ಮನೋರಂಜನೆ

‘ರಾಕೆಟ್’ ಉಡಾವಣೆ: ಇದು ಸತೀಶ್ ಪಿಕ್ಚರ್

Pinterest LinkedIn Tumblr

sathish

ನಟ ನೀನಾಸಂ ಸತೀಶ್ ಅಂತೂ ಸ್ವಂತ ಕಾಲ ಮೇಲೆ ನಿಲ್ಲಲು ಆರಂಭಿಸಿದ್ದಾರೆ. ಅಂದರೆ ಇಲ್ಲಿ ತನಕ ಬೇರೆಯವರ ಕಾಲ ಮೇಲೆ ನಿಂತಿದ್ರಾ? ಅಂತ ಕಾಲೆಳೆಯಬೇಡಿ. ಬೇರೆಯವರ ನಿರ್ಮಾಣದ ಚಿತ್ರಗಳಲ್ಲಿ ನಟಿಸುತ್ತಿದ್ದರು. ಈಗ ತಾನೇ ನಿರ್ಮಾಪಕರಾಗಿ ಸಿನಿಮಾ ಮೈದಾನಕ್ಕಿಳಿದಿದ್ದಾರೆ.

‘ಸತೀಶ್ ಪಿಕ್ಚರ್ಸ್’ ಹೆಸರಿನ ಬ್ಯಾನರ್ ಕೂಡ ಲಾಂಚ್ ಮಾಡಿರುವ ಸತೀಶ್ ಹೊಸ ಉತ್ಸಾಹದಲ್ಲಿದ್ದಾರೆ. ‘ಬೇರೆ ರೀತಿಯ ಸಿನಿಮಾ ಮಾಡಬೇಕಿತ್ತು ಸಾರ್. ಅದಕ್ಕೆ ನಾನೇ ನಿರ್ಮಾಪಕ ನಾದೆ. ನನ್ನ ನಿರ್ಮಾಣ, ನನ್ನ ರುಚಿ-ಅಭಿರುಚಿಗೆ ತಕ್ಕಂತೆ ಚಿತ್ರ ಮಾಡುವ ಅಧಿಕಾರ ಇರುತ್ತದಲ್ಲ ಎನ್ನುವ ಸಂತೋಷ ಈಗ…’

ಆರಂಭದಲ್ಲೇ ಇಂಥ ಉತ್ಸಾಹದ ಮಾತುಗಳಿಂದಲೇ ಪತ್ರಕರ್ತರ ಮುಂದೆ ತುಂಬಾ ವಿನಿಮಯವಾಗಿ ಕೂತು ಹರಟಲು ಶುರು ಮಾಡಿದರು. ಅಂದ ಹಾಗೆ ನಟ ಸತೀಶ್ ಅವರ ಹೊಸ ಸಿನಿಮಾದ ಹೆಸರು ‘ರಾಕೆಟ್’.

ಹೊಸ ಪ್ಯಾಟರ್ನ್ಗಾಗಿ ನೀನಾಸಂ ಸತೀಶ್ ಕಂಡುಕೊಂಡ ನಿರ್ಮಾಣದ ದಾರಿಗೆ ವಿಶ್ವನಾಥ್ ಹಾಗೂ ಇನ್ನೊಬ್ಬ ಸತೀಶ್ ಸಾಥ್ ನೀಡುತ್ತಿದ್ದಾರೆ. ಇವರ ನಿರ್ಮಾಣದ ಚೊಚ್ಚಲ ಚಿತ್ರಕ್ಕೆ ‘ನಾನ್ ಸ್ಟಾಪ್ ಲವ್’ ಎಂಬ ಟ್ಯಾಗ್ಲೈನ್ ಬೇರೆ ಇದೆ. ಚಿತ್ರವನ್ನು ಜಗದೀಶ್ ನಿರ್ದೇಶಿಸುತ್ತಿದ್ದಾರೆ. ಇವರಿಗೂ ಇದು ಮೊದಲ ಚಿತ್ರ. ಈ ಹಿಂದೆ ಉಪೇಂದ್ರ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದೆ. ‘ಚಿತ್ರರಂಗಕ್ಕೆ ಬಂದಾಗಲೇ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳಬೇಕು, ಬೇರೆ ಬಗೆಯ ಪಾತ್ರ ಮಾಡಬೇಕೆಂಬ ಆಸೆ ಇತ್ತು. ಈ ಹಿಂದೆ ಮಾಡಿದ ಸಿನಿಮಾಗಳು, ಪಾತ್ರಗಳು ಒಂದಕ್ಕೊಂದು ಸಾಮ್ಯತೆ ಇತ್ತೆಂದು ಅನೇಕರು ಹೇಳುತ್ತಿದ್ದರು. ನನಗೂ ಒಮ್ಮೊಮ್ಮೆ ಹಾಗೆ ಅನಿಸಿದ್ದುಂಟು. ಹೀಗಾಗಿ ನಾನೇ ನಿರ್ಮಾಣದ ಹೊಣೆ ಹೊತ್ತುಕೊಂಡು ಹೊಸ ಸಿನಿಮಾ ಮಾಡುತ್ತಿದ್ದೇನೆ. ಅದರ ಮೊದಲ ಹಂತವಾಗಿ ‘ರಾಕೆಟ್’ ಚಿತ್ರ ಮೂಡಿಬರುತ್ತಿದೆ’ ಎಂದರು ಸತೀಶ್.

ಇಲ್ಲಿ ಸತೀಶ್ ಅವರದ್ದು ತುಂಬಾ ಸ್ಟೈಲಿಶ್ ಮತ್ತು ಫ್ಲರ್ಟ್ ಮಾಡುವ ಹುಡುಗನ ಪಾತ್ರ. ಆದರೆ, ಕೊನೆ ಕೊನೆಗೆ ಸಿನಿಮಾ ಮತ್ತೊಂದು ಹಂತಕ್ಕೆ ಹೋಗುತ್ತದೆ. ಹೀಗಾಗಿ ಕಥೆ ನಿರೂಪಣೆಯಲ್ಲಿ ಹೊಸತನವಿದೆ ಎಂಬುದು ಸತೀಶ್ನ ನಂಬಿಕೆ. ಇದರ ನಡುವೆ ಗಂಭೀರ ಎನಿಸುವ ಪ್ರೇಮ ಕಥೆಯ ಟ್ರ್ಯಾಕ್ ಕೂಡ ಬರುತ್ತದೆ. ಒಂದು ರೀತಿಯಲ್ಲಿ ಜರ್ನಿ ರೂಪದ ಈ ಚಿತ್ರ ಬೆಂಗಳೂರಿನಿಂದ ಮಡಿಕೇರಿ ತನಕ ಪಯಣ ಬೆಳೆಸುತ್ತದೆ. ಈ ಪಯಣದಲ್ಲಾಗುವ ಘಟನೆಗಳೇ ಚಿತ್ರದ ಜೀವಾಳ.

ಇನ್ನು ಸತೀಶ್ ಇಲ್ಲಿ ಭಾಷೆಯ ಧಾಟಿಯನ್ನೂ ಕೂಡ ಬದಲಾಯಿಸಿಕೊಳ್ಳುತ್ತಿದ್ದಾರೆ. ಎಂದಿನಂತೆ ಮಂಡ್ಯ ಮಾತು ಇಲ್ಲಿಲ್ಲ. ಬೆಂಗಳೂರು ಕನ್ನಡ ಚಿತ್ರವನ್ನು ತುಂಬಿಕೊಳ್ಳಲಿದೆ. ನಿರ್ದೇಶಕ ಜಗದೀಶ್ ಅವರಿಗೆ ಇದು ಮೊದಲ ಚಿತ್ರವಾದ್ದರಿಂದ ಚಿತ್ರದ ಮುಹೂರ್ತ ಪತ್ರಿಕಾಗೋಷ್ಠಿಯಲ್ಲಿ ಸತೀಶ್ ಅವರೇ ಕ್ಯಾಪ್ಟನ್ನಂತೆ ಕಂಡರು.

‘ಕಥೆ ಚೆನ್ನಾಗಿದೆ. ಸತೀಶ್ ಖುಷಿಯಿಂದ ಒಪ್ಪಿಕೊಂಡರು. ಈ ಹಿಂದೆ ನೀವು ನೋಡಿದರ ಸತೀಶ್ನನ್ನು ಈ ಚಿತ್ರದಲ್ಲಿ ಕಾಣುತ್ತೀರಿ’ ಎಂದು ತಮ್ಮ ಹೊಸ ಚಿತ್ರದ ಬಗ್ಗೆ ಒಂದು ಸಾಲಿನಲ್ಲಿ ವಿವರಣೆ ನೀಡಿದರು ಜಗದೀಶ್. ವಿಶೇಷ ಅಂದರೆ ಸತೀಶ್ ಅವರಿಗೆ ಇಲ್ಲಿ ಇಬ್ಬರು ನಾಯಕಿಯರು. ಐಶಾನಿ ಶೆಟ್ಟಿ, ರಾಶ್ರೀ ಪೊನ್ನಪ್ಪ.

‘ವಾಸ್ತುಪ್ರಕಾರ’ದಲ್ಲಿ ನಟಿಸಿದ ಐಶಾನಿಯ ನಟನೆ ನೋಡಿ ಯೋಗರಾಜ್ ಭಟ್, ‘ಐಶಾನಿ ಅದ್ಭುತ ನಟಿ’ ಎಂದಿದ್ದೇ ತಡ ಸತೀಶ್ ಐಶಾನಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ‘ನನ್ನದು ಮೃದು ಸ್ವಭಾವದ, ಸಂಪ್ರದಾಯಸ್ಥ ಹುಡುಗಿ ಪಾತ್ರ. ಒಂದು ರೀತಿಯಲ್ಲಿ ನಾನು ನಿಜ ಜೀವನದಲ್ಲಿ ಹೇಗಿರುತ್ತೇನೋ ಅದೇ ರೀತಿಯ ಪಾತ್ರವನ್ನು ಈ ಚಿತ್ರದಲ್ಲಿ ಕೊಡಲಾಗಿದೆ’ ಎಂಬುದು ಐಶಾನಿ ಹೇಳುವ ಮಾತು.

ಮತ್ತೊಬ್ಬ ನಟಿ ರಾಶ್ರೀ ಸಖತ್ ಬೋಲ್ಡ್ ಆಂಡ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆವರದ್ದು ಗ್ಲಾಮರಸ್ ಪಾತ್ರ ಇದೆ. ಅದಕ್ಕೆ ತಕ್ಕಂತೆ ಒಂದು ಸ್ಪೈಸಿ ಹಾಡು ಕೂಡ ಸಂಯೋಜನೆ ಮಾಡಲಾಗಿದೆ. ಈಗಾಗಲೇ ‘ಲೂಸಿಯಾ’ ಚಿತ್ರದ ಮೂಲಕ ಗಮನ ಸೆಳೆದ ಪೂರ್ಣಚಂದ್ರ ಸಂಗೀತ ಇಲ್ಲೂ ಮುಂದುವರೆದಿದೆ. ಉಳಿದಂತೆ ಚಿತ್ರಕ್ಕೆ ಅದ್ವೈತ್ ಛಾಯಾಗ್ರಯಣವಿದೆ.

-ಆರ್.ಕೇಶವಮೂರ್ತಿ

Write A Comment