ಮನೋರಂಜನೆ

ವಿಂಡೀಸ್ ಗೆಲುವಿಗೆ ಐಪಿಎಲ್ ಎಫೆಕ್ಟ್

Pinterest LinkedIn Tumblr

samuales1__

ಹೊಸದಿಲ್ಲಿ, ಅ.9: ಟೀಮ್ ಇಂಡಿಯಾವನ್ನು ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಣಿಸಲು ವಿಂಡೀಸ್‌ನ ಆಟಗಾರರಿಗೆ ಐಪಿಎಲ್‌ನಲ್ಲಿ ಪಡೆದಿರುವ ಅನುಭವದ ನೆರವಾಗಿದೆ.

ದೇಶಿಯ ಕ್ರಿಕೆಟಿಗರು ಐಪಿಎಲ್ ಮೂಲಕ ಲಾಭ ಪಡೆಯುವುದು ಒಂದಡೆಯಾದರೆ, ವಿದೇಶಿ ಆಟಗಾರರು ಐಪಿಎಲ್‌ನ ವಿವಿಧ ತಂಡಗಳಲ್ಲಿ ಸೇರಿಕೊಂಡು ಕೈತುಂಬಾ ಸಂಪಾದನೆ ಮಾಡುವ ಜೊತೆಗೆ ಭಾರತದ ಪಿಚ್‌ನಲ್ಲಿ ಆಡುವ ಮೂಲಕ ಗರಿಷ್ಠ ಪ್ರಯೋಜನ ಪಡೆಯತ್ತಿದ್ದಾರೆ.

ಭಾರತ ವಿರುದ್ಧ 124 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ ವಿಂಡೀಸ್ ತಂಡದಲ್ಲಿರುವ ಆಟಗಾರರಲ್ಲಿ ಜೆರೊಮ್ ಟೇಲರ್, ಸುಲೈಮಾನ್ ಬೆನ್ ಮತ್ತು ದಿನೇಶ್ ರಾಮ್ದೀನ್‌ರನ್ನು ಹೊರತುಪಡಿಸಿದರೆ ಉಳಿದ 8 ಮಂದಿ ಐಪಿಎಲ್‌ನ ವಿವಿಧ ತಂಡಗಳಲ್ಲಿ ಆಡಿದವರು. ಡ್ವೇಯ್ನ ಸ್ಮಿತ್ ಮತ್ತು ನಾಯಕ ಡ್ವೇಯ್ನಿ ಬ್ರಾವೊ ಇತ್ತೀಚೆಗೆ ನಡೆದ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎರಡನೆ ಬಾರಿ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೊಚ್ಚಿಯ ನೆಹರು ಸ್ಟೇಡಿಯಂನಲ್ಲಿ ಇನಿಂಗ್ಸ್ ಆರಂಭಿಸಿದ ಸ್ಮಿತ್ ಮತ್ತು ಬ್ರಾವೊ ಭಾರತದ ಬೌಲರ್‌ಗಳನ್ನು ದಂಡಿಸಿದ್ದರು. ಅಜೇಯ ಶತಕದ ಮೂಲಕ ತಂಡದ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದ್ದ ಮರ್ಲಾನ್ ಸ್ಯಾಮುಯೆಲ್ಸ್ ಏಳು ತಿಂಗಳ ಬಳಿಕ ವಿಂಡೀಸ್ ತಂಡಕ್ಕೆ ಮರಳಿದ್ದರು. ಸ್ಯಾಮುಯೆಲ್ಸ್ ಹಿಂದೆ ಐಪಿಎಲ್‌ನ ಪುಣೆ ವಾರಿಯರ್ಸ್‌ ತಂಡದಲ್ಲಿ ಆಡಿದ್ದರು.

ವಿಂಡೀಸ್‌ನ ಡ್ವೇಯ್ನ್ ಸ್ಮಿತ್ ಐಪಿಎಲ್‌ನಲ್ಲಿ 36 ಪಂದ್ಯಗಳಲ್ಲಿ ಆಡಿ 34.57 ಸರಾಸರಿಯಂತೆ 1,141 ರನ್ ಸೇರಿಸಿದ್ದಾರೆ. ಕೀರನ್ ಪೊಲಾರ್ಡ್ 77 ಪಂದ್ಯಗಳಲ್ಲಿ 1,332 ರನ್ ಹಾಗೂ 53 ವಿಕೆಟ್ ಮತ್ತು ಡ್ವೇಯ್ನಾ ಬ್ರಾವೋ 74 ಪಂದ್ಯಗಳಲ್ಲಿ 968 ರನ್ ಮತ್ತು 79 ವಿಕೆಟ್ ಪಡೆದಿದ್ದಾರೆ. ಈ ಆಟಗಾರರು ಭಾರತದಲ್ಲಿ ವಿವಿಧ ಲೀಗ್‌ಗಳಲ್ಲಿ ಆಡಿ ಗರಿಷ್ಠ ಪ್ರಯೋಜನ ಪಡೆದುಕೊಂಡಿದ್ದಾರೆ.

ಕೊಚ್ಚಿಯ ಪಿಚ್‌ನಲ್ಲಿ ಟ್ವೆಂಟಿ-20 ಕ್ರಿಕೆಟ್‌ನ ಸ್ಪೆಶಲಿಸ್ಟ್ ಸುರೇಶ್ ರೈನಾ ಮತ್ತು ಮೋಹಿತ್ ಶರ್ಮ ವೈಫಲ್ಯ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತ್ತು. ರೈನಾ ಖಾತೆ ತೆರೆಯದೆ ಪೆವಿಲಿಯನ್ ಸೇರಿದ ಕಾರಣದಿಂದಾಗಿ ಟೀಮ್ ಇಂಡಿಯಾಕ್ಕೆ ವಿಂಡೀಸ್ ವಿರುದ್ಧ ಗೆಲುವಿನ ಗುರಿ ತಲುಪಲು ಸಾಧ್ಯವಾಗಲಿಲ್ಲ.

ವಿಂಡೀಸ್ ವಿರುದ್ಧದ ಸರಣಿಯಲ್ಲಿ ಇನ್ನೂ 4 ಪಂದ್ಯಗಳು ಬಾಕಿ ಉಳಿದಿವೆ. ಎರಡನೆ ಪಂದ್ಯ ದಿಲ್ಲಿಯಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್‌ಗೆ ಇದು ತವರು ನೆಲ. ಅವರು ಈ ಪಂದ್ಯದಲ್ಲಿ ಚೆನ್ನಾಗಿ ಆಡುವುದನ್ನು ನಿರೀಕ್ಷಿಸಲಾಗಿದೆ. ಭಾರತಕ್ಕೆ ಮುಂದಿನ ವಿಶ್ವಕಪ್‌ನ ತಯಾರಿಗೆ 9 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಲು ಅವಕಾಶ ಇದೆ. ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಈ ಪಂದ್ಯಗಳಲ್ಲಿ ತನ್ನ ಕಳಪೆ ಫಾರ್ಮ್‌ನ್ನು ಮುಂದುವರಿಸಿದರೆ ಆಸ್ಟ್ರೇಲಿಯ ಮತ್ತು ನ್ಯೂಝಿಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಮತ್ತೆ ಸಮಸ್ಯೆ ಎದುರಿಸಬೇಕಾಗಿದೀತು.

ಮೊದಲ ಏಕದಿನ -ಹೈಲೈಟ್ಸ್
ಭಾರತ ತಂಡ ತವರಿನಲ್ಲಿ ವಿಂಡೀಸ್ ವಿರುದ್ಧ ಎರಡನೆ ಬಾರಿ ಗರಿಷ್ಠ ರನ್‌ಗಳ ಸೋಲು ಅನುಭವಿಸಿದೆ. 2002, ನ.24ರಂದು ವಿಜಯವಾಡಾದಲ್ಲಿ ವಿಂಡೀಸ್ ವಿರುದ್ಧ 135 ರನ್‌ಗಳ ಸೋಲು ಅನುಭವಿತ್ತು.

ವಿಂಡೀಸ್ ಕೊಚ್ಚಿಯಲ್ಲಿ ಗರಿಷ್ಠ ರನ್ ದಾಖಲಿಸಿದೆ. ಭಾರತ ತಂಡ ಆಸ್ಟ್ರೇಲಿಯ ವಿರುದ್ಧ 1998, ಎ.1ರಂದು ಗಳಿಸಿದ 309 ರನ್ ಕೊಚ್ಚಿಯಲ್ಲಿ ಈ ಹಿಂದೆ ದಾಖಲಾದ ಗರಿಷ್ಠ ಸ್ಕೋರ್ ಆಗಿತ್ತು.

ಸ್ಯಾಮುಯೆಲ್ಸ್ (ಔಟಾಗದೆ 126) ಕೊಚ್ಚಿಯ ನೆಹರು ಸ್ಟೇಡಿಯಂನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ಆಟಗಾರ.
ಸ್ಯಾಮುಯೆಲ್ಸ್ ಏಕದಿನ ಕ್ರಿಕೆಟ್‌ನಲ್ಲಿ 10ನೆ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲಿ 3ನೆ ಬಾರಿ ಈ ಗೌರವಕ್ಕೆ ಭಾಜನರಾಗಿದ್ದಾರೆ.

ದಿನೇಶ್ ರಾಮ್ದೀನ್ (59 ಎಸೆತಗಳಲ್ಲಿ 61) ಐದನೆ ಅರ್ಧಶತಕ ದಾಖಲಿಸಿದ್ದಾರೆ.
ಸ್ಯಾಮುಯೆಲ್ಸ್ ಮತ್ತು ರಾಮ್ದೀನ್ ನಾಲ್ಕನೆ ವಿಕೆಟ್‌ಗೆ 165 ರನ್ ದಾಖಲಿಸಿರುವುದು ಭಾರತದ ವಿರುದ್ಧ ದಾಖಲಾದ ವಿಂಡೀಸ್‌ನ ಗರಿಷ್ಠ ರನ್‌ಗಳ ಜೊತೆಯಾಟವಾಗಿದೆ. ಈ ಮೊದಲು ನ.12, 2002ರಲ್ಲಿ ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಚಂದರ್‌ಪಾಲ್ ಮತ್ತು ಸರವನ್ 149 ರನ್‌ಗಳ ಜೊತೆಯಾಟ ನೀಡಿದ್ದರು.

ರೈನಾ ಏಕದಿನ ಕ್ರಿಕೆಟ್‌ನಲ್ಲಿ 12ನೆ ಬಾರಿ ಮತ್ತು ವಿಂಡೀಸ್ ವಿರುದ್ಧ 4ನೆ ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
ರವೀಂದ್ರ ಜಡೇಜ ಕಳೆದ ಒಂದು ವರ್ಷದ ಅವಧಿಯಲ್ಲಿ 26 ಪಂದ್ಯಗಳಲ್ಲಿ 246 ಓವರ್ ಬೌಲಿಂಗ್ ನಡೆಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ವಿರಾಟ್ ಕೊಹ್ಲಿ ಕಳೆದ 16 ಏಕದಿನ ಪಂದ್ಯಗಳಲ್ಲಿ 9ನೆ ಬಾರಿ ಎರಡಂಕೆಯ ಸ್ಕೋರ್ ದಾಖಲಿಸುವಲ್ಲಿ ಎಡವಿದ್ದಾರೆ.

Write A Comment