ಮನೋರಂಜನೆ

ಏಷ್ಯನ್ ಗೇಮ್ಸ್‌ಗೆ ಅದ್ದೂರಿ ಚಾಲನೆ

Pinterest LinkedIn Tumblr

Asian-Games-Indian

ಇಂಚೋನ್, ಸೆ.19: ಒಲಿಂಪಿಕ್ಸ್ ಗೇಮ್ಸ್ ನಂತರ ವಿಶ್ವದ ಎರಡನೆ ಅತ್ಯಂತ ದೊಡ್ಡ ಕ್ರೀಡಾ ಮೇಳ 17ನೆ ಆವೃತ್ತಿಯ ಏಷ್ಯನ್ ಗೇಮ್ಸ್ ಹಾಡು, ನೃತ್ಯ ಹಾಗೂ ಸುಡುಮದ್ದು ಚಿತ್ತಾರದ ಮೂಲಕ ಇಂದು ಅದ್ದೂರಿಯಾಗಿ ಉದ್ಘಾಟನೆಗೊಂಡಿದೆ.

ಏಷ್ಯನ್ ಗೇಮ್ಸ್‌ನಲ್ಲಿ 45 ದೇಶಗಳ 13,000 ಸ್ಪರ್ಧಾಳುಗಳು 36 ಕ್ರೀಡೆಗಳಲ್ಲಿ ಭಾಗವಹಿಸಲಿದ್ದು, ಶನಿವಾರದಿಂದ ಸ್ಪರ್ಧೆಗಳು ಆರಂಭವಾಗಲಿದೆ. ‘‘17ನೆ ಆವೃತ್ತಿಯ ಏಷ್ಯನ್ ಗೇಮ್ಸ್ ಆರಂಭವಾಗಿದೆ’’ ಎಂದು ಘೋಷಿಸಿದ ದಕ್ಷಿಣ ಕೊರಿಯಾದ ಅಧ್ಯಕ್ಷ ಪಾರ್ಕ್ ಗೆವೂನ್-ಹೀ ಗೇಮ್ಸ್‌ಗೆ ಅಧಿಕೃತ ಚಾಲನೆ ನೀಡಿದರು. ನಟಿ ಲೀ ಯಂಗ್ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದ ತಕ್ಷಣವೇ ಆಕಾಶದಲ್ಲಿ ಸಿಡಿ ಮದ್ದುಗಳ ಚಿತ್ತಾರ ಮೂಡಿಬಂತು.

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ದೇಶಗಳ ಅಥ್ಲೀಟ್‌ಗಳು ಪಥ ಸಂಚಲನ ನಡೆಸಿದರು. ಈ ಬಾರಿಯ ಗೇಮ್ಸ್‌ನಲ್ಲಿ ಪ್ರತಿ ತಂಡ 130 ಸದಸ್ಯರನ್ನು ಹೊಂದಿರಬೇಕೆಂದು ಆಯೋಜಕರು ತಾಕೀತು ಮಾಡಿದ್ದರು. ಭಾರತದ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ಧ್ವಜಧಾರಿಯಾಗಿ ತಂಡವನ್ನು ಮುನ್ನಡೆಸಿದರು. ಪಥ ಸಂಚಲನದಲ್ಲಿ ಪುರುಷ ಅಥ್ಲೀಟ್‌ಗಳು ಕಪ್ಪು ಕೋಟು -ನೀಲಿ ಪ್ಯಾಂಟ್ ಧರಿಸಿದ್ದರೆ, ಮಹಿಳಾ ಅಥ್ಲೀಟ್‌ಗಳು ನೀಲಿ ಸೀರೆ ಧರಿಸಿದ್ದರು. ಭಾರತದ ಅಥ್ಲೀಟ್‌ಗಳು ತ್ರಿವರ್ಣ ಧ್ವಜವನ್ನು ಬೀಸುತ್ತಾ ಪಥ ಸಂಚಲನದಲ್ಲಿ ಭಾಗವಹಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಏಷ್ಯಾದ ಏಕತೆ ಹಾಗೂ ಸಾಂಸ್ಕೃತಿಕ ವೈಭವವನ್ನು ನಾಲ್ಕು ವಿಭಾಗಗಳಲ್ಲಿ ಪ್ರದರ್ಶಿಸಲಾಯಿತು. ಸ್ವಾಗತ ಕಾರ್ಯಕ್ರಮದ ಮೂಲಕ ಆರಂಭವಾ ಕಾರ್ಯಕ್ರಮ 80 ನಿಮಿಷಗಳ ಕಾಲ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಆತಿಥೇಯ ಕೊರಿಯಾ ತಂಡದ ರಾಷ್ಟ್ರ ಧ್ವಜವನ್ನು 8 ಮಂದಿ ಕೊರಿಯಾ ಅಥ್ಲೀಟ್‌ಗಳು ಸ್ಟೇಡಿಯಂಗೆ ತಂದರು. 60 ಸಾವಿರ ಸಾಮರ್ಥ್ಯದ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರು ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Write A Comment