ಪ್ರಮುಖ ವರದಿಗಳು

‘ಶಿವಂ’ ಸಿನಿಮಾದಲ್ಲಿ ನಿಮ್ಮ ವೇಷಭೂಷಣ ನಿಮಗೆ ಇಷ್ಟವಾಯಿತೇ?

Pinterest LinkedIn Tumblr

05Upendra

* ಶೀರ್ಷಿಕೆ ವಿವಾದದಿಂದ ಸಿನಿಮಾಕ್ಕೆ ಪ್ರಚಾರ ಹೆಚ್ಚು ಸಿಕ್ಕಿತೇ?
ಆ ಉದ್ದೇಶವೇ ನಮಗೆ ಇರಲಿಲ್ಲ. ಮೊದಲಿಗೆ ‘ಬಸವಣ್ಣ’ ಅಂತ ಶೀರ್ಷಿಕೆ ಇಟ್ಟಿದ್ದೆವು. ಕೆಲವರು ಇಷ್ಟಪಟ್ಟರು. ಇನ್ನಷ್ಟು ಮಂದಿಗೆ ಇಷ್ಟವಾಗಲಿಲ್ಲ. ಅದಕ್ಕೆ ನಾನು, ‘ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಕೆಲಸ ಮಾಡುವುದು ಬೇಡ’ ಅಂತ ನಿರ್ದೇಶಕ ಶ್ರೀನಿವಾಸರಾಜು ಅವರಿಗೆ ಹೇಳಿದೆ. ಕೊನೆಗೆ ಯೋಚಿಸಿ ‘ಶಿವಂ’ ಅಂತ ತೀರ್ಮಾನಿಸಿದೆವು. ಅಷ್ಟಕ್ಕೂ ಬಸವಣ್ಣ ಎಂಬುದು ಪಾತ್ರದ ಹೆಸರೇ ಹೊರತೂ ಬೇರೇನೂ ಅದರಲ್ಲಿಲ್ಲ.

* ‘ಶಿವಂ’ ಸಿನಿಮಾದಲ್ಲಿ ನಿಮ್ಮ ವೇಷಭೂಷಣ ನಿಮಗೆ ಇಷ್ಟವಾಯಿತೇ?
ನಾನು ಚಿತ್ರದಲ್ಲಿ ದೇವಸ್ಥಾನವೊಂದರ ಅರ್ಚಕ. ಬೋಳು ತಲೆ, ಜುಟ್ಟು, ಪಂಚೆ… ಹೀಗೆ ತುಂಬ ಸ್ಟೈಲಿಶ್ ಆಗಿರುವಂಥ ಪಾತ್ರವದು. ಅದರಲ್ಲೂ ದೇವಸ್ಥಾನ, ಪೂಜೆ ದೃಶ್ಯಗಳಲ್ಲಿ ಸಹಜವಾಗಿಯೇ ಭಕ್ತಿ ಬಂದು ಬಿಡುತ್ತದೆ. ನನಗೆ ಆ ಪಾತ್ರ ಇಷ್ಟವಾಯಿತೋ ಇಲ್ಲವೋ ಬೇರೆ ವಿಷಯ! ಆದರೆ ನನ್ನ ಹತ್ತಿರ ಬರುವ ನಿರ್ಮಾಪಕ, ನಿರ್ದೇಶಕರು ವಿಭಿನ್ನ ಬಗೆಯ ಸಿನಿಮಾ ಮಾಡಲು ಆಸೆ ಪಡುತ್ತಾರೆ. ಬಹುಶಃ ನನ್ನ ಹಾವಭಾವ, ವರ್ತನೆ ನೋಡಿದಾಗ ಬೇರೇನೋ ಪಾತ್ರ ಕೊಡುವ ಯೋಚನೆ ಅವರಲ್ಲಿ ಮೂಡುತ್ತದೇನೋ? ರೆಗ್ಯುಲರ್ ಆಗಿರುವುದಕ್ಕಿಂತ ವಿಭಿನ್ನ ಪಾತ್ರ ಸಿಕ್ಕಾಗ ಅದರ ಪ್ಲಸ್ ಅಥವಾ ಮೈನಸ್ ಅಂಶ ಇದ್ದೇ ಇರುತ್ತವೆ. ಇಂಥ ಪಾತ್ರವನ್ನು ನೀನ್ಯಾಕೆ ಒಪ್ಪಿಕೊಂಡೆ ಅಂತ ಹಲವರು ನನ್ನನ್ನು ಕೇಳಿದರು. ‘ದೇವತೆಗಳು ಹೋಗಲು ಹೆದರುವ ಜಾಗಕ್ಕೆ ಮೂರ್ಖರು ನುಗ್ಗುತ್ತಾರೆ’ ಎಂಬ ಮಾತಿದೆ ನೋಡಿ? ಅದು ನನಗೆ ಸರಿಯಾಗಿ ಹೊಂದಿಕೆಯಾಗುತ್ತದೆ. ಎಲ್ಲವನ್ನೂ ನಾನು ಎಂಜಾಯ್ ಮಾಡುತ್ತೇನೆ.

*ಈ ಸಿನಿಮಾದಿಂದ ಪ್ರೇಕ್ಷಕರು ಏನನ್ನು ನಿರೀಕ್ಷಿಸಬಹುದು?
ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ನಮ್ಮ ಪರಂಪರೆ, ಸಂಸ್ಕೃತಿ ಮೇಲೆ ಯಾವ ತರಹದ ದಾಳಿ ಆಗುತ್ತಿದೆ ಎಂಬುದನ್ನು ಅರಿಯುವ ಪ್ರಯತ್ನ. ನಮ್ಮತನ ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ಕಮರ್ಷಿಯಲ್ ಟಚ್ ಕೊಟ್ಟು ನಿರೂಪಿಸಲಾಗಿದೆ. ಥಾಯ್ಲೆಂಡ್, ಟರ್ಕಿ ಇತರ ದೇಶಗಳಲ್ಲಿ ಕಥೆಯು ಓಡಾಡುವುದರಿಂದ ಅಲ್ಲೆಲ್ಲ ಚಿತ್ರೀಕರಣ ನಡೆಸಲಾಗಿದೆ. ಅಲ್ಲಿ ವಿಮಾನ, ಹೆಲಿಕಾಪ್ಟರ್‌ನಲ್ಲಿ ಹೊಡೆದಾಟ, ಇಲ್ಲಿ ಸಾಂಗ್, ಇನ್ನೆಲ್ಲೋ ದೃಶ್ಯಗಳು… ಹೀಗೆ ಸುದೀರ್ಘ ಶೂಟಿಂಗ್ ನಡೆದಿದೆ.

* ನೀವೊಬ್ಬ ನಿರ್ದೇಶಕ ಕೂಡ. ಅಭಿನಯಿಸುವಾಗ ಇನ್ನೊಬ್ಬ ನಿರ್ದೇಶಕನ ಜತೆ ಹೇಗೆ ಹೊಂದಿಕೊಳ್ಳುವಿರಿ?
ಪ್ರತಿಯೊಬ್ಬ ನಿರ್ದೇಶಕನಿಗೂ ಹೊಸತನದ ಸಿನಿಮಾ ಮಾಡುವ ಉತ್ಸಾಹ ಇರುತ್ತದೆ. ಆತ ಸಿನಿಮಾದ ಕ್ಯಾಪ್ಟನ್. ನಾನು ಅದರಲ್ಲಿ ಒಬ್ಬ ನಟ ಅಷ್ಟೇ. ನನ್ನ ನಿರ್ದೇಶನವನ್ನೇ ಟೀಕಿಸಿಕೊಳ್ಳುವಂಥ ವ್ಯಕ್ತಿ ನಾನು! ಇನ್ನು ಇನ್ನೊಬ್ಬರ ನಿರ್ದೇಶಕನ ಕೆಲಸಕ್ಕೆ ಅಡ್ಡಿ ಮಾಡುವುದುಂಟಾ? ಒಬ್ಬೊಬ್ಬನಲ್ಲೂ ಒಂದೊಂದು ವಿಶೇಷತೆ ಇರುತ್ತದೆ.

* ‘ಉಪ್ಪಿ2’ ಎಲ್ಲಿಯವರೆಗೆ ಬಂದಿದೆ?
ಈಗ ಅದೊಂದೇ ನನ್ನ ಮನಸ್ಸಿನಲ್ಲಿ ಇರುವುದು. ಅದನ್ನು ಬಿಟ್ಟರೆ ಬೇರೇನೂ ಇಲ್ಲ. ಇನ್ನು ನಾಲ್ಕಾರು ದಿನಗಳಲ್ಲಿ ಶೂಟಿಂಗ್ ಶುರು ಮಾಡಲಿದ್ದೇವೆ. ಜನವರಿಯಲ್ಲಿ ಚಿತ್ರೀಕರಣ ಮುಗಿಸಿ, ಏಪ್ರಿಲ್‌ನಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ. ಎಲ್ಲರ ಹಾಗೆ ಈ ಸಿನಿಮಾ ವಿಭಿನ್ನ ಅಂತ ನಾನು ಹೇಳುವುದಿಲ್ಲ. ಅದನ್ನು ನೋಡಿದ ಮೇಲೆ ಜನರು ಹೇಳಬೇಕು. ಅಂಥ ಪ್ರಯತ್ನ ಮಾಡುತ್ತಿದ್ದೇನೆ. ಈಗಿನ ನನ್ನ ಸಿನಿಮಾಗಳಲ್ಲಿ ಉಪೇಂದ್ರ ಛಾಯೆ ಇದೆ. ಆದರೆ ‘ಉಪ್ಪಿ2’ದಲ್ಲಿ ನೀವು ಉಪೇಂದ್ರನಲ್ಲದ ಉಪೇಂದ್ರ ಛಾಯೆಯನ್ನು ಕಾಣಲಿದ್ದೀರಿ.

* ತೆಲುಗು ಚಿತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದೀರಂತೆ? ಮುಂದೆಯೂ ಅತ್ತ ಹೋಗುವ ಆಸೆಯೇನಾದರೂ..?
ಛೇ ಛೇ ಅಂಥದ್ದೇನಿಲ್ಲ. ತೆಲುಗಿನ ನಿರ್ದೇಶಕ ತ್ರಿವಿಕ್ರಮ ಶ್ರೀನಿವಾಸ್ ಅವರು ನನ್ನ ಸ್ನೇಹಿತ. ಅವರ ಚಿತ್ರದಲ್ಲಿ ಮುಖ್ಯ ಪಾತ್ರವೊಂದಕ್ಕೆ ನಾನು ಬರಲೇಬೇಕು ಅಂತ ಅವರು ಮನವಿ ಮಾಡಿದರು. ಇಲ್ಲಿ ಯಾವುದೇ ಕೆಲಸಗಳು ಇರದ ದಿನಗಳಲ್ಲಿ ಅಲ್ಲಿಗೆ ಹೋಗಿ ಅಭಿನಯಿಸಿ ಬರುತ್ತಿದ್ದೇನೆ. ಇನ್ನೊಂದು ವಿಷಯ ಗೊತ್ತಾ? ನಾನು ಅಲ್ಲಿಗೆ ಹೋದಾಗ ಬಿಡುವು ಸಿಕ್ಕಾಗಲೆಲ್ಲ ‘ಉಪ್ಪಿ2’ ಚಿತ್ರಕಥೆ ಕೆಲಸ ಮಾಡುತ್ತಿರುತ್ತೇನೆ! ಅಭಿನಯ ಹಾಗೂ ಸ್ವಂತ ಕೆಲಸ ಎರಡೂ ಜತೆಯಾಗಿ ಮಾಡಲು ಸಮಯ ಹೀಗೆ ಸಿಕ್ಕಿದೆ!

* ‘ಶ್–2’ ಮಾಡುವ ಆಸೆಯನ್ನು ಹಲವರು ವ್ಯಕ್ತಪಡಿಸಿದ್ದಾರೆ. ಆ ಸಾಲಿನಲ್ಲಿ ನೀವೂ ಇದ್ದೀರಾ?
ಆಸೆಯೇನೋ ಇದೆ. ಆದರೆ ಪ್ರೇಕ್ಷಕನನ್ನು ಹುಚ್ಚೆಬ್ಬಿಸುವ ಕಥೆ ಸಿಗಬೇಕಲ್ಲ? ಕಾಶೀನಾಥ್, ಕುಮಾರ್ ಗೋವಿಂದ್ ಸೇರಿದಂತೆ ಹಲವರು ‘ಶ್–2’ ಮಾಡುವ ಆಸೆ ಹೊಂದಿದ್ದಾರೆ. ಅಂದರೆ ಎರಡನೇ ಭಾಗವು ಮೊದಲ ಭಾಗಕ್ಕಿಂತ ಚೆನ್ನಾಗಿರಬೇಕಲ್ಲವೇ? ನಾನು ಎಲ್ಲ ಕೆಲಸಗಳನ್ನು ಮುಗಿಸಿದ ಬಳಿಕವಷ್ಟೇ ಅದರ ಯೋಚನೆ ಮಾಡೋಣ ಅಂದುಕೊಂಡಿದ್ದೇನೆ. ಈಗಂತೂ ನನ್ನ ತಲೆಯಲ್ಲಿ ‘ಉಪ್ಪಿ2’ ತುಂಬಿಕೊಂಡಿದೆ.

Write A Comment