ಅಂತರಾಷ್ಟ್ರೀಯ

ಗಡಿ ತಂಟೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ

Pinterest LinkedIn Tumblr

modi21

ಹೊಸದಿಲ್ಲಿ, ಸೆ.18: ಭಾರತದ ಗಡಿಯುದ್ದಕ್ಕೂ ಪದೇಪದೇ ನಡೆಯುತ್ತಿರುವ ಅತಿಕ್ರಮಣ ಘಟನೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ‘ತೀವ್ರ ಕಳವಳ’ ವ್ಯಕ್ತಪಡಿಸಿದ್ದು, ಭಾರತ-ಚೀನಾಗಳು ತಮ್ಮ ನಡುವಣ ಗಡಿ ವಿವಾದವನ್ನು ಆದಷ್ಟು ಬೇಗ ಇತ್ಯರ್ಥಪಡಿಸಿಕೊಳ್ಳಬೇಕು ಎಂದಿದ್ದಾರೆ.

ಭಾರತ-ಚೀನಾ ನಾಯಕರ ನಡುವೆ ಗುರುವಾರ ಇಲ್ಲಿ ನಡೆದ ಶೃಂಗಸಭೆಯ ಮೇಲೆ ಲಡಾಕ್‌ನಲ್ಲಿನ ಬೆಳವಣಿಗೆಗಳ ಕರಿಛಾಯೆ ಹಬ್ಬಿತ್ತು. ಭಾರತದ ಗಡಿಯೊಳಗೆ ಚೀನಾದ ಸೇನೆ ಮತ್ತು ನಾಗರಿಕರ ಅತಿಕ್ರಮಣದ ಹಿನ್ನೆಲೆಯಲ್ಲಿ ಮಾತುಕತೆಗಳು ನಡೆದವು.

ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡುವ ಒಪ್ಪಂದವನ್ನು ಎರಡೂ ದೇಶಗಳು ಪಾಲಿಸಬೇಕು ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ರೊಂದಿಗೆ ನಡೆದ ಮಾತುಕತೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದರು.
ನರೇಂದ್ರ ಮೋದಿ ಮತ್ತು ಕ್ಸಿ ಜಿನ್‌ಪಿಂಗ್‌ರ ನಡುವೆ ಸುಮಾರು ಮೂರು ಗಂಟೆಗಳ ಕಾಲ ಮಾತುಕತೆ ನಡೆಯಿತು. ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 20 ಶತಕೋಟಿ ಡಾಲರ್‌ನಷ್ಟು ಹೂಡಿಕೆ ಮಾಡುವ ನಿರ್ಧಾರ ವನ್ನು ಚೀನಾ ಈ ಸಂದರ್ಭದಲ್ಲಿ ಪ್ರಕಟಿಸಿತು.

ಆದರೆ, ಛುಮರ್ ಮತ್ತು ಡೆಮ್‌ಚೊಕ್ ಸೆಕ್ಟರ್‌ಗಳಲ್ಲಿ ಕಳೆದ ರಾತ್ರಿ ಮತ್ತು ಗುರುವಾರ ಮುಂಜಾನೆ ನಡೆದ ಅತಿಕ್ರಮಣದ ಘಟನೆಗಳ ಸುತ್ತಮುತ್ತವೇ ಮಾತುಕತೆ ಕೇಂದ್ರೀಕೃತವಾಗಿತ್ತು. ಬುಧವಾರ ಅಹ್ಮದಾಬಾದ್‌ನಲ್ಲೇ ಮೋದಿ ಈ ವಿಷಯವನ್ನು ಚೀನಾದ ಅಧ್ಯಕ್ಷರೊಂದಿಗೆ ಪ್ರಸ್ತಾಪಿಸಿದ್ದರು. ಆದರೆ, ಇದೊಂದು ‘ಅನೌಪಚಾರಿಕ ಚರ್ಚೆ’ ಎಂದು ಕೇಂದ್ರ ಸರಕಾರ’ ನಂತರ ಸ್ಪಷ್ಟನೆ ನೀಡಿತ್ತು.

‘‘ಗಡಿಯಲ್ಲಿ ಪದೇಪದೇ ನಡೆಯುತ್ತಿರುವ ಘಟನೆಗಳ ಕುರಿತು ನಮ್ಮ ಗಂಭೀರ ಕಳವಳವನ್ನು ನಾನು ಪ್ರಸ್ತಾಪಿಸಿ ದ್ದೇನೆ. ಗಡಿ ಪ್ರದೇಶದಲ್ಲಿನ ಶಾಂತಿ ಮತ್ತು ಸೌಹಾರ್ದತೆಗಳು ನಮ್ಮ ನಡುವಣ ಸಂಬಂಧಗಳ ಬುನಾದಿಯನ್ನು ಆಧರಿಸಿದೆ ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಮೋದಿ ಅವರು ಮಾಧ್ಯಮದ ಮುಂದೆ ಹೇಳಿದ್ದರು.

‘ಎರಡೂ ದೇಶಗಳ ನಡುವಣ ಗಡಿ ಇನ್ನೂ ನಿಗದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕೆಲವೊಮ್ಮೆ ಕೆಲವೊಂದು ಘಟನೆಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ’ ಎಂದು ಚೀನಾದ ಅಧ್ಯಕ್ಷರು ಹೇಳಿದ್ದರು.

ಗಡಿ ಪ್ರಶ್ನೆಯನ್ನು ಆದಷ್ಟು ಶೀಘ್ರದಲ್ಲಿ ಸ್ನೇಹಯುತ ಸಮಾಲೋಚನೆಗಳ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಚೀನಾ ಬದ್ಧವಾಗಿದೆ ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದರು.

ಎರಡನೆ ದಿನದ ಮಾತುಕತೆಗಳ ನಂತರ 12 ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕಿದವು. ಭಾರತದಲ್ಲಿ ಚೀನಾದ ಎರಡು ಕೈಗಾರಿಕಾ ಪಾರ್ಕ್‌ಗಳ ಸ್ಥಾಪನೆ ಮತ್ತು ಭಾರತೀಯ ರೈಲ್ವೆಯಲ್ಲಿ ಹೂಡಿಕೆ ಕುರಿತಾದ ಒಪ್ಪಂದಗಳು ಇದರಲ್ಲಿ ಸೇರಿವೆ.

Write A Comment