ಬೆಂಗಳೂರು, ಸೆ. 19: ಯೂನಿಕೋಡ್ ಆಧಾರಿತ ಮೊಬೈಲ್ ಆ್ಯಪನ್ನು ನಾಡಿನ ಸಮಸ್ತ ಕನ್ನಡಿಗರು ಬಳಸುವಂತಾಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಮೊಬೈಲ್‌ಫೋನ್ ಕನ್ನಡ ಬಳಕೆ ಮತ್ತು ಯೂನಿಕೋಡ್ ಆವೃತ್ತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಶೀಘ್ರದಲ್ಲೇ ಸರಕಾರದ ಎಲ್ಲ ಅಂತರ್ಜಾಲ ತಾಣಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲಾಗುವುದೆಂದು ಪ್ರಕಟಿಸಿದರು.
ಅಂತರ್ಜಾಲದಲ್ಲಿ ಕನ್ನಡ ಅನುಷ್ಠಾನಕ್ಕೆ ತಾಂತ್ರಿಕ ಸಲಹಾ ಸಮಿತಿ ಯೊಂದನ್ನು ನಿವೃತ್ತ ಕುಲಪತಿ ಡಾ. ಕೆ.ಚಿದಾನಂದ ಗೌಡರ ಅಧ್ಯಕ್ಷತೆಯಲ್ಲಿ ನೇಮಕ ಮಾಡಲಾಗಿದ್ದು, ಅದು ನೀಡುವ ಎಲ್ಲ ಶಿಫಾರಸುಗಳನ್ನು ಸರಕಾರ ಅನುಷ್ಠಾನಗೊಳಿಸಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಕನ್ನಡ ತಂತ್ರಾಂಶ ಸಮಿತಿ ಸದಸ್ಯರೂ ಆದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಸರಕಾರ ಕನ್ನಡ ಅನುಷ್ಠಾನದ ಕಾರ್ಯವನ್ನು ಉತ್ತಮವಾಗಿ ಜಾರಿಗೆ ತರುತ್ತಿದೆ. ಮುಂದೆಯೂ ಕನ್ನಡದ ವಿಷಯದಲ್ಲಿ ಸರಕಾರ ವಿಶೇಷ ಆಸಕ್ತಿ ವಹಿಸಲಿ ಎಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮೊಬೈಲ್‌ನಲ್ಲಿ ಕನ್ನಡ ತಂತ್ರಾಂಶ ಬಳಕೆಗೆ ಉತ್ತೇಜನ ನೀಡಲು ಈ ತಂತ್ರಾಂಶವನ್ನು ರೂಪಿ ಸಲಾಗಿದೆ. ಮೊಬೈಲ್‌ನಲ್ಲಿ ಕನ್ನಡ ಬಳಕೆಯ ಕುರಿತು ತಂತ್ರಾಂಶವನ್ನು ರೂಪಿಸಿದ್ದು, ಫೋನಿನಲ್ಲಿ ಕನ್ನಡ ಲಿಪಿ ಯೊಂದಿಗೆ ಸಂಪರ್ಕ ಸಾಧಿಸಲು ಈ ತಂತ್ರಾಂಶ ನೆರವಾಗಲಿದೆ ಎಂದರು.
ಅಲ್ಲದೇ, ಕರ್ನಾಟಕದ ಸಾಂಸ್ಕೃತಿಕ ಉತ್ಸವವನ್ನು ಕುರಿತು ಮೊಬೈಲ್ ಆಪ್ ಸಿದ್ಧಪಡಿಸಿದ್ದು, ಪ್ರತಿಯೊಂದು ಉತ್ಸವಗಳ ಸಾಂಸ್ಕೃತಿಕ ಹಿನ್ನೆಲೆ ಆಚರಿಸುವ ಸ್ಥಳ, ಜಿಲ್ಲೆ, ಮತ್ತು ಆಚರಣೆಗಳ ಮಾಹಿತಿ ನೀಡಲಾಗಿದೆ. ಇತಿಹಾಸ ಮತ್ತು ಪರಂಪರೆ, ಧಾರ್ಮಿಕ ಪ್ರಾಮುಖ್ಯತೆ, ಸಾಮಾಜಿಕ ಪ್ರಸ್ತುತತೆ, ಆ ಸ್ಥಳಗಳಿಗೆ ತಲುಪುವ ಬಗೆ ಹೇಗೆ ಎಂಬ ಮಾಹಿತಿ ಕೂಡ ಇದರಲ್ಲಿದೆಯೆಂದರು.
ಇದರಿಂದ ರಾಜ್ಯದ ಸಾಂಸ್ಕೃ ತಿಕ ತಾಣಗಳು ಮತ್ತು ಉತ್ಸವಗಳ ಮಹತ್ವ, ಇಲಾಖೆಯ ಜಾಲತಾಣದಲ್ಲಿ ವಿಶ್ವದಾದ್ಯಂತ ಪರಿಚಿತವಾಗುವುದಲ್ಲದೆ, ಪ್ರವಾಸಿಗರಿಗೆ ಈ ಸ್ಥಳಗಳ ಪ್ರಾಮುಖ್ಯ, ಉತ್ಸವಗಳು ನಡೆಯುವ ಕಾಲಮಾನ ಆ ಸ್ಥಳಗಳಿಗೆ ಹೋಗುವ ಸೌಲಭ್ಯಗಳು ಸುಲಭವಾಗಿ ಸಿಗುವಂತಾಗುತ್ತದೆ ಎಂದು ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಸಲಹಾ ಸಮಿತಿ ಅಧ್ಯಕ್ಷ ಡಾ. ಚಿದಾನಂದಗೌಡ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ನರಸಿಂಹ ರಾಜು ಹಾಗೂ ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರತ್ನಪ್ರಭ, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.