುತ್ತದೆ.

ಆದರೆ, ಸ್ಥಳೀಯ ರೈಲಿಗೆ ಈಗಾಗಲೇ ಇರುವ ಮಾರ್ಗ­ಗಳನ್ನು ಜೋಡಿ ಮಾರ್ಗ­ಗಳನ್ನಾಗಿ ಪರಿವರ್ತಿಸಿ, ಸ್ವಯಂಚಾಲಿತ ಸಿಗ್ನಲಿಂಗ್ ಅಳವಡಿಸಬೇಕು. ಈ ಮಾರ್ಗದಲ್ಲಿ ಬರುವ ನಗರಗಳಿಗೆ ನಿಲ್ದಾಣಗಳನ್ನು ನಿರ್ಮಿಸಿದರೆ ಸಾಕು. ಆದ್ದರಿಂದ ಈ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ಸಮರ್ಥನೆ ನೀಡಿದರು.

Write A Comment