
ಬಗ್ದಾದ್, ಸೆ.15: ಇಸ್ಲಾಮಿಕ್ ಸ್ಟೇಟ್(ಐಸಿಸ್) ಬಂಡುಕೋರರ ವಿರುದ್ಧದ ವೈಮಾನಿಕ ದಾಳಿಗಳಿಗೆ ಅರಬ್ ರಾಷ್ಟ್ರಗಳು ಕೈಜೋಡಿಸುವ ಯಾವುದೇ ಅಗತ್ಯವಿಲ್ಲ ಎಂದು ಇರಾಕ್‌ನ ಅಧ್ಯಕ್ಷ ಫವಾದ್ ಮಸೂಮ್ ಹೇಳಿದ್ದಾರೆ.
ಇರಾಕ್ ಹಾಗೂ ನೆರೆಯ ಸಿರಿಯದ ವ್ಯಾಪಕ ಪ್ರದೇಶಗಳನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಐಸಿಸ್ ಬಂಡುಕೋರರ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿ ಚರ್ಚಿಸಲು ಪ್ಯಾರಿಸ್‌ನಲ್ಲಿ ಆಯೋಜಿಸಲಾಗಿರುವ 26 ರಾಷ್ಟ್ರಗಳ ಸಭೆಗೆ ಇರಾನನ್ನು ಆಹ್ವಾನಿಸದಿರುವ ಬಗ್ಗೆ ಇದೇ ವೇಳೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಐಸಿಸ್ ಬಂಡುಕೋರರ ವಿರುದ್ಧ ನಡೆಸಲಾಗುವ ವೈಮಾನಿಕ ಕಾರ್ಯಾಚರಣೆಗೆ ನೆರವು ನೀಡಲು ಹೆಚ್ಚಿನ ಅರಬ್ ರಾಷ್ಟ್ರಗಳು ಮುಂದೆ ಬಂದಿವೆ ಎಂಬ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರನ ಹೇಳಿಕೆಯನ್ನು ಉಲ್ಲೇಖಿಸಿ ಬಂದಿರುವ ವರದಿಗಳ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.
ಆದಾಗ್ಯೂ, ಐಸಿಸ್ ಬಂಡುಕೋರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸೇರಿಕೊಳ್ಳುವ ಬಗ್ಗೆ ಅರಬ್ ರಾಷ್ಟ್ರಗಳಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ ಎಂದವರು ಹೇಳಿದ್ದಾರೆ.
ಈ ಹಿಂದೆ ಅರಬ್ ರಾಷ್ಟ್ರಗಳು ಅಮೆರಿಕ ಅಥವಾ ನ್ಯಾಟೊದ ವೈಮಾನಿಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. 1991ರಲ್ಲಿ ಕುವೈತ್‌ನಿಂದ ಸದ್ದಾಂ ಹುಸೈನ್‌ರ ಇರಾಕಿ ಪಡೆಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ನಡೆದಿದ್ದ ಅಮೆರಿಕ ವೈಮಾನಿಕ ದಾಳಿಗಳಿಗೆ ಸೌದಿ ಅರೇಬಿಯ ನೆರವು ನೀಡಿತ್ತು.
2011ರಲ್ಲಿ ಮುಅಮ್ಮರ್ ಗದಾಫಿ ಪದಚ್ಯುತಿಗೆ ಕಾರಣವಾದ ಲಿಬಿಯದಲ್ಲಿ ನಡೆದ ಅಂತಾರಾಷ್ಟ್ರೀಯ ಸೇನಾ ಮಧ್ಯಪ್ರವೇಶದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಎಫ್-16 ಹಾಗೂ ಮೈರೇಜ್ ಸಮರ ವಿಮಾನಗಳು ಸಹಕರಿಸಿದ್ದವು.