ಮನೋರಂಜನೆ

ತಂಡಕ್ಕೆ ಒಲವು: ‘ಸಾಫ್ಟ್‌ವೇರ್ ಗಂಡ’ನಿಗೆ ದಣಿವು!

Pinterest LinkedIn Tumblr

05soft

ಸಿನಿಮಾ ಬಿಡುಗಡೆ ಖುಷಿ ಹಂಚಿಕೊಳ್ಳಲು ನಡೆಸುವ ಸುದ್ದಿಗೋಷ್ಠಿಗೆ ನಾಯಕನೇ ಬಂದಿಲ್ಲ ಅಂದರೆ..?
ಅದಕ್ಕೆ ಕಾರಣ ಏನೇನೋ? ನಾಯಕಿ ‘ಅವರಿಗೆ ಆರೋಗ್ಯ ಸರಿಯಿಲ್ಲ’ ಅಂದರು; ನಿರ್ಮಾಪಕ– ‘ಅವರು ಸಿಕ್ಕಾಪಟ್ಟೆ ಎಕ್ಸೆರ್‌ಸೈಜ್‌ ಮಾಡಿದ್ದಾರೆ. ಆಯಾಸವಾಗಿದೆ. ಅದಕ್ಕಾಗಿ ಬಂದಿಲ್ಲ’ ಅಂತ ಸ್ಪಷ್ಟನೆ ನೀಡಿದರು; ನಿರ್ದೇಶಕರು ‘ನಾವು ಕರೆದಿದ್ದೀವಿ… ಯಾಕೋ ಬಂದಿಲ್ಲ’ ಅಂತಷ್ಟೇ ಹೇಳಿ ಸುಮ್ಮನಾದರು. ಅಂತೂ ಇಂತೂ ಜಗ್ಗೇಶ್ ಗೈರುಹಾಜರಿಗೆ ಕಾರಣಗಳೇನು ಎಂಬುದನ್ನು ಅಲ್ಲಿದ್ದವರಾರೂ ಸರಿಯಾಗಿ ತಿಳಿಸಲಿಲ್ಲ.

‘ಸಾಫ್ಟ್‌ವೇರ್‌ ಗಂಡ’ ಸಿನಿಮಾ ಈ ಶುಕ್ರವಾರ (ಡಿ. 5) ತೆರೆ ಕಾಣಲಿದೆ. ಕಷ್ಟಪಟ್ಟು ಮಾಡಿದ ಚಿತ್ರವನ್ನು ಚಿತ್ರಮಂದಿರದಲ್ಲಿ ಪ್ರದರ್ಶಿಸುವ ತವಕ ನಿರ್ದೇಶಕ ವೆಂಕಟೇಶ್ ಅವರಲ್ಲಿದೆ. ಅದಕ್ಕಾಗಿಯೇ ವಿತರಕ ಲೋಕೇಶ್ ಅವರನ್ನು ಹಿಡಿದುಕೊಂಡು ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.

ಒಂದು ಮೂಲದ ಪ್ರಕಾರ, ಈಗ ತೆರೆಕಂಡಿರುವ ‘ಅಂಬರೀಶ’ ಹಾಗೂ ಡಿ. 12ರಂದು ತೆರೆ ಕಾಣಲಿರುವ ರಜನೀಕಾಂತ್‌ ಅವರ ‘ಲಿಂಗ’ ಸಿನಿಮಾಗಳಿಂದಾಗಿ ‘ಸಾಫ್ಟ್‌ವೇರ್‌ ಗಂಡ’ ಯಶಸ್ಸು ಗಳಿಸುವುದು ಸಂಶಯ ಎಂಬ ಹಿನ್ನೆಲೆಯಲ್ಲಿ ಜಗ್ಗೇಶ್ ಅವರು ಬಿಡುಗಡೆ ಮುಂದೂಡಲು ಸಲಹೆ ಮಾಡಿದ್ದರಂತೆ. ಅದಕ್ಕೆ ನಿರ್ಮಾಪಕರು ಒಪ್ಪಿಲ್ಲ. ಇದೇ ಜಗ್ಗೇಶ್ ಅಸಮಾಧಾನಕ್ಕೆ ಕಾರಣ. ‘ಹಾಗೇನೂ ಆಗೋದಿಲ್ಲ. ಇಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ತುಂಬ ಚೆನ್ನಾಗಿ ಮೂಡಿಬಂದಿದೆ. ಜಗ್ಗೇಶ್ ನೀಡಿದ ಸಹಕಾರ ದೊಡ್ಡದು’ ಎನ್ನುತ್ತಲೇ ವೆಂಕಟೇಶ್ ಭಾವುಕರಾದರು.

ಬಹುದಿನಗಳ ಬಳಿಕ ಬಿಡುಗಡೆಯಾಗಲಿರುವ ತಮ್ಮ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಏನಿರಲಿದೆಯೋ ಎಂಬ ಆತಂಕ ನಿಖಿತಾ ಅವರದು. ‘ಹೊಸ ಚಿತ್ರಕಥೆ. ಅದೂ ಈಗಿನ ದಿನಗಳಲ್ಲಿ ಚಾಲ್ತಿಯಲ್ಲಿರುವ ಐಟಿ ವಲಯಕ್ಕೆ ಸಂಬಂಧಿಸಿದ್ದು. ಹೀಗಾಗಿ ಪ್ರೇಕ್ಷಕರು ಖಂಡಿತ ಇದನ್ನು ಹಿಟ್ ಮಾಡಲಿದ್ದಾರೆ’ ಎಂಬ ವಿಶ್ವಾಸ ಅವರಲ್ಲಿದೆ.

ಜಗ್ಗೇಶ್ ಬರದಿರುವುದಕ್ಕೆ ಅವರಿಗಾದ ಆಯಾಸ ಕಾರಣ ಎಂಬ ಸ್ಪಷ್ಟನೆಯನ್ನು ನಿರ್ಮಾಪಕ ಸಂಪತ್‌ ಕೊಟ್ಟರು. ‘ಸಾಫ್ಟ್‌ವೇರ್‌ ಗಂಡ ಸಿನಿಮಾ ಅವರದೇ ಕನಸಿನ ಕೂಸು. ಅವರಿಲ್ಲದೇ ಈ ಸಿನಿಮಾ ಮುಂದೆ ಸಾಗುವಂತೆಯೇ ಇಲ್ಲ’ ಎಂದೂ ಹೇಳಿದರು. ನಾಲ್ಕೈದು ಸಲ ಅವರ ಮನೆಗೆ ಹೋಗಿ, ಸಿನಿಮಾ ಬಿಡುಗಡೆ ಸುದ್ದಿಗೋಷ್ಠಿಗೆ ಆಹ್ವಾನ ನೀಡಲಾಗಿದೆ ಎಂಬ ಮಾಹಿತಿಯನ್ನು ಇನ್ನೊಬ್ಬ ನಿರ್ಮಾಪಕ ರಾಮಪ್ಪ ಕೊಟ್ಟರು. ಜಗ್ಗೇಶ್ ಅವರನ್ನು ಗಮನದಲ್ಲಿ ಇಟ್ಟುಕೊಂಡೇ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾಗಿ ವೀರ ಸಮರ್ಥ್ ತಿಳಿಸಿದರು. ವಿತರಕ ಲೋಕೇಶ್, ಸಂಕಲನಕಾರ ಮನೋಹರ್ ಮಾತನಾಡಿದರು.

Write A Comment