ಮನೋರಂಜನೆ

ಡೇವಿಸ್ ಕಪ್: ಸರ್ಬಿಯಾಗೆ ಜಯ: ವಿಶ್ವ ಗುಂಪಿಗೆ ತೇರ್ಗಡೆಯಾಗಲು ಭಾರತ ವಿಫಲ

Pinterest LinkedIn Tumblr

PTI9_15_2014_000040B

ಬೆಂಗಳೂರು, ಸೆ.15: ಡೇವಿಸ್ ಕಪ್‌ನ ಐದನೆ ಪಂದ್ಯದಲ್ಲಿ ಇಂದು ಯೂಕಿ ಬಾಂಬ್ರಿ ಫಿಲಿಪ್ ಕ್ರಾಜಿನೋವಿಕ್ ವಿರುದ್ಧ ಸುಲಭವಾಗಿ ಶರಣಾಗಿದ್ದಾರೆ. ಇದರೊಂದಿಗೆ ಆತಿಥೇಯ ಭಾರತ ತಂಡ ಸರ್ಬಿಯಾ ವಿರುದ್ಧ 2-3 ಅಂತರದಿಂದ ಸೋತು ವಿಶ್ವ ಗ್ರೂಪ್‌ನಲ್ಲಿ ಅರ್ಹತೆ ಪಡೆಯುವ ಅವಕಾಶದಿಂದ ವಂಚಿತವಾಗಿದೆ.

ರವಿವಾರ ಮಳೆಯಿಂದಾಗಿ ಮೊಟಕುಗೊಂಡಿದ್ದ ಐದನೆ ರಿವರ್ಸ್ ಸಿಂಗಲ್ಸ್ ಪಂದ್ಯ ಮೀಸಲು ದಿನವಾದ ಇಂದು ಮುಂದುವರಿಯಿತು. ರವಿವಾರ ಒಂದು ಸೆಟ್‌ನಿಂದ ಮುನ್ನಡೆ ಸಾಧಿಸಿದ್ದ ಸೆರ್ಬಿಯಾದ ಕ್ರಾಜಿನೋವಿಕ್ ದಿಲ್ಲಿಯ ಆಟಗಾರ ಬಾಂಬ್ರಿ ಅವರನ್ನು 6-3, 6-4, 6-4 ಸೆಟ್‌ಗಳಿಂದ ಸೋಲಿಸಿ 2010ರ ಚಾಂಪಿಯನ್ ಸರ್ಬಿಯಾ ತಂಡ ವಿಶ್ವ ಗ್ರೂಪ್‌ನಲ್ಲಿ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಬಾರಿ ಡೇವಿಸ್‌ಕಪ್‌ನ ವಿಶ್ವಗ್ರೂಪ್‌ನಲ್ಲಿ ಸ್ಥಾನ ಗಿಟ್ಟಿಸುವಲ್ಲಿ ವಿಫಲವಾಗಿರುವ ಭಾರತ 2015ರ ಋತುವಿನಲ್ಲಿ ಏಷ್ಯಾ/ಓಶಿಯಾನಿಯಾ ವಲಯದ ಪಂದ್ಯದಲ್ಲಿ ಮತ್ತೊಮ್ಮೆ ಹೋರಾಟ ನಡೆಸಬೇಕಾಗಿದೆ. ಭಾರತ 2011ರಲ್ಲಿ ವಿಶ್ವ ಗ್ರೂಪ್‌ಗೆ ತೇರ್ಗಡೆಯಾಗಿತ್ತು. ಆದರೆ ಮೊದಲ ಸುತ್ತಿನಲ್ಲಿ ಸರ್ಬಿಯಾ ವಿರುದ್ಧವೇ ಸೋತು ನಿರಾಸೆ ಅನುಭವಿಸಿತ್ತು.

ರವಿವಾರ ಸೋಮ್‌ದೇವ್ ದೇವ್‌ವರ್ಮನ್ ಮೊದಲ ರಿವರ್ಸ್ ಸಿಂಗಲ್ಸ್‌ನಲ್ಲಿ ಗೆಲುವು ಸಾಧಿಸಿ ಪಂದ್ಯ 2-2 ರಿಂದ ಟೈಗೊಳ್ಳಲು ಕಾರಣರಾಗಿದ್ದರು. ಸೋಮ್‌ದೇವ್ ಪ್ರದರ್ಶನದಿಂದ ಸ್ಫೂರ್ತಿ ಪಡೆದಿದ್ದ ಯೂಕಿ ರವಿವಾರ ಪಂದ್ಯಯಿಂದಾಗಿ ಪಂದ್ಯ ರದ್ದಾಗುವ ಮೊದಲು ಕ್ರಾಜಿನೊವಿಕ್‌ಗೆ ತೀವ್ರ ಪೈಪೋಟಿ ನೀಡಿದ್ದರು.

ಇಂದು ಬೆಳಗ್ಗೆ 3-6, 4-4 ರಿಂದ ಆಟ ಮುಂದುವರಿಸಿದ ಯೂಕಿ ಎದುರಾಳಿ ಸರ್ಬಿಯಾ ಆಟಗಾರನಿಗೆ ಮತ್ತೆ ಪೈಪೋಟಿ ನೀಡಲು ವಿಫಲರಾಗಿದ್ದರು. 114 ವರ್ಷಗಳ ಡೇವಿಸ್‌ಕಪ್ ಇತಿಹಾಸದಲ್ಲಿ 51 ಬಾರಿ 0-2 ಯಿಂದ ಹಿನ್ನಡೆಯಲ್ಲಿದ್ದ ತಂಡವೊಂದು ಪಂದ್ಯವನ್ನು ಗೆದ್ದುಕೊಂಡಿತ್ತು. ಭಾರತ 2010ರಲ್ಲಿ ಚೆನ್ನೈನಲ್ಲಿ ಬ್ರೆಝಿಲ್ ವಿರುದ್ಧ ಒಮ್ಮೆ ಮಾತ್ರ ಈ ಸಾಧನೆ ಮಾಡಿತ್ತು. ಆ ಪಂದ್ಯದಲ್ಲಿ ಸೋಮ್‌ದೇವ್ ನಾಲ್ಕನೆ ಪಂದ್ಯವನ್ನು ಹಾಗೂ ರೋಹನ್ ಬೋಪಣ್ಣ ಐದನೆ ಪಂದ್ಯವನ್ನು ಗೆದ್ದಿದ್ದರು.

ಡೇವಿಸ್ ಕಪ್‌ನ ಮೊದಲ ದಿನವಾದ ಶುಕ್ರವಾರ ಭಾರತ ತಾನಾಡಿದ್ದ ಎರಡೂ ಸಿಂಗಲ್ಸ್ ಪಂದ್ಯಗಳನ್ನು ಸೋತು 0-2 ರಿಂದ ಹಿನ್ನಡೆ ಅನುಭವಿಸಿತ್ತು. ಶನಿವಾರ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ಭಾರತ ತಿರುಗೇಟು ನೀಡಲು ನೆರವಾಗಿದ್ದರು. ರವಿವಾರ ಸೋಮ್‌ದೇವ್ ರಿವರ್ಸ್ ಸಿಂಗಲ್ಸ್‌ನಲ್ಲಿ ಗೆಲುವು ಸಾಧಿಸಿ ಪಂದ್ಯ 2-2 ರಿಂದ ಟೈ ಆಗಲು ಕಾರಣರಾದರು.

Write A Comment