ರಾಷ್ಟ್ರೀಯ

ವಿವಿಗಳಲ್ಲಿ ಹಿಂದಿ ಹೇರಿಕೆಗೆ ತಮಿಳುನಾಡು ವಿರೋಧ: ಜಯಲಲಿತಾ

Pinterest LinkedIn Tumblr

JAYALALITHAA

ಚೆನ್ನೈ, ಸೆ. 18: ವಿವಿಗಳಲ್ಲಿ ಹಿಂದಿ ಭಾಷೆಯನ್ನು ಹೇರುವುದರ ಸಂಬಂಧ ಯುಜಿಸಿ ಸುತ್ತೋಲೆೆಯನ್ನು ಅನುಷ್ಠಾನಗೊಳಿಸದಂತೆ ಅಣ್ಣಾ ವಿವಿ ಹಾಗೂ ಅಲಗಪ್ಪಾ ವಿವಿಗೆ ತಮಿಳುನಾಡು ಸರಕಾರ ಸೂಚಿಸಿದೆ. ಹಿಂದಿ ಹೇರಿಕೆಯ ಯೋಜನೆಯನ್ನು ಹಿಂದಿನ ಯುಪಿಎ ಸರಕಾರ ಜಾರಿಗೊಳಿಸಿತ್ತು ಎಂದು ಮುಖ್ಯಮಂತ್ರಿ ಜಯಲಲಿತಾ ಆರೋಪಿಸಿದ್ದಾರೆ.

ಸ್ನಾತಕ ಪದವಿ ಕೋರ್ಸ್‌ಗಳಲ್ಲಿ ಇಂಗ್ಲಿಷ್ ಜೊತೆಗೆ ಹಿಂದಿಯನ್ನು ಪ್ರಾಥಮಿಕ ಭಾಷೆಯಾಗಿ ಬೋಧಿಸಬೇಕು ಎಂದು ಸೂಚಿಸಿ 2014ರ ಸೆ. 16ರಂದು ಅಣ್ಣಾ ವಿವಿ ಹಾಗೂ ಅಲಗಪ್ಪಾ ವಿವಿಗಳಿಗೆ ಸುತ್ತೋಲೆ ಬಂದಿದೆ ಎಂದು ಜಯಲಲಿತಾ ತಿಳಿಸಿದ್ದಾರೆ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್‌ರ ಅಧ್ಯಕ್ಷತೆಯಲ್ಲಿ ಕೇಂದ್ರೀಯ ಹಿಂದಿ ಸಮಿತಿ(ರಾಷ್ಟ್ರೀಯ ಹಿಂದಿ ಕೌನ್ಸಿಲ್)ಯು 2011ರ ಜು.28ರಂದು ನಡೆಸಿದ್ದ ಸಭೆಯ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.

ಹಿಂದಿ ಹೇರಿಕೆ ಪ್ರಸ್ತಾಪವನ್ನು ಇದೀಗ ವಿರೋಧಿಸುತ್ತಿರುವ ವಿರೋಧ ಪಕ್ಷ ಡಿಎಂಕೆ ಈ ಹಿಂದೆ ಯುಪಿಎ ಸರಕಾರದ ಭಾಗವಾಗಿದ್ದ ವೇಳೆಯಲ್ಲಿ ಈ ಬಗ್ಗೆ ಚಕಾರವೆತ್ತಿರಲಿಲ್ಲವೇಕೆ? ಎಂದು ಜಯಲಲಿತಾ ಪ್ರಶ್ನಿಸಿದ್ದಾರೆ. ಹಿಂದಿ ಭಾಷೆ ಮಾತನಾಡದ ರಾಜ್ಯಗಳಲ್ಲಿ ಹಿಂದಿಯನ್ನು ಹೇರಬಾರದು ಎಂಬ ತನ್ನ ಪಕ್ಷದ ನಿಲುವು ಸ್ಥಿರವಾಗಿರಲಿದೆ ಎಂದು ಅವರು ಹೇಳಿದ್ದಾರೆ. ಹಿಂದಿ ಭಾಷೆ ಮಾತನಾಡದ ರಾಜ್ಯಗಳಿಗೆ ಹಿಂದಿಯನ್ನು ಹೇರಬಾರದು ಎಂದು ಅಧಿಕೃತ ಭಾಷೆಗಳ ಕಾಯ್ದೆ 1963 ತಿಳಿಸುತ್ತದೆ. ಇಂತಹ ರಾಜ್ಯಗಳು ಕೇಂದ್ರ ಸರಕಾರದ ಜೊತೆ ನಡೆಸುವ ಸಂವಹನಗಳನ್ನು ‘ವಲಯ ಸಿ’ ಎಂದು ವಿಭಾಗಿಸಲಾಗಿದ್ದು, ಬಳಿಕ ಇಂಗ್ಲಿಷ್ ಭಾಷೆಯನ್ನು ಇಲ್ಲಿ ಕಡ್ಡಾಯಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆದ್ದರಿಂದ ತಮಿಳುನಾಡಿನ ವಿವಿಗಳಿಗೆ ಯುಜಿಸಿ ಸುತ್ತೋಲೆ ಅನ್ವಯವಾಗುವುದಿಲ್ಲ ಎಂದು ಜಯಲಲಿತಾ ಹೇಳಿದ್ದಾರೆ. ತಮಿಳನ್ನು ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕೆಂಬ ತನ್ನ ಬೇಡಿಕೆಗಳನ್ನು ಜಯಲಲಿತಾ ಪುನರುಚ್ಚರಿಸಿದ್ದು, ಮದ್ರಾಸ್ ಹೈಕೋರ್ಟ್‌ನಲ್ಲಿ ತಮಿಳು ಭಾಷೆಗೆ ಸ್ಥಾನಮಾನ ದೊರೆಯಬೇಕೆಂದಿದ್ದಾರೆ. ಇಂಗ್ಲಿಷ್ ಜೊತೆ ಹಿಂದಿಯನ್ನು ಬೋಧಿಸುವಂತೆ ರಾಜ್ಯದ ವಿವಿಗಳಿಗೆ ನಿರ್ದೇಶನ ನೀಡುವುದು ಅಸ್ವೀಕಾರ ಮಾತ್ರವಲ್ಲದೆ ಕಾನೂನಿಗೆ ವಿರುದ್ಧವಾದುದ್ದಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

Write A Comment