ಮನೋರಂಜನೆ

ಚೊಚ್ಚಲ ಚಿನ್ನದ ಪದಕದ ಮೇಲೆ ವೇಟ್‌ಲಿಫ್ಟರ್‌ಗಳ ಚಿತ್ತ

Pinterest LinkedIn Tumblr

wegthlifter

ಹೊಸದಿಲ್ಲಿ, ಸೆ.18: ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 12 ಪದಕಗಳನ್ನು ಜಯಿಸಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದ್ದ ಭಾರತೀಯ ವೇಟ್ ಲಿಫ್ಟಿಂಗ್ ತಂಡ ಶುಕ್ರವಾರದಿಂದ ದಕ್ಷಿಣ ಕೊರಿಯಾದ ಇಂಚೋನ್‌ನಲ್ಲಿ ಆರಂಭವಾಗಲಿರುವ 17ನೆ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಚೊಚ್ಚಲ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ. ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಶನ್(ಐಡಬ್ಲೂಎಫ್) ಆಯ್ಕೆ ಮಾಡಿರುವ 10 ಸದಸ್ಯರ ತಂಡದಲ್ಲಿ ಗ್ಲಾಸ್ಗೋದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಏಳು ಮಂದಿಗೆ ಅವಕಾಶ ನೀಡಿದೆ.

ಡೋಪಿಂಗ್ ಪ್ರಕರಣದಂತಹ ಘಟನೆಯ ಮೂಲಕ ಸುದ್ದಿಯಾಗುತ್ತಿದ್ದ ವೇಟ್‌ಲಿಫ್ಟರ್‌ಗಳು ಪದಕ ಗೆಲ್ಲುವ ಮೂಲಕ ಸುದ್ದಿಯಾಗಲಿ ಎಂದು ಐಡಬ್ಲೂಎಫ್ ಹಾರೈಸುತ್ತಿದೆ. ಭಾರತೀಯ ವೇಟ್‌ಲಿಫ್ಟರ್‌ಗಳು ಈ ಮೊದಲು ಡೋಪಿಂಗ್ ಪ್ರಕರಣದಲ್ಲಿ ಸಿಲುಕಿದ್ದರು. ಆದರೆ ಈ ಬಾರಿಯ ಗ್ಲಾಸ್ಗೋ ಗೇಮ್ಸ್‌ನಲ್ಲಿ ಅಂತಹ ಯಾವುದೇ ಪ್ರಕರಣದಲ್ಲಿ ಸಿಲುಕಿಲ್ಲ. 2006ರಲ್ಲಿ ನಾಲ್ಕು ವೇಟ್‌ಲಿಫ್ಟರ್‌ಗಳು ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಕಾರಣ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ 12 ತಿಂಗಳ ಕಾಲ ನಿಷೇಧಕ್ಕೆ ಗುರಿಯಾಗಿತ್ತು. ಏಷ್ಯಾಡ್‌ನಿಂದಲೂ ಹೊರಗುಳಿದಿತ್ತು.

ಆ ನಂತರ ಸುಧಾರಣೆ ಕಂಡ ವೇಟ್‌ಲಿಫ್ಟರ್‌ಗಳು 2010ರ ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 8 ಪದಕಗಳನ್ನು ಜಯಿಸಿದ್ದರು. ಭಾರತ ಈ ತನಕ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿಲ್ಲ. ಭಾರತೀಯ ತಂಡ ಇಂಚೋನ್ ಗೇಮ್ಸ್‌ನಲ್ಲಿ ಕಠಿಣ ಸವಾಲನ್ನು ಎದುರಿಸಬೇಕಾಗಿದೆ. ವೇಟ್ ಲಿಫ್ಟಿಂಗ್ ಸ್ಪರ್ಧೆ ಶನಿವಾರದಿಂದ ಆರಂಭವಾಗಲಿದೆ. ಭಾರತೀಯ ತಂಡದಲ್ಲಿ ಐವರು ಪುರುಷರು ಹಾಗೂ ಐವರು ಮಹಿಳೆಯರು ಇದ್ದಾರೆ.

ಸತೀಶ್ ಶಿವಲಿಂಗಂ(ಪುರುಷರ 77 ಕೆಜಿ), ಸುಖೇನ್ ಡೇ(ಪುರುಷರ 56 ಕೆಜಿ) ಹಾಗೂ ಸಂಜಿತ್ ಕೆ. (ಮಹಿಳೆಯರ 48 ಕೆಜಿ) ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು. ಕೆ. ರವಿ ಕುಮಾರ್(ಪುರುಷರ 77 ಕೆಜಿ), ವಿಕಾಸ್ ಥಾಕುರ್(ಪುರುಷರ 85 ಕೆಜಿ) ಹಾಗೂ ಶೈಖೋಮ್ ಮಿರಾಬಾಯಿ ಚಾನು(ಮಹಿಳೆಯರ 48 ಕೆಜಿ) ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು. ಪೂನಮ್ ಯಾದವ್ ಮಹಿಳೆಯರ 63 ಕೆಜಿ ವಿಭಾಗದಲ್ಲಿ ಕಂಚು ಜಯಿಸಿದ್ದರು. ಕವಿತಾದೇವಿ(85 ಕೆಜಿ) ಗ್ಲಾಸ್ಗೋ ಗೇಮ್ಸ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಚೀನಾ, ಇರಾನ್, ಕಝಕ್‌ಸ್ತಾನ ಹಾಗೂ ಆತಿಥೇಯ ದಕ್ಷಿಣ ಕೊರಿಯಾ ತಂಡಗಳಿಂದ ಕಠಿಣ ಸವಾಲನ್ನು ಎದುರಿಸಲಿದೆ.

Write A Comment