ಕರ್ನಾಟಕ

ಬಡ ರೋಗಿಗಳಿಗೆ ಮೀಸಲಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ; ಇಲ್ಲಿ ಎಲ್ಲ ಚಿಕಿತ್ಸೆಯೂ ಉಚಿತ

Pinterest LinkedIn Tumblr

ಮಂಜುನಾಥ ದಾಸನಪುರ
hospit

ಬೆಂಗಳೂರು, ನ.22: ಇಂದಿನ ಆಧುನಿಕ ಜಗತ್ತಿನಲ್ಲಿ ರೋಗವಿಲ್ಲದ ವ್ಯಕ್ತಿಯನ್ನು ಹುಡುಕುವುದು ಕಷ್ಟಸಾಧ್ಯವಾಗಿದೆ. ಹಣವುಳ್ಳವರು ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾದರೆ, ಬಡವರು ರೋಗದ ಜೊತೆ ಜೊತೆಗೆ ಜೀವನ ಸವೆಸುತ್ತಾರೆ. ಇಂತಹ ಬಡವರಿಗಾಗಿಯೇ ಉತ್ತಮ ಚಿಕಿತ್ಸೆ ನೀಡುವ ಸಲುವಾಗಿ ನಗರದ ಹೊರವಲಯದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದು ಸದ್ದಿಲ್ಲದೆ ಬಡವರ ಆರೋಗ್ಯ ಸೇವೆಯಲ್ಲಿ ತೊಡಗಿದೆ.
ನಗರದ ಹೊರವಲಯದ ಬನ್ನೇರುಘಟ್ಟದಲ್ಲಿರುವ ಆರ್‌ವಿಎಮ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಡ ರೋಗಿಗಳನ್ನು ಕೈ ಬೀಸಿ ಕರೆಯುತ್ತಿದೆ. 1996ನೆ ಇಸವಿಯಲ್ಲಿ ರವಿ ವಿ. ಮೆಲ್ವಾನಿ ಎಂಬವರು ಸರಕಾರೇತರ ಸಂಸ್ಥೆಯ ಮೂಲಕ ಮಾನವೀಯತೆಯ ಕುರುಹಾಗಿ ಈ ಆಸ್ಪತ್ರೆಯನ್ನು ಸ್ಥಾಪಿಸಿದರು. ಪ್ರಾರಂಭದಲ್ಲಿ ಕೇವಲ ಹತ್ತು ಹಾಸಿಗೆಗಳ ಸೌಲಭ್ಯ ಬಿಟ್ಟರೆ ಆಂಬ್ಯುಲೆನ್ಸ್ ಸಹ ಇರಲಿಲ್ಲ. ತದನಂತರ ಕೆಲ ದಾನಿಗಳು ನೀಡಿದ ಧನ ಸಹಾಯದಿಂದಾಗಿ ಕ್ರಮೇಣ 20 ಹಾಗೂ 50 ಹಾಸಿಗೆಗಳ ಆಸ್ಪತ್ರೆಯಾಗಿ ಬೆಳೆದು, ಇಂದು ಸುಸಜ್ಜಿತವಾದ 150 ಹಾಸಿಗೆಯನ್ನು ಒಳಗೊಂಡಿದೆ. ಇದಲ್ಲದೇ 3 ಆಂಬ್ಯುಲೆನ್ಸ್‌ಗಳು 24 ಗಂಟೆ ಸೇವೆಗೆ ಸಿದ್ಧವಾಗಿವೆ.
ಈ ಆಸ್ಪತ್ರೆಯಲ್ಲಿ ಬಡವರು, ಅನಾಥರು, ನಿರ್ಗತಿಕರು ಹಾಗೂ ವಿಶೇಷ ಆರೈಕೆಯ ಅವಶ್ಯಕತೆ ಇರುವ ರೋಗಿಗಳಿಗೆ ಅವಶ್ಯಕತೆಗೆ ಅನುಸಾರವಾಗಿ ಒಳ ಹಾಗೂ ಹೊರ ರೋಗಿಗಳಾಗಿ ವಿಂಗಡಿಸಿ ಸೂಕ್ತ ಹಾಗೂ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿನ ವೈದ್ಯಕೀಯ ಸೌಲಭ್ಯಗಳು ಹಾಗೂ ಸವಲತ್ತುಗಳು ಯಾವುದೇ ಹೆಸರಾಂತ ಖಾಸಗಿ ಆಸ್ಪತ್ರೆಗೆ ಕಡಿಮೆಯಿಲ್ಲ. ಇಲ್ಲಿ ವೈದ್ಯಕೀಯ ಶುಶ್ರೂಷೆಗಳ ಜೊತೆಗೆ ರೋಗತಪಾಸಣಾ ಪ್ರಯೋಗಶಾಲೆ (ಡೈಯಾಗ್ನೋಸ್ಟಿಕ್ಸ್ ), ಫಿಸಿಯೋ ಥೆರಪಿ, ಡಯಾಲಿಸಿಸ್ ಮುಂತಾದ ಸೌಲಭ್ಯಗಳು ಲಭ್ಯವಿದೆ.
ಬನ್ನೇರುಘಟ್ಟದ ಗ್ರಾಮ ಪಂಚಾಯತ್ ನೀಡಿದ ಭೂಮಿಯಲ್ಲಿ ಕಟ್ಟಿರುವ ಎರಡು ಅಂತಸ್ತಿನ ವಿಶಾಲ ಕಟ್ಟಡದಲ್ಲಿ ಮಹಿಳೆ ಹಾಗು ಪುರುಷರಿಗೆ ಪ್ರತ್ಯೇಕ ವಿಭಾಗಗಳಿದ್ದು, ಅದರಲ್ಲಿ ಸುಟ್ಟಗಾಯದ ವಿಭಾಗ (ಬರ್ನ್ ವಿಭಾಗ), ಎಚ್‌ಐವಿ ವಿಭಾಗ, ಕ್ಷಯದ (ಟೀಬಿ) ವಿಭಾಗ, ಅರ್ಬುದ(ಕ್ಯಾನ್ಸರ್) ವಿಭಾಗ, ಪ್ರತ್ಯೇಕತಾ (ಐಸೋಲೇಷನ್) ವಿಭಾಗ ಮುಂತಾದಾಗಿ ವಿಂಗಡಿಸಲ್ಪಟ್ಟಿವೆ. ಇದರ ಜೊತೆಗೆ ಮೂರು ಸುಸಜ್ಜಿತ ಶಸತ್ತ್ರಚಿಕಿತ್ಸೆಯ ಕೊಠಡಿಗಳು, ಒಂದು ತೀವ್ರ ನಿಗಾ ಘಟಕ, ವಿವಿಧ ರೀತಿಯ ಪ್ರಯೋಗ ಶಾಲೆಗಳು ಸ್ತ್ರೀ ರೋಗ ಮತ್ತು ಹೆರಿಗೆ ಸೌಲಭ್ಯಗಳನ್ನೂ ಸಹ ಹೊಂದಿದೆ. ಮುಂದೊಂದು ದಿನ ಇದನ್ನು ಸಾವಿರ ಹಾಸಿಗೆಗಳ ಆಸ್ಪತ್ರೆಯಾಗಿ ಅಭಿವೃದ್ಧಿಗೊಳಿಸುವ ಧ್ಯೇಯವನ್ನು ಈ ಸಂಸ್ಥೆ ಹೊಂದಿದೆ.
ಈ ಸುಸಜ್ಜಿತ ಆಸ್ಪತ್ರೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು 12 ಜನ ವೈದ್ಯರು ಪಾಳಿಗಳಲ್ಲಿ ಸೇವೆ ನಿರ್ವಹಿಸುತ್ತಿದ್ದಾರೆ. ಇದಲ್ಲದೆ 4 ಮಂದಿ ಅರೆ ವೈದ್ಯಕೀಯ ಸಿಬ್ಬಂದಿ, 8 ಮಂದಿ ವೈದ್ಯಕೀಯ ಸಮಾಜ ಸೇವಕರು, 25 ಮಂದಿ ಶುಚಿತ್ವ ಪಾಲಕರು, 5ಜನ ಭದ್ರತಾ ಸಿಬ್ಬಂದಿ, 4 ಜನ ಬಾಣಸಿಗರು, ನಿರೀಕ್ಷಣಾ ಸಿಬ್ಬಂದಿ ಹಾಗೂ ಆಡಳಿತ ವರ್ಗ ಈ ತಂಡದ ಮುಖ್ಯ ಭಾಗವಾಗಿದ್ದಾರೆ.
ಈ ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆಯ ಜೊತೆಗೆ ಆಪತ್ಕಾಲೀನ ಮತ್ತು ದೀರ್ಘಕಾಲೀನ ಚಿಕಿತ್ಸೆಗಳು ಕೂಡ ಲಭ್ಯವಿದೆ. ಇದಲ್ಲದೆ ಶಸತ್ತ್ರಚಿಕಿತ್ಸೆ, ಔಷಧ ವಿಜ್ಞಾನ, ಮೂಳೆ, ಪ್ರಸೂತಿ ಹಾಗು ಸ್ತ್ರೀ ರೋಗ, ಮಾನಸಿಕ ಆರೋಗ್ಯ, ದಂತಚಿಕಿತ್ಸೆ, ಕಣ್ಣು ಹಾಗೂ ನರ ವಿಜ್ಞಾನ ಮುಂತಾದ ಕ್ಷೇತ್ರಗಳ ತಜ್ಞರು ವಾರಕೊಮ್ಮೆ ಭೇಟಿ ನೀಡಿ ರೋಗಿಗಳ ಶುಶ್ರೂಷೆಗೆ ನೆರವಾಗುತ್ತಾರೆ. ಈವರೆಗೆ ನೂರಕ್ಕೂ ಮೀರಿ ಯಶಸ್ವಿ ಕಣ್ಣು ಶಸ್ತ್ರಚಿಕಿತ್ಸೆ ನಡೆಸಿರುವ ಹೆಗ್ಗಳಿಕೆ ಈ ಆಸ್ಪತ್ರೆಯದು. ಏಕೆಂದರೆ ಕೇವಲ ವಾರಕ್ಕೊಮ್ಮೆ ಒದಗುವ ತಜ್ಞರ ಸೇವೆಯನ್ನು ಉಪಯೋಗಿಸಿಕೊಂಡು ಈ ಸಾಧನೆಯನ್ನು ಮಾಡಿದ್ದಾರೆ.
ಈ ಆಸ್ಪತ್ರೆಯ ಸೇವೆಗೆ ಪೂರಕವಾಗಿ ಉನ್ನತ ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸಲು ಕಿದ್ವಾಯಿ, ಸೈಂಟ್‌ಜಾನ್ಸ್, ನಿಮ್ಹಾನ್ಸ್, ಬೌರಿಂಗ್, ವಿಕ್ಟೋರಿಯಾ, ಜಯದೇವ ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಮುಂತಾದವುಗಳು ನಿರಂತರ ಸೇವಾ ಸೌಲಭ್ಯ ನೀಡುತ್ತಿವೆ. ಈ ಎಲ್ಲಾ ಸೇವೆಗಳ ಜೊತೆ ಈ ಆಸ್ಪತ್ರೆ ಆಗಾಗ ಆರೋಗ್ಯ ತಪಾಸಣಾ ಹಾಗೂ ಕೃತಕ ಅಂಗಾಂಗಗಳ ಜೋಡಣೆ ಶಿಬಿರಗಳನ್ನು ಹಮ್ಮಿಕೊಳ್ಳುತ್ತದೆ. ಇಲ್ಲಿ ದಿನದ 24 ಗಂಟೆಯೂ ರೋಗಿಗಳು ಭರ್ತಿ, ತುರ್ತು ಹಾಗೂ ಅಪಘಾತ ಚಿಕಿತ್ಸೆಯನ್ನು ಕೈಗೊಳ್ಳಲಾಗುತ್ತದೆ. ರೋಗಿಗಳ ಮನರಂಜನೆಯ ಸಲುವಾಗಿ ದೂರದರ್ಶನ, ಒಳಾಂಗಣ ಕ್ರೀಡಾ ಸಾಮಗ್ರಿಗಳು, ಕೇರಮ್ ಹಾಗೂ ಚದುರಂಗದಂತಹ ಅನೇಕ ವಸ್ತಗಳು ಲಭ್ಯವಿವೆ. ಆಗಾಗ ಹೊರಗಿನಿಂದ ಕಲಾವಿದರನ್ನು ಕರೆಸಿ ಹಾಸ್ಯೋತ್ಸವ ಹಾಗೂ ಸತ್ಸಂಗ ಭಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ವಾರಸುದಾರರಿಲ್ಲದ ವ್ಯಕ್ತಿಗಳಿಗೆ ಆಸರೆ ನೀಡುವ ಸಲುವಾಗಿ ಎರಡು ಆಶ್ರಮಗಳಿದ್ದು, ಉಚಿತ ಊಟ, ವಸತಿ ಹಾಗೂ ಬಟ್ಟೆ ನೀಡಿ ಆರೈಕೆ ಮಾಡಲಾಗುತ್ತದೆ. ಕೆಲವೊಮ್ಮೆ ತೀವ್ರತರದ ತೊಂದರೆಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ವಾರಸುದಾರರಿಲ್ಲದ ರೋಗಿ ಮೃತಪಟ್ಟರೆ, ಆ ವ್ಯಕ್ತಿಯ ವಿವರಗಳನ್ನು ಸ್ಥಳೀಯ ಪೊಲೀಸರಿಗೆ ಭಾವಚಿತ್ರದೊಂದಿಗೆ ನೀಡಲಾಗುತ್ತದೆ ಹಾಗೂ ಆ ವ್ಯಕ್ತಿಯ ವಾರಸುದಾರರನ್ನು ಹುಡುಕುವ ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತದೆ. ಇದು ಫಲಕಾರಿಯಾಗದಿದ್ದಾಗ ಪೊಲೀಸರಿಂದ ಅನುಮತಿ ಸಿಕ್ಕ ಮೇಲೆ ಆಯಾ ವ್ಯಕ್ತಿಯ ಧರ್ಮಕ್ಕನುಸಾರವಾಗಿ ಅವರ ಧರ್ಮ ಗುರುಗಳ ಸಮ್ಮಖದಲ್ಲಿ ಅಂತಿಮ ಕ್ರಿಯೆಯನ್ನು ನೆರವೇರಿಸಲಾಗುತ್ತದೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದು ಕೇವಲ ಸ್ಥಳೀಯ ಸಾರ್ವಜನಿಕ ಸಹಕಾರದಿಂದ ಮಾತ್ರ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ತಮ್ಮ ಸಹಾಯಹಸ್ತ ನೀಡಿದರೆ ಈ ಸಂಸ್ಥೆ ಇನ್ನಷ್ಟು ಉತ್ತಮ ಕಾರ್ಯಗಳನ್ನು ಹಮ್ಮಿಕೊಂಡು ಸಮಾಜದ ನಿರ್ಗತಿಕ ಹಾಗೂ ಅವಶ್ಯಕತೆಯುಳ್ಳ ಜನತೆಗೆ ಆಸರೆಯಾಗಲು ಸಾಧ್ಯವಾಗುತ್ತದೆ.

Write A Comment