ರಾಷ್ಟ್ರೀಯ

ವಾಜಪೇಯಿಯ ಕನಸು ನನಸಾಗಿಸುತ್ತೇನೆ: ಕಾಶ್ಮೀರಿಗಳಿಗೆ ಮೋದಿ ಭರವಸೆ

Pinterest LinkedIn Tumblr

modhi

ಕಿಶ್ತ್ವಾರ್(ಜ-ಕಾ), ನ.22: ಕಾಶ್ಮೀರದ ಕುರಿತು ತನಗೆ ಆಳವಾದ ಪ್ರೀತಿಯಿದೆಯೆಂದು ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಜಮ್ಮು-ಕಾಶ್ಮೀರದ ಜನರ ಹೃದಯಲ್ಲಿ ವಿಶೇಷ ಸ್ಥಾನ ಪಡೆದಿರುವ ‘ಪ್ರಜಾಪ್ರಭುತ್ವ, ಮಾನವೀಯತೆ ಹಾಗೂ ಕಾಶ್ಮೀರಿತನ’ ಗಳನ್ನಾಧರಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕನಸನ್ನು ನನಸುಗೊಳಿಸುವ ಆಶ್ವಾಸನೆಯನ್ನು ಇಂದು ನೀಡಿದ್ದಾರೆ.

ರಾಜ್ಯದಲ್ಲಿ ತನ್ನ ಪ್ರಥಮ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಅಟಲ್‌ಜೀಯವರ ‘ಪ್ರಜಾಪ್ರಭುತ್ವ, ಮಾನವೀಯತೆ ಹಾಗೂ ಕಾಶ್ಮೀರಿತನ’ ಎಂಬ ಶಬ್ದಗಳು ಕಾಶ್ಮೀರಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿವೆ ಹಾಗೂ ಪ್ರತಿ ಕಾಶ್ಮೀರಿ ಯುವಕನಲ್ಲಿ ಉತ್ತಮ ಭವಿಷ್ಯದ ಕುರಿತು ಆಶಾವಾದವನ್ನು ಮೂಡಿಸಿವೆ ಎಂದರು.
ಜಮ್ಮು-ಕಾಶ್ಮೀರದಲ್ಲಿ ಸಂಪೂರ್ಣ ಬಹುಮತದ ಬಿಜೆಪಿ ಸರಕಾರವೊಂದನ್ನು ಸ್ಥಾಪಿಸುವಂತೆ ತಾನು ಜನರಿಗೆ ಒತ್ತಾಯಿಸಬಯಸುತ್ತೇನೆ. ಜಮ್ಮು-ಕಾಶ್ಮೀರಕ್ಕಗಿ ಅಟಲ್‌ಜೀ ಕಂಡ ಕನಸನ್ನು ಮೋದಿ ತನ್ನೆಲ್ಲ ಶಕ್ತಿ ಉಪಯೋಗಿಸಿ ಸಾಕಾರಗೊಳಿಸುತ್ತಾರೆಂಬ ಮಾತನ್ನು ನಂಬಿರಿ ಎಂದು ಪ್ರಧಾನಿ ಜನರಿಗೆ ಮನವಿ ಮಾಡಿದರು.
ಧರ್ಮವನ್ನು ರಾಜಕೀಯದೊಂದಿಗೆ ಸೇರಿಸುವ ಪ್ರಯತ್ನದ ವಿರುದ್ಧ ಎಚ್ಚರಿಕೆ ನೀಡಿದ ಅವರು, ಒಬ್ಬ ಕಾಶ್ಮೀರಿ ಎಂದರೆ ಆತ ಕಾಶ್ಮೀರಿ, ಕೇಂದ್ರ ಸರಕಾರವು ರಾಜ್ಯದ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.
ಅಭಿವೃದ್ಧಿ, ಅಭಿವೃದ್ಧಿ ಹಾಗೂ ಅಭಿವೃದ್ಧಿ ಎಂಬುದು ತಮ್ಮ ಮಂತ್ರವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಸಂಪೂರ್ಣ ಅಭಿವೃದ್ಧಿ ಸಾಧಿಸುವ ಮೂಲಕ ಜನರು ತನ್ನಲ್ಲಿರುವ ವಿಶ್ವಾಸವನ್ನು ಬಡ್ಡಿ ಸಹಿತ ತೀರಿಸುತ್ತೇನೆ. ವಾಜಪೇಯಿ ಆರಂಭಿಸಿದ್ದ ಕೆಲಸವನ್ನು ಪೂರ್ತಿಗೊಳಿಸುವುದು ತನ್ನ ಇಚ್ಛೆಯಾಗಿದೆ. ಅದಕ್ಕಾಗಿ ತಾನು ಆಗಾಗ ಇಲ್ಲಿಗೆ ಬರುತ್ತೇನೆ ಎಂದು ಮೋದಿ, ಜನರ ಹರ್ಷೋದ್ಗಾರದ ಮಧ್ಯೆ ಹೇಳಿದರು.
ತಾನು ಕಾಶ್ಮೀರದ ಬಗ್ಗೆ ಹೃದಯ ಮತ್ತು ಆತ್ಮದಿಂದ ಆಳವಾದ ಪ್ರೀತಿ ಹೊಂದಿದ್ದೇನೆ. ಮೋದಿ ಕಾಶ್ಮೀರಕ್ಕೆ ಬಾರದಿರುವ ಒಂದೇ ಒಂದು ತಿಂಗಳಿಲ್ಲವೆಂದು ಇತರ ರಾಜಕೀಯ ಪಕ್ಷಗಳು ಆಶ್ಚರ್ಯಗೊಂಡಿವೆ. ತಾನು ಜುಲೈ, ಆಗಸ್ಟ್, ಸಪ್ಟೆಂಬರ್, ಅಕ್ಟೋಬರ್ ಹಾಗೂ ಈಗ ನವೆಂಬರ್‌ನಲ್ಲಿ ಇಲ್ಲಿಗೆ ಬಂದಿದ್ದೇನೆ ಎಂದವರು ತಿಳಿಸಿದರು.
ವಾಜಪೇಯಿ ನೇತೃತ್ವದ ಎನ್‌ಡಿಎ ಆಳ್ವಿಕೆಯನ್ನು ಜ್ಞಾಪಿಸಿದ ಮೋದಿ, ಪ್ರತಿ ಕಾಶ್ಮೀರಿಯೂ ತನ್ನ ಕನಸು ಈಗ ನನಸಾಗುವುದೆಂದು ಭಾವಿಸಿದ್ದನು. ಆದರೆ, ಕಳೆದ 10 ವರ್ಷಗಳಲ್ಲಿ ಕಾಶ್ಮೀರ ಮತ್ತದರ ಪರಿಸ್ಥಿತಿ ಏನಾಗಿದೆ? ಮಡಕೆಗೆ ತೂತಿದ್ದರೆ ಅದರಲ್ಲಿ ನೀರು ನಿಲ್ಲುವುದಿಲ್ಲ. ಕೇಂದ್ರದಿಂದ ಬರುವ ಹಣವೆಲ್ಲ ಎಲ್ಲಿಗೆ ಹೋಗುತ್ತದೆ ಎಂದು ತನಗೆ ಆಶ್ಚರ್ಯವಾಗುತ್ತಿದೆ ಎಂದು ಮೋದಿ ಭ್ರಷ್ಟಾಚಾರದ ಕುರಿತು ಕಾಶ್ಮೀರದ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.

Write A Comment