ಮನೋರಂಜನೆ

ಹಾಂಕಾಂಗ್ ಸೂಪರ್ ಸರಣಿ: ಚೀನಾದ ಚೆನ್‌ಗೆ ಶ್ರೀಕಾಂತ್ ಶರಣು

Pinterest LinkedIn Tumblr

kidambni-pti-630-98

ಹಾಂಕಾಂಗ್, ನ.22: ಹಾಂಕಾಂಗ್ ಓಪನ್ ಸೂಪರ್ ಸರಣಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಭಾರತದ ಯುವ ಶಟ್ಲರ್ ಕೆ. ಶ್ರೀಕಾಂತ್ ಚೀನಾದ ಅಗ್ರ ಶ್ರೇಯಾಂಕಿತ ಚೆನ್ ಲಾಂಗ್ ವಿರುದ್ದ ಮೂರು ಗೇಮ್ ಅಂತರದಿಂದ ಸೋತಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ.

ಶನಿವಾರ ಇಲ್ಲಿ ನಡೆದ 350,000 ಡಾಲರ್ ಬಹುಮಾನ ಮೊತ್ತದ ಹಾಂಕಾಂಗ್ ಸೂಪರ್ ಸರಣಿಯ ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಶ್ರೀಕಾಂತ್ ಅವರು ಚೆನ್ ಲಾಂಗ್ ವಿರುದ್ಧ 17-21, 21-19, 6-21 ಸೆಟ್‌ಗಳಿಂದ ಶರಣಾದರು. ಆಗಸ್ಟ್‌ನಲ್ಲಿ ನಡೆದಿದ್ದ ಬಿಡಬ್ಲೂಎಫ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಶ್ರೀಕಾಂತ್ ಅವರು ಚೆನ್ ವಿರುದ್ಧ ಸೋತಿದ್ದರು. ಆದರೆ, ಶನಿವಾರ ಉತ್ತಮ ಪ್ರದರ್ಶನ ತೋರಿದ ಶ್ರೀಕಾಂತ್ ಎರಡನೆ ಗೇಮನ್ನು 21-19 ರಿಂದ ಗೆದ್ದುಕೊಂಡಿದ್ದರು. ಆದರೆ, ಮೂರನೆ ಹಾಗೂ ನಿರ್ಣಾಯಕ ಗೇಮ್‌ನಲ್ಲಿ 6-21 ರಿಂದ ಸೋತರು. ಮೊದಲ ಗೇಮ್‌ನಲ್ಲಿ ಚೆನ್ ಆರಂಭದಲ್ಲೇ 10-3 ರಿಂದ ಮುನ್ನಡೆ ಸಾಧಿಸಿದರು. ಒಂದು ಹಂತದಲ್ಲಿ ಶ್ರೀಕಾಂತ್ ಅಂಕವನ್ನು 16-17ಕ್ಕೆ ಇಳಿಸಿದ್ದರು. ಶ್ರೀಕಾಂತ್ ನೆಟ್ಸ್‌ನಲ್ಲಿ ಕೆಲವು ಅಂಕಗಳನ್ನು ಕಳೆದುಕೊಂಡಿದ್ದರೆ, ಚೆನ್ ಮಿಡ್ ಕೋರ್ಟ್ ಹೊಡೆತದ ಮೂಲಕ ಅಂಕವನ್ನು ಸಂಪಾದಿಸಿದರು. ಈ ಮೂಲಕ ಮೊದಲ ಗೇಮನ್ನು 17-21 ರಿಂದ ಗೆದ್ದುಕೊಂಡರು. ಎರಡನೆ ಸೆಟ್‌ನಲ್ಲಿ ಕಠಿಣ ಪರಿಸ್ಥಿತಿಯಲ್ಲೂ ತಾಳ್ಮೆಯಿಂದ ಆಡಿದ ಶ್ರೀಕಾಂತ್ ನಿಧಾನವಾಗಿ 17-13 ರಿಂದ ಮುನ್ನಡೆ ಸಾಧಿಸಿದ್ದರು. ಚೆನ್ ಕೆಲವು ತಪ್ಪೆಸಗಿದ ಕಾರಣ ಶ್ರೀಕಾಂತ್ ಎರಡನೆ ಸೆಟನ್ನು 21-19 ರಿಂದ ವಶಪಡಿಸಿಕೊಂಡರು. ನಿರ್ಣಾಯಕ ಗೇಮ್‌ನಲ್ಲಿ ಪ್ರಾಬಲ್ಯ ಮೆರೆದ ಚೀನಾದ ಚೆನ್ ವಿರಾಮದ ವೇಳೆಗೆ 11-4 ಮುನ್ನಡೆಯಲ್ಲಿದ್ದರು. ಮೂರನೆ ಗೇಮ್‌ನಲ್ಲಿ ಶ್ರೀಕಾಂತ್ ಹಲವು ಅನಗತ್ಯ ತಪ್ಪೆಸಗಿದರು. ಈ ಹಿನ್ನೆಲೆಯಲ್ಲಿ ಚೆನ್ 21-6 ಅಂತರದಿಂದ ಮೂರನೆ ಗೇಮನ್ನು ಜಯಿಸಿ ಫೈನಲ್‌ಗೆ ಲಗ್ಗೆ ಇಟ್ಟರು.

Write A Comment