ಕರ್ನಾಟಕ

ಪ್ರಜ್ಞಾಪೂರ್ವಕ ಜಾಗೃತಿಯಿಂದ ಅಸ್ಪೃಶ್ಯತೆ ನಾಶ: ಕಲಬುರ್ಗಿಯ ಕೇಂದ್ರೀಯ ವಿವಿ ವಿಶ್ರಾಂತ ಕುಲಪತಿ ಡಾ.ಎಸ್‌.ಚಂದ್ರಶೇಖರ್‌

Pinterest LinkedIn Tumblr

nagaga

ಬೆಂಗಳೂರು: ‘ಶತ–ಶತಮಾನಗಳಿಂದ ನಡೆದುಕೊಂಡು ಬಂದಿರುವ ಅಸ್ಪೃಶ್ಯತೆ, ಜಾತೀಯತೆಯ ಸಮಸ್ಯೆಗಳನ್ನು ಕಾಯ್ದೆ­ಯಿಂದ ಪರಿಹರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರಜ್ಞಾಪೂರ್ವಕ ಜಾಗೃತಿ ಮೂಡಬೇಕು’ ಎಂದು ಕಲಬುರ್ಗಿಯ ಕೇಂದ್ರೀಯ ವಿವಿ ವಿಶ್ರಾಂತ ಕುಲಪತಿ ಡಾ.ಎಸ್‌.ಚಂದ್ರಶೇಖರ್‌ ಹೇಳಿದರು.

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ನಗರದ ಗಾಂಧಿಭವನದಲ್ಲಿ ಭಾನುವಾರ ಆಯೋಜಿ­ಸಿದ್ದ ‘ಅಸ್ಪೃಶ್ಯತೆ, ಜಾತಿ ತಾರತಮ್ಯ ಹಾಗೂ ಸಾಮಾಜಿಕ ನ್ಯಾಯ: ರಾಜಕೀಯ ಪಕ್ಷಗಳ ಧೋರಣೆಗಳು’ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ‘ಅಸ್ಪೃಶ್ಯತೆ, ಜಾತೀಯತೆಯ ಸಮಸ್ಯೆಗಳನ್ನು ಕಾಯ್ದೆಯು ಪರಿಹರಿಸಲಾರದು. ಸಮಾಜದ ಪೂರ್ವಾ­ಗ್ರಹ­ಗಳನ್ನು ಕಾನೂನು ತೊಡೆಯಲಾರದು. ಅಸ್ಪೃಶ್ಯತೆ ನಿಷೇಧಿಸಿ ಕಾಯ್ದೆ ಮಾಡಿ ಎಷ್ಟು ವರ್ಷಗಳಾಗಿವೆ. ಆದರೂ, ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಹೀಗಾಗಿ, ಈ ಮನೋಭಾವದ ವಿರುದ್ಧವೇ ಒಂದು ಹೋರಾಟ ನಡೆಯಬೇಕಾಗಿದೆ’ ಎಂದು    ಪ್ರತಿಪಾದಿಸಿದರು.

‘ಜನರು ಹೆಚ್ಚು ವಿದ್ಯಾವಂತರಾದರೆ, ಜಾತೀಯತೆ ಕಡಿಮೆಯಾಗುತ್ತದೆ ಎಂಬ ಯೋಚನೆಯಿತ್ತು. ಆದರೆ, ಇಂದು ಶಿಕ್ಷಿತರಾದವರಲ್ಲಿಯೇ ಜಾತಿ ಮನೋಭಾವ ಹೆಚ್ಚಾಗಿದೆ. ಇದು ಸಮಾಜದಲ್ಲಿ ಆತಂಕವನ್ನು ಸೃಷ್ಟಿಸುತ್ತಿದೆ’ ಎಂದು ಹೇಳಿದರು. ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಆರ್‌.­ಚಂದ್ರ­ಶೇಖರ್‌, ‘ಸಂಪ್ರದಾಯ, ಆಧುನಿಕತೆ, ಮೂಢನಂಬಿಕೆ ಇವುಗಳ ನಡುವಿನ ಭಿನ್ನತೆಯನ್ನು ಇದುವರೆಗೂ ಗುರುತಿ­ಸಲು ನಮ್ಮಿಂದ ಸಾಧ್ಯವಾಗಿಲ್ಲ. ಸಾಮಾಜಿಕ ನ್ಯಾಯ, ಮಹಿಳಾ ಸ್ವಾತಂತ್ರ್ಯ ಇಂದಿಗೂ ಮರೀಚಿಕೆಯಾಗಿ ಉಳಿದಿವೆ’ ಎಂದು  ಹೇಳಿದರು.

‘67 ವರ್ಷಗಳಿಂದ ಮೀಸಲಾತಿ ನೀಡಿರುವುದರ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಾರೆ. ಆದರೆ, ಶತ–ಶತಮಾನ­ಗಳಿಂದ ಶೋಷಿತಗೊಂಡಿರುವ ಈಗಲೂ ಶೋಷಣೆಗೆ ಒಳಗಾಗಿರುವ ಶೋಷಿತ ವರ್ಗ ಎಷ್ಟು ಅಸಹನೆ ವ್ಯಕ್ತ­ಪಡಿಸಬೇಕು ಎಂಬುದರ ಬಗ್ಗೆ ಆಲೋಚಿಸಬೇಕಾಗಿದೆ’ ಎಂದು ಅವರು ಪ್ರಶ್ನಿಸಿದರು.

Write A Comment