
ಇಂಚೋನ್, ಅ.1: ಏಷ್ಯನ್ ಗೇಮ್ಸ್ನ ಪುರುಷರ ಹಾಕಿ ಫೈನಲ್ ಪಂದ್ಯ ಗುರುವಾರ ಇಲ್ಲಿ ನಡೆಯಲಿದ್ದು, ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಗೇಮ್ಸ್ನಲ್ಲಿ ಚಿನ್ನ ಜಯಿಸುವ ತಂಡ 2016ರ ರಿಯೊ ಒಲಿಂಪಿಕ್ಸ್ಗೆ ನೇರ ಪ್ರವೇಶ ಗಿಟ್ಟಿಸಿಕೊಳ್ಳಲಿದೆ. ಭಾರತ ಲೀಗ್ ಹಂತದಲ್ಲಿ ಪಾಕಿಸ್ತಾನದ ವಿರುದ್ಧ 1-2 ಅಂತರದಿಂದ ಸೋತಿತ್ತು. ಫೈನಲ್ನಲ್ಲಿ ತಪ್ಪನ್ನು ತಿದ್ದಿಕೊಂಡು ಚಿನ್ನದ ಪದಕವನ್ನು ಜಯಿಸುವ ಲೆಕ್ಕಾಚಾರದಲ್ಲಿದೆ. ಭಾರತ ಹಾಗೂ ಪಾಕಿಸ್ತಾನ 1982ರಲ್ಲಿ ಹೊಸದಿಲ್ಲಿಯ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ನಡೆದ ಏಷ್ಯನ್ ಗೇಮ್ಸ್ನ ಪುರುಷರ ಹಾಕಿ ಫೈನಲ್ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಗುರುವಾರ ಭಾರತ ಹಾಗೂ ಪಾಕಿಸ್ತಾನ ಏಷ್ಯನ್ ಗೇಮ್ಸ್ನಲ್ಲಿ 8ನೆ ಬಾರಿ ಫೈನಲ್ನಲ್ಲಿ ಸೆಣಸಾಡಲಿವೆ. 8ರಲ್ಲಿ ಕೇವಲ ಎರಡು ಬಾರಿ ಮಾತ್ರ ಭಾರತ ಗೆಲುವು ಸಾಧಿಸಿದೆ. ಭಾರತ 1986 ಬ್ಯಾಂಕಾಕ್ ಗೇಮ್ಸ್ನಲ್ಲಿ ಕೊನೆಯ ಬಾರಿ ಪಾಕನ್ನು ಮಣಿಸಿತ್ತು.
1990ರಲ್ಲಿ ಬೀಜಿಂಗ್ನಲ್ಲಿ ನಡೆದ ಗೇಮ್ಸ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆದಿದ್ದು, ಪಾಕಿಸ್ತಾನ ಚಿನ್ನದ ಪದಕವನ್ನು ಜಯಿಸಿತ್ತು. ಎರಡು ಬಾರಿ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕವನ್ನು ಜಯಿಸಿರುವ ಭಾರತ 2002ರಲ್ಲಿ ಬುಸಾನ್ನಲ್ಲಿ ನಡೆದಿದ್ದ ಫೈನಲ್ನಲ್ಲಿ ಆತಿಥೇಯ ಕೊರಿಯಾ ವಿರುದ್ಧ 3-4 ರಿಂದ ಸೋತಿತ್ತು. 2002ರ ನಂತರ ಭಾರತ ಚಿನ್ನದ ಪದಕವನ್ನು ಜಯಿಸಿಲ್ಲ. ಈ ಬಾರಿಯ ಗೇಮ್ಸ್ನ ಸೆಮಿಫೈನಲ್ನಲ್ಲಿ ಕೊರಿಯಾ ತಂಡವನ್ನು ಮಣಿಸಿರುವ ಭಾರತ 12 ವರ್ಷಗಳ ನಂತರ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ಹಾಲಿ ಚಾಂಪಿಯನ್ ಪಾಕಿಸ್ತಾನ 9ನೆ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ. ಗ್ರೂಪ್ ಹಂತದಲ್ಲಿ ಪಾಕ್ ತಂಡ ಭಾರತದ ವಿರುದ್ಧ ಉತ್ತಮ ದಾಳಿಯನ್ನು ಸಂಘಟಿಸಿತ್ತು.
ಪೆನಾಲ್ಟಿ ಕಾರ್ನರ್ ಹಿಟ್ಟರ್ ನಾಯಕ ಇಮ್ರಾನ್ ಮುಹಮ್ಮದ್ ಹಾಗೂ ಇರ್ಫಾನ್ ಮುಹಮ್ಮದ್ ಭಾರತಕ್ಕೆ ಮತ್ತೊಮ್ಮೆ ಸವಾಲಾಗಬಹುದು. ಪಾಕಿಸ್ತಾನದ ಗೋಲ್ಕೀಪರ್ ಇಮ್ರಾನ್ ಬಟ್ ಮಲೇಷ್ಯಾ ವಿರುದ್ಧದ ಸೆಮಿಫೈನಲ್ನಲ್ಲಿ ಅತ್ಯುತ್ತಮ ಗೋಲ್ಕೀಪಿಂಗ್ನ ಮೂಲಕ ಗಮನ ಸೆಳೆದಿದ್ದರು. ದಕ್ಷಿಣ ಕೊರಿಯಾ ವಿರುದ್ಧ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಕಾಶ್ದೀಪ್ ಸಿಂಗ್ ಬಾರಿಸಿದ್ದ ಏಕೈಕ ಗೋಲಿನ ನೆರವಿನಿಂದ ಭಾರತ 1-0 ಅಂತರದಿಂದ ಗೆಲುವು ಸಾಧಿಸಿತ್ತು.
ನಾಯಕ ಸರ್ದಾರ್ ಸಿಂಗ್ ಹಾಗೂ ಮನ್ಪ್ರೀತ್ ಸಿಂಗ್ ಮಿಡ್ಫೀಲ್ಡ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ಕೂಟದಲ್ಲಿ ಈ ವರೆಗೆ ಭಾರತೀಯ ಸ್ಟ್ರೈಕರ್ಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಗೋಲ್ಕೀಪರ್ ಶ್ರೀಜೇಶ್ರನ್ನು ಭಾರತ ಹೆಚ್ಚು ಅವಲಂಬಿಸಿದೆ. ಡ್ರಾಗ್ ಫ್ಲಿಕ್ ಎಕ್ಸ್ಪರ್ಟ್ ರೂಪಿಂದರ್ಪಾಲ್ ಸಿಂಗ್ ಗಾಯ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದು, ಭಾರತಕ್ಕೆ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಸಿಂಗ್ ಒಮನ್ ವಿರುದ್ಧದ ಗೇಮ್ಸ್ನ ಎರಡನೆ ಪಂದ್ಯದ ವೇಳೆ ಗಾಯಗೊಂಡಿದ್ದರು.