ರಾಷ್ಟ್ರೀಯ

ಅತ್ಯಾಚಾರ ಸಂತ್ರಸ್ತೆಯರ ಬಗ್ಗೆ ಪ್ರಸಾರ: ವಿದ್ಯುನ್ಮಾನ ಮಾಧ್ಯಮಗಳಿಗೆ ಸೆನ್ಸಾರ್ ಬೋರ್ಡ್?

Pinterest LinkedIn Tumblr

rape

ಬೆಂಗಳೂರು, ಸೆ. 18: ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯಗಳಂತಹ ಪ್ರಕರಣಗಳನ್ನು ವಿಶ್ವಮಟ್ಟಕ್ಕೆ ತಲುಪುವಂತೆ ಮಾಡಿ ಮಹಿಳೆಯ ನೈತಿಕ ಸ್ಥೈರ್ಯಕ್ಕೆ ಕುಂದುಂಟುಮಾಡುತ್ತಿರುವ ವಿದ್ಯುನ್ಮಾನ ಮಾಧ್ಯಮಗಳಿಗೆ ಕಡಿವಾಣ ಹಾಕಲು ರಾಜ್ಯ ಮಹಿಳಾ ಆಯೋಗ ಮುಂದಾಗಿದೆ.

ನೊಂದ ಮಹಿಳೆಯನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಮಾಧ್ಯಮಗಳು ಆಕೆಯ ಮುಖವನ್ನು ಮಾತ್ರ ಮರೆ ಮಾಡಿ, ಅವಳ ಹಾಗೂ ಅವಳ ಕುಟುಂಬಸ್ಥರ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುತ್ತಿವೆ. ಆದುದರಿಂದ ಚಲನ ಚಿತ್ರಗಳಿಗಿರುವಂತೆ ವಿದ್ಯುನ್ಮಾನ ಮಾಧ್ಯಮಗಳಿಗೂ ಸೆನ್ಸಾರ್ ಮಂಡಳಿ ರಚಿಸುವಂತೆ ಕೋರಿ ರಾಜ್ಯ ಸರಕಾರಕ್ಕೆ ಮಹಿಳಾ ಆಯೋಗದ ಅಧ್ಯಕ್ಷ ಮಂಜುಳಾ ಮಾನಸ ಪತ್ರ ಬರೆದಿದ್ದಾರೆ.

ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯನ್ನು ವೈಭವೀಕರಿಸಿ ಪ್ರಚಾರ ಮಾಡ ಲಾಗುತ್ತಿದೆ. ಈ ಸುದ್ದಿಗಳಿಂದಾಗಿ ಸಮಾಜದ ಸ್ವಾಸ್ಥ ಹಾಳಾಗುತ್ತಿದೆ. ಇದೇ ರೀತಿಯಲ್ಲಿ ಮುಂದುವರಿದರೆ ಮತ್ತಷ್ಟು ಪ್ರಮಾಣದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಲಿದ್ದು, ಈ ಬಗ್ಗೆ ವಿವರಣೆ ನೀಡುವ ಮೂಲಕ ಮಾಧ್ಯಮಗಳಲ್ಲಿ ಪ್ರಚಾರವನ್ನು ಗಳಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಲಿದೆ. ಸಿನಿಮಾ ನಟಿಯರ ವೈವಾಹಿಕ ಸಂಬಂಧಗಳು ಕೆಟ್ಟು ಹೋದಲ್ಲಿ ಇಲ್ಲವೇ, ವಿಚ್ಛೇದನ ಪಡೆಯುವ ಸಂಬಂಧದ ಪ್ರಕರಣಗಳು ನಡೆದಲ್ಲಿ ಅದೇ ಸುದ್ದಿಯನ್ನು ದಿನವಿಡೀ ಪ್ರಸಾರ ಮಾಡುವ ಮೂಲಕ, ಸಾಮಾನ್ಯ ಜನರಲ್ಲಿ ವಿಚ್ಛೇದನಕ್ಕೆ ಮುಂದಾಗುವ ಮಹಿಳೆಯರ ಸಂಖ್ಯೆ ಹೆಚ್ಚಳವಾಗುವುದಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿರುವುದನ್ನು ತಕ್ಷಣ ತಡೆಯಬೇಕಾಗಿದೆ.

ಹೆಣ್ಣು ಮಕ್ಕಳನ್ನು ಆಚೆಗೆ ಬಿಡುತ್ತಿಲ್ಲ: ಸಿನಿಮಾ ನಟಿಯರ ಲೈಂಗಿಕ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ, ಆಕೆಯ ಅರೆಬೆತ್ತಲೆ ಚಿತ್ರಗಳನ್ನು ಸುದ್ದಿವಾಹಿನಿಗಳಲ್ಲಿ ದಿನವಿಡೀ ಪ್ರಸಾರ ಮಾಡುವ ಮೂಲಕ ಸಮಾಜದಲ್ಲಿ ಮಹಿಳೆ ಎಂದರೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದು, ಸಂಪ್ರದಾಯಸ್ಥ ಕುಟುಂಬಗಳಲ್ಲಿ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಪಡೆಯುವುದು ಹಾಗೂ ಉದ್ಯೋಗಗಳಲ್ಲಿ ಸ್ವತಂತ್ರವಾಗಿ ತೊಡಗಿಕೊಳ್ಳುವುದಕ್ಕೆ ಅವಕಾಶ ನೀಡದಂತಹ ಸನ್ನಿವೇಶ ಸೃಷ್ಟಿಯಾಗಲು ಕಾರಣವಾಗುತ್ತಿದೆ ಎಂದು ಪತ್ರಿಕೆಯೊಂದಿಗೆ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ತಿಳಿಸಿದರು.

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ: ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಹೆಸರು, ಕುಟುಂಬಸ್ಥರ ಮಾಹಿತಿ, ವಿಳಾಸ ಸೇರಿದಂತೆ ಯಾವುದೇ ರೀತಿಯ ಮಾಹಿತಿಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿದೆ. ಆದರೆ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಮುಖವನ್ನು ಮರೆ ಮಾಡಿ, ಸಂಪೂರ್ಣ ವಿವರವನ್ನು ಬಿತ್ತರಿಸಲಾಗುತ್ತಿದ್ದು, ಆಕೆಯನ್ನು ಸಮಾಜ ಮತ್ತಷ್ಟು ದೂಷಣೆ ಮಾಡುವುದಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

Write A Comment