ಕರ್ನಾಟಕ

ಮಹಿಳೆ ಮೇಲೆ ದೌರ್ಜನ್ಯ ಹೆಚ್ಚಳ: ರಾಜ್ಯ­ಪಾಲ ವಜೂಭಾಯಿ ವಾಲಾ ಕಳವಳ

Pinterest LinkedIn Tumblr

pvec08BRYo-hub51

ಹುಬ್ಬಳ್ಳಿ: ‘ಬೇಟಿ ಬಚಾವೋ, ಪಢಾವೋ’ (ಹೆಣ್ಣುಮಗು ರಕ್ಷಿಸಿ, ಓದಿಸಿ) ಕಾರ್ಯಕ್ರಮ ಹಮ್ಮಿ­ಕೊಂಡಿ­ದ್ದ­ರಿಂದ ಗುಜರಾತ್‌ನಲ್ಲಿ ಹೆಣ್ಣು ಭ್ರೂಣ­ಹತ್ಯೆ ಪರಿಣಾಮಕಾರಿಯಾಗಿ ತಡೆ­ಯಲು ಸಾಧ್ಯವಾಗಿದೆ. ಆ ಕೆಲಸ ರಾಜ್ಯದಲ್ಲೂ ಆಗಬೇಕಿದೆ’ ಎಂದು ರಾಜ್ಯ­ಪಾಲ ವಜೂಭಾಯಿ ವಾಲಾ ಅಭಿಪ್ರಾಯ­ಪಟ್ಟರು.

ಇಲ್ಲಿನ ದಿಗಂಬರ ಜೈನ ಬೋರ್ಡಿಂಗ್‌ನ ಶತಮಾನೋತ್ಸವದ ಅಂಗ­ವಾಗಿ ಭಾನುವಾರ ನೂತನ ಸಭಾ­ಭವನ ಲೋಕಾರ್ಪಣೆ ಮಾಡಿ ಮಾತ­ನಾ­ಡಿದ ಅವರು, ದೇಶದಲ್ಲಿ ಮಹಿಳೆ­ಯರ ಮೇಲೆ ದೌರ್ಜನ್ಯ ಹೆಚ್ಚು­ತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕಿವಿಮಾತು ಹೇಳಿದ ಅವರು, ಮಹಿಳೆಗೆ ಸಿಗುವ ಗೌರವ ಸಮಾಜವೊಂದರ ಯೋಗ್ಯತೆ ಬಿಂಬಿಸುತ್ತದೆ ಎಂದರು.

‘ಚಿಕ್ಕ ಸಮುದಾಯವಾದರೂ ಕಠಿಣ ಪರಿಶ್ರಮದಿಂದ ಪ್ರಭಾವಿಗಳಾಗಿದ್ದೀರಿ’ ಎಂದು ಜೈನ ಧರ್ಮೀಯರನ್ನು ಶ್ಲಾಘಿ­ಸಿದ ರಾಜ್ಯಪಾಲರು, ‘ನಿಮ್ಮ ಬಳಿ ಹೆಚ್ಚು ಹಣ ಇದೆ, ಅದನ್ನು ಬಡವರ ಏಳಿ­ಗೆಗೆ ಬಳಸಿ. ಹಕ್ಕಿ ನೀರು ಕುಡಿದ ಮಾತ್ರಕ್ಕೆ ನದಿಯೊಂದರ ನೀರು ಖಾಲಿ­ಯಾ­ಗುವುದಿಲ್ಲ. ಅದೇ ರೀತಿ ಬಡವರಿಗೆ ಹಣ ಖರ್ಚು ಮಾಡಿದರೆ ಸಂಪತ್ತು ಕರಗು­ವುದಿಲ್ಲ’ ಎಂದು ಸೂಚ್ಯವಾಗಿ ಹೇಳಿ­ದರು. ಮಹಾವೀರರ ಆಶಯ­ದಂತೆ ಹಣ ಶೇಖರಣೆಗಿಂತ ಚಾರಿತ್ರ್ಯ ಕಾಪಾಡಿಕೊಳ್ಳುವತ್ತ ಒತ್ತು ನೀಡಲು ಸಲಹೆ ನೀಡಿದರು.

ಜೈನರೇಕೆ ಶಾಂತ?
‘ಜೈನರು ಸದಾ ಶಾಂತ­ವಾಗಿ­ರಲು ಭಗವಂತ ಅವರ ಮಿದುಳಿ­ನಲ್ಲಿ ರೆಫ್ರಿಜರೇಟರ್ ಇಟ್ಟು ಕಳು­ಹಿ­ಸಿ­­­ರುವುದೇ ಕಾರಣ ಎಂದು ಹಾಸ್ಯ ಚಟಾಕಿ ಹಾರಿಸಿದ ರಾಜ್ಯಪಾಲರು, ಮನಸ್ಸು ಶಾಂತವಾ­ಗಿದ್ದರೆ ಕ್ರಿಯಾ­ತ್ಮಕ ಚಟುವಟಿಕೆಗಳಿಗೆ ಪ್ರೇರಣೆ­ಯಾ­ಗು­ತ್ತದೆ. ಇದರಿಂದ ಸಹಜವಾ­ಗಿಯೇ ಜೈನರು ಎಲ್ಲರಿಗಿಂತ ಬುದ್ಧಿವ­ಂತ­­ರಾ­ಗುತ್ತಾರೆ. ಕಂಪ್ಯೂಟರ್‌ಗೆ ಸಮ­ನಾಗಿ ಯೋಚಿಸುತ್ತಾರೆ’ ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.

ಪರಸ್ಪರ ಕಾಲೆಳೆದ ನಾಯಕರು…
ಮೈಸೂರು, ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾ­ಮಯ್ಯ ₨150 ಕೋಟಿ ನೀಡಿರುವುದನ್ನು ಸಮಾರಂಭದಲ್ಲಿ ಪ್ರಸ್ತಾಪಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ `ಶೆಟ್ಟರ್, ‘ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಬೇಡ. ಹುಬ್ಬಳ್ಳಿ–ಧಾರವಾಡ ಈ ಭಾಗದ ರಸ್ತೆಗಳ ಅಭಿವೃದ್ಧಿಗೂ ಹಣ ಕೊಡಲು ನಿಮ್ಮ ಸಿ.ಎಂಗೆ ಹೇಳಿ’ ಎಂದು ಸಭೆಯಲ್ಲಿದ್ದ ಸಚಿವ ಎಚ್‌.ಕೆ. ಪಾಟೀಲ ಅವರಿಗೆ ಕಟುಕಿದರು.

ಭಾಷಣದ ವೇಳೆ ಅದಕ್ಕೆ ಪ್ರತಿಕ್ರಿಯಿಸಿದ ಎಚ್.ಕೆ. ಪಾಟೀಲ, ‘ಬೆಳಗಾವಿ ಅಧಿವೇಶನ ಶಾಂತಿಯು­ತವಾಗಿ ನಡೆಸಲು ಶೆಟ್ಟರ್ ಅವಕಾಶ ಕೊಟ್ಟರೆ ಅವರ ಎಲ್ಲಾ ಬೇಡಿಕೆ ಈಡೇರಿಸಲಾಗುವುದು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಪ್ರಹ್ಲಾದ ಜೋಶಿ ಅವರ ಜವಾಬ್ದಾರಿಯೂ ಇದರಲ್ಲಿದೆ’ ಎಂದು ಟಾಂಗ್ ಕೊಟ್ಟರು.

Write A Comment