ಗಲ್ಫ್

ಇಂದು ಹಜ್ ಆರಂಭ 1.36 ಲಕ್ಷ ಭಾರತೀಯರು ಸೇರಿದಂತೆ 20 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಮಕ್ಕಾದಲ್ಲಿ

Pinterest LinkedIn Tumblr

makkha1

ಮಕ್ಕಾ, ಅ. 1: 1.36 ಲಕ್ಷ ಭಾರತೀಯರು ಸೇರಿದಂತೆ 20 ಲಕ್ಷಕ್ಕೂ ಅಧಿಕ ಮುಸ್ಲಿಮರು ಗುರುವಾರ ಮಿನಾ ಕಣಿವೆಯಲ್ಲಿ ಸೇರುವುದರೊಂದಿಗೆ ಹಜ್ ವಿಧಿ ವಿಧಾನಗಳನ್ನು ಆರಂಭಿಸಿದ್ದಾರೆ. ಹಜ್ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಮಕ್ಕಾ ಗವರ್ನರ್ ರಾಜಕುಮಾರ ಮಿಶಾಲ್ ಬಿನ್ ಅಬ್ದುಲ್ಲಾ ತಿಳಿಸಿದರು.

‘‘ಯಾತ್ರಿಕರನ್ನು ಸ್ವಾಗತಿಸುವ ಯೋಜನೆ ಯಶಸ್ವಿಯಾಗಿದೆ. ಜಗತ್ತಿನ ಅತಿ ದೊಡ್ಡ ವಾರ್ಷಿಕ ಸಮಾವೇಶವನ್ನು ಯಶಸ್ವಿಗೊಳಿಸಲು ಎಲ್ಲ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಮಾನವ ಮತ್ತು ತಾಂತ್ರಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸಬೇಕು’’ ಎಂದು ಅವರು ಹೇಳಿದರು.

ಹಜ್ ಪರವಾನಿಗೆಗಳಿಲ್ಲದ ಯಾರನ್ನೂ ಪವಿತ್ರ ಸ್ಥಳಗಳಿಗೆ ಬಿಡಬಾರದು ಹಾಗೂ ಅಂಥವರಿಗೆ ನಿಷೇಧ ವಿಧಿಸಬೇಕು ಎಂದು ಕೇಂದ್ರೀಯ ಹಜ್ ಸಮಿತಿಯ ಅಧ್ಯಕ್ಷರೂ ಆಗಿರುವ ರಾಜಕುಮಾರ ಮಿಶಾಲ್ ಭದ್ರತಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವುದಕ್ಕಾಗಿ ಮಕ್ಕಾ, ಮದೀನಾ ಮತ್ತು ಇತರ ಪವಿತ್ರ ನಗರಗಳಲ್ಲಿ 70,000ಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ಸೌದಿ ಅರೇಬಿಯ ನಿಯೋಜಿಸಿದೆ.

ಬಾಂಗ್ಲಾದೇಶದ ಅಧ್ಯಕ್ಷ ಮುಹಮ್ಮದ್ ಅಬ್ದುಲ್ ಹಮೀದ್, ಸುಡಾನ್ ಅಧ್ಯಕ್ಷ ಉಮರ್ ಬಶೀರ್, ಸೊಮಾಲಿಯದ ಅಧ್ಯಕ್ಷ ಹಸನ್ ಶೇಖ್ ಮಹ್ಮೂದ್, ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಸೇರಿದಂತೆ ಹಲವಾರು ದೇಶಗಳ ಮುಖ್ಯಸ್ಥರು ಈಗಾಗಲೇ ಹಜ್‌ಗಾಗಿ ಆಗಮಿಸಿದ್ದಾರೆ.

ಇಂದು ತಡ ರಾತ್ರಿ ಅಥವಾ ನಾಳೆ ನಸುಕಿನಲ್ಲಿ ಯಾತ್ರಿಗಳು ಮಿನಾಕ್ಕೆ ತೆರಳಲು ಆರಂಭಿಸುತ್ತಾರೆ. ಮಕ್ಕಾದ ಪವಿತ್ರ ಕಅಬಾಕ್ಕೆ ಲಕ್ಷಾಂತರ ಮಂದಿ ಪ್ರದಕ್ಷಿಣೆ ಬರುತ್ತಿದ್ದು ಅಲ್ಲಿನ ಮಸ್ಜಿದುಲ್ ಹರಂನಲ್ಲಿ ವಿಶ್ವಾದ್ಯಂತದಿಂದ ಬಂದ ಯಾತ್ರಿಕರು ಕಿಕ್ಕಿರಿದು ನೆರೆದಿದ್ದಾರೆ.

ಮೊದಲ ಹಂತದಲ್ಲಿ ಯಾತ್ರಿಕರು ಪ್ರಾರ್ಥಿಸುತ್ತಾ ಟೆಂಟ್ ನಗರ ಮಿನಾದಲ್ಲಿ ರಾತ್ರಿ ಕಳೆಯುತ್ತಾರೆ. ‘‘ಭಾರತೀಯ ಹಜ್ ಮಿಶನ್ ಮತ್ತು ಸೌದಿ ಸರಕಾರ ನಡೆಸಿರುವ ಏರ್ಪಾಡುಗಳು ಅತ್ಯುತ್ತಮವಾಗಿವೆ. ನಮ್ಮ ಎಲ್ಲ ಅಗತ್ಯಗಳನ್ನು ಪೂರೈಸಲಾಗುತ್ತಿದೆ ಹಾಗೂ ನಾವು ಎದುರಿಸುವ ಸಮಸ್ಯೆಗಳತ್ತ ಗಮನ ಹರಿಸಲಾಗುತ್ತಿದೆ’’ ಎಂದು ಇಲ್ಲಿನ ಅಝೀಝಿಯ ವಾಸ್ತವ್ಯ ಕಟ್ಟಡದಲ್ಲಿ ನೆಲೆಸಿರುವ ಭಾರತೀಯ ಯಾತ್ರಿಯೊಬ್ಬರು ಪಿಟಿಐಗೆ ಹೇಳಿದರು.

Write A Comment