ಪ್ರಮುಖ ವರದಿಗಳು

ಕನ್ನಡ ಚಿತ್ರರಂಗಕ್ಕೆ ಮಂಗಳೂರು ಹುಡುಗಿ ಶ್ರುತಿ ಹೀರಾ

Pinterest LinkedIn Tumblr

05SHRUTHI

ಶ್ರುತಿ ಹೆಸರಿನ ನಟಿಯರು ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವರಿದ್ದಾರೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ, ಶ್ರುತಿ ಹೀರಾ. ಮೊಬೈಲ್ ಸಂಖ್ಯೆಯನ್ನು ಶೀರ್ಷಿಕೆ ಆಗಿಸಿಕೊಂಡಿರುವ ಸಿನಿಮಾ ಎನ್ನುವ ಕಾರಣಕ್ಕೆ ಕುತೂಹಲ ಕೆರಳಿಸಿರುವ ‘7411190429’ ಚಿತ್ರದಲ್ಲಿ ನಾಯಕಿ ಈ ಶ್ರುತಿ.

‘ಚಿತ್ರ ನಿರ್ದೇಶಕನಾಗಬೇಕೆಂಬ ಕನಸು ಹೊತ್ತ ಯುವಕನೊಬ್ಬ ಗಾಂಧಿನಗರಕ್ಕೆ ಅವಕಾಶ ಹುಡುಕಿ ಬರುತ್ತಾನೆ. ಆತನಿಗೆ ಆಕಸ್ಮಿಕವಾಗಿ ಒಂದು ಮೊಬೈಲ್ ಸಿಗುತ್ತದೆ. ಅದರ ಸಂಖ್ಯೆ: 7411190429. ನಂತರ ಆ ಯುವಕ ಕೊಲೆಯಾಗುತ್ತಾನೆ. ಸಾಯುವಾಗ ಆತ ಹಾಳೆಯೊಂದರಲ್ಲಿ ಆ ಮೊಬೈಲ್ ನಂಬರನ್ನು ಬರೆದಿರುತ್ತಾನೆ. ಕೊಲೆಯ ರಹಸ್ಯ ಆ ಮೊಬೈಲ್‌ ಸಂಖ್ಯೆಯಲ್ಲಿ ಅಡಗಿರುತ್ತದೆ’ ಎಂದು ಚಿತ್ರದ ಕಥೆಯನ್ನು ಶ್ರುತಿ ಸೂಚ್ಯವಾಗಿ ಹೇಳುತ್ತಾರೆ.

ಶ್ರುತಿ ‘ಮತ್ತೇಶ್’ ಶೀರ್ಷಿಕೆಯ ಹಾರರ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು. ಆ ನಂತರ ರಾಜೀವ್ ಕೃಷ್ಣಗಾಂಧಿ ನಿರ್ದೇಶನದ ‘ಕೈ ತುತ್ತು’ ಸಿನಿಮಾದಲ್ಲಿ ನಟಿಸಿದರು. ಈ ಎರಡು ಚಿತ್ರಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ. ಒಂದೂ ಕನ್ನಡ ಸಿನಿಮಾ ಈವರೆಗೆ ತೆರೆಕಾಣದಿದ್ದರೂ ತಮಿಳು ಮತ್ತು ಬಾಲಿವುಡ್‌ನಿಂದ ಈಗಾಗಲೇ ಶ್ರುತಿ ಅವರಿಗೆ ಆಹ್ವಾನ ಬರುತ್ತಿದೆಯಂತೆ.

‘ನನ್ನ ಫೇಸ್‌ಬುಕ್ ಅಕೌಂಟ್‌ನಲ್ಲಿದ್ದ ಚಿತ್ರವನ್ನು ನೋಡಿದ ಮತ್ತೇಶ್‌ ಚಿತ್ರತಂಡ ನಟಿಸುವಂತೆ ಆಹ್ವಾನ ನೀಡಿತು. ಅದುವರೆಗೆ ಒಮ್ಮೆಯೂ ಬಣ್ಣ ಹಚ್ಚಿರಲಿಲ್ಲ. ಆರಂಭದಲ್ಲಿ ಅಳುಕಿತ್ತು, ನಂತರ ಭರವಸೆ ಮೂಡಿತು’ ಎಂದು ಶ್ರುತಿ ಹೇಳುತ್ತಾರೆ. ಕನ್ನಡ ಮತ್ತು ತುಳು ಮಾತೃಭಾಷೆಯ ಈ ಮಂಗಳೂರು ಹುಡುಗಿ ತುಳು ಚಿತ್ರರಂಗದಲ್ಲೂ ನಟಿಸಿದ್ದಾರೆ. ತುಳುವಿನಲ್ಲಿ ಅವರು ನಟಿಸಿರುವ ಒಂದು ಚಿತ್ರ ಬಿಡುಗಡೆಯಾಗಿದೆ.

ಡಯಾಗ್ನಿಸ್ಟಿಕ್ ನ್ಯೂಟ್ರಿಷಿಯನ್‌ನಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಶ್ರುತಿ ಕಾಲೇಜು ಹಂತದಲ್ಲಿರುವಾಗಲೇ ಬಣ್ಣ ಹಚ್ಚಿದವರು. ಸಿನಿಮಾಗಳಲ್ಲಿ ಅವಕಾಶಗಳು ಸಿಕ್ಕುತ್ತಿರುವ ಕಾರಣ ಅವರ ಗಮನ ಡಯಟ್‌–ಫಿಟ್‌ನೆಸ್‌ಗಳನ್ನು ಹೇಳಿಕೊಡುವುದರಿಂದ ದೂರವಿದೆ.

ಸಿನಿಮಾಗಳಲ್ಲಿ ಅಭಿನಯಿಸುವ ಮೊದಲು ಶ್ರುತಿ ‘ಮಿಸ್ ಮಂಗಳೂರು’ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಎರಡು ಆಲ್ಬಂಗಳಲ್ಲಿ ಮತ್ತು ‘ಕಣ್ಣಾಮುಚ್ಚಾಲೆ’ ಕಿರುಚಿತ್ರದಲ್ಲೂ ನಟಿಸಿದ್ದಾರೆ. ತೆಲುಗು ಮತ್ತು ಬಾಲಿವುಡ್‌ನ ಆಹ್ವಾನಗಳ ಬಗ್ಗೆ ಅವರು ಕುತೂಹಲದಿಂದ ಇದ್ದಾರೆ.

‘ತೆಲುಗಿನಲ್ಲಿ ನಟಿಸಲು ಭಾಷಾ ಸಮಸ್ಯೆ. ಆದರೂ ಕಥೆ ಕೇಳಿದ್ದೇನೆ. ಕನ್ನಡದಲ್ಲಿ ನಟಿಸಲು ಹೆಚ್ಚು ಒಲವಿದೆ. ನನಗೆ ಬಾಲಿವುಡ್‌ನಲ್ಲಿ ಸಿಕ್ಕಿರುವುದೂ ಹಾರರ್ ಸಿನಿಮಾ. ಹಾರರ್ ಮೂವಿಗಳಲ್ಲಿ ಅವಕಾಶಗಳು ಬರುತ್ತಿವೆ. ಈಗ ನಟಿಸಿರುವ ಚಿತ್ರಗಳಲ್ಲಿ ನಾನು ನಾಯಕಿ ಎಂದು ಹೇಳುವುದಕ್ಕಿಂತ ಕಥೆಯದ್ದೇ ನಾಯಕತ್ವ. ನನ್ನ ಬದುಕಿಗೆ ಮತ್ತು ವ್ಯಕ್ತಿತ್ವಕ್ಕೆ ಹತ್ತಿರದ ಪಾತ್ರಗಳನ್ನು ಮಾಡಲು ನನಗೆ ಇಷ್ಟ. ಆ ರೀತಿಯ ರೋಲ್‌ಗಳಲ್ಲಿ ಕಾಣಿಸಿಕೊಳ್ಳುವುದು ಸುಲಭ’ ಎನ್ನುವರು ಶ್ರುತಿ.

ಸಾಮಾನ್ಯವಾಗಿ ಹಾರರ್ ಸಿನಿಮಾ ಎಂದರೆ ಎಕ್ಸ್‌ಪೋಸ್ ಎನ್ನುವ ಅಭಿಪ್ರಾಯವಿದೆ. ಈ ಕುರಿತು ಪ್ರತಿಕ್ರಿಯಿಸುವ ಶ್ರುತಿ– ‘ಗ್ಲಾಮರ್ ಓಕೆ, ಎಕ್ಸ್‌ಪೋಸ್ ಅಗತ್ಯವಿಲ್ಲ. ಅದಕ್ಕೆ ನಾನು ವಿರುದ್ಧ’ ಎನ್ನುತ್ತಾರೆ. ಅಂದಹಾಗೆ, ಅವರ ಹೆಸರಿನ ಹಿಂದಿರುವ ‘ಹೀರಾ’ ಕುಟುಂಬದ ಹೆಸರಂತೆ. ಆ ಹೆಸರು ಅವರಿಗೆ ಅದೃಷ್ಟ ತಂದಿದೆಯಂತೆ.

Write A Comment