ಮನೋರಂಜನೆ

ಐಪಿಎಲ್ ಸ್ಪಾಟ್ ಫಿಕ್ಸಿಂಗ್: ನ.14ರಂದು ಸುಪ್ರೀಂ ಕೋರ್ಟ್‌ನಲ್ಲಿ ಅಂತಿಮ ವರದಿಯ ವಿಚಾರಣೆ

Pinterest LinkedIn Tumblr

sriniಹೊಸದಿಲ್ಲಿ, ನ.10: ಐಪಿಎಲ್‌ನ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ಸಮಿತಿಯು ಸಲ್ಲಿಸಿರುವ ವರದಿಯನ್ನು ಸುಪ್ರೀಂ ಕೋರ್ಟ್ ನ.14ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಸಲ್ಲಿಸಿರುವ ಅಂತಿಮ ವರದಿಯಲ್ಲಿನ ವಿಚಾರಗಳು ಈ ಸಂದರ್ಭದಲ್ಲಿ ಬಹಿರಂಗಗೊಳ್ಳುವ ಸಾಧ್ಯತೆ ಇದೆ.
ಇಂದು ಸುಪ್ರೀಂಕೋರ್ಟ್ ವರದಿಯಲ್ಲಿನ ಅಂಶಗಳ ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ಅಗತ್ಯವೆಂದು ಅಭಿಪ್ರಾಯಪಟ್ಟು, ಶುಕ್ರವಾರ ವರದಿಯ ಪ್ರಮುಖ ವಿಚಾರಗಳನ್ನು ಬಹಿರಂಗಪಡಿಸುವ ಬಗ್ಗೆ ದ್ವಿಸದಸ್ಯ ಪೀಠವು ನಿರ್ಧರಿಸಲಿದೆ ಎಂದು ಹೇಳಿಕೆ ನೀಡಿದೆ.
ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಸಮಿತಿಯು ನ.3ರಂದು ಸಲ್ಲಿಸಿರುವ ಅಂತಿಮ ವರದಿಯ ಬಗ್ಗೆ ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಹಾಗೂ ಅರ್ಜಿದಾರರಾದ ಬಿಹಾರ ಕ್ರಿಕೆಟ್ ಸಂಸ್ಥೆಯ ವಕೀಲರು ವರದಿಯಲ್ಲಿ ಒಳಗೊಂಡಿರುವ ವಿಚಾರಗಳನ್ನು ಬಹಿರಂಗಪಡಿಸುವಂತೆ ಮಾಡಿರುವ ಮನವಿಗೆ ಉತ್ತರಿಸಿದ ಸುಪ್ರೀಂಕೋರ್ಟ್‌ನ ನ್ಯಾಯಪೀಠವು ಶುಕ್ರವಾರದ ತನಕ ಕಾಯುವಂತೆ ಸಲಹೆ ನೀಡಿತು.

ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಸಮಿತಿಯು ಭದ್ರವಾಗಿ ಮುಚ್ಚಿದ ಕವರಿನಲ್ಲಿ ಸಲ್ಲಿಸಲಾದ ವರದಿಯು ಮೂರು ಭಾಗಗಳನ್ನು ಒಳಗೊಂಡಿದೆ. ಅರ್ಜಿದಾರರ ಪರ ವಕೀಲರಾದ ಅಮಿತ್ ಶರ್ಮ ಕ್ರೀಡಾ ಕ್ಷೇತ್ರದ ಹಿತದೃಷ್ಟಿಯಿಂದ ಈ ವರದಿಯನ್ನು ಬಹಿರಂಗಪಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಬಿಸಿಸಿಐನ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿ ನ.20ರಂದು ವಾರ್ಷಿಕ ಮಹಾ ಅಧಿವೇಶನ ಮತ್ತು ಚುನಾವಣೆ ಇರುವುದರಿಂದ ಇದಕ್ಕೆ ಮೊದಲು ವರದಿ ಬಹಿರಂಗಗೊಂಡರೆ ಉತ್ತಮ. ಇದರಲ್ಲಿ ಒಂದು ವೇಳೆ ಶ್ರೀನಿವಾಸನ್ ಮೇಲಿರುವ ಆರೋಪ ವಜಾಗೊಂಡರೆ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಕೂಲವಾಗುತ್ತದೆ ಎಂದರು. ಆದರೆ ನ್ಯಾಯಾಲಯವು ಶ್ರೀನಿವಾಸನ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸಿದೆ.
ಅಂತಿಮ ವರದಿಯಲ್ಲಿ ಐಸಿಸಿ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತು ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 12 ಮಂದಿಯ ಹೆಸರು ಸೇರಿಕೊಂಡಿರುವುದರಿಂದ ಈ ಪ್ರಕರಣ ಕುತೂಹಲ ಕೆರಳಿಸಿದೆ.
ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಬೆಟ್ಟಿಂಗ್ ಸಂಬಂಧಿಸಿ ನಡೆಸಿರುವ ಮಾತುಕತೆಯ ಧ್ವನಿ ಮುದ್ರಿತ ದಾಖಲೆಗಳನ್ನು ಮುದ್ಗಲ್ ಸಮಿತಿಯು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಮುದ್ಗಲ್ ಸಮಿತಿಗೆ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ವರದಿ ತಯಾರಿಸಲು ಸೂಕ್ತ ನೆರವು ನೀಡಿದ್ಧಾರೆ.

-http://vbnewsonline.com

Write A Comment